ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ | ಸುಲಿಗೆಗೆ ‘ಟೋಲ್’ ಹೆದ್ದಾರಿ; ಕಂಪನಿಗಳಿಂದ ನಿಯಮ ಉಲ್ಲಂಘನೆ

ಸೌಕರ್ಯ ಕಲ್ಪಿಸದೇ ಶುಲ್ಕ ವಸೂಲಿ
Last Updated 29 ಅಕ್ಟೋಬರ್ 2022, 22:09 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಮುಖ ನಗರ ಹಾಗೂ ರಾಜ್ಯಗಳ ಸಂಪರ್ಕ ಸೇತುವೆಯಾಗಿರುವ ರಾಷ್ಟ್ರೀಯ ಹೆದ್ದಾರಿಗಳು, ಇತ್ತೀಚಿನ ದಿನಗಳಲ್ಲಿ ‘ಟೋಲ್’ ಸುಲಿಗೆಯ ತಾಣಗಳಾಗುತ್ತಿವೆ. ಸರ್ಕಾರಗಳ ನಿಯಮ ಹಾಗೂ ಆದೇಶಗಳನ್ನು ಗಾಳಿಗೆ ತೂರುತ್ತಿ ರುವ ಕಂಪನಿಗಳು, ನಿಯಮಬಾಹಿರ ‘ಟೋಲ್’ ಮೂಲಕ ನೂರಾರು ಕೋಟಿ ರೂಪಾಯಿ ದೋಚುತ್ತಿರುವ ಆರೋಪ ಗಳು ಸಾರ್ವಜನಿಕರಿಂದ ವ್ಯಕ್ತವಾಗುತ್ತಿವೆ.

ಟೋಲ್ ಸುಲಿಗೆಯಿಂದ ಆಕ್ರೋಶಭರಿತ ಜನರು ರಸ್ತೆಗಿಳಿದು ಹೋರಾಟ ಮಾಡುತ್ತಿದ್ದು, ಇದನ್ನು ಹತ್ತಿಕ್ಕಲು ಕಂಪನಿಗಳು ಸರ್ಕಾರದ ಮಟ್ಟದಲ್ಲಿ ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿವೆ. ಭಾರತೀಯ ರಾಷ್ಟ್ರೀಯ ಹೆದ್ದಾರಿಪ್ರಾಧಿಕಾರಿ (ಎನ್‌ಎಚ್‌ಎಐ), ಸರ್ಕಾರದಕೆಲ ಅಧಿಕಾರಿಗಳು ಮತ್ತು ಹಲವು ರಾಜಕಾರಣಿಗಳ ಕೃಪಾಕಟಾಕ್ಷದಿಂದಕಂಪನಿಗಳು ಟೋಲ್ ಸುಲಿಗೆ ಮುಂದುವರಿಸಿರುವ ವಿಷಯ ಗುಟ್ಟಾಗಿ ಉಳಿದಿಲ್ಲ.

ಹೆದ್ದಾರಿ ನಿರ್ಮಾಣ ಹಾಗೂ ನಿರ್ವಹಣೆಗೆ ಸಂಬಂಧಪಟ್ಟಂತೆ ಎನ್‌ಎಚ್‌ಎಐನಿಯಮಗಳನ್ನು ರೂಪಿಸಿದ್ದು, ಇದನ್ನು ಒಪ್ಪಿ ಟೋಲ್ ಸಂಗ್ರಹ ಕೆಲಸವನ್ನು ಗುತ್ತಿಗೆ ಪಡೆದಿರುವ ಹಲವು ಕಂಪನಿಗಳು, ನಿಯಮಬಾಹಿರವಾಗಿ ‘ಟೋಲ್’ ಸುಲಿಗೆಗೆ ಇಳಿದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.ಪ್ರತಿ 60 ಕಿ.ಮೀ.ಗೆ ಒಂದರಂತೆ ಟೋಲ್‌ಗೇಟ್‌ ಇರಬೇಕು’ ಎಂದು ಸಂಸತ್‌ ಅಧಿವೇಶನದಲ್ಲಿ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಹೇಳಿಕೆ ನೀಡಿದ್ದರು. ಸ್ಥಳ ಪರಿಶೀಲನೆ ನಡೆಸಿದಾಗ, ಈ ನಿಯಮ ಸಚಿವರ ಭಾಷಣಕ್ಕಷ್ಟೇ ಸೀಮಿತವಾದಂತಿದೆ. ಸಚಿವರಿಗೂ ತಪ್ಪು ಮಾಹಿತಿ ಇರುವುದು ಎದ್ದು ಕಾಣುತ್ತದೆ.

‘ರಾಜಧಾನಿ ಬೆಂಗಳೂರಿನಿಂದ ತುಮಕೂರು, ಹಾಸನ, ಬಳ್ಳಾರಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್‌ಗೇಟ್‌ಗಳನ್ನು ನಿರ್ಮಿಸಲಾಗಿದೆ. ಇಲ್ಲಿ ನಿತ್ಯವೂ ವಸೂಲಿ ನಡೆಯುತ್ತಿದ್ದು, ವಾಹನಗಳ ಮಾಲೀ ಕರು ಹಾಗೂ ಚಾಲಕರು ಬೇಸತ್ತು ಹೋಗಿದ್ದಾರೆ. ಇದು ಗೊತ್ತಿದ್ದರೂ ಸರ್ಕಾರ ಸುಮ್ಮನಿದೆ’ ಎಂದು ನೆಲಮಂಗಲದ ಹೋಲ್‌ಸೇಲ್ ಬಟ್ಟೆ ವ್ಯಾಪಾರಿ ಎಂ. ರವಿಕಿರಣ್‌ ದೂರಿದರು.

‘ಅಕ್ರಮ ಟೋಲ್ ವಸೂಲಿ ಪ್ರಶ್ನಿಸುವವರ ವಿರುದ್ಧವೇ ಟೋಲ್‌ ಸಿಬ್ಬಂದಿ ಹರಿಹಾಯುತ್ತಿದ್ದಾರೆ. ಗೂಂಡಾಗಳ ರೀತಿಯಲ್ಲಿ ಹಲ್ಲೆ ನಡೆಸುತ್ತಿದ್ದಾರೆ. ಠಾಣೆ ಹಾಗೂ ನ್ಯಾಯಾಲಯಗಳಲ್ಲಿ ಪ್ರಕರಣ ದಾಖಲಿಸಿದರೂ ಟೋಲ್‌ ಗೇಟ್ ಸಿಬ್ಬಂದಿ ವರ್ತನೆ ಬದಲಾಗುತ್ತಿಲ್ಲ’ ಎಂದೂ ಆರೋಪಿಸಿದರು.

ರಸ್ತೆ ಬಳಸದಿದ್ದರೂ ಶುಲ್ಕ ವಸೂಲಿ: ತುಮಕೂರು ರಸ್ತೆಯ ಪೀಣ್ಯ ಮೇಲ್ಸೇತುವೆಯಲ್ಲಿ (ಟೋಲ್ ರಸ್ತೆ) ಭಾರಿ ವಾಹನಗಳ ಸಂಚಾರ ಬಂದ್ ಆಗಿ ನಾಲ್ಕು ತಿಂಗಳಾಗಿದೆ. ಸರ್ವೀಸ್ ರಸ್ತೆಯಲ್ಲೇ ಭಾರಿ ವಾಹನಗಳು ಸಂಚರಿಸುತ್ತಿದ್ದು, ಅಂಥ ವಾಹನಗಳಿಂದಲೂ ಅಕ್ರಮವಾಗಿ ಟೋಲ್ ವಸೂಲಿ ಮಾಡಲಾಗುತ್ತಿದೆ.

‘ಗೊರಗುಂಟೆಪಾಳ್ಯ ವೃತ್ತದಿಂದ ಕೆನ್ನ ಮೆಟಲ್ ವಿಡಿಯಾ ಜಂಕ್ಷನ್‌ವರೆಗೆ ಮೇಲ್ಸೇತುವೆ ಬಂದ್ ಮಾಡಲಾಗಿದೆ. ಅಷ್ಟಾದರೂ ಪಾರ್ಲೆ ಬಳಿಯ ಟೋಲ್‌ ಗೇಟ್‌ನಲ್ಲಿ ಫಾಸ್ಟ್ಯಾಗ್‌ ವ್ಯವಸ್ಥೆ ಮೂಲಕ ಹಣ ಕಡಿತ ಮಾಡಿಕೊಳ್ಳಲಾಗುತ್ತಿದೆ. ಈ ಸಂಬಂಧ ಹಲವು ಬಾರಿ ಗಲಾಟೆಯೂ ನಡೆದಿದ್ದು, ಚಾಲಕರ ಮೇಲೆಯೇ ಹಲ್ಲೆಗಳು ನಡೆದಿವೆ’ ಎಂದು ಲಾರಿ ಮಾಲೀಕ ನವೀನ್‌ಕುಮಾರ್ ಹೇಳಿದರು.

ಮೂಲ ಸೌಕರ್ಯವೇ ಮರೀಚಿಕೆ: ಟೋಲ್‌ ಪಾವತಿಸದೇ ಸಂಚರಿಸುವ ಸ್ಥಳೀಯರ ಅನುಕೂಲಕ್ಕಾಗಿ ಸರ್ವಿಸ್ ರಸ್ತೆ ನಿರ್ಮಾಣ ಹಾಗೂ ನಿರ್ವಹಣೆ ಜವಾಬ್ದಾರಿ ಕಂಪನಿಗಳ ಮೇಲಿದೆ. ಆದರೆ, ಬಹುತೇಕ ಕಡೆ ಸರ್ವೀಸ್ ರಸ್ತೆಗಳಿಲ್ಲ. ಇದ್ದರೂ ನಿರ್ವಹಣೆ ಮರಿಚಿಕೆಯಾಗಿದೆ.
ಶೌಚಾಲಯ, ಕುಡಿಯುವ ನೀರು, ತುರ್ತು ಸೇವೆಗಳ ವ್ಯವಸ್ಥೆಯೇ ಹದಗೆಟ್ಟಿದೆ. ಸರ್ವೀಸ್ ರಸ್ತೆಗಳ ಬಸ್‌ ತಂಗುದಾಣಗಳು ನಿರ್ವಹಣೆ ಕೊರತೆಯಿಂದ ಸೊರಗಿವೆ. ಟೋಲ್ ವಸೂಲಿ ಮಾಡುವ ಕಂಪನಿ ಪ್ರತಿನಿಧಿಗಳು, ಹೆದ್ದಾರಿಗಳಲ್ಲಿ ಅಪ ಘಾತ ಸಂಭವಿಸಿದರೂ ಸಹಾಯಕ್ಕೆ ಧಾವಿಸುವುದಿಲ್ಲ. ಆಂಬುಲೆನ್ಸ್ ಸಹ ಕಳುಹಿಸುವುದಿಲ್ಲ ವೆಂದು ಜನರು ಆರೋಪಿಸುತ್ತಿದ್ದಾರೆ.

‘ಸರ್ವೀಸ್ ರಸ್ತೆಗಳು ಹಾಳಾಗಿದ್ದು, ಎಲ್ಲೆಂದರಲ್ಲಿ ಗುಂಡಿಗಳು ಬಿದ್ದಿವೆ. ನಿತ್ಯವೂ ಅಪಘಾತಗಳು ಸಂಭವಿಸುತ್ತಿದ್ದು, ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಮಾದನಾಯಕನಹಳ್ಳಿ ಹಾಗೂ ಇತರೆಡೆ ಸಂಭವಿಸಿದ್ದ ಅಪಘಾತಕ್ಕೆ ಸರ್ವೀಸ್ ರಸ್ತೆಯೇ ಕಾರಣ’ ಎಂದು ಚಿಕ್ಕಬಿದರಕಲ್ಲು ನಿವಾಸಿ ರೆಹಮಾನ್ ಆಕ್ರೋಶ ವ್ಯಕ್ತಪಡಿಸಿದರು.

ಗುತ್ತಿಗೆ ಸಹ ಬದಲು: ‘ನೆಲಮಂಗಲ ಟೋಲ್‌ಗೇಟ್‌ಗಳನ್ನು ನವಯುಗ ಕಂಪನಿ ಗುತ್ತಿಗೆ ತೆಗೆದುಕೊಂಡಿತ್ತು. ಇದೀಗ ಗುತ್ತಿಗೆಯನ್ನು ರಿದ್ದಿ ಸಿದ್ದಿ ಅಸೋಸಿಯೇಟ್ಸ್ ಕಂಪನಿಗೆ ನೀಡಲಾಗಿದ್ದು, ಫಲಕ ಬದಲಾಯಿಸದೇ ಅಕ್ರಮ ಸುಲಿಗೆ ಮುಂದುವರಿದಿದೆ’ ಎಂದು ಸ್ಥಳೀಯರು ಆರೋಪಿಸಿದರು.

ತಪ್ಪು ಮುಚ್ಚಿಕೊಳ್ಳಲು ಉಚಿತ ಸಂಚಾರ: ‘ರಾಜಕಾರಣಿಗಳು ಹಾಗೂ ಅವರ ಬೆಂಬಲಿಗರು, ಸರ್ಕಾರದ ಅಧಿಕಾರಿಗಳು, ಪೊಲೀಸರು ಹಾಗೂ ಕೆಲವು ಸಂಘಟನೆಗಳ ಕಾರ್ಯಕರ್ತರಿಗೆ ಬಹುತೇಕ ಟೋಲ್‌ಗೇಟ್‌ಗಳಲ್ಲಿ ಉಚಿತ ಸಂಚಾರ ಕಲ್ಪಿಸಲಾಗುತ್ತವೆ. ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಕಂಪನಿಗಳು ಈ ದಾರಿ ಹಿಡಿದಿವೆ. ಹೀಗಾಗಿಯೇ, ಕಂಪನಿಗಳ ಅಕ್ರಮವನ್ನು ಪ್ರಶ್ನಿಸಿದರೂ ನ್ಯಾಯ ಸಿಗುತ್ತಿಲ್ಲ’ ಎಂಬುದು ಜನರ ಆರೋಪ.

ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗುವ ಹಾಸನ, ವಿಜಯಪುರ, ಕೊಪ್ಪಳ, ದಕ್ಷಿಣ ಕನ್ನಡ, ಚಾಮರಾಜನಗರ, ಮಂಡ್ಯ, ಮೈಸೂರು, ಬೀದರ್, ಚಿಕ್ಕಮಗಳೂರು ಹಾಗೂ ಇತರೆ ಜಿಲ್ಲೆಗಳಲ್ಲೂ ಟೋಲ್ ಸುಲಿಗೆ ಅವ್ಯಾಹತವಾಗಿದೆ. ಇದರ ವಿರುದ್ಧ ಸ್ಥಳೀಯರು ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದಾರೆ.

ಪ್ರಾಧಿಕಾರದ ನಿರ್ಲಕ್ಷ್ಯಕ್ಕೆ 9 ಜನರ ಸಾವು

ಹೊನ್ನಾವರ– ಬಾಣಾವರ ಹೆದ್ದಾರಿ –69ರಲ್ಲಿ ಈಚೆಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 9 ಮಂದಿ ಮೃತಪಟ್ಟಿದ್ದು, ಹೆದ್ದಾರಿ ಪ್ರಾಧಿಕಾರದ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಅರೆಬರೆ ಕಾಮಗಾರಿಯ ಜೊತೆಗೆ ಸರಿಯಾಗಿ ಫಲಕಗಳನ್ನು ಅಳವಡಿಸದೇ ಇರುವುದೇ ಅಪಘಾತಕ್ಕೆ ಕಾರಣ ಎನ್ನುವುದು ಸ್ಥಳೀಯರ ಆರೋಪ.

ಮಳೆಗಾಲದಲ್ಲಿ ಸಂಚಾರ ಬಂದ್‌

ಕರಾವಳಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಗಳು ಮಳೆಗಾಲದಲ್ಲಿ ಬಂದ್‌ ಆಗುವುದು ಸಾಮಾನ್ಯವಾಗಿದೆ. ಸಂಪಾಜೆ, ಶಿರಾಡಿ, ಚಾರ್ಮಾಡಿ ಘಾಟಿಯ ಮೂಲಕ ಕರಾವಳಿ ಸಂಪರ್ಕಿಸುವ ಹೆದ್ದಾರಿಗಳು ಮಳೆಗಾಲದಲ್ಲಿ ಒಂದಿಲ್ಲೊಂದು ಕಾರಣದಿಂದ ಬಂದ್‌ ಆಗುತ್ತವೆ. ರಸ್ತೆ ಹದಗೆಟ್ಟರೂ ಟೋಲ್ ವಸೂಲಿ ಮಾತ್ರ ನಿಲ್ಲುವುದಿಲ್ಲವೆಂದು ಸ್ಥಳೀಯರು ದೂರುತ್ತಾರೆ.‘ಟೋಲ್‌’ ಸುಲಿಗೆ ಆರೋಪವಿರುವ ಗೇಟ್‌ಗಳು

ವಿಜಯಪುರ: ಸೊಲ್ಲಾಪುರ – ಚಿತ್ರದುರ್ಗ ರಾಹೆ–52

ಹಾಸನ: ಬೆಂಗಳೂರು– ಮಂಗಳೂರು ಹೆದ್ದಾರಿ– 75 (ನೆಲಮಂಗಲ, ದೇವಿಹಳ್ಳಿ ಹಾಗೂ ಬೆಳ್ಳೂರು ಕ್ರಾಸ್‌, ಶಾಂತಿಗ್ರಾಮ ಟೋಲ್‌ಗೇಟ್), ಬಿಳಿಕೆರೆ– ಬೇಲೂರು (ಎನ್‌ಎಚ್‌ 373), ಮಂಗಳೂರು–ತುಮಕೂರು (ಎನ್‌ಎಚ್‌ 73), ಹೊನ್ನಾವರ– ಬಾಣಾವರ (ಎನ್‌ಎನ್‌ 69), ಬೆಂಗಳೂರು–ಮಂಗಳೂರು (ಎನ್‌ಎಚ್‌ 75: ಶಾಂತಿಗ್ರಾಮ ಟೋಲ್‌): ಹಾಸನ–ಗೋಣಿಕೊಪ್ಪ (ರಾಜ್ಯ ಹೆದ್ದಾರಿ)

ಬೆಂಗಳೂರು– ಮಂಗಳೂರು ಎನ್‌ಎಚ್‌ 75 (ನೆಲ್ಲಿಗೆರೆ, ಕಾರಾಬೈಲ್‌ ಟೋಲ್‌) ಬೆಂಗಳೂರು– ಚಾಮರಾಜನಗರ– ದಿಂಡಿಗಲ್‌ ಎನ್‌ಎಚ್‌ 209.

ಜಾಮರಾಜನಗರ ಜಿಲ್ಲೆ: ಬೆಂಗಳೂರು–ಕೊಯಮತ್ತೂರು (ಎನ್‌ಎಚ್ 948), ಕೊಳ್ಳೆಗಾಲ–ಕೊಯಿಕ್ಕೋಡ್‌ (ಎನ್‌ಎಚ್‌ 766), ಮೈಸೂರು–ಊಟಿ (ಎನ್‌ಎಚ್ 65)

ಮೈಸೂರು ಜಿಲ್ಲೆ: ಮೈಸೂರು–ಊಟಿ ಎನ್‌ಎಚ್‌ 65 (ನಂಜನಗೂಡು ಟೋಲ್‌)

ಕೊಪ್ಪಳ: ಹೊಸಪೇಟೆ– ವಿಜಯಪುರ ರಾಷ್ಟ್ರೀಯ ಹೆದ್ದಾರಿ–50 (ಶಹಾಪುರ ಹಾಗೂ ಕೆ. ಬೊದೂರು ಟೋಲ್‌ ಗೇಟ್),ರಾಷ್ಟ್ರೀಯ ಹೆದ್ದಾರಿ 67ರ ಭಾಗವಾದ ಹುಬ್ಬಳ್ಳಿ–ಹೊಸಪೇಟೆ ಎನ್‌ಎಚ್‌ 67 (ಹಿಟ್ನಾಳ ಹಾಗೂ ಶಹಾಪುರ–ಕೆರೆಹಳ್ಳಿ ಟೋಲ್‌ ಗೇಟ್)

ಬೀದರ್: ಹೈದರಾಬಾದ್‌– ಸೊಲ್ಲಾಪುರ ಎನ್‌ಎಚ್‌ 65 (ಚಿಟಗುಪ್ಪ ಮಂಗಲಗಿ ಟೋಲ್‌ಗೇಟ್)

ಚಿಕ್ಕಮಗಳೂರು: ಅಜ್ಜಂಪುರ ತಾಲ್ಲೂಕಿನ ಚಿಕ್ಕನಾವಂಗಲ ಗೇಟ್‌ ಮತ್ತು ಹಿರೇಕಾನವಂಗಲ ಸಮೀಪದ ಟೋಲ್‌ ಗೇಟ್‌

ದಕ್ಷಿಣ ಕನ್ನಡ: ಹಾಸನ ಜಿಲ್ಲೆಯ ಬಾಣಾವರದಿಂದ ಮಂಗಳೂರು ಎನ್‌ಎಚ್‌ 75 (ಬಿ.ಸಿ.ರೋಡ್‌ ಸಮೀಪ ಬ್ರಹ್ಮರಕೂಟ್ಲು ಟೋಲ್‌ಗೇಟ್‌), ದಕ್ಷಿಣ ಕನ್ನಡ ಜಿಲ್ಲೆಯ ತಲಪಾಡಿಯಿಂದ ಉಡುಪಿ ಜಿಲ್ಲೆಯ ಹೆಜಮಾಡಿವರೆಗೆ ಎನ್‌ಎಚ್‌ 66 (ಹೆಜಮಾಡಿ, ಸುರತ್ಕಲ್‌ ಹಾಗೂ ತಲಪಾಡಿ ಟೋಲ್‌ಗೇಟ್)

ಉಡುಪಿ: ಬೈಂದೂರಿನಿಂದ ಮುಲ್ಕಿ ಗಡಿಯವರೆಗೆ ಎನ್‌ಎಚ್‌ 66 ಹಾಗೂ ಎನ್‌ಎಚ್‌ 169ಎ (ಬ್ರಹ್ಮಾವರ ತಾಲ್ಲೂಕಿನ ಸಾಸ್ತಾನ, ಕಾಪು ತಾಲ್ಲೂಕಿನ ಹೆಜಮಾಡಿ, ಬೈಂದೂರು ತಾಲ್ಲೂಕಿನ ಶಿರೂರು ಟೋಲ್‌ಗೇಟ್‌ಗಳು)

****

ಮಂಗಳೂರಿನ ಜನ ಇಂಧನಕ್ಕಿಂತಲೂ ಹೆಚ್ಚು ಹಣವನ್ನು ಟೋಲ್‌ಗೆ ಕಟ್ಟುವಂತಾಗಿದೆ. ಸುರತ್ಕಲ್‌ ಟೋಲ್‌ ರದ್ದುಪಡಿಸುವುದಾಗಿ ಸರ್ಕಾರ 2018ರಿಂದಲೂ ಭರವಸೆ ನೀಡುತ್ತಿದ್ದು, ಇದುವರೆರೆಗೂ ಕಾರ್ಯರೂಪಕ್ಕೆ ಬಂದಿಲ್ಲ.

-ಮುನೀರ್‌ ಕಾಟಿಪಳ್ಳ, ಟೋಲ್‌ಗೇಟ್‌ ವಿರೋಧಿ ಹೋರಾಟ ಸಮಿತಿ ಸಂಚಾಲಕ.

****

ದೇಶದಲ್ಲಿ 187 ಅನಧಿಕೃತ ಟೋಲ್‌ ಗೇಟ್‌ಗಳಿದ್ದು, ಶೀಘ್ರವೇ ಸ್ಥಳಾಂತರಿಸಲಾಗುವುದು ಎಂದು ಕೇಂದ್ರ ಭೂ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಸಂಸತ್ ಅಧಿವೇಶನದಲ್ಲಿ ಹೇಳಿದ್ದರು. ಆದರೆ, ಒಂದೂ ಟೋಲ್‌ಗೇಟ್ ತೆರವುಗೊಳಿಸಿಲ್ಲ.

-ಶ್ರೀಶೈಲ ಸಜ್ಜನ, ಉತ್ತರ ಕರ್ನಾಟಕ ಪ್ರಯಾಣಿಕರ ಕ್ಷೇಮಾಭಿವೃದ್ದಿ ಮಂಡಳಿ ಸಂಸ್ಥಾಪಕ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT