ಸೋಮವಾರ, ಜೂಲೈ 6, 2020
23 °C

ಸಂಪಾದಕೀಯ | ಡಬ್ಲ್ಯುಎಚ್‌ಒದಿಂದ ಅಮೆರಿಕ ಹೊರಕ್ಕೆ ಅಪಕ್ವ ಮತ್ತು ಆತುರದ ನಿರ್ಧಾರ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಜತೆಗಿನ ಸಂಬಂಧ ಕಡಿದುಕೊಳ್ಳುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪ್ರಕಟಿಸಿದ್ದಾರೆ. ಕೋವಿಡ್‌– 19 ಪಿಡುಗಿಗೆ ಸಂಬಂಧಿಸಿ ಡಬ್ಲ್ಯುಎಚ್‌ಒ, ಚೀನಾದ ಪರ ವಾಲಿದೆ ಎಂಬುದು ಟ್ರಂಪ್‌ ಅವರ ಆರೋಪ. ಡಬ್ಲ್ಯುಎಚ್‌ಒ ಬಗೆಗಿನ ಟ್ರಂಪ್‌ ಅವರ ಅಸಮಾಧಾನ ಏಪ್ರಿಲ್‌ನಲ್ಲಿಯೇ ಆರಂಭವಾಗಿದೆ.

‘ಕೊರೊನಾ ವೈರಾಣು, ಮನುಷ್ಯರಿಂದ ಮನುಷ್ಯರಿಗೆ ಹರಡುವುದಿಲ್ಲ ಎಂದು ಚೀನಾ ಹೇಳಿದ್ದನ್ನು ಡಬ್ಲ್ಯುಎಚ್‌ಒ ಗಿಳಿಪಾಠ ಒಪ್ಪಿಸಿತು. ಕೊರೊನಾ ನಿರ್ವಹಣೆಯಲ್ಲಿ ಚೀನಾದ ಕ್ರಮಗಳನ್ನು ಜನವರಿ ತಿಂಗಳ ಉದ್ದಕ್ಕೂ ಹೊಗಳುತ್ತಲೇ ಇತ್ತು’ ಎಂದು ಏಪ್ರಿಲ್‌ 15ರಂದು ಟ್ರಂಪ್‌ ಆಕ್ರೋಶ ವ್ಯಕ್ತಪಡಿಸಿದ್ದರು.

ಚೀನಾ ಜತೆಗೆ ಡಬ್ಲ್ಯುಎಚ್‌ಒ ಹೊಂದಿರುವ ಸಂಬಂಧ ಎಂತಹುದು ಎಂಬುದರ ಕುರಿತು ತನಿಖೆ ಮಾಡುವಂತೆಯೂ ಗುಪ್ತಚರ ಸಂಸ್ಥೆಗಳಿಗೆ ಅವರು ಆದೇಶಿಸಿದ್ದರು. ಕೊರೊನಾ ವೈರಾಣುವನ್ನು ಚೀನಾದ ಪ್ರಯೋಗಾಲಯಗಳಲ್ಲಿ ಸೃಷ್ಟಿಸಲಾಗಿದೆ ಇಲ್ಲವೇ ಸೋರಿಕೆ ಮಾಡಲಾಗಿದೆ ಎಂದು ಅಮೆರಿಕದ ವಿದೇಶಾಂಗ ಸಚಿವ ಮೈಕ್‌ ಪಾಂಪಿಯೊ ನೀಡಿದ ಹೇಳಿಕೆಯೂ ಸೋರಿಕೆಯಾಗಿತ್ತು. ಈಗ, ಈ ಎಲ್ಲದರ ಉಪಸಂಹಾರ ಎಂಬಂತೆ ಟ್ರಂಪ್‌ ಅವರು ವಿಶ್ವ ಆರೋಗ್ಯ ಸಂಸ್ಥೆಯನ್ನು ದಂಡಿಸಲು ಹೊರಟಿದ್ದಾರೆ.

ಕೊರೊನಾ ವೈರಾಣುವಿಗೆ ಸಂಬಂಧಿಸಿ ಚೀನಾದ ನಡವಳಿಕೆ ಪ್ರಾಮಾಣಿಕವಾಗಿ ಇರಲಿಲ್ಲ ಎಂಬ ಆರೋಪಕ್ಕೆ ಪುಷ್ಟಿ ನೀಡುವ ಅಂಶಗಳು ಇವೆ. ವೈರಾಣು ಪತ್ತೆಯಾದ ನಂತರದ ಒಂದು ತಿಂಗಳು ಚೀನಾ ಅದನ್ನು ಜಗತ್ತಿನ ಕಣ್ಣಿನಿಂದ ಅಡಗಿಸಿಟ್ಟಿತು, ವೈರಾಣು ಮಾದರಿಗಳನ್ನು ಅಂತರರಾಷ್ಟ್ರೀಯ ಸಂಶೋಧಕರ ಕೈಗೆ ಒಪ್ಪಿಸುವುದನ್ನು ವಿಳಂಬ ಮಾಡಿತು ಮತ್ತು ಕೊರೊನಾ ಬಗ್ಗೆ ಎಚ್ಚರಿಕೆ ನೀಡಿದ ವೈದ್ಯರನ್ನು ಶಿಕ್ಷಿಸಿತು ಎಂಬ ಆಪಾದನೆಗಳಲ್ಲಿ ಸತ್ಯಾಂಶ ಇಲ್ಲದಿಲ್ಲ.

ಈಗ, ಈ ವೈರಾಣು ಇಡೀ ಜಗತ್ತನ್ನು ವ್ಯಾಪಿಸಿದೆ. ಎಲ್ಲ ದೇಶಗಳ ಆರೋಗ್ಯ ಮತ್ತು ಆರ್ಥಿಕ ಕ್ಷೇತ್ರವು ತಲ್ಲಣಗೊಳ್ಳುವಂತೆ ಮಾಡಿದೆ. ಲಸಿಕೆ ಕಂಡುಹಿಡಿಯುವ ಪ್ರಯತ್ನ ಎಲ್ಲೆಡೆ ನಡೆಯುತ್ತಿದೆ. ಈ ಎಲ್ಲ ಪ್ರಯತ್ನಗಳ ಸಮನ್ವಯವು ಡಬ್ಲ್ಯುಎಚ್‌ಒ ಹೊಣೆ. ಇಂತಹ ನಿರ್ಣಾಯಕ ಘಟ್ಟದಲ್ಲಿ ಆ ಸಂಸ್ಥೆಯ ಶಕ್ತಿ ಕುಂದಿಸುವ ಕೆಲಸವು ಮಾನವ ಕುಲಕ್ಕೆ ಮಾಡುವ ಅನ್ಯಾಯ ಎಂಬುದನ್ನು ಟ್ರಂಪ್‌ ಅರ್ಥ ಮಾಡಿಕೊಳ್ಳಬೇಕಿದೆ. 

ಡಬ್ಲ್ಯುಎಚ್‌ಒದ ಒಟ್ಟು ವೆಚ್ಚದ ಶೇ 15ರಷ್ಟನ್ನು ಅಮೆರಿಕವೇ ಭರಿಸುತ್ತಿದೆ. ಅಮೆರಿಕದ ನೆರವು ಇಲ್ಲ ಎಂದಾದರೆ ಈ ಸಂಸ್ಥೆಯ ಪ್ರಭಾವ ಕುಗ್ಗುತ್ತದೆ. ಜಾಗತಿಕ ಮಟ್ಟದಲ್ಲಿನ ಸಮನ್ವಯಕ್ಕೆ ಹಿನ್ನಡೆಯಾಗುತ್ತದೆ. ಆಗ, ಇಡೀ ಜಗತ್ತನ್ನು ಕಾಡುವ ರೋಗಗಳ ನಿಯಂತ್ರಣ ಕಷ್ಟವಾಗುತ್ತದೆ. ಪೋಲಿಯೊ, ಮಲೇರಿಯಾ, ಎಚ್‌ಐವಿ, ಕ್ಷಯ, ದಡಾರ, ಎಬೊಲಾದಂತಹ ವೈರಾಣುಗಳನ್ನು ನಿರ್ಮೂಲನೆ ಮಾಡುವ ಕೆಲಸದಲ್ಲಿಯೂ ಡಬ್ಲ್ಯುಎಚ್‌ಒ ಪಾತ್ರ ದೊಡ್ಡದೇ ಇದೆ.

ಇಡೀ ಜಗತ್ತನ್ನು ಅಸ್ತವ್ಯಸ್ತ ಮಾಡಬಲ್ಲ ಪಿಡುಗೊಂದು ನಮ್ಮ ನಡುವೆ ಇರುವಾಗ ಅದರ ವಿರುದ್ಧದ ಹೋರಾಟದ ನೇತೃತ್ವ ವಹಿಸಿರುವ ಸಂಸ್ಥೆಯನ್ನು ಇನ್ನಷ್ಟು ಗಟ್ಟಿಗೊಳಿಸುವುದು ಎಲ್ಲ ಪ್ರಜ್ಞಾವಂತ ನಾಯಕರ ಹೊಣೆ. ಕೋವಿಡ್‌ನಿಂದ ಅತಿ ಹೆಚ್ಚು ಹಾನಿಗೆ ಒಳಗಾಗಿರುವ ದೇಶ ಅಮೆರಿಕ. ಈ ಪಿಡುಗಿನಿಂದಾಗಿ ಅಲ್ಲಿ ಸತ್ತವರ ಸಂಖ್ಯೆ ಲಕ್ಷಕ್ಕೂ ಹೆಚ್ಚು. ಉತ್ತಮ ಆರೋಗ್ಯ ವ್ಯವಸ್ಥೆ ಮತ್ತು ಅಗತ್ಯ ಸಂಪನ್ಮೂಲ ಇರುವ ಅಮೆರಿಕದಲ್ಲಿ ಹೀಗಾಗಿದ್ದು ಏಕೆ ಎಂಬ ಪ್ರಶ್ನೆಯನ್ನು ಟ್ರಂಪ್‌ ಕೇಳಿಕೊಳ್ಳಬೇಕು.

ಕೋವಿಡ್‌ ಪಿಡುಗನ್ನು ಡಬ್ಲ್ಯುಎಚ್‌ಒ ನಿರ್ವಹಿಸಿದ ರೀತಿ ಸರಿ ಇಲ್ಲ ಎಂದು ಆರೋಪಿಸುವ ಟ್ರಂಪ್‌ ಅವರ ಕಾರ್ಯಕ್ಷಮತೆಯೂ ಇಲ್ಲಿ ಪ್ರಶ್ನಾರ್ಹವೇ. ಅಮೆರಿಕದಲ್ಲಿ ಪಿಡುಗು ವಿನಾಶಕಾರಿಯಾಗಿ ಹಬ್ಬುತ್ತಿರುವುದಕ್ಕೆ ಚೀನಾ ಅಥವಾ ಡಬ್ಲ್ಯುಎಚ್‌ಒ ಕಾರಣ ಎಂದು ಟ್ರಂಪ್‌ ಪದೇ ಪದೇ ಹೇಳುತ್ತಿದ್ದಾರೆ. ಇದು ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವ ಯತ್ನ. ಅಮೆರಿಕದಲ್ಲಿ ಈ ವರ್ಷ ಚುನಾವಣೆ ನಡೆಯಲಿದೆ.

ಚೀನಾವನ್ನು ತೆಗಳುವುದನ್ನು ಟ್ರಂಪ್‌ ಬೆಂಬಲಿಗರು ಬಹಳವಾಗಿ ಇಷ್ಟಪಡುತ್ತಾರೆ ಎಂದು ಹೇಳಲಾಗುತ್ತಿದೆ. ಚುನಾವಣೆಯಲ್ಲಿ ಇದು ನೆರವಾಗಬಹುದು ಎಂಬುದು ಟ್ರಂಪ್‌ ಲೆಕ್ಕಾಚಾರ ಇದ್ದಂತಿದೆ. ಸ್ವಾರ್ಥ ಲಾಭಕ್ಕಾಗಿ ಅಂತರರಾಷ್ಟ್ರೀಯ ಹೋರಾಟವೊಂದನ್ನು ಹಳಿತಪ್ಪಿಸುವವರನ್ನು ಜಗತ್ತು ಕ್ಷಮಿಸದು. ಡಬ್ಲ್ಯುಎಚ್‌ಒದ ಲೋಪಗಳೇನೇ ಇದ್ದರೂ, ಈಗ ಆಗಬೇಕಿರುವುದು ಜೀವ ಉಳಿಸುವ ಕೆಲಸವೇ ವಿನಾ, ಕೆಸರೆರಚಾಟ ಅಲ್ಲ. ಡಬ್ಲ್ಯುಎಚ್‌ಒ ಎಡವಿದ್ದೆಲ್ಲಿ ಎಂಬುದನ್ನು ಕೊರೊನಾ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದ ಬಳಿಕ ಎಲ್ಲರೂ ಸೇರಿ ತನಿಖೆ ಮಾಡಬಹುದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು