ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ಜಿಎಸ್‌ಟಿ ಮಾಯಾಮೃಗ, ಹೊಸ ತೆರಿಗೆ ಹಾದಿಯಲ್ಲಿ ಕಲ್ಲು – ಮುಳ್ಳು

ಗೊಂದಲಗಳ ಗೂಡು
Last Updated 21 ಡಿಸೆಂಬರ್ 2019, 20:33 IST
ಅಕ್ಷರ ಗಾತ್ರ

ಬೆಂಗಳೂರು: ಆರ್ಥಿಕ ಬದಲಾವಣೆಯ ಹೊಸ ಮನ್ವಂತರಕ್ಕೆ ಮುನ್ನುಡಿ ಬರೆದಿದ್ದ, ದೇಶದ ಅತಿದೊಡ್ಡ ಮತ್ತು ಏಕರೂಪದ ತೆರಿಗೆ ಸುಧಾರಣೆ ಜಾರಿಗೆ ಬಂದು ಎರಡು ವರ್ಷಗಳು ಮತ್ತು ಐದು ತಿಂಗಳು ಪೂರ್ಣಗೊಂಡಿವೆ. ಜಿಎಸ್‌ಟಿ ರಿಟರ್ನ್ಸ್‌ ಸಲ್ಲಿಕೆ ಪ್ರಕ್ರಿಯೆ ಇದುವರೆಗೂ ಸಮರ್ಪಕಗೊಂಡಿಲ್ಲ. ತೆರಿಗೆ ಸಂಗ್ರಹ ಹೆಚ್ಚಳಗೊಂಡಿಲ್ಲ. ಪಾರದರ್ಶಕತೆ ಇಲ್ಲ. ವರ್ತಕರು, ವಹಿವಾಟುದಾರರ ಗೊಣಗಾಟ ನಿಂತಿಲ್ಲ. ವಂಚನೆಗೆ ತಡೆ ಬಿದ್ದಿಲ್ಲ. ಬಿಲ್‌ಗಳ ದುರ್ಬಳಕೆ ನಿಂತಿಲ್ಲ. ‘ಇ–ವೇ ಬಿಲ್‌’ನಲ್ಲೂ ಸೋರಿಕೆ ನಿಂತಿಲ್ಲ. ಹೀಗೆ ’ಇಲ್ಲ’ವುಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

ಆರಂಭದಲ್ಲಿ ಹೊಸ ವ್ಯವಸ್ಥೆಗೆ ಸುಸೂತ್ರವಾಗಿ ಪಲ್ಲಟಗೊಂಡರೂ ನಂತರದ ದಿನಗಳಲ್ಲಿ ಕೇಂದ್ರ ಸರ್ಕಾರ ತೋರಿದ ಎಡಬಿಡಂಗಿತನ, ಮೇಲಿಂದ ಮೇಲೆ ನಿಯಮಗಳ ಬದಲಾವಣೆ, ಜಿಎಸ್‌ಟಿಎನ್‌ನಲ್ಲಿ ಎದುರಾದ ತಾಂತ್ರಿಕ ತೊಂದರೆ ಮುಂತಾದ ಗೋಜಲುಗಳು ಹೆಚ್ಚುತ್ತಲೇ ಹೋಗಿವೆ. ‘ಜಿಎಸ್‌ಟಿ ಗುಮ್ಮ’ ತೆರಿಗೆದಾರರು, ಅಧಿಕಾರಿಗಳು ಮತ್ತು ಸರ್ಕಾರಗಳನ್ನೂ ಇನ್ನಿಲ್ಲದಂತೆ ಕಾಡುತ್ತಿದೆ. ತೆರಿಗೆ ವಂಚಕರನ್ನು ಹಿಡಿಯಲು ಅಧಿಕಾರಿಗಳು ಚಾಪೆ ಕೆಳಗೆ ತೂರಿದರೆ, ವಂಚಕರು ರಂಗೋಲಿ ಕೆಳಗೆ ತೂರಿ ಗೆಲುವಿನ ಕೇಕೆ ಹಾಕುತ್ತಿದ್ದಾರೆ.

ಸ್ಪಷ್ಟತೆ ಇಲ್ಲದ, ಪೂರ್ವಭಾವಿ ಸಿದ್ಧತೆಗಳಿಲ್ಲದ ತೆರಿಗೆ ವ್ಯವಸ್ಥೆ ಎಂಬ ಆರಂಭದ ದಿನಗಳ ಟೀಕೆ ಈಗಲೂ ಪ್ರಸ್ತುತ. ಆರ್ಥಿಕ ವೃದ್ಧಿ ದರ ಹೆಚ್ಚಿಸುವ ಶಕ್ತಿವರ್ಧಕವಾಗಿ ‘ಜಿಎಸ್‌ಟಿ’ ಕಾರ್ಯನಿರ್ವಹಿಸಲಿದೆ ಎನ್ನುವ ಆಶಯ ಹುಸಿಯಾಗಿದೆ. ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆ ವಲಯದ ಮೇಲೆ ನೋಟು ರದ್ದತಿಯು ಆಳವಾದ ಗಾಯ ಮಾಡಿತ್ತು. ಜಿಎಸ್‌ಟಿಯು ಅದಕ್ಕೆ ಉಪ್ಪು ಸವರುತ್ತಿದೆ.

ವ್ಯಕ್ತಿಯೊಬ್ಬ ಸಾಲ ಬಾಕಿ ಉಳಿಸಿಕೊಂಡಿದ್ದರೆ ಸಾಲಗಾರರು ನೋಟೀಸ್ ನೀಡುತ್ತಾರೆ. ಕಟಬಾಕಿ ವಸೂಲಿದಾರರನ್ನು ನೇಮಿಸುತ್ತಾರೆ. ಉದ್ದೇಶಪೂರ್ವಕ ಸುಸ್ತಿದಾರ ಎಂದು ಹಣೆಪಟ್ಟಿ ಹಚ್ಚುತ್ತಾರೆ. ಸ್ಥಳೀಯ ಸಂಸ್ಥೆಗಳಿಗೆ ತೆರಿಗೆ ಬಾಕಿ ವಸೂಲಿ ಉಳಿಸಿಕೊಂಡ ಉದ್ದಿಮೆಗಳ ಎದುರು ತಮಟೆ ಬಾರಿಸಿ ಗಮನ ಸೆಳೆದು ಮಾನ ಹರಾಜು ಹಾಕಲಾಗುತ್ತಿದೆ. ದೇಶದಾದ್ಯಂತ ಜಾರಿಗೆ ಬಂದಿರುವ ಕ್ರಾಂತಿಕಾರಿ ಹೆಗ್ಗಳಿಕೆಯ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯು ಇದೇ ಬಗೆಯ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿಕೊಂಡಿದೆ. ಇದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಧ್ಯೆ ಸಂಘರ್ಷಕ್ಕೂ ಎಡೆಮಾಡಿಕೊಟ್ಟಿದೆ.

‘ಜಿಎಸ್‌ಟಿ’ ಪರಿಹಾರ ಮಂಜೂರಿಗೆ ವಿಳಂಬ ಮಾಡಿದ ಕೇಂದ್ರ ಸರ್ಕಾರದ ವಿರುದ್ಧ ರಾಜ್ಯ ಸರ್ಕಾರಗಳು ಹುಯಿಲೆಬ್ಬಿಸಿದ್ದವು. ಐದು ವರ್ಷಗಳವರೆಗೆ ನಷ್ಟ ಭರ್ತಿ ಮಾಡಿಕೊಡುವುದಾಗಿ ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ. ಆದರೆ, ಈ ವರ್ಷದ ಆಗಸ್ಟ್‌ ಮತ್ತು ಸೆಪ್ಟೆಂಬರ್‌ ತಿಂಗಳ ಬಾಕಿ ಉಳಿಸಿಕೊಂಡಿತ್ತು. ಅಕ್ಟೋಬರ್‌ ಮತ್ತು ನವೆಂಬರ್‌ ಕಂತನ್ನು ಡಿ.10ಕ್ಕೆ ಪಾವತಿಸಬೇಕಾಗಿತ್ತು. ಕೇಂದ್ರವು ಈ ವಾಗ್ದಾನ ಈಡೇರಿಸುವ ಬಗ್ಗೆಯೇ ಅನುಮಾನ ಮೂಡಿತ್ತು. ಆದರೆ ಬುಧವಾರ ಡಿ.18 ರಂದು ನಡೆಯಲಿದ್ದ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಮುಖ ಉಳಿಸಿಕೊಳ್ಳುವುದು ಕಷ್ಟವಾಗಬಹುದು ಎನ್ನುವ ಕಾರಣಕ್ಕೆ ಸೋಮವಾರ ಸಂಜೆ ಡಿ.16 ರಂದು ತರಾತುರಿಯಲ್ಲಿ ₹ 35,298 ಕೋಟಿ ಬಿಡುಗಡೆ ಮಾಡಿತು.

ಪ್ರಮುಖ ಆರ್ಥಿಕ ಮೂಲ: ಜಿಎಸ್‌ಟಿ ಪರಿಹಾರವು ಎಲ್ಲ ರಾಜ್ಯಗಳ ಪ್ರಮುಖ ಆರ್ಥಿಕ ಮೂಲ. ರಾಜ್ಯಗಳ ಶೇ 60ರಷ್ಟು ವರಮಾನ ಜಿಎಸ್‌ಟಿ ಮೂಲಕವೇ ಬರುತ್ತದೆ. ರಾಜ್ಯಗಳಿಗೆ ಸಕಾಲದಲ್ಲಿ ಹಣ ಬಿಡುಗಡೆ ಮಾಡದಿರುವುದಕ್ಕೆ ತೆರಿಗೆ ಸಂಗ್ರಹದಲ್ಲಿನ ಕುಸಿತವೇ ಮುಖ್ಯ ಕಾರಣ. ರಾಷ್ಟ್ರ ಮಟ್ಟದಲ್ಲಿ ವಸೂಲಿ ಪ್ರಮಾಣ ಶೇ. 40 ರಷ್ಟು ಕಡಿಮೆಯಾಗಿರುವ ಅಂದಾಜಿದೆ. ಕುಂಠಿತ ಆರ್ಥಿಕ ಪ್ರಗತಿ ಜತೆಗೆ ಜಿಎಸ್‌ಟಿ ಲೋಪಗಳ ಕೊಡುಗೆಯೂ ಸಾಕಷ್ಟಿದೆ. ಪರೋಕ್ಷ ತೆರಿಗೆಯ ಹೊಸ ವ್ಯವಸ್ಥೆಯು ಹಳಿಗೆ ಬಂದಿಲ್ಲ ಎನ್ನುವುದು ಇದರಿಂದ ವೇದ್ಯವಾಗುತ್ತದೆ.

2017ರ ಜುಲೈ 1 ರಿಂದ ‘ಒಂದು ದೇಶ, ಒಂದು ತೆರಿಗೆ’ ಘೋಷವಾಕ್ಯದಡಿ ಜಾರಿಗೆ ಬಂದಿರುವ ಹೊಸ ವ್ಯವಸ್ಥೆಯು ಹಲವಾರು ಗೋಜಲುಗಳ ಬಲೆ ಒಳಗೆ ಸಿಲುಕಿದೆ. ಹೊರಬರುವ ಮಾರ್ಗೋಪಾಯಗಳ ಹುಡುಕಾಟದಲ್ಲಿಯೇ ಕಾಲಹರಣ ಆಗುತ್ತಿದೆ. ಜಿಎಸ್‌ಟಿ ಜಾರಿಯ ಮೂಲ ಆಶಯಗಳು ಕಾರ್ಯಗತಗೊಂಡರೆ ಕುಂಟುತ್ತಿರುವ ಅರ್ಥ ವ್ಯವಸ್ಥೆ ಇನ್ನೊಂದು ಮಜಲಿಗೆ ಹೊರಳಲಿದೆ ಎನ್ನುವ ನಿರೀಕ್ಷೆ ನಿಜವಾಗಬೇಕಾಗಿದೆ.

ಜಿ.ಎಸ್‌.ಟಿ ಕಾಯ್ದೆಯಡಿ 2020ರ ಏಪ್ರಿಲ್‌ 1ರಿಂದ ಜಾರಿಗೆ ಬರುವ ಹೊಸ ನಮೂನೆಗಳು ಸರಳ ಹಾಗೂ ವರ್ತಕಸ್ನೇಹಿಯಾಗಿವೆ. ಇದರಿಂದ ‘ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌’ ವಂಚನೆಗೆ ತಡೆ ಬೀಳಲಿದೆ ಎಂದು ನಿರೀಕ್ಷಿಸಲಾಗಿದೆ. ಹೊಸ ನಿಯಮಗಳ ಬಗ್ಗೆ ಅರಿವು ಮೂಡಿಸಲು ವಾಣಿಜ್ಯ ತೆರಿಗೆ ಇಲಾಖೆಯು ವರ್ತಕರು, ಚಾರ್ಟರ್ಡ್‌ ಅಕೌಂಟೆಂಟ್ಸ್‌ ಮತ್ತು ತೆರಿಗೆ ಸಲಹೆಗಾರರ ಅನುಕೂಲಕ್ಕಾಗಿ ತರಬೇತಿ ಕಾರ್ಯಾಗಾರ ಏರ್ಪಡಿಸುತ್ತಿದೆ. ಇದರ ಫಲಶ್ರುತಿ ಏನಿರುತ್ತದೆ ಎನ್ನುವುದು ಏಪ್ರಿಲ್‌ ನಂತರವೇ ಗೊತ್ತಾಗಲಿದೆ.

'ಕೃಷ್ಣ'ನ ಕಳ್ಳ ಲೆಕ್ಕಾಚಾರಕ್ಕೆ ಬೀಳದ ತಡೆ
ಕರ್ನಾಟಕ ಸೇಲ್ಸ್‌ ಟ್ಯಾಕ್ಸ್‌ (ಕೆಎಸ್‌ಟಿ) ಮತ್ತು ಮೌಲ್ಯವರ್ಧಿತ ತೆರಿಗೆ (ವ್ಯಾಟ್‌) ಕಾಲದಿಂದಲೇ ‘ಕೃಷ್ಣ’ನ ಲೆಕ್ಕದಲ್ಲಿ ತೊಡಗಿದ್ದ ವಹಿವಾಟುದಾರರು ಮತ್ತು ವರ್ತಕರು ಜಿಎಸ್‌ಟಿ ಜಾರಿಗೆ ಬಂದ ಆರಂಭದಲ್ಲಿ ಈ ತರಹದ ಕಳ್ಳಾಟಕ್ಕೆ ಎಳ್ಳುನೀರು ಬಿಡಬೇಕಾಗುತ್ತದೆ ಎಂದು ವ್ಯಾಕುಲಗೊಂಡಿದ್ದರು. ತಾಂತ್ರಿಕ ಸಮಸ್ಯೆಗಳಿಂದಾಗಿ ಕೆಲವೇ ದಿನಗಳಲ್ಲಿ ಜಿಎಸ್‌ಟಿ ಸರ್ವರ್‌ ಕೈಕೊಡಲಾರಂಭಿಸಿತು. ಕೇಂದ್ರ ಸರ್ಕಾರವು ನಿಯಮಗಳನ್ನು ಬದಲಿಸುವ ತಪ್ಪಿನ ಮೇಲೆ ತಪ್ಪು ಮಾಡತೊಡಗಿತು. ವಾಸ್ತವದಲ್ಲಿ ನಡೆದಿದ್ದ ವಹಿವಾಟನ್ನು ಮುಚ್ಚಿಟ್ಟು, ನಕಲಿ ದಾಖಲೆ ಸೃಷ್ಟಿಸಿ, ತಪ್ಪು ಲೆಕ್ಕ ತೋರಿಸಿ ತೆರಿಗೆ ತಪ್ಪಿಸುವ ‘ಕೃಷ್ಣ’ನ ಲೆಕ್ಕಾಚಾರ ಹೊಸ ವ್ಯವಸ್ಥೆಯಲ್ಲಿಯೂ ಸಾಧ್ಯ ಎನ್ನುವ ಸತ್ಯವು ವಂಚನೆ ಪ್ರವೃತ್ತಿಯ ವಹಿವಾಟುದಾರರಿಗೆ ಕ್ರಮೇಣ ಮನವರಿಕೆ ಆಗತೊಡಗಿತು. ಹೀಗಾಗಿ ಅವರೆಲ್ಲ ಈಗ ಭಂಡ ಧೈರ್ಯದಿಂದ ಮುನ್ನುಗ್ಗುತ್ತಿದ್ದಾರೆ. ಇದೇ ಕಾರಣಕ್ಕೆ ಕೋಟಿ, ಕೋಟಿ ಮೊತ್ತದ ವಂಚನೆ ಪ್ರಕರಣಗಳು ಬಯಲಿಗೆ ಬರುತ್ತಿವೆ.

ಈ ವ್ಯವಸ್ಥೆ ಹೀಗೆಲ್ಲ ಹಳಿ ತಪ್ಪಲು ಜಿಎಸ್‌ಟಿ ವ್ಯವಸ್ಥೆಯ ಬೆನ್ನೆಲುಬು ಆಗಿರುವ ಜಿಎಸ್‌ಟಿ ನೆಟ್‌ವರ್ಕ್‌ನ (ಜಿಎಸ್‌ಟಿಎನ್‌) ದೋಷಪೂರಿತ ಕಾರ್ಯನಿರ್ವಹಣೆಯ ಕೊಡುಗೆ ಗಮನಾರ್ಹವಾಗಿದೆ.

‘ವಾಹನ, ಅಂಗಡಿ ತಪಾಸಣೆಯಂತಹ ಪ್ರಮುಖ ವಿಭಾಗಕ್ಕೆ ಪ್ರಾಮಾಣಿಕ ಅಧಿಕಾರಿಗಳನ್ನು ನಿಯೋಜಿಸುವುದಿಲ್ಲ. ಇಲಾಖೆಯ ಜಾರಿ ವಿಭಾಗದಲ್ಲಿ ಪ್ರಾಮಾಣಿಕತೆಯನ್ನು ಕಣ್ಣಲ್ಲಿ ಎಣ್ಣೆ ಹಾಕಿಕೊಂಡು ಹುಡುಕಬೇಕು. ವಾಣಿಜ್ಯ ಇಲಾಖೆಯಲ್ಲಿನ ವಿದ್ಯಮಾನಗಳನ್ನು ಮಾಧ್ಯಮಗಳ ಜತೆ ಹಂಚಿಕೊಳ್ಳುವ ಪ್ರವೃತ್ತಿಯೇ ಇಲ್ಲವೇ ಇಲ್ಲ ಎನ್ನಬಹುದು. ಜಿಎಸ್‌ಟಿ ಪಾರದರ್ಶಕ ವ್ಯವಸ್ಥೆ ಎನ್ನುವುದು ಬರೀ ಕಾಗದದ ಮೇಲೆ ಉಳಿದಿದೆ. ವಂಚನೆಯಲ್ಲಿ ತೊಡಗಿರುವ ವಹಿವಾಟುದಾರರ ಕೃತ್ಯ ಹೆಚ್ಚಾಗಿ ಬೆಳಕಿಗೆ ಬರುವುದೇ ಇಲ್ಲ. ಅಧಿಕಾರಿಗಳ ಚಲನವಲನದ ಬಗ್ಗೆ ವಂಚಕರಿಗೆ ಮಾಹಿತಿ ರವಾನಿಸುವ ಒಳಗಿನವರಿಂದಾಗಿ ಪ್ರಾಮಾಣಿಕ ಅಧಿಕಾರಿಗಳೇ ಹಲವಾರು ಬಾರಿ ಬೇಸ್ತು ಬಿದ್ದಿದ್ದಾರೆ. ಸರ್ಕಾರಕ್ಕೆ ಅತಿಹೆಚ್ಚು ವರಮಾನ ತಂದುಕೊಡುವ ಈ ಇಲಾಖೆ ಹಣಕಾಸು ಸಚಿವಾಲಯದ ಅಡಿ ಬರುವುದರಿಂದ ಅದಕ್ಕೆ ಪ್ರತ್ಯೇಕ ಸಚಿವರ ಉಸ್ತುವಾರಿಯೂ ಇಲ್ಲ. ಇಲಾಖೆಯಲ್ಲಿನ ವಹಿವಾಟು ಸಂಪೂರ್ಣವಾಗಿ ಇಂಗ್ಲಿಷ್‌ನಲ್ಲಿ ಇರುವುದರಿಂದ ಜನಸಾಮಾನ್ಯರಿಗೆ ಸುಲಭವಾಗಿ ಅರ್ಥವೂ ಆಗುವುದಿಲ್ಲ. ಹಲವಾರು ವರ್ಷಗಳವರೆಗೆ ತೆರಿಗೆ ಸಲಹೆಗಾರನಾಗಿ ಕಾರ್ಯನಿರ್ವಹಿಸಿರುವ ನನಗೇ ಕೆಲವು ವಿಷಯಗಳು ಅರ್ಥವೇ ಆಗುವುದಿಲ್ಲ’ ಎಂದು ಹೆಸರು ಹೇಳಲು ಇಚ್ಛಿಸದ ತೆರಿಗೆ ಸಲಹೆಗಾರರೊಬ್ಬರು ಹೇಳುತ್ತಾರೆ.

‘ಇಲಾಖೆಯ ನಿವೃತ್ತ ಸಿಬ್ಬಂದಿಯಲ್ಲಿ ಕೆಲವರು ತೆರಿಗೆ ಸಲಹೆಗಾರರಾಗಿ ಇಲ್ಲವೇ ವರ್ತಕರಾಗಿ ಬದುಕಿನ ಎರಡನೇ ಇನಿಂಗ್ಸ್‌ ಆರಂಭಿಸುತ್ತಾರೆ. ಇಲಾಖೆಯ ಒಳಸುಳಿಗಳನ್ನು ಅರೆದು ಕುಡಿದಿರುವ ಅವರಿಗೆ ವಂಚನೆ ನೀರು ಕುಡಿದಷ್ಟೆ ಸುಲಭ. ಅಡಿಕೆ, ಕಬ್ಬಿಣ, ಉಕ್ಕು, ಸಿಮೆಂಟ್‌, ಎಲೆಕ್ಟ್ರಾನಿಕ್ಸ್‌ ಮತ್ತು ಎಲೆಕ್ಟ್ರಿಕ್‌ ಸರಕು, ಗ್ರಾನೈಟ್ಸ್‌, ಟೈಲ್ಸ್‌ – ಹೀಗೆ ಗರಿಷ್ಠ ತೆರಿಗೆ ಹೊಂದಿರುವ ಸರಕುಗಳ ವ್ಯಾಪಾರದಲ್ಲಿ ತೊಡಗಿರುವ ವರ್ತಕರು ಅಧಿಕಾರಿಗಳಿಗೆ ತಿಂಗಳ ಲೆಕ್ಕದಲ್ಲಿ ಹಫ್ತಾ ಕೊಡುತ್ತಾರೆ. ಇವರಿಗೆ ಸೇರಿದ ಸರಕು ಸಾಗಣೆ ವಾಹನಗಳು ತಪಾಸಣೆ ಭೀತಿ ಇಲ್ಲದೆ ರಾಜಾರೋಷವಾಗಿ ಸಂಚರಿಸುತ್ತವೆ. ಕೆಲ ಅಧಿಕಾರಿಗಳು ಸ್ವಂತ ರಕ್ಷಣೆಯಲ್ಲಿ ಸರಕು ಗಡಿ ದಾಟಿಸುತ್ತಾರೆ. ಮಲೆನಾಡಿನ ಅಡಿಕೆ, ಸಾಂಬಾರ ಪದಾರ್ಥಗಳ ಕಳ್ಳ ಮಾಲನ್ನು ಹೆದ್ದಾರಿಗಳಲ್ಲಿಯೇ ಯಾವುದೇ ಎಗ್ಗಿಲ್ಲದೆ ಸಾಗಿಸಿ ತೆರಿಗೆ ವಂಚಿಸುತ್ತಾರೆ. ’ಬುಕ್‌‘ ಆಗಿರುವ ವಾಹನಗಳನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸುವುದೇ ಇಲ್ಲ‘ ಎಂದು ವಹಿವಾಟುದಾರರೊಬ್ಬರು ಜಿಎಸ್‌ಟಿ ವಂಚನೆಗಳ ಬಗ್ಗೆ ಬೆಳಕು ಚೆಲ್ಲುತ್ತಾರೆ.

‘ಬಿಲ್ ಟ್ರೇಡಿಂಗ್‌’ನ ಕಣ್ಣಾ ಮುಚ್ಚಾಲೆ
ಸರಕುಗಳನ್ನು ಖರೀದಿಸದೆಯೇ ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌ ಪಡೆಯುವ ’ಬಿಲ್‌ ಟ್ರೇಡಿಂಗ್‌‘ನಲ್ಲಿ ಕೆಲವರು ತೊಡಗಿದ್ದಾರೆ. ಉದಾಹರಣೆಗೆ ಉದ್ಯಮಿಯೊಬ್ಬ ₹ 1 ಕೋಟಿ ಮೊತ್ತದ ಉಕ್ಕು ಖರೀದಿಸಿದರೆ ಶೇ 18ರ ದರದಲ್ಲಿ ₹ 18 ಲಕ್ಷ ಪಾವತಿಸಬೇಕು. ಆನಂತರ ಈತನು ಬೇರೆಯವರಿಗೆ ಸರಕನ್ನು ಮಾರಾಟ ಮಾಡಿದಾಗ ಪಾವತಿಸಬೇಕಾದ ತೆರಿಗೆ ಮೊತ್ತ ಕಳೆದು ಲಾಭಾಂಶ ಒಳಗೊಂಡಂತೆ ತೆರಿಗೆ ಪಾವತಿಸಬೇಕಾಗುತ್ತದೆ. ವಂಚನೆಯೇ ಮೂಲ ಮಂತ್ರವಾಗಿರುವ ‘ಬಿಲ್‌ ಟ್ರೇಡಿಂಗ್‌’ನಲ್ಲಿ ವಾಸ್ತವದಲ್ಲಿ ಸರಕುಗಳ ಖರೀದಿ, ಸಾಗಾಣಿಕೆ ಮತ್ತು ಮಾರಾಟ ವಹಿವಾಟು ನಡೆಯುವುದೇ ಇಲ್ಲ. ನಕಲಿ ಬಿಲ್‌ ಸೃಷ್ಟಿಸಿ ಸರ್ಕಾರದ ಹಣವನ್ನು ಕೊಳ್ಳೆ ಹೊಡೆಯಲಾಗುತ್ತಿದೆ. ಚಾರ್ಟರ್ಡ್‌ ಅಕೌಂಟಂಟ್ಸ್‌ (ಸಿ.ಎ), ಮಾರಾಟ ತೆರಿಗೆ ಪ್ರ್ಯಾಕ್ಟಿಸ್‌ನವರು (ಎಸ್‌ಟಿಪಿ) ಇದರಲ್ಲಿ ಭಾಗಿಯಾಗಿದ್ದಾರೆ ಎನ್ನುವ ಆರೋಪಗಳಿವೆ.

ಎಚ್‌ಎಸ್‌ಎನ್‌ ಕೋಡ್‌ ದುರ್ಬಳಕೆ
‘ತೆರಿಗೆ ಪದ್ಧತಿಯಲ್ಲಿ, ಪ್ರತಿಯೊಂದು ಸರಕಿಗೆ ವಿಶ್ವದಾದ್ಯಂತ ಏಕರೂಪದ ನಿರ್ದಿಷ್ಟ ಸಂಖ್ಯೆ ಬಳಸುವ ‘ಎಚ್‌ಎಸ್‌ಎನ್‌ ಕೋಡ್‌’ಗೆ ಅನುಗುಣವಾಗಿ ತೆರಿಗೆ ದರ ನಿಗದಿಪಡಿಸಲಾಗುತ್ತದೆ. ಇದನ್ನೇ ದುರ್ಬಳಕೆ ಮಾಡಿಕೊಂಡು ಸಗಟು ರೂಪದಲ್ಲಿ ಆಮದು ಮಾಡಿಕೊಳ್ಳುವ ಸರಕಿಗೆ ಬೇರೊಂದು ಸರಕಿನ ಕೋಡ್‌ ಉಲ್ಲೇಖಿಸಿ ತೆರಿಗೆ ವಂಚಿಸಲಾಗುತ್ತಿದೆ. ಇಂತಹ ಹಲವಾರು ಒಳಸುಳಿಗಳೂ ಈ ವ್ಯವಸ್ಥೆಯಲ್ಲಿ ಇವೆ.

ಸಣ್ಣ – ಪುಟ್ಟ ವಹಿವಾಟುದಾರರು ಮಾಡುವ ತಪ್ಪುಗಳನ್ನು ದೊಡ್ಡ ಉದ್ದಿಮೆಗಳು, ಬಹುರಾಷ್ಟ್ರೀಯ ಸಂಸ್ಥೆಗಳೂ ಎಸಗುತ್ತಿವೆ. ಬಹುರಾಷ್ಟ್ರೀಯ ಸಂಸ್ಥೆಗಳು ಎಚ್‌ಎಸ್‌ಎನ್‌ ಕೋಡ್‌ ಬದಲಿಸಿ, ಆಮದು ಮಾಡಿಕೊಳ್ಳುವ ಸರಕಿನ ಪ್ರಮಾಣದ ತಪ್ಪು ಮಾಹಿತಿ ನೀಡಿ ತೆರಿಗೆ ವಂಚಿಸುತ್ತಿವೆ. ಸರಕು ಖರೀದಿಸದೆಯೇ ‘ಬಿಲ್‌ ಟ್ರೇಡಿಂಗ್‌’ ನಡೆಸುವ ವಂಚನೆ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಬೆಳಕಿಗೆ ಬರುತ್ತಿವೆ.

ವಂಚನೆಯ ಕಾರಣಗಳು
* ವಂಚನೆಯ ಪಾಠಗಳನ್ನು ಅಧಿಕಾರಿಗಳೇ ಹೇಳಿಕೊಡುತ್ತಾರೆ

* ತೆರಿಗೆ ವಂಚಕರ ಜತೆ ಅಧಿಕಾರಿಗಳ ಅಪವಿತ್ರ ಮೈತ್ರಿ

* ಕೆಲವರು ಬೇನಾಮಿ ಹೆಸರಿನಲ್ಲಿ ಉದ್ಯಮ ನೋಂದಣಿ ಮಾಡಿಕೊಂಡು ವಂಚನೆ ಕೃತ್ಯ ಎಸಗುತ್ತಾರೆ

ಗಂಭೀರ ಸ್ವರೂಪದ ಸಮಸ್ಯೆಗಳು

* ಜಿಎಸ್‌ಟಿ ಕಾಯ್ದೆ, ನಿಯಮ ಮತ್ತು ರಿಟರ್ನ್ಸ್‌ ಸಲ್ಲಿಕೆಯಲ್ಲಿರುವ ಸಂಕೀರ್ಣತೆ

* ವಹಿವಾಟುದಾರರ ಒತ್ತಡಕ್ಕೆ ಮಣಿದು ಮೇಲಿಂದ ಮೇಲೆ ನಿರ್ಣಯ ಬದಲಿಸಿರುವ ಕೇಂದ್ರ ಸರ್ಕಾರದ ಎಡಬಿಡಂಗಿತನ

* ತೆರಿಗೆ ವ್ಯವಸ್ಥೆಯಲ್ಲಿನ ಇಂಗ್ಲಿಷ್‌ ಭಾಷೆಯ ದರ್ಬಾರು

* ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಗಳ ಕೊರತೆ

* ಸ್ವತಃ ಗೊಂದಲದಲ್ಲಿ ಇರುವ ಅಧಿಕಾರಿ ಸಿಬ್ಬಂದಿ

* ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ನಿಗದಿತ ಕಾಲಮಿತಿಯಲ್ಲಿ ಬಡ್ತಿ ಸಿಗದಿರುವುದರಿಂದ ಉಡುಗಿದ ಉತ್ಸಾಹ

* ದತ್ತಾಂಶ ದಾಖಲೀಕರಣ ಮತ್ತು ಹೊರಗುತ್ತಿಗೆ ಮೇಲಿನ ಅವಲಂಬನೆ ಹೆಚ್ಚಳ

* ಜಾರಿ ವಿಭಾಗಕ್ಕೆ ಅಗತ್ಯ ಇರುವಷ್ಟು ವಾಹನಗಳ ಅಲಭ್ಯತೆ

* ಕೇಂದ್ರ ಮತ್ತು ತೆರಿಗೆ ಅಧಿಕಾರಿ ಹಾಗೂ ಸಿಬ್ಬಂದಿಗೆ ವೇತನ, ಭತ್ಯೆ ತಾರತಮ್ಯ

* ಇಂಗ್ಲಿಷ್‌ನಲ್ಲಿ ಇರುವ ಕ್ಲಿಷ್ಟಕರ ಕಾಯ್ದೆಯ ಮಾಹಿತಿ ಮತ್ತು ತರಬೇತಿ ಕೊರತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT