ಮಲೆನಾಡು ಎಂದರೆ ಗುಡ್ಡ-ಬೆಟ್ಟಗಳಿಂದ ಕೂಡಿದ ಪ್ರದೇಶ. ಮಲೆನಾಡಿನ ಎಷ್ಟೋ ಹಳ್ಳಿಗಳಿಗೆ ಗುಡ್ಡದಿಂದ ಅಬ್ಬಿಯ ಮೂಲಕ ನಿರಂತರವಾಗಿ ಹರಿದುಬರುವ ನೀರೇ ಜೀವನಾಧಾರ. ಮಧ್ಯಪಶ್ಚಿಮಘಟ್ಟದ ವ್ಯಾಪ್ತಿಯಲ್ಲಿರುವ ಸಾಗರ, ಹೊಸನಗರ, ತೀರ್ಥಹಳ್ಳಿ ತಾಲ್ಲೂಕುಗಳಲ್ಲಿ ಮಳೆ ಮಾರುತಗಳನ್ನು ತಡೆಯುವ ಬೆಟ್ಟ ಪ್ರದೇಶಗಳು ಕೆಲವು ದಂಧೆಕೋರರ ದುರಾಸೆಗೆ ಬಲಿಯಾಗುತ್ತಾ ವೇಗವಾಗಿ ಕರಗುತ್ತಿವೆ.

ಸಾಗರದ ತಾಳಗುಪ್ಪ ಬಯಲೆಂದು ಕರೆಯಲಾಗುವ ಸಾವಿರಾರು ಎಕರೆ ವಿಸ್ತಾರದ ಪ್ರದೇಶದಲ್ಲಿ ಭತ್ತ ಬೆಳೆಯುತ್ತಿದ್ದ ಜವುಗು ಗದ್ದೆಗಳು ಈಗ ಸನಿಹದ ಗುಡ್ಡದ ಮಣ್ಣನ್ನು ತುಂಬಿಸಿಕೊಂಡು ಬಡಾವಣೆಗಳಾಗುತ್ತಿವೆ. ಹೆದ್ದಾರಿಯ ಪಕ್ಕದಲ್ಲಿರುವ ಭೂಮಿಗೆ ಚಿನ್ನಕ್ಕಿಂತ ಹೆಚ್ಚು ಬೆಲೆ ಬಂದಿದೆ. ಸಾವಿರಾರು ಜನ ಸೇರಿ ಮಾಡುವಂತಹ ಕೆಲಸವನ್ನು ಯಂತ್ರಗಳು ಈಗ ಸುಲಭ ಮಾಡಿವೆ. ರಾತ್ರಿ ಇದ್ದ ಬೆಟ್ಟ ಬೆಳಗಾಗುವುದರಲ್ಲಿ ‘ಕಳವು’ ಆಗಿರುತ್ತದೆ. ಗಣಿ ಮಾಫಿಯಾದ ಅಟ್ಟಹಾಸಕ್ಕೆ ನಲುಗಿದ ಬಳ್ಳಾರಿಯ ಸ್ಥಿತಿ ಈಗ ಮಲೆನಾಡಿಗೆ ಬಂದಿದೆ. ನಗರದಂಚಿನ ಕೃಷಿಭೂಮಿಯ ಜೊತೆಯಲ್ಲಿ ಗುಡ್ಡಬೆಟ್ಟಗಳೂ ಭೂಮಾಫಿಯಾ ಪಾಲಾಗುತ್ತಿವೆ. ಮಲೆನಾಡಿನ ಪಾರಂಪರಿಕ ಅಡಿಕೆ ತೋಟಕ್ಕೆ ನಾಲ್ಕೈದು ವರ್ಷಕ್ಕೊಮ್ಮೆ ಮಣ್ಣು ನೀಡುವ ಪದ್ಧತಿ ಇದೆ. ಅಡಿಕೆ ತೋಟಗಳಂಚಿನ ಬೆಟ್ಟಗಳಿಂದ ಕೂಲಿಯಾಳುಗಳ ಸಹಾಯದಿಂದ ಮಣ್ಣನ್ನು ಅಗೆದು ತೋಟಕ್ಕೆ ಹಾಕುವುದು ರೂಢಿ. ಹಲವು ದಶಕಗಳಿಂದ ಈ ರೀತಿಯಲ್ಲಿ ತೆಗೆದ ಮಣ್ಣಿನ ಪ್ರಮಾಣ ಅತ್ಯಲ್ಪ ಹಾಗೂ ಇದು ಸುಸ್ಥಿರ ತೋಟಗಾರಿಕಾ ಪದ್ಧತಿಯೂ ಹೌದು. ಆದರೆ ಈಗ ಪರಿಸ್ಥಿತಿ ಬೇರೆಯೇ
ಆಗಿದೆ.

ಸಾಗರದಲ್ಲಿ ಯುವಕರ ತಂಡವೊಂದು ಮಣ್ಣಿನ ವ್ಯವಹಾರದ ಕುರಿತು ಅಧ್ಯಯನ ನಡೆಸಿತು. ಹತ್ತು–ಹನ್ನೆರಡು ಹಳ್ಳಿಗಳಿಗೆ ಭೇಟಿ ನೀಡಿ, ಅಕ್ರಮವಾಗಿ ನಗರಕ್ಕೆ ಸಾಗಣೆಯಾದ ಮಣ್ಣಿನ ಪ್ರಮಾಣ ಹಾಗೂ ಅದರಲ್ಲಿ ಆದ ಹಣದ ವಹಿವಾಟು ಎಷ್ಟು ಎಂದು ಲೆಕ್ಕ ಹಾಕಿತು. ನಗರ–ಪಟ್ಟಣಗಳಿಗೆ ತಾಗಿಕೊಂಡಿರುವ ಹೊಲ–ಗದ್ದೆಗಳು ಈಗ ಬಡಾವಣೆಗಳಾಗಿ ಪರಿವರ್ತನೆಯಾಗುತ್ತಿವೆ. ಅಲ್ಲಿನ ನೆಲ ಸಮತಟ್ಟುಗೊಳಿಸುವ ಕೆಲಸಕ್ಕೆ ಲಕ್ಷಾಂತರ ಲೋಡು ಮಣ್ಣು ರವಾನೆಯಾಗಿದೆ. ಒಂದು ಲೋಡು ಮಣ್ಣಿಗೆ ₹ 1,700ರಿಂದ ₹ 2,000ದವರೆಗೂ ಬೆಲೆ ಇದೆ. ತಾಳಗುಪ್ಪ ಸಮೀಪದ ಕಿಬ್ಬಚ್ಚಲು ಎಂಬ ಹಳ್ಳಿಯ ಸುತ್ತಲಿರುವ ಮೂರು ಗುಡ್ಡಗಳು ಹೇಳಹೆಸರಿಲ್ಲದಂತೆ ಮಾಯವಾಗಿವೆ. ಹೆಗ್ಗೋಡು ಸಮೀಪದ ಹೊನ್ನೆಸರದ ಗುಡ್ಡದಿಂದ ಸಾಗಣೆಯಾದ ಮಣ್ಣಿನ ಬೆಲೆ ಒಂದು ಕೋಟಿ ರೂಪಾಯಿಗೂ ಹೆಚ್ಚು ಎಂಬ ಅಂಶ ಯುವಕರ ಅಧ್ಯಯನದಿಂದ ಗೊತ್ತಾಗಿದೆ.

ಗಣಿ ಇಲಾಖೆಯ ನಿಯಮದ ಪ್ರಕಾರ, ಯಾರೇ ಆಗಲಿ ಮೂರು ಅಡಿ ಆಳಕ್ಕಿಂತ ಹೆಚ್ಚು ಮಣ್ಣು ತೆಗೆಯುವ ಹಾಗಿಲ್ಲ. ಅದಕ್ಕೂ ಇಲಾಖೆಯ ಪರವಾನಗಿ ಬೇಕು. ಸರ್ಕಾರಕ್ಕೆ ರಾಜಧನ ಸಲ್ಲಿಸಬೇಕು. ಹಳ್ಳಿಗಳಲ್ಲಿ ಇದು ಯಾವುದೂ ಪಾಲನೆ ಆಗುತ್ತಿಲ್ಲ. ಗಣಿ ಇಲಾಖೆಯ ಅಧಿಕಾರಿಗಳು ಬಂದು ನೋಡುವುದೂ ಇಲ್ಲ. ಅಂತೆಯೇ ಮಣ್ಣು ತೆಗೆದು ಸಾಗಿಸಲು ಪರವಾನಗಿ ಪಡೆಯುವುದು ಈಗಿನ ಆಡಳಿತ ವ್ಯವಸ್ಥೆಯಲ್ಲಿ ಸುಲಭದ ಕೆಲಸವೂ ಅಲ್ಲ. ಆದಕಾರಣ, ತೋಟಕ್ಕೆ ಮಣ್ಣು ಬಳಸಲು ಕಂದಾಯ ಇಲಾಖೆ, ಅರಣ್ಯ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಅಡ್ಡಿ ಮಾಡುವುದಿಲ್ಲ. ಕೃಷಿಕರ ತೋಟದ ಕೆಲಸಗಳಿಗೆ ತೊಂದರೆಯಾಗಬಾರದು ಎಂಬ ಸದುದ್ದೇಶವೂ ಇದರ ಹಿಂದೆ ಇದ್ದಿರಬಹುದು. ಆದರೆ ಇಂತಹ ಔದಾರ್ಯವನ್ನು ಕೆಲವರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ.

ಯಂತ್ರಗಳನ್ನು ಬಳಸಿಕೊಂಡು ತೋಟಕ್ಕೆ ಮಣ್ಣು ಹಾಕುವುದು ಕಡಿಮೆ ಖರ್ಚಿನ ಬಾಬತ್ತು ಎಂದು ಹಲವು ಕೃಷಿಕರು ಯಂತ್ರಗಳನ್ನು ಬಳಸಲು ಪ್ರಾರಂಭಿಸಿದರು. ಇದೇ ಹೊತ್ತಿನಲ್ಲಿ ನಗರದ ಬಡಾವಣೆಗಳಿಗೆ ಮಣ್ಣಿನ ಅಗತ್ಯ ಕಂಡುಬಂತು. ಒಂದಿಷ್ಟು ಮಣ್ಣನ್ನು ತೋಟಕ್ಕೆ ಹಾಕುವುದು, ಬಹಳಷ್ಟು ಮಣ್ಣನ್ನು ಬಡಾವಣೆ ನಿರ್ಮಿಸುವ ರಿಯಲ್ ಎಸ್ಟೇಟ್ ಕುಳಗಳಿಗೆ ಮಾರುವಂತಹ ದಂಧೆ ಪ್ರಾರಂಭವಾಯಿತು ಮತ್ತು ಅದು ಲಾಭದಾಯಕ ಅಂತ ಅನ್ನಿಸಿತು. ಬಡಾವಣೆಗೆ ಸಾಗಿಸುವ ಮಣ್ಣನ್ನು ತೋಟಕ್ಕೆ ಸಾಗಿಸುತ್ತಿದ್ದೇವೆ ಎಂದು ಹೇಳಿ ನುಣುಚಿಕೊಳ್ಳುವ ಹೊಸ ಉಪಾಯವನ್ನು ಕಂಡುಕೊಳ್ಳಲಾಯಿತು.

ಬೃಹತ್ ಯಂತ್ರಗಳನ್ನು ಬಳಸಿ ಎರ್ರಾಬಿರ್ರಿಯಾಗಿ ಮಣ್ಣು ತೆಗೆಯುವ ಪ್ರಕ್ರಿಯೆಯಲ್ಲಿ ಅನೇಕ ಅಮೂಲ್ಯವಾದ ಸಸ್ಯಪ್ರಭೇದಗಳ ಜೊತೆಗೆ ಇತರ ಜೀವಿಗಳ ಆವಾಸಸ್ಥಾನ ನಾಶವಾಗುತ್ತದೆ. ಮಳೆಗಾಲದಲ್ಲಿ ಮಣ್ಣಿನ ಸವಕಳಿಯಿಂದಾಗಿ ಕೆರೆಗಳಲ್ಲಿ ಹೂಳು ತುಂಬಿಕೊಳ್ಳುತ್ತದೆ. ಗುಡ್ಡ ಕುಸಿತದ ವಿದ್ಯಮಾನಗಳು ಇನ್ನಷ್ಟು ಹೆಚ್ಚುತ್ತವೆ. ಮಣ್ಣಿನ ಅಕ್ರಮ ಗಣಿಗಾರಿಕೆಯಿಂದ ಇಲ್ಲಿನ ಮಳೆಕಾಡುಗಳ ಪ್ರಮಾಣ ಕ್ಷೀಣಿಸುತ್ತಿದೆ. ಶಿವಮೊಗ್ಗಕ್ಕೆ ‘ಮಲೆನಾಡಿನ ಹೆಬ್ಬಾಗಿಲು’ ಎಂಬ ಬಿರುದು ಇದೆ. ಈ ಪ್ರಮಾಣದಲ್ಲಿ ಗುಡ್ಡಗಳನ್ನು ಕತ್ತರಿಸುತ್ತಾ ಹೋದಲ್ಲಿ, ಈ ಬಿರುದನ್ನು ಶಿವಮೊಗ್ಗ ಕಳೆದುಕೊಳ್ಳಲು ಬಹಳ ದಿನ ಬೇಕಾಗುವುದಿಲ್ಲ.

ದಿ ಫಾರೆಸ್ಟ್ ಸರ್ವೆ ಆಫ್ ಇಂಡಿಯಾದ ದ್ವೈವಾರ್ಷಿಕ ವರದಿಯಲ್ಲಿ, ಭಾರತದ ಅರಣ್ಯ ಪ್ರಮಾಣವು ಶೇಕಡ 2.91ರಿಂದ ಶೇ 3.41ರಷ್ಟು ಹೆಚ್ಚಾಗಿದೆ ಎಂದು ಹೇಳಿದೆ. ಏಕಜಾತಿಯ ನೆಡುತೋಪುಗಳು, ಅಡಿಕೆ, ತೆಂಗಿನ ಮರಗಳು, ಬಿದಿರು ಮೆಳೆಯಂತಹವನ್ನೂ ಅರಣ್ಯ ಎಂದು ಪರಿಗಣಿಸಲಾಗಿದೆ.
ಈ ವರದಿಯನ್ನು ‘ಉತ್ಪ್ರೇಕ್ಷಿತ’ ಎಂದು ಪರಿಸರ ಕ್ಷೇತ್ರದ ಪರಿಣತರು ದೂರಿದ್ದಾರೆ. ಅರಣ್ಯದ ವ್ಯಾಖ್ಯಾನ ವನ್ನು ಬದಲಾಯಿಸಿದ್ದರಿಂದ ಉಂಟಾದ ಹೆಚ್ಚಳ ಇದು ಎಂಬುದು ಅವರ ಅಭಿಪ್ರಾಯ.

ಶಿವಮೊಗ್ಗವು ಅತಿಹೆಚ್ಚು ಅರಣ್ಯ ಪ್ರದೇಶ ಒತ್ತುವರಿಯಾದ ಜಿಲ್ಲೆ ಎಂಬ ಕುಖ್ಯಾತಿಗೆ ಪಾತ್ರವಾಗಿದೆ. ಇಲ್ಲಿನ ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿಯುವ ಅಧಿಕಾರಿಗಳು ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಾರೆ. ಕೇಂದ್ರದ ಅರಣ್ಯ ಕಾನೂನುಗಳನ್ನು ಮೀರಿ ಕರ್ನಾಟಕ ಸರ್ಕಾರವು ಮೂರು ಎಕರೆ ಅಥವಾ ಅದಕ್ಕಿಂತ ಕಡಿಮೆ ಅರಣ್ಯ ಒತ್ತುವರಿಯನ್ನು ತೆರವುಗೊಳಿಸುವಂತಿಲ್ಲಎಂದು ಆದೇಶಿಸಿದೆ. ಇದರ ಲಾಭ ಪಡೆದುಕೊಳ್ಳುವ ಬಲಾಢ್ಯರು ಬೇರೆ ಬೇರೆ ಹೆಸರಿನಲ್ಲಿ ತಮ್ಮ ಒತ್ತುವರಿಯನ್ನು ಮುಂದುವರಿಸುತ್ತಿದ್ದಾರೆ.

ಸಂವಿಧಾನದ ವಿಧಿ 21ರಲ್ಲಿ, ಪ್ರಜೆಗಳಿಗೆ ಆರೋಗ್ಯವಂತರಾಗಿ ಬದುಕುವ ಹಕ್ಕನ್ನು ಕಲ್ಪಿಸಲಾಗಿದೆ. ಸಾಮೂಹಿಕ ಆರೋಗ್ಯವನ್ನು ಕಾಪಾಡುವುದು, ಸ್ವಚ್ಛವಾದ ಪರಿಸರವನ್ನು ಕೊಡಮಾಡುವುದು ಕೇಂದ್ರ, ರಾಜ್ಯ ಹಾಗೂ ಸ್ಥಳೀಯ ಆಡಳಿತಗಳ ಹೊಣೆಯಾಗಿದೆ. ಯಾವ ಪ್ರದೇಶದಲ್ಲಿ ಶುದ್ಧವಾದ ಗಾಳಿ, ನೀರು ಲಭ್ಯವಿವೆಯೋ ಅಲ್ಲಿನ ಸಮುದಾಯದ ಆರೋಗ್ಯ ಸುಸ್ಥಿತಿಯಲ್ಲಿ ಇರುತ್ತದೆ ಎಂದು ವೈದ್ಯ ವಿಜ್ಞಾನ ನಿರ್ವಿವಾದವಾಗಿ ಪ್ರತಿಪಾದಿಸಿದೆ.

ಸರ್ಕಾರಿ ಜಾಗಗಳಲ್ಲಿ ನಡೆಯುತ್ತಿರುವ ಅಕ್ರಮ ಮಣ್ಣು ಗಣಿಗಾರಿಕೆಯನ್ನು ತಡೆಯುವುದು ಸಾಧ್ಯವಿಲ್ಲ ಎಂದು ಸ್ಥಳೀಯ ಅಧಿಕಾರಿಗಳು ಕೈಚೆಲ್ಲಿರುವುದು ಈ ದಂಧೆಯ ವಿರಾಟ್ ಸ್ವರೂಪವನ್ನು ಎತ್ತಿ ತೋರಿಸುತ್ತದೆ. ಹಾಗಿದ್ದರೆ ಇದಕ್ಕೆ ಪರಿಹಾರವೇನು?

ಸೊಪ್ಪಿನಬೆಟ್ಟ, ಕಾನು, ಕುಮ್ಕಿ, ಜಾಡಿ, ಹುಲ್ಲುಬನ್ನಿ ಹರಾಜು, ಗೋಮಾಳದಂತಹ ಪ್ರದೇಶಗಳನ್ನು ಕಂದಾಯ ಇಲಾಖೆಯ ಸ್ವತ್ತು ಎಂದು ಪರಿಗಣಿಸಲಾಗುತ್ತದೆ. ಈ ಪ್ರದೇಶಗಳು ಯಾವುದೇ ಕಾರಣಕ್ಕೂ ವೈಯಕ್ತಿಕವಾಗಿ ಯಾರೊಬ್ಬರ ಪಾಲಾಗದಂತೆ ನೋಡಿಕೊಳ್ಳುವ ಹೊಣೆ ಇಲಾಖೆಯದ್ದಾಗಿದೆ. ಸಾರ್ವಜನಿಕರಿಗೆ ಅಥವಾ ಸಮುದಾಯಕ್ಕೆ ಮಾತ್ರ ಈ ಸ್ವತ್ತುಗಳನ್ನು ಮೀಸಲಾಗಿಡಬೇಕು. ವಿಕೇಂದ್ರಿತ ವ್ಯವಸ್ಥೆಯಡಿ ಪ್ರತಿ ತಾಲ್ಲೂಕಿನಲ್ಲೂ ಗ್ರಾಮ ಪಂಚಾಯಿತಿಗಳು ಅಧಿಕಾರವನ್ನು ಹೊಂದಿವೆ. ಸ್ಥಳೀಯರ ಪ್ರತಿನಿಧಿಯಾಗಿ ಪಂಚಾಯಿತಿ ಸದಸ್ಯರಿರುತ್ತಾರೆ. ಸುಗಮ ಆಡಳಿತಕ್ಕೆ ಅನುವಾಗುವಂತೆ ಪಂಚಾಯಿತಿ ಕಚೇರಿ ಸಿಬ್ಬಂದಿ ಇರುತ್ತಾರೆ. ಸಮುದಾಯದ ಸ್ವತ್ತು ಕಬಳಿಕೆ ಆಗದಂತೆ ನೋಡಿಕೊಳ್ಳುವ ಹೊಣೆಯನ್ನು ಗ್ರಾಮ ಪಂಚಾಯಿತಿಗಳಿಗೆ ನೀಡಬೇಕು ಎಂಬ ಪರಿಸರ ತಜ್ಞರು ಮತ್ತು ಸಾಮಾಜಿಕ ಕಾರ್ಯಕರ್ತರ ಸಲಹೆ ಯುಕ್ತವಾದುದು.

ಉತ್ತರ ಕನ್ನಡ ಜಿಲ್ಲೆಯ ಕುಮಟಾ ನಗರಕ್ಕೆ ಹೊಂದಿಕೊಂಡಂತೆ ಹಳಕಾರ ಎಂಬ ಹಳ್ಳಿಯಿದೆ. ಸುಮಾರು 200 ಮನೆಗಳಿರುವ ಆ ಹಳ್ಳಿಯ ವಿಶೇಷವೇನು ಗೊತ್ತೇ? ನೂರು ವರ್ಷಗಳಿಂದ ಅವರು ತಮ್ಮ ಹಳ್ಳಿಯ 225 ಎಕರೆ ಪ್ರದೇಶವನ್ನು ಹಳಕಾರ ಗ್ರಾಮ ಅರಣ್ಯ ಪಂಚಾಯಿತಿ ಅಡಿಯಲ್ಲಿ ಕಾಪಿಟ್ಟುಕೊಂಡು ಬಂದಿದ್ದಾರೆ. ಕೊಡಲಿ ಹಿಡಿದು ಕಾಡಿಗೆ ಹೋಗುವ ಹಾಗಿಲ್ಲ. ಒತ್ತುವರಿಯಂತೂ ಇಲ್ಲವೇ ಇಲ್ಲ. ಅಕ್ರಮ ಮಣ್ಣು ಸಾಗಣೆಗೆ ಅವಕಾಶವೇ ಇಲ್ಲ. ನಿಯಮ ಮೀರಿದರೆ ಸಮಿತಿಯವರು ದಂಡ ಹಾಕುತ್ತಾರೆ. ಕಾಡು ಸಂರಕ್ಷಣೆಯಲ್ಲಿ ಇದೊಂದು ಮೇರು ಮಾದರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.