ಸೋಮವಾರ, ಸೆಪ್ಟೆಂಬರ್ 27, 2021
20 °C
ಕಾಡಲಾರಂಭಿಸಿದ ರಕ್ತ ಹೀನತೆ

ಒಳನೋಟ | ಅಪೌಷ್ಟಿಕ ಕರ್ನಾಟಕ: ಪೌಷ್ಟಿಕ ಆಹಾರ ‍ಪೂರೈಕೆಗೆ ಕೋವಿಡ್ ಅಡ್ಡಿ

ವರುಣ ಹೆಗಡೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಕ್ಕಳಲ್ಲಿ ಅಪೌಷ್ಟಿಕತೆ ನಿವಾರಣೆಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರವು ಪ್ರತಿ ವರ್ಷ ಸಾವಿರಾರು ಕೋಟಿ ರೂಪಾಯಿಗಳನ್ನು ಮೀಸಲಿಡುತ್ತಿವೆ. ಆದರೆ, ಮಕ್ಕಳ ದೈಹಿಕ ಬೆಳವಣಿಗೆಯಲ್ಲಿ ಮಾತ್ರ ನಿರೀಕ್ಷಿತ ಮಟ್ಟದ ಸುಧಾರಣೆಯ ಲವಲೇಶವೂ ಕಾಣಿಸುತ್ತಿಲ್ಲ.

ಕೋವಿಡ್ ಕಾಣಿಸಿಕೊಂಡ ಬಳಿಕವಂತೂ ಮಕ್ಕಳಲ್ಲಿನ ಅಪೌಷ್ಟಿಕತೆ ಸಮಸ್ಯೆ ಉಲ್ಬಣಗೊಳ್ಳುತ್ತಿರುವುದರಿಂದ ‘ಪೌಷ್ಟಿಕ ಕರ್ನಾಟಕ’ ನಿರ್ಮಾಣದ ಸದಾಶಯಕ್ಕೆ ದೊಡ್ಡ ಮಟ್ಟದ ಪೆಟ್ಟು ಬಿದ್ದಿದೆ. ರಾಜ್ಯದಲ್ಲಿ 6 ವರ್ಷದೊಳಗಿನ 4 ಲಕ್ಷಕ್ಕೂ ಅಧಿಕ ಮಕ್ಕಳು ಅಪೌಷ್ಟಿಕತೆ ಸಮಸ್ಯೆ ಎದುರಿಸುತ್ತಿದ್ದಾರೆ.

ಓದಿ: ಒಳನೋಟ: ಪೋಷಣೆ’ಗೆ ಕೋವಿಡ್ ಅಡ್ಡಿ

ಕೋವಿಡ್‌ ಪಿಡುಗು ಆರಂಭವಾದ ಮೇಲೆ ರಾಜ್ಯದಲ್ಲಿ ಅಂಗನವಾಡಿಗಳು ಬಾಗಿಲು ಮುಚ್ಚಿವೆ. ಒಂದೂವರೆ ವರ್ಷ ದಿಂದ ಮಕ್ಕಳು ಮನೆಯಲ್ಲಿಯೇ ಇದ್ದಾರೆ. ಕೋವಿಡ್‌ನ ಸಂಭಾವ್ಯ ಮೂರನೇ ಅಲೆಯ ಕಾರಣಕ್ಕೆ ಅಂಗನವಾಡಿಗಳನ್ನು ಸದ್ಯಕ್ಕೆ ಪ್ರಾರಂಭಿಸದಿರಲು ಸರ್ಕಾರ ನಿರ್ಧರಿಸಿದೆ. ನಿರಂತರವಾಗಿ ಪೌಷ್ಟಿಕ ಆಹಾರ ಕೊರತೆಯಿಂದಾಗಿ ಮಕ್ಕಳ ಆರೋಗ್ಯ, ವ್ಯಕ್ತಿತ್ವ ಬೆಳವಣಿಗೆಯ ಮೇಲೆ ದೀರ್ಘಾವಧಿ ದುಷ್ಪರಿಣಾಮದ ಆತಂಕ ಕಾಡಲಾರಂಭಿಸಿದೆ.

ಕಡಿಮೆ ತೂಕ: ದಕ್ಷಿಣದ ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಅಪೌಷ್ಟಿಕತೆ ಪ್ರಮಾಣ ಅಧಿಕವಾಗಿದೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಪ್ರಕಾರ ರಾಜ್ಯದಲ್ಲಿ 5 ವರ್ಷದೊಳಗಿನ ಶೇ 35.8ರಷ್ಟು ಮಕ್ಕಳು ವಯಸ್ಸಿಗೆ ಇರಬೇಕಾದ ತೂಕಕ್ಕಿಂತ ಕಡಿಮೆ ತೂಕವನ್ನು ಹೊಂದಿದ್ದಾರೆ.

ಮಕ್ಕಳಲ್ಲಿನ ಅಪೌಷ್ಟಿಕತೆ ನಿವಾರಣೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ‘ಸಮಗ್ರ ಶಿಶು ಅಭಿವೃದ್ಧಿ ಯೋಜನೆ’ಯನ್ನು ಹಮ್ಮಿಕೊಂಡಿದೆ.

6 ವರ್ಷದೊಳಗಿನ ಮಕ್ಕಳ ಪೌಷ್ಟಿಕ ಮಟ್ಟವನ್ನು ಹೆಚ್ಚಿಸುವುದು ಯೋಜನೆಯ ಮುಖ್ಯ ಉದ್ದೇಶ. ಆದರೆ, ಕೋವಿಡ್ ಈ ಉದ್ದೇಶಕ್ಕೆ ಅಡ್ಡಗಾಲು ಹಾಕಿದೆ. ಅಗತ್ಯ ಪ್ರಮಾಣದ ಪೌಷ್ಟಿಕ ಆಹಾರ ದೊರೆಯದೆಯೇ ಗ್ರಾಮೀಣ ಪ್ರದೇಶದ ಮಕ್ಕಳ ತೂಕ ದಿನದಿಂದ ದಿನಕ್ಕೆ ಇಳಿಕೆ ಕಾಣುತ್ತಿದೆ ಎನ್ನುತ್ತಾರೆ ಮಕ್ಕಳ ತಜ್ಞರು.

ಕೋವಿಡ್ ಪೂರ್ವದಲ್ಲಿ ‘ಸಮಗ್ರ ಶಿಶು ಅಭಿವೃದ್ಧಿ ಯೋಜನೆ’ಯಡಿ ಅಂಗನವಾಡಿ ಕೇಂದ್ರಗಳಲ್ಲಿ 6 ವರ್ಷದೊಳಗಿನ ಮಕ್ಕಳಿಗೆ ಚಿತ್ರಾನ್ನ, ರವೆ ಲಾಡು, ಅಕ್ಕಿ ಕಿಚಡಿ, ಮೊಳಕೆ ಬರಿಸಿದ ಹೆಸರುಕಾಳು, ಊಟ ಸೇರಿದಂತೆ ಪೂರಕ ಪೌಷ್ಟಿಕ ಆಹಾರಗಳನ್ನು ಒದಗಿಸಲಾಗುತ್ತಿತ್ತು. ‘ಕ್ಷೀರ ಭಾಗ್ಯ’ ಯೋಜನೆಯಡಿ ವಾರದಲ್ಲಿ 5 ದಿನ 150 ಮಿಲಿ ಲೀಟರ್‌ ಹಾಲು ಹಾಗೂ 2 ದಿನ ಮೊಟ್ಟೆ ನೀಡಲಾಗುತ್ತಿತ್ತು.

ಓದಿ: ಒಳನೋಟ: ಮಕ್ಕಳ ಮೊಟ್ಟೆ, ಹಾಲು, ಕುಟುಂಬದವರ ಪಾಲು

ಕೋವಿಡ್‌ ಕಾಣಿಸಿಕೊಂಡ ಬಳಿಕ ದಿನಸಿ ರೂಪದಲ್ಲಿ ಮಕ್ಕಳ ಮನೆಗೆ ಆಹಾರ ಧಾನ್ಯಗಳನ್ನು ವಿತರಿಸಲಾಗುತ್ತಿದೆ. ಆದರೆ, ಈ ಆಹಾರ ಧಾನ್ಯವನ್ನು ಕುಟುಂಬದ ಎಲ್ಲ ಸದಸ್ಯರು ಹಂಚಿಕೊಂಡು, ಸೇವಿಸುವ ಸಾಧ್ಯತೆಯಿದೆ. ಹೀಗಾಗಿ, ಪೂರೈಕೆಯಾಗುತ್ತಿರುವ ಪೌಷ್ಟಿಕ ಆಹಾರಗಳು ಮಗುವಿಗೆ ಸಮರ್ಪಕವಾಗಿ ಸೇರುತ್ತಿಲ್ಲ ಎನ್ನುವುದನ್ನು ಒಪ್ಪಿಕೊಳ್ಳುವ ಅಧಿಕಾರಿಗಳು, ಕೋವಿಡ್ ಕಾಲಘಟ್ಟದಲ್ಲಿ ಬೇರೆ ಮಾರ್ಗವೇ ಇಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

ಇನ್ನೊಂದೆಡೆ, ಒದಗಿಸಲಾಗುತ್ತಿರುವ ಪೌಷ್ಟಿಕ ಆಹಾರ ಮಕ್ಕಳನ್ನು ಎಷ್ಟರ ಮಟ್ಟಿಗೆ ತಲುಪಿದೆ ಎಂಬ ಮೌಲ್ಯಮಾಪನ ಕೂಡ ನಡೆದಿಲ್ಲ. ಈ ನಡುವೆ ಕಳಪೆ ಗುಣಮಟ್ಟದ ಆಹಾರ ಧಾನ್ಯವನ್ನು ಒದಗಿಸಲಾಗಿದೆ ಎಂಬ ಆರೋ‍‍ಪಗಳೂ ಇವೆ.

ಅಂಗನವಾಡಿ ಕಾರ್ಯಕರ್ತೆಯರಿಗೆ, ಕೋವಿಡ್ ಸಂಪರ್ಕಿತರ ಪತ್ತೆ ಸೇರಿದಂತೆ ವಿವಿಧ ಹೆಚ್ಚುವರಿ ಕೆಲಸಗಳನ್ನೂ ನೀಡಲಾಗಿದೆ. ಇದರಿಂದಾಗಿ ಅವರಿಗೆ ಪೂರ್ಣ ಪ್ರಮಾಣದಲ್ಲಿ ‘ಸಮಗ್ರ ಶಿಶು ಅಭಿವೃದ್ಧಿ ಯೋಜನೆ’ಯಡಿ ತಮ್ಮನ್ನು ತೊಡಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಲಾಕ್‌ಡೌನ್ ಅವಧಿಯಲ್ಲಿ ಕೆಲ ಮನೆಗಳಿಗೆ ಪೌಷ್ಟಿಕ ಆಹಾರ ತಲುಪಿಲ್ಲ ಎಂಬ ಆರೋಪಗಳೂ ಇವೆ.

‘ಕೋವಿಡ್ ಕಾಣಿಸಿಕೊಂಡ ಬಳಿಕ ಬೇರೆ ಬೇರೆ ಕೆಲಸಗಳಿಗೆ ನಿಯೋಜಿಸಿದ ಕಾರಣ ಪ್ರತಿ ತಿಂಗಳು ಮನೆ ಮನೆಗೆ ತೆರಳಿ, ಆಹಾರ ಧಾನ್ಯಗಳನ್ನು ಒದಗಿಸುವುದು ಸಾಧ್ಯವಾಗುತ್ತಿಲ್ಲ. ದೂರದ ಪ್ರದೇಶಗಳಲ್ಲಿ ಇರುವವರಿಗೆ ಕೇಂದ್ರಗಳಿಗೆ ಬಂದು ಒಯ್ಯುವಂತೆ ತಿಳಿಸಲಾಗುತ್ತಿದೆ. ಕೆಲವರು ಗೈರಾಗುತ್ತಿದ್ದಾರೆ’ ಎನ್ನುತ್ತಾರೆ ಚಿಕ್ಕಬಳ್ಳಾಪುರದ ಅಂಗನವಾಡಿ ಕಾರ್ಯಕರ್ತೆಯೊಬ್ಬರು.

ಓದಿ: ಗಿರಿಜನರ ಆಹಾರ ಯೋಜನೆ: ಕೋವಿಡ್‌ ಕಾಲದಲ್ಲಿ ಹೊಟ್ಟೆ ತುಂಬಿಸಿತು

ರಕ್ತ ಹೀನತೆ ಸಮಸ್ಯೆ: ರಾಜ್ಯದಲ್ಲಿನ ಮಕ್ಕಳಲ್ಲಿ ರಕ್ತಹೀನತೆ ಸಮಸ್ಯೆ ಹೆಚ್ಚಳವಾಗಿರುವುದು ಕೇಂದ್ರ ಆರೋಗ್ಯ ಸಚಿವಾಲಯ ನಡೆಸಿರುವ 2019–20ನೇ ಸಾಲಿನ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯಿಂದ ಬಹಿರಂಗವಾಗಿದೆ. 2015–16ನೇ ಸಾಲಿನ ಸಮೀಕ್ಷೆಯಲ್ಲಿ 6 ರಿಂದ 59 ತಿಂಗಳೊಳಗಿನ ಶೇ 60.9 ರಷ್ಟು ಮಕ್ಕಳು ರಕ್ತ ಹೀನತೆಯಿಂದ ಬಳಲುತ್ತಿರುವುದು ಪತ್ತೆಯಾಗಿತ್ತು. ಈಗ ಆ ಪ್ರಮಾಣವು ಶೇ 65.5ಕ್ಕೆ ಏರಿಕೆಯಾಗಿದೆ.

ಈ ಸಮೀಕ್ಷೆಯ ಪ್ರಕಾರ ರಾಜ್ಯದಲ್ಲಿರುವ 5 ವರ್ಷದೊಳಗಿನ ಮಕ್ಕಳಲ್ಲಿ ಗ್ರಾಮೀಣ ಪ್ರದೇಶದ ಮಕ್ಕಳೇ ಹೆಚ್ಚಿನ ಪ್ರಮಾಣದಲ್ಲಿ (ಶೇ 32.9 ರಷ್ಟು) ಅಪೌಷ್ಟಿಕ ಸಮಸ್ಯೆ ಎದುರಿಸಿದ್ದಾರೆ. ಈ ಸಮಸ್ಯೆ ನಗರ ಪ್ರದೇಶದ ಮಕ್ಕಳಲ್ಲಿ ಶೇ 29.4ರಷ್ಟಿದೆ. ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ವರ್ಷದಿಂದ ವರ್ಷಕ್ಕೆ ಅಪೌಷ್ಟಿಕತೆ ಏರುಗತಿ ಪಡೆದುಕೊಳ್ಳುತ್ತಿದೆ. ಇದು ವೈದ್ಯರು ಹಾಗೂ ಇಲಾಖೆಯ ಅಧಿಕಾರಿಗಳ ಕಳವಳಕ್ಕೆ ಕಾರಣವಾಗಿದೆ.

ಮಾತೃವಂದನಾ: ತಾಯಂದಿರಲ್ಲಿ ಅಪೌಷ್ಟಿಕತೆ ಹೋಗಲಾಡಿಸಲು ಕೇಂದ್ರ–ರಾಜ್ಯಗಳ ಸಹಭಾಗಿತ್ವದಲ್ಲಿ ನಡೆಯುತ್ತಿರುವ ‘ಮಾತೃವಂದನಾ’ ಪ್ರಮುಖ ಯೋಜನೆಯಾಗಿದೆ. ಗರ್ಭಿಣಿಯರು ಇದರ ಫಲಾನುಭವಿಗಳಾಗಿದ್ದಾರೆ. ಅಪೌಷ್ಟಿಕತೆ, ರಕ್ತ ಹೀನತೆ, ಶಿಶು ಮತ್ತು ಬಾಣಂತಿಯರ ಮರಣ ತಡೆಯುವುದು ಯೋಜನೆಯ ಆಶಯ.

ಪೌಷ್ಟಿಕ ಆಹಾರವನ್ನು ಮನೆಗೆ ಪೂರೈಸಿದಲ್ಲಿ ಕುಟುಂಬದ ಸದಸ್ಯರೆಲ್ಲ ಹಂಚಿಕೊಳ್ಳುವ ಸಾಧ್ಯತೆಯಿದೆ ಎಂಬ ಕಾರಣಕ್ಕೆ ಮೂರು ಕಂತುಗಳಲ್ಲಿ ಒಟ್ಟು ₹ 5 ಸಾವಿರವನ್ನು ಫಲಾನುಭವಿಯ ಬ್ಯಾಂಕ್‌ ಖಾತೆಗೆ ಸಕಾಲದಲ್ಲಿ ಜಮಾ ಮಾಡಲಾಗುತ್ತಿದೆ. ಆದರೆ, ಈ ಹಣ ಸದುಪಯೋಗವಾಗುತ್ತಿದೆಯೇ ಎಂಬ ಬಗ್ಗೆ ಮೌಲ್ಯಮಾಪನ ನಡೆಯುತ್ತಿಲ್ಲ ಎಂದು ಇಲಾಖೆಯ ಮೂಲಗಳು ತಿಳಿಸುತ್ತವೆ.

ಸಮರ್ಪಕವಾಗಿ ನಡೆಯದ ತಪಾಸಣೆ:

ಕೋವಿಡ್ ಪೂರ್ವದಲ್ಲಿ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ತೂಕ, ಎತ್ತರವನ್ನು ಪ್ರತಿ ತಿಂಗಳು ಪರಿಶೀಲಿಸುವ ಜತೆಗೆ ಸಮಸ್ಯೆ ಎದುರಿಸುತ್ತಿರುವ ಮಕ್ಕಳಿಗೆ ಅಗತ್ಯ ಚಿಕಿತ್ಸೆ ಒದಗಿಸಲಾಗುತ್ತಿತ್ತು. ಆದರೆ, ಕೋವಿಡ್‌ ಕಾಣಿಸಿಕೊಂಡ ಬಳಿಕ ತೂಕ ಮತ್ತು ಎತ್ತರದ ಅಳತೆ ಹಾಗೂ ಆರೋಗ್ಯ ತಪಾಸಣೆ ನಿಯಮಿತವಾಗಿ ನಡೆದಿಲ್ಲ.

ಅಂಗನವಾಡಿಗಳು ಪ್ರಾರಂಭವಾದ ಬಳಿಕ ಹೆಚ್ಚಿನ ಮಕ್ಕಳಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಇಲಾಖೆಯ ಅಧಿಕಾರಿಗಳೇ ಕಳವಳ ವ್ಯಕ್ತಪಡಿಸಿದ್ದಾರೆ.

ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ, ಪ್ರತಿ ವರ್ಷ ಜನಿಸಿದ ಸಾವಿರ ಶಿಶುಗಳಲ್ಲಿ ಸರಾಸರಿ 25 ಕಂದಮ್ಮಗಳು ಅಪೌಷ್ಟಿಕತೆ ಸೇರಿದಂತೆ ವಿವಿಧ ಕಾರಣಗಳಿಂದ ಜೀವ ಕಳೆದುಕೊಳ್ಳುತ್ತಿವೆ.

ನವಜಾತ ಶಿಶುಗಳ ರಕ್ಷಣೆಗೋಸ್ಕರ ಇಲಾಖೆಯು ಕಾಂಗರೂ ಮದರ್‌ಕೇರ್‌, ನವಜಾತ ಶಿಶು ಸ್ಥಿರೀಕರಣ ಘಟಕ ಸೇರಿದಂತೆ ವಿವಿಧ ಮಕ್ಕಳ ಆರೋಗ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೂ ನಿರೀಕ್ಷಿತ ಪ್ರಮಾಣದಲ್ಲಿ ಫಲಿತಾಂಶ ದೊರೆಯುತ್ತಿಲ್ಲ. ಇದರಿಂದಾಗಿಯೇ ಪ್ರತಿ ವರ್ಷ ಸರಾಸರಿ 10 ಸಾವಿರ ಶಿಶುಗಳು ಸಾವಿಗೀಡಾಗುತ್ತಿವೆ.

***

ಮಕ್ಕಳಿಗೆ ಸಮರ್ಪಕವಾಗಿ ಪೌಷ್ಟಿಕ ಆಹಾರ ಸಿಗಬೇಕು. ಈ ಬಗ್ಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಸೂಚಿಸಿದ್ದೇನೆ. ಅಪೌಷ್ಟಿಕತೆ ತೊಲಗಿಸುವುದು ಮೊದಲ ಆದ್ಯತೆ 
- ಹಾಲಪ್ಪ ಆಚಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ

ಓದಿ: ಒಳನೋಟ | ಅಪೌಷ್ಟಿಕ ಕರ್ನಾಟಕ: ಪೌಷ್ಟಿಕ ಆಹಾರ ‍ಪೂರೈಕೆಗೆ ಕೋವಿಡ್ ಅಡ್ಡಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು