ಭಾನುವಾರ, ಮಾರ್ಚ್ 29, 2020
19 °C

ಟಿ20 ಮಹಿಳಾ ವಿಶ್ವಕಪ್ ಕ್ರಿಕೆಟ್ ಭಾರತಕ್ಕೆ ಸೋಲು ಪಾಠವಾಗಲಿ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಮೆಲ್ಬರ್ನ್ ಕ್ರಿಕೆಟ್‌ ಮೈದಾನದಲ್ಲಿ ವಿಶ್ವ ಮಹಿಳಾ ದಿನವಾದ ಮಾರ್ಚ್‌ 8ರಂದೇ ಮಹಿಳೆಯರ ಟ್ವೆಂಟಿ–20 ವಿಶ್ವಕಪ್ ಕ್ರಿಕೆಟ್‌ ಟೂರ್ನಿಯ ಫೈನಲ್‌ ಪಂದ್ಯ ಜರುಗಿದ್ದು ವಿಶೇಷ. ಭಾರತ ತಂಡವು ಮೊದಲ ಸಲ ಫೈನಲ್‌ನಲ್ಲಿ ಆಡಿದ್ದು ಮತ್ತೊಂದು ವಿಶೇಷ. ಈ ಫೈನಲ್‌ನಲ್ಲಿ ಭಾರತ ತಂಡಕ್ಕೆ ಗೆಲ್ಲಲು ಸಾಧ್ಯವಾಗಲಿಲ್ಲ. ಹಾಗಿದ್ದರೂ ಈ ಸೋಲಿನಲ್ಲೂ ಕಲಿಯಬೇಕಾದ ಹತ್ತಾರು ಪಾಠಗಳಿವೆ.

 ಆಸ್ಟ್ರೇಲಿಯಾ ತಂಡವು ಐದನೇ ಬಾರಿಗೆ ಚಾಂಪಿಯನ್ ಆಯಿತು. ಟೂರ್ನಿಯ ‘ಎ’ ಗುಂಪಿನಲ್ಲಿದ್ದ ಭಾರತವು ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಮಣಿಸಿತ್ತು. ಅದರಿಂದಾಗಿ ಫೈನಲ್‌ನಲ್ಲಿಯೂ ಭಾರತವು ಜಯಿಸುವ ವಿಶ್ವಾಸ ಮೂಡಿತ್ತು. ಆದರೆ, ತಮ್ಮ ಸೋಲನ್ನು ಗಂಭೀರವಾಗಿ ಪರಿಗಣಿಸಿದ್ದ ಆತಿಥೇಯರು ತಿರುಗೇಟು ನೀಡಿದರು.

ಮೆಗ್‌ ಲ್ಯಾನಿಂಗ್ ನಾಯಕತ್ವದ ತಂಡವು ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾದ ಕಠಿಣ ಪೈಪೋಟಿಯನ್ನು ಮೆಟ್ಟಿನಿಂತು ಫೈನಲ್‌ಗೆ ಬಂದಿತ್ತು. ಆದರೂ ಮೈಮರೆಯಲಿಲ್ಲ. ಬದಲಿಗೆ ಭಾರತದ ಸ್ಪಿನ್ನರ್‌ಗಳನ್ನು ಎದುರಿಸುವ ತಂತ್ರಗಳನ್ನು ಆಟಗಾರರು ಎರಡು ದಿನ ಅಭ್ಯಾಸ ಮಾಡಿದ್ದರು. 2009ರಲ್ಲಿ ಆರಂಭವಾದ ಮಹಿಳೆಯರ ಟಿ20 ಟೂರ್ನಿಯ ಇತಿಹಾಸದಲ್ಲಿ ಆರು ಬಾರಿ ಫೈನಲ್‌ ಆಡಿರುವ ಆಸ್ಟ್ರೇಲಿಯಾದ ಯಶಸ್ಸಿನ ಗುಟ್ಟು ಇದು. ಈ ವೃತ್ತಿಪರತೆಯನ್ನು ಭಾರತ ತಂಡ ರೂಢಿಸಿಕೊಳ್ಳಬೇಕಿದೆ.

ಹಾಗೆಂದು ಈ ಬಾರಿ ಭಾರತದ ಆಟವು ತೀರಾ ಸಪ್ಪೆಯೇನೂ ಆಗಿರಲಿಲ್ಲ. ಸರಣಿಯ ಉದ್ದಕ್ಕೂ ತಂಡ ಚೆನ್ನಾಗಿಯೇ ಆಡಿತು. ನಾಲ್ಕು ವರ್ಷಗಳ ಹಿಂದೆ ಚಾಂಪಿಯನ್ ಆಗಿದ್ದ ವೆಸ್ಟ್ ಇಂಡೀಸ್, ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ ತಂಡಗಳು ಸೆಮಿಫೈನಲ್ ಹಂತಕ್ಕೂ ಬರಲಿಲ್ಲ. ದಕ್ಷಿಣ ಆಫ್ರಿಕಾ ತಂಡದ ಹೋರಾಟ ಚೇತೋಹಾರಿಯಾಗಿತ್ತು. ಇದೇ ಮೊದಲ ಬಾರಿ ಥಾಯ್ಲೆಂಡ್ ತಂಡವು ಆಡಿತು. ‘ಎ’ ಗುಂಪಿನಲ್ಲಿ ಭಾರತವು ಆಸ್ಟ್ರೇಲಿಯಾ, ಶ್ರೀಲಂಕಾ, ನ್ಯೂಜಿಲೆಂಡ್ ಮತ್ತು ಬಾಂಗ್ಲಾದೇಶದಂತಹ ಉತ್ತಮ ತಂಡಗಳನ್ನು ಸೋಲಿಸಿ ನಾಲ್ಕರ ಘಟ್ಟಕ್ಕೆ ಲಗ್ಗೆಯಿಟ್ಟಿತ್ತು.

ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯವು ಮಳೆಗೆ ಕೊಚ್ಚಿಹೋಯಿತು. ಲೀಗ್‌ ಹಂತದಲ್ಲಿ ಪಡೆದ ಅಂಕಗಳ ಆಧಾರದಲ್ಲಿ ಭಾರತವು ಫೈನಲ್ ಪ್ರವೇಶಿಸಿತು. ಆದರೆ ಈ ಅವಕಾಶವನ್ನು ಗೆಲುವಾಗಿ ಪರಿವರ್ತಿಸಿಕೊಳ್ಳುವಲ್ಲಿ ಎಡವಿತು. ಹೋದ ಸಲ ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಮತ್ತು ಮೂರು ವರ್ಷಗಳ ಹಿಂದೆ ಇಂಗ್ಲೆಂಡ್‌ನಲ್ಲಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಫೈನಲ್‌ನಲ್ಲಿ ಇದೇ ರೀತಿ ನಿರಾಶೆ ಅನುಭವಿಸಿತ್ತು. ಇಂತಹ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳುವ ಕೌಶಲವನ್ನು ತಂಡವು ಕರಗತ ಮಾಡಿಕೊಳ್ಳಬೇಕಿದೆ.

ಎರಡು ವರ್ಷಗಳ ಹಿಂದೆ ಕೋಚ್ ಆಗಿದ್ದ ತುಷಾರ್ ಅರೋಠೆ ಮತ್ತು ಹೋದ ವರ್ಷ ಹಂಗಾಮಿ ಕೋಚ್ ಆಗಿದ್ದ ರಮೇಶ್ ಪೋವಾರ್ ಮತ್ತು ತಂಡದ ನಡುವೆ ಇದ್ದ ಸಮನ್ವಯದ ಕೊರತೆಯು ವಿವಾದದ ರೂಪ ಪಡೆದಿದ್ದವು. ಅದರಿಂದಾಗಿ ತಂಡದ ಮೇಲೆ ಕೆಲಕಾಲ ಪರಿಣಾಮ ಉಂಟಾಗಿತ್ತು. ಈಗ ಕೋಚ್ ಆಗಿರುವ ಡಬ್ಲ್ಯು.ವಿ. ರಾಮನ್ ಅವರು ಹರ್ಮನ್‌ ಪ್ರೀತ್‌ ಕೌರ್‌ ಬಳಗದ ವಿಶ್ವಾಸ
ಗಳಿಸಿಕೊಂಡಿದ್ದಾರೆ. ಕ್ರಿಕೆಟಿಗನಾಗಿ ಬಹಳಷ್ಟು ಅನುಭವ ಇರುವ ರಾಮನ್ ಮುಂದೆ ಮಹತ್ವದ ಸವಾಲು ಇದೆ.

ಫೈನಲ್ ಹಂತವನ್ನು ದಿಟ್ಟವಾಗಿ ನಿಭಾಯಿಸುವುದನ್ನು ಅವರು ತಮ್ಮ ತಂಡಕ್ಕೆ ಕಲಿಸಿಕೊಡಬೇಕಿದೆ. ಅವರಿಗೆ ಈಗ ಉತ್ತಮ ಅವಕಾಶವೂ ಇದೆ. ಏಕೆಂದರೆ, ಪ್ರತಿಭಾವಂತ ಆಟಗಾರ್ತಿಯರು ತಂಡದಲ್ಲಿದ್ದಾರೆ. 16 ವರ್ಷದ ಶಫಾಲಿ ವರ್ಮಾ, 19 ವರ್ಷದ ಜೆಮಿಮಾ ರಾಡ್ರಿಗಸ್, ಅನುಭವಿ ಬೌಲರ್ ಪೂನಂ ಯಾದವ್, ಶಿಖಾ ಪಾಂಡೆ, ದೀಪ್ತಿ ಶರ್ಮಾ, ತಾನಿಯಾ ಭಾಟಿಯಾ ಮತ್ತು ಕರ್ನಾಟಕದ ರಾಜೇಶ್ವರಿ ಗಾಯಕವಾಡ್ ಅವರು ಭರವಸೆ ಮೂಡಿಸಿದ್ದಾರೆ.

ಬ್ಯಾಟಿಂಗ್‌ನಲ್ಲಿ ಹರ್ಮನ್‌ ವಿಫಲರಾದರೂ ನಾಯಕಿಯಾಗಿ ಯಶಸ್ವಿಯಾಗಿದ್ದಾರೆ. ಸಮಾಜದ ವಿಭಿನ್ನ ಸ್ತರಗಳಿಂದ ಬಂದ ಎಲ್ಲ ಆಟಗಾರ್ತಿಯರನ್ನು ತಂಡವಾಗಿ ದುಡಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ. ಆದರೆ, ಭಾರತವು ಪ್ರಶಸ್ತಿಗೆ ಮುತ್ತಿಕ್ಕಬೇಕಾದರೆ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳ ಆಟದ ಮಾದರಿಯನ್ನು ನೋಡಿ ಕಲಿಯುವ ಅವಶ್ಯಕತೆ ಇದೆ. ಭಾರತದಲ್ಲಿ ಪುರುಷರ ಕ್ರಿಕೆಟ್‌ಗೆ ಹೋಲಿಸಿದರೆ ಮಹಿಳೆಯರ ಕ್ರಿಕೆಟ್‌ ಜನಪ್ರಿಯತೆ ತೀರಾ ಕಡಿಮೆ.

ವಿಶ್ವಕಪ್‌ ಜಯಿಸಿದರೆ ಮಹಿಳಾ ಕ್ರಿಕೆಟ್‌ ಕೂಡ ಜನಮನ್ನಣೆಗೆ ಪಾತ್ರವಾಗಬಹುದು. 1983ರಲ್ಲಿ ಕಪಿಲ್ ದೇವ್ ಬಳಗವು ವಿಶ್ವಕಪ್ ಜಯಿಸಿದ ನಂತರವೇ ಭಾರತದ ಕ್ರಿಕೆಟ್‌ಗೆ ಶುಕ್ರದೆಸೆ ಆರಂಭವಾದದ್ದು. ಅಂತಹದ್ದೊಂದು ಸಾಧನೆಗೆ ವನಿತೆಯರ ತಂಡವು ಈಗಿನಿಂದಲೇ ಪ್ರಯತ್ನ ಆರಂಭಿಸಬೇಕು. ಈಗಿನ ಸೋಲು ಭವಿಷ್ಯದ ಗೆಲುವಿಗೆ ಸೋಪಾನವಾಗಬೇಕು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು