ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಾವಿದರ ನೆನಪು ಹಸಿರಾಗಿಸುವ ಕೆಲಸ ಸರ್ಕಾರ ಮಾಡಿದರೆ ಅರ್ಥಪೂರ್ಣ: ದೊಡ್ಡಣ್ಣ

ಜನಪ್ರಿಯ ಸಿನಿಮಾ ನಟರು ಮೃತಪಟ್ಟ ಬಳಿಕ ಅವರ ಹೆಸರಿನಲ್ಲಿ ಸರ್ಕಾರವೇ ಸ್ಮಾರಕ ನಿರ್ಮಿಸಬೇಕೇ?
Last Updated 16 ಜುಲೈ 2021, 20:15 IST
ಅಕ್ಷರ ಗಾತ್ರ

ಜನಪ್ರಿಯ ಸಿನಿಮಾ ನಟರು ಮೃತಪಟ್ಟ ಬಳಿಕ ಅವರ ಹೆಸರಿನಲ್ಲಿ ಸರ್ಕಾರವೇ ಸ್ಮಾರಕ ನಿರ್ಮಿಸಬೇಕೇ?

ಕನ್ನಡ ಸಾಂಸ್ಕೃತಿಕ ಲೋಕದ ಮಹತ್ವದ ಕವಲುಗಳಲ್ಲಿ ಕಲೆಯೂ ಒಂದು. ಅದರಲ್ಲಿ ಸಿನಿಮಾ ಕಲೆಗಂತೂ ಮಹತ್ವದ ಸ್ಥಾನ. ಅದರ ವಾರಸುದಾರರಾದ ಚಿತ್ರರಂಗದ ಮೇರು ಕಲಾವಿದರು ಅಗಲಿದಾಗ ಅವರ ಪ್ರತಿಮೆ/ಸ್ಮಾರಕಗಳನ್ನು ಸರ್ಕಾರದ ವತಿಯಿಂದಲೇ ನಿರ್ಮಿಸುವುದರಲ್ಲಿ ಯಾವ ತಪ್ಪೂ ಇಲ್ಲ. ಕಲಾವಿದರ ನೆನಪು ಹಸಿರಾಗಿಸುವ ಇಂತಹ ಕೆಲಸವನ್ನು ಸರ್ಕಾರವೇ ಮಾಡುವುದರಿಂದ ಅದು ಅರ್ಥಪೂರ್ಣವಾಗಿರುತ್ತದೆ. ಮಾಡಬೇಕು ಕೂಡ.

ನಟ ಅಜಾತಶತ್ರು. ನೋಡಿ... ನಾವು ದೇವರನ್ನು ನೋಡಿಲ್ಲ. ಅವನ ವೇಷ ಹಾಕಿದ ಪಾತ್ರಧಾರಿಯ ಮೂಲಕ ಗುರುತಿಸುತ್ತೇವೆ. ಹೀಗಾಗಿ ಅವನು ಪಾತ್ರದಲ್ಲಿ ತೋರಿಸಿದ ಆದರ್ಶಗಳನ್ನು ಅದೆಷ್ಟೋ ಜನರು ಪಾಲಿಸಿ, ಬದಲಾದದ್ದೂ ಇದೆ. ಹಾಗಾಗಿ ಒಂದು ಆದರ್ಶವಾಗಿ ಪರಿಗಣಿಸುವುದಾದರೆ ಮೂರ್ತಿಯೂ ಸ್ಫೂರ್ತಿ ನೀಡಬಹುದಲ್ಲವೇ? ಅದೆಷ್ಟೋ ನಟರು ತಮ್ಮ ವ್ಯಕ್ತಿತ್ವದ ಮೂಲಕ ದೊಡ್ಡವರಾಗಿದ್ದಾರೆ. ಅಂಥ ನಟರ ಬದುಕು ಒಂದು ಇತಿಹಾಸ. ಆ ಇತಿಹಾಸದ ಸ್ಮರಣೆ ಬೇಕಲ್ಲವೇ? ಹಾಗಾಗಿ ಸರ್ಕಾರವೇ ಸ್ಮಾರಕ ನಿರ್ಮಿಸಬೇಕು ಎಂಬುದು ಸಹಜವಾದ ಬೇಡಿಕೆ.

ಸಾಮಾಜಿಕ ಸುಧಾರಣೆಗೆ ಕಾರಣರಾದ ಬಸವಣ್ಣ, ಸಂವಿಧಾನ ರಚನೆಯ ರೂವಾರಿ ಬಿ.ಆರ್‌.ಅಂಬೇಡ್ಕರ್‌ ಇವರನ್ನೆಲ್ಲಾ ಮರೆಯುವುದಂಟೇ? ಸ್ಮಾರಕ–ಪ್ರತಿಮೆಗಳ ಮೂಲಕ ಅವರಿಗೊಂದು ಗೌರವ ಸಲ್ಲಿಸುವುದು ನಮ್ಮ ಕರ್ತವ್ಯ ಅಲ್ಲವೇ? ಅದನ್ನು ನಾವೀಗ ಮಾಡುತ್ತಿದ್ದೇವಲ್ಲ. ಚಿತ್ರನಟ–ನಟಿಯರ ಸ್ಮಾರಕಗಳಿಗೆ ಮಾತ್ರ ಏಕೆ ವಿರೋಧ?

ಮಹಾತ್ಮರ ಪುತ್ಥಳಿ, ಪ್ರತಿಮೆಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೇ ಕಾಲಕಾಲಕ್ಕೆ ಸ್ಥಾಪಿಸುತ್ತಾ ಬಂದಿವೆ. ಅಷ್ಟೊಂದು ದೊಡ್ಡ ಮಟ್ಟಕ್ಕಲ್ಲವಾದರೂ ಕಲಾವಿದರ ಪ್ರತಿಮೆಯನ್ನೂ ನಿರ್ಮಿಸಬೇಕು. ಸರ್ಕಾರವೇ ಈ ಕೆಲಸ ಮಾಡಿದರೆ ನಿವೇಶನ ಸಿಗುವುದು, ನಿರ್ಮಾಣ ವೆಚ್ಚ ನಿಭಾಯಿಸುವುದು ದೊಡ್ಡ ಹೊರೆ ಆಗದು.

ಅಭಿಮಾನಿಗಳೇ ನಿರ್ಮಿಸಬೇಕು. ಸರ್ಕಾರದ ಪಾತ್ರ ಇಲ್ಲಿ ಇರಬಾರದು ಎಂಬ ವಾದವೂ ಇರಬಹುದು. ಈಗ ರಾಜ್ಯದಲ್ಲೇ ನೋಡಿ, ಪ್ರಮುಖರ ಪ್ರತಿಮೆಗಳನ್ನು ಅಭಿಮಾನಿಗಳೇ ನಿರ್ಮಿಸಿದ ಉದಾಹರಣೆಗಳೇನೋ ಇವೆ. ಅವರವರ ಶಕ್ತಿ, ಆರ್ಥಿಕ ಮಟ್ಟಕ್ಕೆ ತಕ್ಕಂತೆ ನಿರ್ಮಿಸುತ್ತಾರೆ. ಆದರೆ, ಸರ್ಕಾರ ಮಾಡಿದರೆ ಇಂಥ ನಿರ್ಮಾಣಗಳಲ್ಲಿ ತನ್ನದೇ ಆದ ಮಾನದಂಡ, ಗುಣಮಟ್ಟ ಕಾಪಾಡಲು ಸಾಧ್ಯ.

ಪ್ರತಿಮೆ ಯಾಕೆ ಬೇಕು? ಏನು ಸಾಧಿಸಿದ್ದಾರೆ ಎಂಬ ವಿತಂಡ ವಾದ ಮಂಡಿಸುವವರೂ ಇದ್ದಾರೆ. ಹೌದು ದೂರದಲ್ಲಿ ಕುಳಿತು ಹೇಳುವುದೇನೋ ಸುಲಭ. ಆದರೆ, ನಟನೊಬ್ಬ ಪ್ರತಿಮೆಯಾಗಿ ನೆಲೆಗೊಂಡು ಜನರ ಮನಸ್ಸಿನಲ್ಲೂ ಚಿರಸ್ಥಾಯಿ ಆಗಬೇಕಾದರೆ ಅವನು ಮಾಡಿರುವ ಸಾಧನೆ, ಜೀವಮಾನದ ಕೃತಿಗಳತ್ತಲೂ ಒಮ್ಮೆ ನೋಡಬೇಕು. ಅದು ಜನರಿಗೆ ಕಾಣುವಂತಿರಬೇಕು. ಸುಮ್ಮಸುಮ್ಮನೆ ಎಲ್ಲರ ಪ್ರತಿಮೆಯನ್ನೂ ಮಾಡಲಾಗುತ್ತದೆಯೇ? ರಾಜಕಾರಣಿಗಳ ಪ್ರತಿಮೆ ಸ್ಥಾಪಿಸುತ್ತೀರಿ, ಬೇರೆ ಕ್ಷೇತ್ರಗಳ ಸಾಧಕರ (ಸಹಕಾರ, ಬ್ಯಾಂಕಿಂಗ್‌, ಧಾರ್ಮಿಕ, ಶಿಕ್ಷಣ, ಆರೋಗ್ಯ...ಇತ್ಯಾದಿ ಕ್ಷೇತ್ರಗಳಲ್ಲಿ ಕೆಲಸ ಮಾಡಿದವರು, ಕವಿ, ಸಾಹಿತಿಗಳು ಹೀಗೆ) ಪ್ರತಿಮೆಗಳನ್ನು ಸರ್ಕಾರವೇ ಸ್ಥಾಪಿಸಿದ್ದು ಇಲ್ಲವೇ? ನಟ ಅಂದರೆ ತೀರಾ ಕನಿಷ್ಠನೇ? ಬರೀ ರಸ್ತೆ, ಕಟ್ಟಡ, ಬಸ್‌ ನಿಲ್ದಾಣಕ್ಕೆ ಅವರ ಹೆಸರಿಟ್ಟು ಕೈತೊಳೆದುಕೊಂಡರೆ ಆಯಿತು ಎಂದುಕೊಂಡರೆ ಅದು ತಪ್ಪು.

ಮುಮ್ಮಡಿ ಕೃಷ್ಣದೇವರಾಯ ಒಡೆಯರ್‌ ಅವರು ವಿದ್ಯುತ್‌ ಇಲ್ಲದ ಕಾಲದಲ್ಲೂ ಪಟ್ಟಣಕ್ಕೆ ಎಣ್ಣೆ, ಬತ್ತಿಯ ಬೀದಿ ದೀಪ ಅಳವಡಿಸಿದವರು. ಯಾವ ರಾಜ ಮನೆತನ ಹಾಗೆ ಮಾಡಿದೆ ಹೇಳಿ? ಇಂದಿನ ಪೀಳಿಗೆಯವರೂ ಅವರು ಮಾಡಿದ ಸತ್ಕಾರ್ಯಗಳ ಫಲಾನುಭವಿಗಳು. ಅಂಥವರ ಪ್ರತಿಮೆ ನಿರ್ಮಿಸಿ ನಾವು ಸಂಭ್ರಮಿಸುವುದಿಲ್ಲವೇ? ಕೆಂಗಲ್‌ ಹನುಮಂತಯ್ಯ ಅವರ ಸಾಧನೆಯಿಂದಾಗಿ ದೇಶವೇ ಬೆಂಗಳೂರಿನತ್ತ ಮುಖ ಮಾಡುವಂತೆ ಆಗಿದೆ. ಇಂಥವರ ಪ್ರತಿಮೆ ಸ್ಥಾಪಿಸುವುದು ಎಂದರೆ ಅವರಿಗೆ ಸಲ್ಲಿಸುವ ಸ್ಮರಣೆಯ ಗೌರವ ಅಷ್ಟೆ.

ದೀರ್ಘ ಕಾಲ ನೆನಪಾಗಿ ಉಳಿಯುವ ಕೆಲಸ ಮಾಡಲು ಹೋದಾಗ ಕೆಲವೊಮ್ಮೆ ಆಕ್ಷೇಪಗಳು, ನಕಾರಾತ್ಮಕ ಪ್ರತಿಕ್ರಿಯೆಗಳು ಬರುತ್ತವೆ. ಅದೆಲ್ಲಾ ಸಹಜ. ವಿರೋಧ ಅನ್ನುವುದು ಯಾವ ಕೆಲಸಕ್ಕೆ ಇರೋದಿಲ್ಲ ಹೇಳಿ. ವಿರೋಧದ ಗುಂಪು ಇದ್ದೇ ಇರುತ್ತದೆ. ಲೋಕೋ ಭಿನ್ನ ರುಚಿಃ... ಅಲ್ಲವೇ? ಹಾಗೆಂದು ಸರ್ಕಾರ ಏಕಮುಖ ವಾದ ಆಲಿಸಿದರೆ ಸಾಲದು. ಪಕ್ಕದ ತಮಿಳುನಾಡು ಹಾಗೂ ಆಂಧ್ರ ಪ್ರದೇಶದಲ್ಲಿ ಅಲ್ಲಿನ ಮೇರು ಕಲಾವಿದರಿಗೆ ಸ್ಮಾರಕ, ಪ್ರತಿಮೆ ಸ್ಥಾಪನೆ ಮಾಡಿದ ಉದಾಹರಣೆ ಇದೆಯಲ್ಲ? ನಮ್ಮಲ್ಲಿ ಏಕೆ ಬೇಡ ಎನ್ನುವುದನ್ನುವಿರೋಧಿಸುವವರು ಹೇಳಬೇಕು.

ಪ್ರತಿಮೆಗೆ ಸರ್ಕಾರದ ಬೊಕ್ಕಸದ ಹಣ ವೆಚ್ಚವಾಗುತ್ತದೆ ಎಂಬುದು ಇನ್ನೊಂದು ಆಕ್ಷೇಪ. ಅದನ್ನೂ ಒಪ್ಪಿಕೊಳ್ಳೋಣ. ಇದುವರೆಗೆ ಸರ್ಕಾರವೇ ಸ್ಥಾಪಿಸಿದ ಪ್ರಮುಖ ಪ್ರತಿಮೆಗಳನ್ನು ಗಮನಿಸಿ. ಬೆಂಗಳೂರಿನಲ್ಲೇ ನಟರು, ಹಲವು ಮಹನೀಯರ ಪ್ರತಿಮೆ ಸ್ಥಾಪಿಸಿದ ಪ್ರದೇಶ ಗಮನಿಸಿ. ಅಲ್ಲಿ ಉದ್ಯಾನ ಆಗಿದೆ. ಸುಂದರ, ಸುಸ್ಥಿರ ಹಸಿರು ಪರಿಸರ ನಿರ್ಮಾಣ ಆಗಿದೆ. ಇನ್ನು ಅನೇಕ ಕಡೆಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯಾದದ್ದಿದೆ. ಸ್ಥಳೀಯ ಉದ್ಯಮಗಳು ಬೆಳೆದಿವೆ. ಸ್ಮಾರಕ ಬಂದಮೇಲೆ ಅದರ ಹೆಸರಿನಲ್ಲಿ ಅಲ್ಲಿ ಒಂದಿಷ್ಟು ಸಾಂಸ್ಕೃತಿಕ ಚಟುವಟಿಕೆ ನಡೆಯುತ್ತವೆ. ಕಲಾವಿದರಿಗೆ ವರ್ಷಕ್ಕೊಂದಷ್ಟು ಕೆಲಸವೂ ಸಿಗುತ್ತದೆ. ಇದೂ ಹಣ ವಾಪಸಾಗುವ ದಾರಿಯೇ ಅಲ್ಲವೇ? ಎಲ್ಲವನ್ನೂ ನೇರ ಹಣದಿಂದ ಮಾಪನ ಮಾಡಲು ಸಾಧ್ಯವೇ? ಸ್ಮಾರಕಕ್ಕೆ ಜಾಗ ಹಾಗೂ ಹಣ ಹೋಗುತ್ತದೆ ಎನ್ನುವ ಆಕ್ಷೇಪ ಎತ್ತುವವರು ಮೊದಲು ಪ್ರಭಾವಿಗಳು ಮಾಡಿದ ಒತ್ತುವರಿ ತೆರವಿಗೆ ಹೋರಾಟ ಮಾಡುವುದು ಒಳಿತು. ಹಾಗೆಯೇ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವಂತೆಯೂ ಹೋರಾಡಬೇಕು.

ಇಷ್ಟಕ್ಕೂ ಪ್ರತಿಮೆಗಾಗಿ ಸರ್ಕಾರ ಮಾಡುವ ವೆಚ್ಚವೇನು ಸಾವಿರಾರು ಕೋಟಿಯೇ? ಇದ್ದುದರಲ್ಲಿ ಕನಿಷ್ಠ ವೆಚ್ಚ, ಒಂದು ಪುಟ್ಟ ನಿವೇಶನ ಕೊಟ್ಟರೆ ಸಾಕು. ಅದೂ ನಾವೇನು ಎಲ್ಲರ ಪ್ರತಿಮೆ ಸ್ಥಾಪಿಸಿ ಎಂದು ಒತ್ತಾಯಿಸುತ್ತಿಲ್ಲವಲ್ಲ. ಮೇರು ಕಲಾವಿದರನ್ನು ಮರೆಯಬೇಡಿ ಎನ್ನುವುದಷ್ಟೇ ನಮ್ಮ ಒತ್ತಾಯ. ಈ ಮೊತ್ತವನ್ನೇ ಸರ್ಕಾರ ಹೊರೆ ಎಂದು ಭಾವಿಸುವುದಾದರೆ ಅಂಥ ‘ಹೊರೆ’ಗಳನ್ನು ಇನ್ನೂ ಸಾಕಷ್ಟು ಉದಾಹರಿಸಬಹುದು. ಅದೆಲ್ಲದಕ್ಕೂ ಕಡಿವಾಣ ಹಾಕಿ ಉಳಿತಾಯ ಮಾಡಿ. ಮೊದಲು ನಮ್ಮನ್ನಾಳುವ ನಾಯಕರು ಸರ್ಕಾರದ ವೆಚ್ಚದಲ್ಲಿ ಮಾಡುವ ವೈಭವದಲ್ಲಿ ಒಬ್ಬರ ಪಾಲು ತೆಗೆದಿಟ್ಟರೂ ಅದ್ಭುತವಾದ ಸ್ಮಾರಕ ಅಥವಾ ಪ್ರತಿಮೆ ಸ್ಥಾ‍‍ಪಿಸಬಹುದು. ಮನಸ್ಸು ಮಾಡಬೇಕು ಅಷ್ಟೆ.

ಲೇಖಕ: ಕನ್ನಡ ಸಿನಿಮಾ ನಟ

ನಿರೂಪಣೆ: ಶರತ್‌ ಹೆಗ್ಡೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT