ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಡಳಿತವನ್ನು ಹಳಿಗೆ ತರುವ ಯತ್ನಕ್ಕೆ ಅತೃಪ್ತಿ ಅಡ್ಡಿಯಾಗದಿರಲಿ

Last Updated 27 ಆಗಸ್ಟ್ 2019, 20:00 IST
ಅಕ್ಷರ ಗಾತ್ರ

ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದು ತಿಂಗಳು ಕಳೆದು ಹೋಗಿದೆ. ರಾಜ್ಯದ ಅಭಿವೃದ್ಧಿಯ ದಿಕ್ಕು ನಿರ್ಧರಿಸುವ ನಿಟ್ಟಿನಲ್ಲಿ ದೃಢ ಹೆಜ್ಜೆಗಳು ಈ ವೇಳೆಗಾಗಲೇ ಕಾಣಿಸಿಕೊಳ್ಳಬೇಕಿತ್ತು. ಈ ಸರ್ಕಾರ ರಚನೆಯಾದ ಬಳಿಕ ನಡೆದ ಘಟನಾವಳಿಗಳು, ಅಪಸ್ವರಗಳ ಮೇಲಾಟಗಳನ್ನು ಗಮನಿಸಿದರೆ, ಈ ಹಿಂದೆ ಇದ್ದ ಜೆಡಿಎಸ್‌–ಕಾಂಗ್ರೆಸ್ ಮೈತ್ರಿಕೂಟದ ಸರ್ಕಾರಕ್ಕಿಂತ ಈ ಸರ್ಕಾರ ಭಿನ್ನ ಎಂದು ಹೇಳಬಹುದಾದ ಯಾವುದೇ ಲಕ್ಷಣ ತಕ್ಷಣಕ್ಕೆ ಕಾಣಿಸುತ್ತಿಲ್ಲ.

ಮುಖ್ಯಮಂತ್ರಿ ಪ್ರಮಾಣವಚನ ಸ್ವೀಕರಿಸಿದ ನಂತರದ 23 ದಿನಗಳವರೆಗೆ ಏಕಾಧಿಪತ್ಯವನ್ನೇ ಜನರು ಕಂಡರು. ಬಳಿಕ, ಸಂಪುಟ ರಚನೆಯಾದರೂ ಖಾತೆ ಹಂಚಿಕೆಗೆ ಮತ್ತಷ್ಟು ಕಾಲಾವಕಾಶ ಬೇಕಾಯಿತು. ಖಾತೆ ಹಂಚಿಕೆಯಾದಾಗಲೂ, ಮೈತ್ರಿ ಸರ್ಕಾರ ಕೆಡವಲು ನೆರವಾದ 17 ಶಾಸಕರಿಗೆ ಕೆಲವು ಮಹತ್ವದ ಖಾತೆಗಳನ್ನು ಮೀಸಲಿಡಲಾಗಿದೆ.

ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಮೂವರು ಉಪಮುಖ್ಯಮಂತ್ರಿಗಳನ್ನು ನೇಮಿಸಲಾಗಿದೆ. ಈ ನಿರ್ಧಾರದ ಹಿಂದಿನ ಉದ್ದೇಶವು ಮುಖ್ಯಮಂತ್ರಿಗೆ ಆಡಳಿತದಲ್ಲಿ ನೆರವಾಗುವುದೋ ಅಥವಾ ಅವರನ್ನು ನಿಯಂತ್ರಿಸುವುದೋ ಎಂಬ ಜಿಜ್ಞಾಸೆ ಸಾರ್ವಜನಿಕ ವಲಯದಲ್ಲಿ ಇದೆ.ಉಪಮುಖ್ಯಮಂತ್ರಿ ಎಂಬುದು ಸಾಂವಿಧಾನಿಕ ಅಧಿಕಾರ ಇರುವ ಸ್ಥಾನವಲ್ಲ; ಅದೊಂದು ಗೌರವಸೂಚಕ ಪದವಷ್ಟೆ. ಆದರೆ, ಇಲ್ಲದ ಪ್ರತಿಷ್ಠೆಯನ್ನು ಈ ಸ್ಥಾನಕ್ಕೆ ಆರೋಪಿಸಿರುವುದೇ ಇಷ್ಟಕ್ಕೆಲ್ಲ ಕಾರಣ.

‘ಪ್ರಭಾವಿ’ಗಳನ್ನು ಬಿಟ್ಟು ಕಿರಿಯರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲಾಗಿದೆ ಎಂದು ಬಿಜೆಪಿಯ ಕೆಲವರಲ್ಲಿ ಅಸಮಾಧಾನ ಇದೆ. ಪಕ್ಷದಲ್ಲಿ ವರಿಷ್ಠರ ಬಿಗಿಹಿಡಿತ ಇರುವುದು, ಶಿಸ್ತುಕ್ರಮ ತೆಗೆದುಕೊಳ್ಳುವ ವಿಷಯದಲ್ಲಿ ತಳೆಯಬಹುದಾದ ನಿರ್ದಾಕ್ಷಿಣ್ಯ ಧೋರಣೆಯಿಂದಾಗಿ ಅತೃಪ್ತರು ಮೌನಕ್ಕೆ ಶರಣಾದಂತೆ ತೋರಿಸಿಕೊಳ್ಳುತ್ತಿದ್ದಾರೆ.

ಈ ಅತೃಪ್ತಿಯು ಮುಂದಿನ ದಿನಗಳಲ್ಲಿ ಪಕ್ಷವನ್ನು ಒಳಗೂ ಹೊರಗೂ ಸುಡುವ ತಾಪವಾಗಿ ಕಾಡಲೂಬಹುದು. ಏಕೆಂದರೆ, 17 ಕ್ಷೇತ್ರಗಳಿಗೆ ಸದ್ಯವೇ ಉಪಚುನಾವಣೆ ನಡೆಯಬೇಕಿದೆ. ಆ ವೇಳೆ, ಕಾಂಗ್ರೆಸ್–ಜೆಡಿಎಸ್‌ನ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ಬಿಜೆಪಿಯ ಅತೃಪ್ತರು ಒಳಗೊಳಗೇ ಕತ್ತಿ ಮಸೆದರೆ ಚುನಾವಣೆಯಲ್ಲಿ ಗೆಲುವು ಕಷ್ಟವಾಗಬಹುದು. ಅಗತ್ಯ ಸಂಖ್ಯೆಯಲ್ಲಿ ಶಾಸಕರನ್ನು ಗೆಲ್ಲಿಸಿಕೊಳ್ಳಲು ಆಗದಿದ್ದರೆ ಸರ್ಕಾರಕ್ಕೆ ಆಪತ್ತು ಎದುರಾಗಬಹುದು. ಅದು ಒತ್ತಟ್ಟಿಗಿರಲಿ. ಈಗಿನ ಆಗುಹೋಗುಗಳು, ಖಾತೆ ಹಂಚಿಕೆ, ಉಪಮುಖ್ಯಮಂತ್ರಿ ಸ್ಥಾನಗಳಿಂದಾಗಿ ಸೃಷ್ಟಿಯಾಗಿರುವ ಆಂತರಿಕ ಸಂಘರ್ಷವು ಆಡಳಿತದ ಮೇಲೆ ಪರಿಣಾಮ ಬೀರುವ ಲಕ್ಷಣಗಳು ಕಾಣಿಸುತ್ತಿವೆ.

‘ಮೈತ್ರಿ ಸರ್ಕಾರದಲ್ಲಿ ಆಡಳಿತ ಹಳಿ ತಪ್ಪಿದೆ, ವರ್ಗಾವಣೆ ಮತ್ತು ಭ್ರಷ್ಟಾಚಾರದ ದಂಧೆಯಲ್ಲಿ ಆಡಳಿತಾರೂಢರು ನಿರತರಾಗಿದ್ದಾರೆ’ ಎಂದು ವಿರೋಧ ಪಕ್ಷದ ನಾಯಕರಾಗಿದ್ದ ಬಿ.ಎಸ್. ಯಡಿಯೂರಪ್ಪ ಹೋದಲ್ಲಿ ಬಂದಲ್ಲಿ ಹೇಳುತ್ತಿದ್ದರು. ಕೊಡಗಿನಲ್ಲಿ ಮಹಾಪ್ರವಾಹ ನಿಭಾಯಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದೂ ಆರ್ಭಟಿಸಿದ್ದರು. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೂ ಈ ಸ್ಥಿತಿಗತಿಗಳಲ್ಲಿ ಮಹತ್ತರ ಬದಲಾವಣೆ ಆದದ್ದನ್ನು ಪ್ರವಾಹಪೀಡಿತ ಪ್ರದೇಶದ ಜನರು, ವರ್ಗಾವಣೆಯ ಸುಳಿಯಲ್ಲಿ ಸಿಕ್ಕಿ ನಲುಗಿದ ಅಧಿಕಾರಿಗಳು ಕಂಡಿಲ್ಲ.

ತಿಂಗಳೊಪ್ಪತ್ತಿನಲ್ಲೇ 70ಕ್ಕೂ ಹೆಚ್ಚು ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಸರ್ಕಾರದ ಕೆಲಸವು ವರ್ಗಾವಣೆಗೆ ಸೀಮಿತವಾಗಬಾರದು. ಯಾಕೆಂದರೆ ಯಾವ ಪಕ್ಷದ ಸರ್ಕಾರ ಇದ್ದರೂ ಕೆಲಸ ಮಾಡುವವರು ಅಧಿಕಾರಿಗಳು ಮತ್ತು ಸಿಬ್ಬಂದಿಯೇ. ಅವರನ್ನು ಮುಂದಿಟ್ಟು ಕೆಲಸ ಮಾಡುವ ಜಾಣ್ಮೆ ತೋರುವುದು ಉತ್ತಮ ಆಡಳಿತಗಾರನ ಲಕ್ಷಣ. ಸರ್ಕಾರ ಈಗಲೂ ಅದನ್ನೇ ಮಾಡಬೇಕಾಗಿದೆ. ಖಾತೆ ಹಂಚಿಕೆಯ ಅಸಮಾಧಾನದ ಹೊಗೆ ಆಡಳಿತದ ಮೇಲೆ ದುಷ್ಪರಿಣಾಮ ಬೀರದಂತೆ ನೋಡಿಕೊಳ್ಳುವುದು ಮುಖ್ಯಮಂತ್ರಿಯ ಹೊಣೆ.

ಈ ಹಿಂದಿನ ಮೈತ್ರಿ ಸರ್ಕಾರದ ಅವಧಿಯಲ್ಲಿ ಎರಡೂ ಪಕ್ಷಗಳ ನೇತಾರರ ಮಧ್ಯೆ ಸಮನ್ವಯದ ಕೊರತೆ ಹಾಗೂ ಸಂಶಯವು ಆಡಳಿತದ ಮೇಲೆ ದುಷ್ಪರಿಣಾಮ ಬೀರಿದ್ದು ಸುಳ್ಳಲ್ಲ. ಈಗಲೂ ಅದು ಪುನರಾವರ್ತನೆಯಾದರೆ ಹೊಸ ಸರ್ಕಾರ ಬಂದಿದ್ದರಿಂದ, ಅಧಿಕಾರ ಅನುಭವಿಸುವವರಿಗೆ ಬಿಟ್ಟು ರಾಜ್ಯದ ಜನರಿಗೆ ಏನೂ ಉಪಯೋಗವಾದಂತಾಗುವುದಿಲ್ಲ. ಹಳಿ ತಪ್ಪಿದ್ದ ಆಡಳಿತವನ್ನು ಮತ್ತೆ ಹಳಿಗೇರಿಸುವ ಭರವಸೆ ಕೊಟ್ಟವರು ಅದನ್ನು ಈಡೇರಿಸುವ ಇಚ್ಛಾಶಕ್ತಿ ತೋರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT