ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕಕಾಲಕ್ಕೆ ಚುನಾವಣೆ ವಿಸ್ತೃತ ನೆಲೆಯ ಚರ್ಚೆಗಳಾಗಲಿ

Last Updated 31 ಆಗಸ್ಟ್ 2018, 19:30 IST
ಅಕ್ಷರ ಗಾತ್ರ

ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಸುವ ಕುರಿತು ಬಿರುಸಿನ ಚರ್ಚೆ ನಡೆಯುತ್ತಿದೆ. ಒಂದೇ ಸಲ ಚುನಾವಣೆ ನಡೆಸುವುದರಿಂದ ಸಾರ್ವಜನಿಕ ಹಣ ಪೋಲಾಗುವುದನ್ನು ತಪ್ಪಿಸಬಹುದು ಎಂದು ಕಾನೂನು ಆಯೋಗ ಹೇಳಿದೆ. ನ್ಯಾಯಮೂರ್ತಿ ಬಿ.ಎಸ್. ಚೌಹಾಣ್‌ ನೇತೃತ್ವದ ಕಾನೂನು ಆಯೋಗದ ಮೂರು ವರ್ಷಗಳ ಅವಧಿ ಪೂರ್ಣಗೊಳ್ಳುವ ಮುನ್ನಾದಿನ ಬಿಡುಗಡೆ ಮಾಡಲಾಗಿರುವ ವರದಿಯಲ್ಲಿ ಈ ಸಂಬಂಧ ಸಂವಿಧಾನ ತಿದ್ದುಪಡಿ ಅಗತ್ಯವನ್ನು ಪ್ರಸ್ತಾಪಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರೂ ಪದೇ ಪದೇ ಈ ವಿಚಾರ ಪ್ರಸ್ತಾಪಿಸುತ್ತಿದ್ದಾರೆ. ಇತ್ತೀಚಿನ ‘ಮನ್‌ಕಿ ಬಾತ್‌’ನಲ್ಲೂ ಈ ಕುರಿತ ಚರ್ಚೆ ನಡೆಯುತ್ತಿರುವುದು ಆರೋಗ್ಯಕರ ಪ್ರಜಾಪ್ರಭುತ್ವದ ಲಕ್ಷಣ ಎಂದಿದ್ದಾರೆ. ಆದರೆ, ‘ಲೋಕಸಭೆ ಜೊತೆ ವಿಧಾನಸಭೆಗಳಿಗೂಸದ್ಯದ ಸಂದರ್ಭದಲ್ಲಿ ಚುನಾವಣೆ ನಡೆಸುವುದು ಸಾಧ್ಯವಿಲ್ಲ. ಇದಕ್ಕೆ ಅಗತ್ಯವಾದಕಾನೂನು ಚೌಕಟ್ಟು ಇನ್ನೂ ಸಿದ್ಧವಾಗಿಲ್ಲ’ ಎಂದು ಕೇಂದ್ರ ಚುನಾವಣಾ ಆಯೋಗ ಇತ್ತೀಚೆಗಷ್ಟೇ ಸ್ಪಷ್ಟಪಡಿಸಿದೆ. ಭಾರತದಂಥ ಒಕ್ಕೂಟ ವ್ಯವಸ್ಥೆಗೆ ಒಂದು ದೇಶ, ಒಂದು ಚುನಾವಣೆ ಕಲ್ಪನೆಯನ್ನು ಅನ್ವಯಿಸುವುದು ಕಷ್ಟ. ಇದಕ್ಕೆ ಎಲ್ಲ ರಾಜಕೀಯ ಪಕ್ಷಗಳೂಒಪ್ಪಬೇಕಾಗುತ್ತದೆ. ರಾಜ್ಯಗಳ ಸಹಕಾರವೂ ಬೇಕಾಗುತ್ತದೆ. ಇದು ಅಷ್ಟು ಸರಳವಲ್ಲ. ಈಗಾಗಲೇ ಬಹುತೇಕ ಪಕ್ಷಗಳು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿವೆ. ಇದರಿಂದ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಉಂಟಾಗಲಿದೆ ಎಂಬ ಆತಂಕ ವ್ಯಕ್ತವಾಗಿದೆ.

ರಾಷ್ಟ್ರದಲ್ಲಿ ಪ್ರಜಾಪ್ರಭುತ್ವದ ಬೇರುಗಳನ್ನು ಆಳಕ್ಕಿಳಿಸುವಲ್ಲಿ ಒಕ್ಕೂಟ ವ್ಯವಸ್ಥೆಯ ರಾಜಕೀಯದ ಪಾಲು ದೊಡ್ಡದಿದೆ. ಏಕಕಾಲದ ಚುನಾವಣೆಗಳಿಂದ ಪ್ರಾದೇಶಿಕ ಹಿತಾಸಕ್ತಿಗಳಿಗೂ ಭಂಗ ಬರಲಿದೆ ಎಂಬ ಅಭಿಪ್ರಾಯ ಕೆಲವು ಪಕ್ಷಗಳು ಮತ್ತು ಅವುಗಳ ಮುಖಂಡರಲ್ಲಿವೆ. ಇದು ಸುಳ್ಳೇನಲ್ಲ. ಏಕಕಾಲಕ್ಕೆ ಚುನಾವಣೆ ನಡೆಸುವುದರಿಂದ ಕೆಲವು ರಾಜ್ಯಗಳಲ್ಲಿ ಇತ್ತೀಚೆಗಷ್ಟೇ ಅಸ್ತಿತ್ವಕ್ಕೆ ಬಂದಿರುವ ಸರ್ಕಾರದ ಅಧಿಕಾರ ಅವಧಿ ಮೊಟಕುಗೊಳ್ಳಲಿದೆ. ಈ ಕಾರಣಕ್ಕೂ ಬಹಳಷ್ಟು ಪಕ್ಷಗಳು ವಿರೋಧಿಸುತ್ತಿವೆ. ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾಗಿರುವ ಸರ್ಕಾರದ ಅಧಿಕಾರ ಮೊಟಕುಗೊಳಿಸುವುದು ಅರ್ಥಹೀನ ಕ್ರಮವೇ ಸರಿ.

ಒಂದಿಲ್ಲೊಂದು ರಾಜ್ಯಗಳಲ್ಲಿ ಯಾವಾಗಲೂ ಚುನಾವಣೆ ನಡೆಯುತ್ತಲೇ ಇರುವುದರಿಂದ ಆಡಳಿತಕ್ಕೆ ಸಮಸ್ಯೆಯಾಗುತ್ತಿದೆ ಎಂಬ ಮಾತಲ್ಲೂ ಹುರುಳಿದೆ. ಸದಾ ಚುನಾವಣೆಯ ಗುಂಗಿನಿಂದಾಗಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ, ಕಾಲಮಿತಿ ಯೋಜನೆಗಳು ಸಕಾಲಕ್ಕೆ ಪೂರ್ಣಗೊಳ್ಳುತ್ತಿಲ್ಲ ಎಂಬ ಟೀಕೆಗಳನ್ನೂ ಒಪ್ಪಲೇಬೇಕು. ಚುನಾವಣೆ ಘೋಷಣೆಯಾದ ದಿನದಿಂದ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ನೀತಿಸಂಹಿತೆ ಜಾರಿಯಲ್ಲಿರುವುದರಿಂದ ಆಡಳಿತಯಂತ್ರ ಸ್ಥಗಿತಗೊಳ್ಳುತ್ತದೆ. ಆಡಳಿತಕ್ಕಿಂತ ಚುನಾವಣೆ ಗೆಲ್ಲುವುದೇ ಆದ್ಯತೆಯ ವಿಚಾರವಾಗುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಪಕ್ಷಗಳು, ಅಭ್ಯರ್ಥಿಗಳು ಹಣ ಸುರಿಯುವುದರಲ್ಲಿಪೈಪೋಟಿಗೆ ಇಳಿಯುತ್ತಿದ್ದಾರೆ. ಖರ್ಚುವೆಚ್ಚಗಳ ಮೇಲೆ ಮಿತಿ ಹೇರಲಾಗಿದ್ದರೂ ಕದ್ದುಮುಚ್ಚಿ ಹಣ, ಹೆಂಡ ಹಂಚುತ್ತಿರುವುದನ್ನು ನಿರಾಕರಿಸುವಂತಿಲ್ಲ. ಆದರೆ ಏಕಕಾಲಕ್ಕೆ ಚುನಾವಣೆಗಳನ್ನು ನಡೆಸಿದರೂ ಲೋಕಸಭೆ ಅಥವಾ ವಿಧಾನಸಭೆ ‍ಪೂರ್ಣಾವಧಿ ಮುಗಿಸುತ್ತದೆ ಎಂಬ ಖಾತರಿಯೂ ಇರುವುದಿಲ್ಲ.

ಮತದಾರ ಒಂದು ಪಕ್ಷ ಅಥವಾ ಒಬ್ಬ ನಾಯಕನನ್ನು ಬೆಂಬಲಿಸುವ ಪರಂಪರೆ ಕೊನೆಗೊಂಡಿದೆ. ಇದಕ್ಕೆ ಒಂದೆರಡು ಚುನಾವಣೆಗಳು ಮಾತ್ರ ಅಪವಾದ ಎನ್ನಬಹುದು. ಬಹುಪಕ್ಷವ್ಯವಸ್ಥೆ, ಮೈತ್ರಿಸರ್ಕಾರಗಳು, ಮಧ್ಯಂತರ ಚುನಾವಣೆಗಳ ಈ ಕಾಲದಲ್ಲಿ ಚುನಾವಣೆಯಲ್ಲಿ ಏಕರೂಪತೆ ತರಲು ಬಯಸುವುದು ಒಂದು ಅತಿರೇಕವಾದರೆ ಭಾರತದಂತಹ ಬಡ ರಾಷ್ಟ್ರ ಸದಾ ಚುನಾವಣೆ ಗುಂಗಿನಲ್ಲಿರುವುದೂ ಮತ್ತೊಂದು ಅತಿರೇಕ. ಈ ಎರಡೂ ಅತಿರೇಕಗಳ ನಡುವೆ ಚುನಾವಣೆ ವ್ಯವಸ್ಥೆ ಸುಧಾರಣೆಗೆ ವ್ಯಾಪಕ ಚರ್ಚೆಗಳಾಗಬೇಕು. ಚುನಾವಣೆಗಳಲ್ಲಿ ದುಬಾರಿ ವೆಚ್ಚಕ್ಕೆ ಕಡಿವಾಣ ಹಾಕಲು ಕಪ್ಪು ಹಣ ಚಲಾವಣೆ ತಡೆಗಟ್ಟುವುದೂ ಮುಖ್ಯ.ಈ ನಿಟ್ಟಿನಲ್ಲಿಯೂ ಚರ್ಚೆಗಳು ಆರಂಭವಾಗಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT