ಶನಿವಾರ, ಜುಲೈ 31, 2021
28 °C

ಸಂಪಾದಕೀಯ | ಕೋರ್ಟ್‌ನಲ್ಲಿ ಮೆಹ್ತಾ ವಾದ; ಘನತೆ ತಗ್ಗಿಸುವ ನಡೆ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ದೇಶದ ಸಾಂವಿಧಾನಿಕ ಕೋರ್ಟ್‌ಗಳಲ್ಲಿ ದಾಖಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು (ಪಿಐಎಲ್‌) ಗಂಭೀರವಾಗಿ ಪರಿಗಣಿಸಿ, ವಿಸ್ತೃತವಾಗಿ ವಿಚಾರಣೆಗೆ ಒಳಪಡಿಸಿ, ಚರಿತ್ರಾರ್ಹ ತೀರ್ಪುಗಳನ್ನು ನೀಡಿದ ಇತಿಹಾಸ ಭಾರತದ ನ್ಯಾಯಾಂಗಕ್ಕೆ ಇದೆ.

ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಆಗದಂತೆ ನೋಡಿಕೊಳ್ಳುವ ಉದ್ದೇಶದ ‘ವಿಶಾಖ ಮಾರ್ಗಸೂಚಿ’ ಗಳು, ವಿಚಾರಣಾಧೀನ ಕೈದಿಗಳ ನೆರವಿಗೆ ಬಂದ ಹುಸೈನಾರಾ ಖತೂನ್ ಪ್ರಕರಣ, ಬೀದಿ ಬದಿ ವಾಸ ಮಾಡುತ್ತಿದ್ದವರ ನೆರವಿಗೆ ಬಂದ ಓಲ್ಗಾ ಟೆಲ್ಲಿಸ್ ಪ್ರಕರಣ ಸೇರಿದಂತೆ ಹತ್ತು ಹಲವು ಪ್ರಕರಣಗಳನ್ನು ಈ ಸಾಲಿನಲ್ಲಿ ಉಲ್ಲೇಖಿಸಬಹುದು.

ಹಲವು ಸಂದರ್ಭಗಳಲ್ಲಿ ಪಿಐಎಲ್‌ಗಳನ್ನು ಬಳಸಿಕೊಂಡು ದೇಶದ ನ್ಯಾಯಾಲಯಗಳು, ಸಂವಿಧಾನದ ವಿವಿಧ ವಿಧಿಗಳನ್ನು ವಿಶಾಲ ನೆಲೆಯಲ್ಲಿ ಅರ್ಥೈಸಿವೆ, ಜನರ ಹಕ್ಕುಗಳ ವ್ಯಾಪ್ತಿಯನ್ನು ವಿಸ್ತರಿಸಿವೆ. ಹಾಗಾಗಿ, ‘ಪಿಐಎಲ್‌ಗಳನ್ನು ಸರ್ಕಾರಗಳು ವಿರೋಧಿಸುವ ಅಗತ್ಯ ಎಲ್ಲ ಸಂದರ್ಭಗಳಲ್ಲೂ ಇರುವುದಿಲ್ಲ. ಪಿಐಎಲ್‌ಗಳ ವಿಚಾರದಲ್ಲಿ ಸರ್ಕಾರವು ಕೋರ್ಟ್‌ ಹಾಗೂ ಅರ್ಜಿದಾರರ ಜೊತೆ ಪೂರಕವಾಗಿಯೂ ಕೆಲಸ ಮಾಡಬಹುದು’ ಎಂಬ ಮಾತು ನ್ಯಾಯಾಂಗದ ಹಿರಿಯರಿಂದ ಬಂದಿದ್ದೂ ಇದೆ.

ದೇಶದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ವಲಸೆ ಕಾರ್ಮಿಕರ ಬವಣೆಗೆ ಸಂಬಂಧಿಸಿದ ‍ಒಂದು ಪಿಐಎಲ್‌ ವಿಚಾರಣೆ ಸಂದರ್ಭದಲ್ಲಿ ಆಡಿದ ಮಾತುಗಳು ಈ ಹಿನ್ನೆಲೆಯಲ್ಲಿ ಪ್ರಶ್ನಾರ್ಹವಾಗುತ್ತವೆ. ಮೆಹ್ತಾ ಅವರು ದೇಶದ ‘ಕೆಲವು ಹೈಕೋರ್ಟ್‌ಗಳು ಪರ್ಯಾಯ ಸರ್ಕಾರವನ್ನು ನಡೆಸುತ್ತಿವೆ’ ಎಂದು ಹೇಳಿದ್ದಾಗಿ ವರದಿಯಾಗಿದೆ.

ಕೆಲವರನ್ನು ಉದ್ದೇಶಿಸಿ ಮಾಡಿದ ರಣಹದ್ದುಗಳ ಉಲ್ಲೇಖವು ವಿಷಯದ ಗಾಂಭೀರ್ಯವನ್ನು ಕುಗ್ಗಿಸಬಹುದೇ ವಿನಾ ಅದರಿಂದ ಯಾವ ಪ್ರಯೋಜನವೂ ಇಲ್ಲ. ಹೈಕೋರ್ಟ್‌ಗಳು ಕೂಡ ಸಾಂವಿಧಾನಿಕ ಕೋರ್ಟ್‌ಗಳು. ಅವು ಕೂಡ ಪಿಐಎಲ್‌ಗಳ ವಿಚಾರಣೆ ನಡೆಸುತ್ತವೆ. ಕಾರ್ಯಾಂಗ ವಿಫಲವಾದಾಗ, ನ್ಯಾಯಾಂಗ ಮಧ್ಯಪ್ರವೇಶ ಮಾಡುವುದಕ್ಕೆ ಅವಕಾಶ ಖಂಡಿತ ಇದೆ.

ನ್ಯಾಯಾಂಗದ ಕ್ರಿಯಾಶೀಲತೆ ಹೆಚ್ಚಾಗಿದೆಯೇ, ಅದು ಕಾರ್ಯಾಂಗದ ಕೆಲಸಗಳಲ್ಲಿ ಹಸ್ತಕ್ಷೇಪ ಮಾಡುತ್ತಿದೆಯೇ ಎಂಬುದು ಚರ್ಚೆಯ ವಸ್ತುವಾಗಬಹುದು. ಆದರೆ, ಸಾಂವಿಧಾನಿಕ ಕೋರ್ಟ್‌ ಗಳು ‘ಪರ್ಯಾಯ ಸರ್ಕಾರ’ ನಡೆಸುತ್ತಿವೆ ಎಂದು ನ್ಯಾಯಾಂಗದಲ್ಲೇ ಉನ್ನತ ಹುದ್ದೆಯಲ್ಲಿಇರುವವರು ಹೇಳುವುದು ಆಘಾತಕಾರಿ, ಅನುಚಿತ.

ಸಾಲಿಸಿಟರ್‌ ಜನರಲ್‌ ಅಂದರೆ ಕೇಂದ್ರ ಸರ್ಕಾರದ ಎರಡನೆಯ ಅತ್ಯಂತ ಹಿರಿಯ ಕಾನೂನು ಅಧಿಕಾರಿ. ಸಾಲಿಸಿಟರ್‌ ಜನರಲ್‌ ಸ್ಥಾನದಲ್ಲಿ ಇರುವವರು ಸರ್ಕಾರಕ್ಕೆ ಕಾನೂನು ಸಲಹೆಗಳನ್ನು ನೀಡುವವರು. ಅಂತಹ ಸ್ಥಾನ ಹೊಂದಿರುವ ಮೆಹ್ತಾ ಅವರು ವಲಸೆ ಕಾರ್ಮಿಕರ ಸಂಕಷ್ಟಗಳಿಗೆ ಸಂಬಂಧಿಸಿದ ಅರ್ಜಿಯ ವಿಚಾರಣೆ ವೇಳೆ ಅವರ ಸ್ಥಾನಕ್ಕೆ ತಕ್ಕುದಾದ ರೀತಿಯಲ್ಲಿ ನಡೆದುಕೊಳ್ಳಲಿಲ್ಲ ಎಂಬುದು ದುರದೃಷ್ಟಕರ. ಅದರಲ್ಲೂ, ವಲಸೆ ಕಾರ್ಮಿಕರಿಗೆ ಸಂಬಂಧಿಸಿದ ಪಿಐಎಲ್‌ ಅನ್ನು ಅವರು ಸರ್ಕಾರದ ವಿರುದ್ಧ ದಾಖಲಾದ ಅರ್ಜಿಯೆಂಬಂತೆ ಭಾವಿಸಿದಂತಿದೆ.

‘ನ್ಯಾಯಮೂರ್ತಿಗಳ ಎದುರು ಬರುವವರು ತಮ್ಮ ಪೂರ್ವಾಪರವನ್ನು ಸಾಬೀತು ಮಾಡಬೇಕು. ಅವರೆಲ್ಲ ಕೋಟಿಗಟ್ಟಲೆ ರೂಪಾಯಿ ಸಂಪಾದಿಸುತ್ತಾರೆ. ಆದರೆ, ಅವರು ಒಂದು ಪೈಸೆಯನ್ನಾದರೂ ಖರ್ಚು ಮಾಡಿದ್ದಾರಾ? ಬೀದಿಗಳಲ್ಲಿ ಜನರೇ ಪರಸ್ಪರ ಆಹಾರ ಕೊಟ್ಟುಕೊಳ್ಳುತ್ತಿದ್ದಾರೆ. ಟೀಕೆ ಮಾಡುವವರು ತಮ್ಮ ಹವಾನಿಯಂತ್ರಿತ ಕೊಠಡಿಗಳಿಂದ ಹೊರಬಂದು, ಸಹಾಯ ಮಾಡಿದ್ದಾರೆಯೇ’ ಎಂದೂ ಪ್ರಶ್ನಿಸಿದ್ದಾರೆ ಎಂಬುದಾಗಿ ವರದಿಯಾಗಿದೆ. ಈ ರೀತಿ ಮಾತನಾಡಿದ್ದು ಕೂಡ, ‘ಇದು ಸರ್ಕಾರದ ವಿರುದ್ಧದ ಅರ್ಜಿ’ ಎಂಬಂತೆ ಭಾವಿಸಿದ ಪರಿಣಾಮ ಆಗಿರಬಹುದು.

ವಲಸೆ ಕಾರ್ಮಿಕರಿಗೆ ಸಂಬಂಧಿಸಿದ ಇನ್ನೊಂದು ಅರ್ಜಿಯ ವಿಚಾರಣೆ ವೇಳೆ ಮೆಹ್ತಾ ಅವರು, ‘ಇಂದು 11 ಗಂಟೆಯ (ಅಂದರೆ, ಮಾರ್ಚ್‌ 31ರಂದು) ಹೊತ್ತಿನಲ್ಲಿ ದೇಶದಲ್ಲಿ ಎಲ್ಲಿಯೂ ವಲಸೆ ಕಾರ್ಮಿಕರು ರಸ್ತೆಯಲ್ಲಿ ಇಲ್ಲ. ಅವರನ್ನು ಹತ್ತಿರದ ಆಶ್ರಯ ಕೇಂದ್ರಕ್ಕೆ ಕರೆದೊಯ್ಯಲಾಗಿದೆ’ ಎಂದು ಸುಪ್ರೀಂ ಕೋರ್ಟ್‌ನಲ್ಲಿ ಹೇಳಿದ್ದರು. ಆದರೆ, ಊರಿಗೆ ಮರಳಲು ಹಂಬಲಿಸುತ್ತಿದ್ದ ವಲಸೆ ಕಾರ್ಮಿಕರು ಲಾಕ್‌ಡೌನ್‌ ಅವಧಿಯಲ್ಲಿ ಅನುಭವಿಸಿದ ಯಾತನೆಯ ವಿರಾಟ್‌ ರೂಪದ ಅರಿವಿದ್ದವರಿಗೆ ಮೆಹ್ತಾ ಹೇಳಿಕೆಯಲ್ಲಿ ಸತ್ಯ ಎಷ್ಟಿತ್ತು ಎಂಬುದು ಅರ್ಥವಾಗಿರುತ್ತದೆ.

ವಲಸೆ ಕಾರ್ಮಿಕರಿಗೆ ಸಂಬಂಧಿಸಿದ ಅರ್ಜಿಯನ್ನು ಯಾರೂ ‘ಇದು ನಮ್ಮ ವಿರುದ್ಧ’ ಎಂದು ಭಾವಿಸುವ ಅಗತ್ಯವಿಲ್ಲ. ಇದು ಮನುಕುಲದ ಯಾತನೆಗೆ ಸಂಬಂಧಿಸಿದ್ದು ಎಂಬ ನೆಲೆಯಲ್ಲಿ ಗ್ರಹಿಸಿದರೆ, ಯಾರ ಬಾಯಿಂದಲೂ ಮೇಲೆ ಉಲ್ಲೇಖಿಸಿರುವಂತಹ ಮಾತುಗಳು ಬಾರವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು