ದೆಹಲಿ ಮತ್ತು ರಾಷ್ಟ್ರ ರಾಜಧಾನಿ ಪ್ರದೇಶಗಳಲ್ಲಿ (ಎನ್ಸಿಆರ್) ಪಟಾಕಿಗೆ ಹೇರಿದ್ದ ಸಂಪೂರ್ಣ ನಿರ್ಬಂಧವನ್ನು ತೆರವುಗೊಳಿಸಿ, ಅಕ್ಟೋಬರ್ 18ರಿಂದ 20ರವರೆಗೆ ಹಸಿರು ಪಟಾಕಿಗಳ ತಯಾರಿಕೆ, ಮಾರಾಟ ಮತ್ತು ಬಳಕೆಗೆ ಸುಪ್ರೀಂ ಕೋರ್ಟ್ ಅವಕಾಶ ಕಲ್ಪಿಸಿರುವುದು ದುರದೃಷ್ಟಕರ. ಪಟಾಕಿಗಳ ಮಾರಾಟ ಮತ್ತು ಬಳಕೆಗೆ ಆರು ವರ್ಷಗಳಿಂದ ಜಾರಿಯಲ್ಲಿದ್ದ ನಿರ್ಬಂಧವನ್ನು ಸಡಿಲಿಸಿ, ಹಸಿರು ಪಟಾಕಿ ಬಳಕೆಗೆ ಅನುಮತಿ ನೀಡುವಂತೆ ಕೇಂದ್ರ ಸರ್ಕಾರ ಮತ್ತು ದೆಹಲಿ ಸರ್ಕಾರಗಳು ಮಾಡಿಕೊಂಡಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಪುರಸ್ಕರಿಸಿದೆ. ಇದರಿಂದಾಗಿ, ಮುಂದಿನ ವಾರದ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿಗಳ ಮಾರಾಟ ಮತ್ತು ಬಳಕೆಗೆ ಷರತ್ತುಬದ್ಧ ಅವಕಾಶ ದೊರೆತಿದೆ. ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ ವಾಯುಮಾಲಿನ್ಯ ಉಲ್ಬಣಗೊಳ್ಳುತ್ತದೆ ಹಾಗೂ ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತದೆ ಎನ್ನುವ ಕಾರಣಕ್ಕಾಗಿ ಪಟಾಕಿ ತಯಾರಿಕೆ–ಬಳಕೆಯ ಮೇಲೆ ಸಂಪೂರ್ಣ ನಿರ್ಬಂಧ ವಿಧಿಸಲಾಗಿತ್ತು. ಈ ನಿರ್ಬಂಧವನ್ನು ಸಡಿಲಿಸಿರುವ ಸುಪ್ರೀಂ ಕೋರ್ಟ್, ಇದೊಂದು ತಾತ್ಕಾಲಿಕ ಕ್ರಮವಾಗಿದ್ದು, ಪರಿಸರ ಕಾಳಜಿಗೆ ಸಂಬಂಧಿಸಿದಂತೆ ರಾಜಿ ಮಾಡಿಕೊಳ್ಳದೆ ಪಟಾಕಿಗಳ ಬಳಕೆಗೆ ಅವಕಾಶ ಕಲ್ಪಿಸಬೇಕಾಗಿದೆ ಎಂದು ಹೇಳಿದೆ. ಪಟಾಕಿ ಉದ್ಯಮದಲ್ಲಿ ತೊಡಗಿಕೊಂಡಿರುವವರ ಹಿತಾಸಕ್ತಿ ಹಾಗೂ ಪರಿಸರ ಕಾಳಜಿಗೆ ಸಂಬಂಧಿಸಿದಂತೆ, ವಿರೋಧಾಭಾಸದ ಹಿತಾಸಕ್ತಿಗಳ ಸಂದರ್ಭದಲ್ಲಿ ಸಮತೋಲನದ ದಾರಿಯೊಂದನ್ನು ಕಂಡುಕೊಳ್ಳುವ ಅಗತ್ಯವನ್ನು ನ್ಯಾಯಾಲಯ ಪ್ರಸ್ತಾಪಿಸಿದೆ.

ಪರಿಸರ ಮಾಲಿನ್ಯದ ದೃಷ್ಟಿಯಿಂದ ಸ್ವೀಕಾರಾರ್ಹವಲ್ಲದ ಹಸಿರು ಪಟಾಕಿಗಳನ್ನು ಪರಿಚಯಿಸುವ ಸರ್ಕಾರದ ಚಿಂತನೆ ಕಾನೂನಿನ ಕಣ್ಣಿಗೆ ಮಣ್ಣು ಎರಚುವಂತಹದ್ದು ಹಾಗೂ ರಾಜಕೀಯ ಉದ್ದೇಶಗಳನ್ನು ಹೊಂದಿರುವಂತಹದ್ದಾಗಿದೆ. ಹಸಿರು ಪಟಾಕಿಗಳು ತಮ್ಮ ಹೆಸರಿಗೆ ತಕ್ಕಂತೆ ಪರಿಸರಕ್ಕೆ ಪೂರಕ ಅಥವಾ ಸುರಕ್ಷಿತ ಅಲ್ಲ. ಹಸಿರು ಪಟಾಕಿ ಎನ್ನುವ ಪರಿಕಲ್ಪನೆಯೇ ವಿರೋಧಾಭಾಸದಿಂದ ಕೂಡಿದೆ. ಸಾಂಪ್ರದಾಯಿಕ ಪಟಾಕಿಗಳಿಂತಲೂ ಶೇ 30ರಷ್ಟು ಕಡಿಮೆ ಮಾಲಿನ್ಯವನ್ನು ಉಂಟುಮಾಡುತ್ತವೆ ಹಾಗೂ ಭಾರಲೋಹಗಳನ್ನು ಕಡಿಮೆ ಪ್ರಮಾಣದಲ್ಲಿ ಹೊಂದಿವೆ ಎನ್ನುವುದು ನಿಜವಾದರೂ, ದೆಹಲಿಯ ಪರಿಸರ ಮತ್ತು ನಾಗರಿಕರ ಆರೋಗ್ಯದ ಮೇಲೆ ಹಸಿರು ಪಟಾಕಿಗಳು ಉಂಟು ಮಾಡುವ ಪರಿಣಾಮ ಗಂಭೀರವಾದುದೇ ಆಗಿದೆ; ಮಕ್ಕಳು, ಹಿರಿಯ ನಾಗರಿಕರು ಹಾಗೂ ಆರೋಗ್ಯದ ಸಮಸ್ಯೆಗಳನ್ನು ಹೊಂದಿರುವವರು ಹೆಚ್ಚಿನ ತೊಂದರೆ ಅನುಭವಿಸಬೇಕಾಗುತ್ತದೆ. ಹಸಿರು ಪಟಾಕಿಗಳ ಬಳಕೆಗೆ ನ್ಯಾಯಾಲಯ 2018ರಲ್ಲಿ ಅವಕಾಶ ಕಲ್ಪಿಸಿತ್ತಾದರೂ, ಹಸಿರು ಪಟಾಕಿ ಮತ್ತು ಸಾಂಪ್ರದಾಯಿಕ ಪಟಾಕಿಗಳ ವಿಂಗಡಣೆ ಕಷ್ಟಕರ ಎನ್ನುವ ಕಾರಣ ನೀಡಿ, ಎಲ್ಲ ಬಗೆಯ ಪಟಾಕಿ ಮಾರಾಟ ಮತ್ತು ಬಳಕೆಯನ್ನು ದೆಹಲಿ ಸರ್ಕಾರ 2020ರಲ್ಲಿ ಸಂಪೂರ್ಣವಾಗಿ ನಿಷೇಧಿಸಿತ್ತು.

ನಾಗರಿಕರ ಆರೋಗ್ಯ ಹಾಗೂ ಪರಿಸರ ಕಾಳಜಿಯನ್ನು ಗಮನದಲ್ಲಿರಿಸಿಕೊಂಡು ರಾಷ್ಟ್ರ ರಾಜಧಾನಿ ವ್ಯಾಪ್ತಿಯಲ್ಲಿ ಯಾವುದೇ ಬಗೆಯ ಪಟಾಕಿಯ ತಯಾರಿಕೆ, ಮಾರಾಟ ಮತ್ತು ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸುವ ಕ್ರಮವನ್ನು ಸರ್ಕಾರಗಳು ಕೈಗೊಳ್ಳುವುದು ಅನಿವಾರ್ಯ; ಇದಕ್ಕೆ ಬದಲಾಗಿ, ತಮ್ಮ ರಾಜಕೀಯ ಹಿತಾಸಕ್ತಿಗಾಗಿ ಅನುಮಾನಕ್ಕೆ ಆಸ್ಪದ ಕಲ್ಪಿಸುವ ಕ್ರಮಗಳನ್ನು ಕೈಗೊಳ್ಳುತ್ತಿವೆ. ಹಸಿರು ಪಟಾಕಿ ಬಳಕೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಗೊತ್ತುಪಡಿಸಿರುವ ಹಾಗೂ ಸರ್ಕಾರ ಜಾರಿಗೊಳಿಸುವುದಾಗಿ ಒಪ್ಪಿಕೊಂಡಿರುವ ಷರತ್ತುಗಳು, ಸುರಕ್ಷತಾ ಕ್ರಮಗಳು ಹಾಗೂ ಮುನ್ನೆಚ್ಚರಿಕೆಗಳು ಉಲ್ಲಂಘನೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಅಂತಿಮವಾಗಿ, ಕಾನೂನಿಗೆ ಸಂಬಂಧಿಸಿದ ಸಂಗತಿಗಳು ಕಾಗದದ ಮೇಲಷ್ಟೇ ಪಾಲನೆಯಾಗುತ್ತವೆ. ಸಂಪೂರ್ಣ ನಿಷೇಧವಾಗಿದ್ದಾಗಲೂ, ಅದರ ಅನುಷ್ಠಾನ ದುರ್ಬಲವಾಗಿತ್ತು ಎನ್ನುವುದನ್ನು ನ್ಯಾಯಾಲಯವೂ ಗಮನಿಸಿರುವಾಗ, ಆಂಶಿಕ ನಿರ್ಬಂಧಗಳು ಪಾಲನೆಯಾಗುತ್ತವೆ ಎಂದು ಹೇಳಲಾಗದು. ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ವಿಷಯಗಳಿಗೆ ಸಂಬಂಧಿಸಿದಂತೆ ಸಮತೋಲನದ ಧೋರಣೆಯ ಅಳವಡಿಕೆ ಎನ್ನುವ ಚಿಂತನೆಯೂ ಸಮಸ್ಯಾತ್ಮಕವಾದುದು. ಪಟಾಕಿಗಳನ್ನು ಸಂಪೂರ್ಣವಾಗಿ ನಿಷೇಧಿಸುವುದು ಹಾಗೂ ಆ ನಿರ್ಬಂಧವನ್ನು ಪರಿಣಾಮಕಾರಿಯಾಗಿ, ಪ್ರಾಮಾಣಿಕವಾಗಿ ಜಾರಿಗೊಳಿಸುವುದರಲ್ಲಷ್ಟೇ ಸಾರ್ವಜನಿಕ ಹಿತ ಅಡಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.