ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ಕೋವಿಡ್‌ ಲಾಕ್‌ಡೌನ್‌ನಿಂದ ರೈತರಿಗೆ ಭಾರವಾದ ಪುಷ್ಪಕೃಷಿ

Last Updated 15 ಮೇ 2021, 19:45 IST
ಅಕ್ಷರ ಗಾತ್ರ

ಕಲಬುರ್ಗಿ: ಜಿಲ್ಲೆಯಲ್ಲಿ 1,194 ಹೆಕ್ಟೇರ್‌ ಪ್ರದೇಶದಲ್ಲಿ ಈ ಬಾರಿ ಪುಷ್ಪಕೃಷಿ ಮಾಡಲಾಗಿದ್ದು, ಫಸಲು ಸಹ ಹುಲುಸಾಗಿದೆ. ಆದರೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗಿದೆ ಬೆಳೆಗಾರರ ಪರಿಸ್ಥಿತಿ. ಮಾರುಕಟ್ಟೆ ಇಲ್ಲದ ಕಾರಣ ಹಲವು ರೈತರು ಸಸಿಗಳನ್ನು ಬುಡಸಮೇತ ಕಿತ್ತೆಸೆಯುತ್ತಿದ್ದಾರೆ.

ಮಾರ್ಚ್‌ನಿಂದ ಮೇ ತಿಂಗಳಲ್ಲಿ ಹೆಚ್ಚಾಗಿ ಮದುವೆ, ಮುಂಜಿ, ಜಾತ್ರೆ–ಉತ್ಸವಗಳು, ಉರುಸ್‌ಗಳು ನಡೆಯುತ್ತಿದ್ದವು. ಕೊರೊನಾ ಹಾವಳಿಯ ಕಾರಣ ಎಲ್ಲವನ್ನೂ ನಿಷೇಧಿಸಲಾಗಿದೆ. ಹಾಗಾಗಿ, ಹೂವಿಗೆ ಬೇಡಿಕೆಯೇ ಇಲ್ಲ. ಗುಲಾಬಿ, ಚೆಂಡು ಹೂವು, ಸೇವಂತಿಯನ್ನು ಜಿಲ್ಲೆಯಲ್ಲಿ ಹೆಚ್ಚಾಗಿ ಬೆಳೆದಿದ್ದಾರೆ.

ಹೂವನ್ನು ಪ್ರತಿದಿನ ಕೀಳಲೇಬೇಕು. ಇಲ್ಲದಿದ್ದರೆ ಮರುದಿನ ಮೊಗ್ಗು ಬಿಡುವುದಿಲ್ಲ. ‘ಇಡೀ 11 ತಿಂಗಳಲ್ಲಿ ಎಷ್ಟು ಹೂವು ಮಾರಾಟವಾಗುತ್ತಿತ್ತೋ ಅಷ್ಟೇ ಪ್ರಮಾಣದ ಹೂವು ರಂಜಾನ್‌ ತಿಂಗಳೊಂದರಲ್ಲೇ ಬಿಕರಿಯಾಗುತ್ತಿತ್ತು. ಆದರೆ, ಈ ಬಾರಿ ಕೇಳುವವರೇ ಇಲ್ಲ. ಕಲಬುರ್ಗಿ ಮಾರುಕಟ್ಟೆಯಲ್ಲಿ ನಾನು ಪ್ರತಿ ದಿನ ₹ 30 ಸಾವಿರದ ಹೂವು ಮಾರಿಕೊಂಡು ಬರುತ್ತಿದ್ದೆ. ಆದರೆ, ಈಗ ₹ 500 ಕೂಡ ಆಗುತ್ತಿಲ್ಲ. ಸಗಟು ವ್ಯಾಪಾರಿಗಳು ಖರೀದಿಸಲು ಮುಂದೆ ಬರುತ್ತಿಲ್ಲ. ಬೆರಳೆಣಿಕೆಯಷ್ಟು ವ್ಯಾಪಾರಿಗಳು ಬಂದರೂ ಎಲ್ಲ ಹೂವನ್ನು ಕೆಜಿಗೆ ₹ 8ರಿಂದ ₹ 10ಕ್ಕೆ ಕೇಳುತ್ತಾರೆ. ಇದರಿಂದ ಮಾರುಕಟ್ಟೆಗೆ ಹೂ ಸಾಗಿಸಿದ ವಾಹನ ಖರ್ಚು ಕೂಡ ಬರುತ್ತಿಲ್ಲ’ ಎನ್ನುತ್ತಾರೆ ಕಲಬುರ್ಗಿ ತಾಲ್ಲೂಕಿನ ಆಲಗೂಡ ರೈತ ಚಂದ್ರಕಾಂತ ಪೊಲೀಸ್‌ ಪಾಟೀಲ.

ತಿಪ್ಪೆ ಸೇರುತ್ತಿವೆ ತರಹೇವಾರಿ ಪುಷ್ಪ: ಚಿತ್ರದುರ್ಗ ಜಿಲ್ಲೆಯಲ್ಲಿ ಬೆಳೆದ ಹೂಗಳನ್ನು ಮಾರುಕಟ್ಟೆ ಇಲ್ಲದೇ ಅನೇಕ ರೈತರು ಬೀದಿ, ತಿಪ್ಪೆಗೆ ಸುರಿಯುತ್ತಿದ್ದಾರೆ. ಕಳೆದ ವರ್ಷದ ಲಾಕ್‌ಡೌನ್‌ಗಿಂತಲೂ ತೀವ್ರ ತರವಾದ ಸಮಸ್ಯೆಗೆ ಸಿಲುಕಿದ್ದಾರೆ.

**

ತೋಟದಲ್ಲೇ ಕೊಳೆಯುತ್ತಿದೆ ಸೇವಂತಿಗೆ!
ಮಂಡ್ಯ: ಜಿಲ್ಲೆಯ ವಿವಿಧೆಡೆ ಕಟಾವಿಗೆ ಬಂದಿರುವ ಹೂವು ಕೀಳಲು ಕಾರ್ಮಿಕರು ಸಿಗದ ಕಾರಣ ಹೂವಿನ ಫಸಲು ತೋಟದಲ್ಲೇ ಕೊಳೆಯುತ್ತಿದೆ. ಮನೆ ಮಂದಿಯೇ ಸೇರಿ ಹೂವು ಕಿತ್ತು–ಕಟ್ಟಿ ಮಾರಿದರೂ ಬೆಲೆ ಇಲ್ಲದ ಪರಿಣಾಮ ಬೆಳೆಗಾರರು ಕಂಗಾಲಾಗಿದ್ದಾರೆ.

ಪಾಂಡವಪುರ, ಕೆ.ಆರ್‌.ಪೇಟೆ, ಮದ್ದೂರು ತಾಲ್ಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹೂವಿನ ಕೃಷಿ ಮಾಡಿದ್ದಾರೆ. ಅದರಲ್ಲೂ ಪಾಂಡವಪುರ ತಾಲ್ಲೂಕಿನಲ್ಲಿ ವಿವಿಧ ಬಣ್ಣಗಳ ಸೇವಂತಿಗೆ ಬೆಳೆಯುತ್ತಾರೆ. ಮೇನಾಗರ ಹಾಗೂ ಹಲವು ಹಳ್ಳಿಗಳ ರೈತರಿಗೆ ಹೂವಿನ ಬೆಳೆಯೇ ಪ್ರಮುಖ ಕೃಷಿಯಾಗಿದೆ. ಜೀವನಾಧರ ಸಹ. ಸದ್ಯ ಸೇವಂತಿಗೆ ಹಾಗೂ ಚೆಂಡು ಹೂವು ಕಟಾವಿಗೆ ಬಂದಿದೆ. ‘ಮನೆಯಲ್ಲಿ ಇರುವ ಜನರೇ ಸೇರಿ ಹೂವು ಕಿತ್ತು, ಕಟ್ಟಿ ಮಾರಾಟ ಮಾಡಿದರೂ ಬೆಲೆ ಸಿಗುತ್ತಿಲ್ಲ. ಮಾರೊಂದಕ್ಕೆ ₹ 5– ₹ 6 ಬೆಲೆ ಇದೆ. ಖರ್ಚು ಮಾಡಿದ ಹಣವೂ ಬರುತ್ತಿಲ್ಲ. ಹೀಗಾಗಿ ಹೊಲದಲ್ಲೇ ಬಿಟ್ಟು ಕೊಳೆಸಲಾಗುತ್ತಿದೆ’ ಎಂದು ಮೇನಾಗರ ಗ್ರಾಮದ ಪ್ರಕಾಶ್ ತಿಳಿಸಿದರು.

-ಎಂ.ಎನ್‌.ಯೋಗೇಶ್‌‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT