ಭಾನುವಾರ, ಜುಲೈ 3, 2022
28 °C

ಒಳನೋಟ | ಕ್ರೀಡೆ: ಕಾಟಾಚಾರದ ‘ಕ್ರೀಡಾ ನೀತಿ’ ಬೇಡ

ಮಹೇಶ್‌ ಎಸ್‌ ಕನ್ನೇಶ್ವರ Updated:

ಅಕ್ಷರ ಗಾತ್ರ : | |

ಮಂಗಳೂರು: ರಾಜ್ಯದಲ್ಲಿಯೇ ಮೊದಲ ಬಾರಿಗೆ ಮಂಗಳೂರು ವಿಶ್ವವಿದ್ಯಾಲಯವು ‘ಕ್ರೀಡಾ ನೀತಿ’ ಜಾರಿಗೊಳಿಸಿದೆ.  ಕ್ರೀಡೆಗೆ ವಿಶೇಷ ಪ್ರೋತ್ಸಾಹ ನೀಡುವ ಮೂಲಕ ’ಕ್ರೀಡಾ ಪೋಷಕ್‌’  ಪ್ರಶಸ್ತಿ ಪಡೆದ ವಿವಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲೆ ಸೇರಿದಂತೆ ಒಟ್ಟು 215 ಪದವಿ ಕಾಲೇಜುಗಳು ಮಂಗಳೂರು ವಿಶ್ವವಿದ್ಯಾಲಯದ ವ್ಯಾಪ್ತಿಗೆ ಒಳಪಡುತ್ತವೆ. 38 ಸರ್ಕಾರಿ, 133 ಅನುದಾನರಹಿತ, 44 ಅನುದಾನಿತ ಕಾಲೇಜುಗಳು ಇವೆ. ವಿವಿ ಕ್ರೀಡಾ ನೀತಿಗಳನ್ನು ಪಾಲಿಸುವ ಜತೆಗೆ ಸಕಾಲದಲ್ಲಿ ಪದವಿ ಕಾಲೇಜುಗಳು ಕ್ರೀಡಾ ಚಟುವಟಿಕೆಗೆ ವಿಶೇಷ ಆದ್ಯತೆ ನೀಡಲು ನಿಯಮ ಜಾರಿಗೆಗೊಳಿಸಿದೆ. ಆದರೆ, ಕೆಲ ಪದವಿ ಕಾಲೇಜುಗಳು ಕ್ರೀಡೆಗೆ ಅತಿ ಅಗತ್ಯವಾಗಿ ಬೇಕಾಗಿರುವ ಕ್ರೀಡಾಂಗಣ ಕೊರತೆಯಿಂದಾಗಿ ಕ್ರೀಡಾ ಚಟುವಟಿಕೆಗಳಲ್ಲಿ ಹಿಂದೆಬಿದ್ದಿವೆ.

‘ವಿವಿ ವ್ಯಾಪ್ತಿಯಲ್ಲಿ ಕ್ರೀಡಾ ನೀತಿ ಜಾರಿಗೆ ಬಂದಿದ್ದರೂ ಎಲ್ಲ ಕಾಲೇಜುಗಳಲ್ಲಿ ಕ್ರೀಡಾ ಚಟುವಟಿಕೆ ಕಷ್ಟ, ಶೈಕ್ಷಣಿಕ ಚಟುವಟಿಕೆಗೆ ಆದ್ಯತೆ ನೀಡುತ್ತವೆ. ಕ್ರೀಡಾಂಗಣ ಕೊರತೆ, ಅನುದಾನದ ಕೊರತೆಯೂ ಅವುಗಳನ್ನು ಬಾಧಿಸುತ್ತಿವೆ. ಅನುದಾನಿತ ಕಾಲೇಜುಗಳು ಸ್ವಲ್ಪ ಮಟ್ಟಿಗೆ ಆದ್ಯತೆ ನೀಡುತ್ತಿವೆ, ಆದರೆ ಅನುದಾನರಹಿತ ಕಾಲೇಜಿನಲ್ಲಿ ಇಂತಹ ಚಟುವಟಿಕೆ ಕಡಿಮೆ ಆಗುತ್ತಿವೆ ’ ಎಂದು ವಿವಿ ಕುಲಪತಿ ಪ್ರೊ. ಪಿ.ಎಸ್‌. ಯಡಪಡಿತ್ತಾಯ ಹೇಳಿದರು.

‘ವಿವಿ ಹಾಗೂ ಕ್ರೀಡೆಗೆ ಸಂಬಂಧಿಸಿದಂತೆ ಸರ್ಕಾರದ ಧೋರಣೆಗಳೇ ಸರಿಯಿಲ್ಲ. ಕ್ರೀಡೆಯಲ್ಲಿ ಪದಕ ಪಡೆದವರೂ, ರಾಜ್ಯ, ರಾಷ್ಟ್ರ, ಅಂತರ ರಾಷ್ಟ್ರ, ಅಂತರ ವಿವಿ ಕ್ರೀಡೆಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸುವ ಕೆಲಸ ಆಗುತ್ತಿಲ್ಲ. ಹೆಚ್ಚುವರಿ (ಗ್ರೇಸ್‌) ಅಂಕ ನೀಡುವ ವ್ಯವಸ್ಥೆ ಜಾರಿಗೆ ಬರಬೇಕು. ಸರ್ಕಾರಿ ಕಾಲೇಜುಗಳಲ್ಲಿನ ನಕಾರಾತ್ಮಕ ಧೋರಣೆ, ಸೌಲಭ್ಯ, ಅನುದಾನ ಕೊರತೆ ನೆಪದಿಂದ ಮಕ್ಕಳು ಕ್ರೀಡೆಯಿಂದ ವಂಚಿತರಾಗುತ್ತಿದ್ದಾರೆ. ದುಡ್ಡಿಲ್ಲದೆ ಮಾಡುವಂತಹ ಕ್ರೀಡೆಗಳು ಇವೆ. ರಾಜ್ಯ ಸರ್ಕಾರ ಅಸೋಸಿಯೇಷನ್, ವಿವಿಗಳ ಬೆಂಬಲ ಇಲ್ಲದೇ ಇದ್ದರೆ ಕ್ರೀಡೆ ಉದ್ಧಾರ ಆಗುವುದಾದರೂ ಹೇಗೆ? ಬೇರೆ ವಿವಿಗಳಲ್ಲಿ ಸಾಧ್ಯವಾಗುವುದು ನಮ್ಮಲ್ಲಿ ಏಕೆ ಸಾಧ್ಯ ಆಗುತ್ತಿಲ್ಲ. ಖಾಸಗಿ ಕಾಲೇಜುಗಳಿಗೆ ಪ್ರೋತ್ಸಾಹ ಸಿಗಬೇಕು, ಕ್ರೀಡಾ ನೀತಿ ಕಾಟಾಚಾರಕ್ಕೆ ಎಂಬಂತೆ ಆಗಬಾರದು’ ಎಂದು ಆಳ್ವಾಸ್‌ ಶಿಕ್ಷಣ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಡಾ. ಎಂ. ಮೋಹನ್‌ ಆಳ್ವ ಹೇಳುತ್ತಾರೆ.     

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು