ಬುಧವಾರ, ಏಪ್ರಿಲ್ 21, 2021
25 °C

ಒಳನೋಟ | 'ಸುರಕ್ಷಿತ ಲೈಂಗಿಕತೆ' ಹೆಸರಿನಲ್ಲಿ ಶೋಷಣೆ...

ರಾಜೇಶ್‌ ರೈ ಚಟ್ಲ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಸುರಕ್ಷಿತ ಲೈಂಗಿಕತೆ’ಗಾಗಿ ರಾಜ್ಯದಲ್ಲಿ ವಾರ್ಷಿಕ ಬರೋಬ್ಬರಿ 3 ಕೋಟಿ ಕಾಂಡೋಮ್ ಉಚಿತವಾಗಿ ಹಂಚಲಾಗುತ್ತದೆ!

ನ್ಯಾಕೊ ಪೂರೈಸುವ ಕಾಂಡೋಮ್‌ ಅನ್ನು ಲೈಂಗಿಕ ವೃತ್ತಿನಿರತರಾಗಿ ನೋಂದಣಿ ಮಾಡಿಕೊಂಡ ಪೀರ್ ವರ್ಕರ್‌ಗಳ ಮೂಲಕ ದಿನಕ್ಕೆ ಸರಾಸರಿ 1.50 ಲಕ್ಷದಂತೆ ಗಿರಾಕಿಗಳಿಗೆ ತಲುಪಿಸಲಾಗುತ್ತದೆ ಎನ್ನುತ್ತದೆ ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿ (ಕೆಸಾಪ್ಸ್) ಮಾಹಿತಿ. ಆ ಮೂಲಕ ಬೃಹತ್ ಉದ್ದಿಮೆಯಾಗಿ ಬದಲಾಗಿರುವ ಈ ಜಾಲದಲ್ಲಿ ಕೋಟ್ಯಂತರ ರೂಪಾಯಿಗಳ ವ್ಯವಹಾರ ನಡೆಯುತ್ತಿದೆ.

ರಾಜ್ಯದಲ್ಲಿ ಏಡ್ಸ್‌ ನಿಯಂತ್ರಣಕ್ಕಾಗಿ ಈ ವರ್ಷ ಕೆಲಸ ಮಾಡುವ ಸಮುದಾಯ ಆಧಾರಿತ ಸಂಸ್ಥೆಗಳ (ಸಿಬಿಒ) ಪೈಕಿ ಬಳ್ಳಾರಿಯ ಸೌಖ್ಯ ಬೆಳಕು ಸಮುದಾಯ ಸೇವಾ ಸಂಸ್ಥೆಗೆ ₹ 56.19 ಲಕ್ಷ, ಬೆಳಗಾವಿಯ ಶಕ್ತಿ ಏಡ್ಸ್‌ ತಡೆ ಮಹಿಳಾ ಸಂಘಕ್ಕೆ ₹ 51.37 ಲಕ್ಷ, ವಿಜಯಪುರ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಕೆಲಸ ಮಾಡುವ ಏಡ್ಸ್‌ ಜಾಗೃತಿ ಮಹಿಳಾ ಸಂಘಕ್ಕೆ ₹ 45.68 ಲಕ್ಷ ಮೊತ್ತದ ‘ಗುತ್ತಿಗೆ’ ನೀಡಲಾಗಿದೆ. ಈ ಮೂರು ಸಂಸ್ಥೆಗಳು ಅತೀ ಹೆಚ್ಚು ಅನುದಾನ ಪಡೆಯುತ್ತವೆ. ಒಟ್ಟು ಹೈ ರಿಸ್ಕ್‌ ಗುಂಪುಗಳಲ್ಲಿರುವ ಸಂಖ್ಯೆಯನ್ನು ಆಧರಿಸಿ ಎನ್‌ಜಿಒ ಮತ್ತು ಸಿಬಿಓಗಳಿಗೆ ಅನುದಾನ ನಿಗದಿಪಡಿಸಲಾಗುತ್ತದೆ.

ರಾಜ್ಯದಲ್ಲಿ ಸದ್ಯ ನೋಂದಾಯಿತ 70,101 ಎಫ್‍ಎಸ್‌ಡಬ್ಲ್ಯು (ಮಹಿಳಾ ಲೈಂಗಿಕ ಕಾರ್ಯಕರ್ತರು) 18,244 ಎಂಎಸ್‍ಎಂ (ಪುರುಷರೊಂದಿಗೆ ಲೈಂಗಿಕ ಸಂಬಂಧ ಹೊಂದಿರುವ ಪುರುಷರು), 954 ಐಡಿಯು (ಇಂಜೆಕ್ಷನ್ ಮೂಲಕ ಡ್ರಗ್ ಬಳಸುವವರು), 2,154 ಟಿ.ಜಿ (ಲಿಂಗ ಪರಿವರ್ತಿತರು) ಇದ್ದಾರೆ. ನೋಂದಾಯಿತ ಸಮುದಾಯಕ್ಕೆ ಪೀರ್ ವರ್ಕರ್‌ಗಳ ಮೂಲಕ, ‘ಟಾರ್ಗೆ ಟೆಡ್ ಇಂಟರ್ವೆನ್ಶನ್ ಫಾರ್ ಹೈರಿಸ್ಕ್ ಪೀಪಲ್’ ಎಂಬ ಯೋಜನೆಯಡಿ ನೇರವಾಗಿ ಕಾಂಡೋಮ್‌ಗಳನ್ನು ಹಂಚಲಾಗುತ್ತದೆ. ಅಲ್ಲದೆ, ಎಚ್‍ಐವಿ ಸೋಂಕು ತಗಲುವ ಸಮುದಾಯವೆಂದು ಗುರುತಿಸಿದ 80,000 ವಲಸಿಗರು, 1,42,333 ಟ್ರಕ್ ಚಾಲಕರಿಗೂ ಕಾಂಡೋಮ್ ವಿತರಿಸಲಾಗುತ್ತದೆ. ಆದರೆ, ವಲಸಿಗರು ಮತ್ತು ಟ್ರಕ್ ಚಾಲಕರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ನೀಡಲಾಗುತ್ತದೆ.

ಪೀರ್ ವರ್ಕರ್‌ಗಳಿಗೆ ಕೆಸಾಪ್ಸ್ (ನ್ಯಾಕೊ ಹಣ) ತಿಂಗಳಿಗೆ ₹ 3,000 ಗೌರವಧನ ಮತ್ತು ಪ್ರಯಾಣ ವೆಚ್ಚವಾಗಿ ₹ 450 ನೀಡುತ್ತದೆ. 40 ಸಮುದಾಯ ಆಧಾರಿತ ಸಂಘಟನೆಗಳು (ಸಿಬಿಓ), 16 ಎನ್‌ಜಿಒಗಳ ಅಡಿಯಲ್ಲಿ ಈ ಪೀರ್ ವರ್ಕರ್‌ಗಳು ಕೆಲಸ ಮಾಡುತ್ತಾರೆ. ಎಫ್‍ಎಸ್‌ಡಬ್ಲ್ಯುಗಳಿಗೆ 877, ಎಂಎಸ್‍ಎಂಗಳಿಗೆ 228, ಐಡಿಯುಗಳಿಗೆ 16, ಟಿಜಿಗಳಿಗೆ 36 ಪೀರ್ ವರ್ಕರ್‌ಗಳು ಸದ್ಯ ಕೆಲಸ ಮಾಡುತ್ತಿದ್ದಾರೆ.

‘ಹೆಸರು ನೋಂದಣಿ ಮಾಡಿಕೊಂಡ ಲೈಂಗಿಕ ಕಾರ್ಯಕರ್ತೆಯರ ಮೂಲಕ ಮಾತ್ರ ಕಾಂಡೋಮ್ ಹಂಚಲಾಗುತ್ತಿದೆ. ನೋಂದಣಿ ಮಾಡಿಕೊಳ್ಳಲು 18 ವರ್ಷ ತುಂಬಿರಬೇಕು. ಎನ್‌ಜಿಒ, ಸಿಬಿಒಗಳು ಪೀರ್ ವರ್ಕರ್ ಮೂಲಕ ಕಾಂಡೋಮ್ ಹಂಚಿದರೂ, ಜಾಲದಲ್ಲಿ 18 ವರ್ಷಕ್ಕಿಂತ ಕೆಳಗಿನವರು ಇದ್ದಾರೆಯೇ ಎಂದು ಕಣ್ಣಿಡಲಾಗುತ್ತದೆ. ಅಪ್ರಾಪ್ತೆಯರು, ಅಂದರೆ 18 ವರ್ಷಕ್ಕಿಂತ ಕೆಳಗಿನವರನ್ನು ಕಾಂಡೋಮ್ ಹಂಚಲು ಬಳಕೆ ಮಾಡಿದರೆ ಅಂಥ ಎನ್‌ಜಿಒ ಅಥವಾ ಸಿಬಿಒ ಅನ್ನು ಕಪ್ಪುಪಟ್ಟಿಗೆ ಸೇರಿಸುವುದು ಖಚಿತ’ ಎಂದೂ ಕೆಸಾಪ್ಸ್ ಅಧಿಕಾರಿಗಳು ಹೇಳುತ್ತಾರೆ. ಆದರೆ, ಲೈಂಗಿಕ ಕಾರ್ಯಕರ್ತೆಯರ ಸ್ಥಿತಿಗತಿ ಅಧ್ಯಯನ ವರದಿಯಲ್ಲಿಯೇ ಕಾಂಡೋಮ್ ಹಂಚಿಕೆ ಜಾಲದಲ್ಲಿ ಅಪ್ರಾಪ್ತರಿರುವುದು ದಾಖಲಾಗಿದೆ. ಆದರೂ, ಈವರೆಗೆ ಅಂತಹ ಪ್ರಕರಣ ಕುರಿತು ತನಿಖೆಯಾದ, ಕಪ್ಪುಪಟ್ಟಿಗೆ ಸೇರಿಸಿದ ದಾಖಲೆ ಇಲ್ಲ!

ಪೀರ್ ವರ್ಕರ್‌ಗಳಿಗೆ ತಿಂಗಳಿಗೆ ಎರಡು ಬಾರಿ ಕಾಂಡೋಮ್ ವಿತರಿಸಲಾಗುತ್ತದೆ. ವಾರಕ್ಕೊಮ್ಮೆ ಬೇಡಿಕೆ ಮತ್ತು ಪೂರೈಕೆ ಪರಿಶೀಲಿಸಿ, ದಂಧೆ ನಿರತರಿಗೆ ಮತ್ತಷ್ಟು ತಲುಪಿಸಬೇಕು. ಪ್ರತಿವರ್ಷ ಶೇ 25ರಷ್ಟು ಕಾಂಡೋಮ್ ‘ವಿತರಣೆ ಹೆಚ್ಚಿಸುವ ಗುರಿ’ಯನ್ನು ಲೈಂಗಿಕ ಕಾರ್ಯಕರ್ತರಿಗೆ ನೀಡಲಾಗುತ್ತದೆ. ವೃತ್ತಿಯಲ್ಲಿ ತೊಡಗಿರು ವವರ ಮೂಲಕ ಪೀರ್ ವರ್ಕರ್‌ಗಳು ಈ ಗುರಿ ತಲುಪಬೇಕಿದೆ. ಆದರೆ, ಗುರಿ ತಲುಪುವ ಕಡೆಗಿನ ನಡೆಯಲ್ಲಿ ಅಪ್ರಾಪ್ತೆಯರನ್ನು, ಅಮಾಯಕರನ್ನು ಈ ಜಾಲಕ್ಕೆ ಸೆಳೆಯುತ್ತಿರುವ ಆರೋಪಗಳಿವೆ.

ಇದನ್ನೂ ಓದಿ... ಒಳನೋಟ | ಕೆಸಾಪ್ಸ್‌ ಕ್ರಮಕ್ಕೆ ಬಾಲಕಿಯರು ‘ಬಲಿ’

‘ಗುರಿ ಹೆಚ್ಚಿಸಿದಂತೆ ಹೆಚ್ಚೆಚ್ಚು ಹೆಣ್ಣುಮಕ್ಕಳು ವೇಶ್ಯಾವೃತ್ತಿಗೆ ಬೀಳಬೇಕು, ಹೆಚ್ಚು ಗಿರಾಕಿಗಳು ದಂಧೆಯಲ್ಲಿ ಪಾಲ್ಗೊಳ್ಳಬೇಕು ಎಂದಲ್ಲವೇ? ಕೇವಲ ಕಾಂಡೋಮ್ ಜಾಲದ ಮೂಲಕ ತಮ್ಮ ಹೊಟ್ಟೆ ತುಂಬಿಸಿಕೊಳ್ಳಲು ನೆಟ್‌ವರ್ಕ್ ರೂಪಿಸಿಕೊಂಡಿರುವ ‌ಬಂಡವಾಳಶಾಹಿ ವ್ಯವಸ್ಥೆಯು ಅಸಹಾಯಕ ಹೆಣ್ಣುಮಕ್ಕಳ ಬದುಕನ್ನು ನರಕಕ್ಕೆ ದೂಡುತ್ತಿರುವುದು ನೀಚತನದ ಪರಮಾವಧಿ’ ಎನ್ನುತ್ತಾರೆ ಈ ದಂಧೆಯ ಒಳ ಹೊರಗನ್ನು ಹತ್ತಿರದಿಂದ ಕಂಡಿರುವ ಸಾಮಾಜಿಕ ಕಾರ್ಯಕರ್ತರು.

ಪೀರ್ ವರ್ಕರ್‌ಗಳು ತಳಮಟ್ಟದಲ್ಲಿ ಕೆಲಸ ಮಾಡುವವರು. ಅವರು ಹೈ ರಿಸ್ಕ್ ಗುಂಪುಗಳನ್ನು ಗುರುತಿಸುತ್ತಾರೆ. ಅವ ರನ್ನು ನೋಂದಾಯಿಸಿ ಕೊಂಡು ಅವರ ಆರೋಗ್ಯ ತಪಾಸಣೆ, ಯೋಗಕ್ಷೇಮದ ಮೇಲೆ ನಿಗಾವಹಿಸಬೇಕು. ಸಿಬಿಒಗಳು ಕಾಂಡೋಮ್ ಸಂಗ್ರಹಕ್ಕೆ, ಹಂಚಿಕೆಯ ಜಾಲವನ್ನು ನಿರ್ವಹಿಸಲು, ಕಚೇರಿಯನ್ನು ಮಾಡಬೇಕು. ಸಿಬ್ಬಂದಿ ನೇಮಿಸಿಕೊಳ್ಳಬೇಕು. ಕಂಪ್ಯೂಟರ್ ಮೂಲಕ ಲೆಕ್ಕಪತ್ರ, ಪತ್ರ ವ್ಯವಹಾರ ಮಾಡಬೇಕು. ಇವೆಲ್ಲವನ್ನೂ ಮಾಡುವುದು ಕೆಸಾಪ್ಸ್‌ಗಾಗಿ. ಇದಕ್ಕಾಗಿ ಲಕ್ಷಾಂತರ ರೂಪಾಯಿಗಳ ಬಂಡವಾಳವನ್ನು ಸಿಬಿಒಗಳು ಹೂಡಬೇಕು.

ಆದರೆ, ಮೈ ಮಾರಿ ಕಾಂಡೋಮ್‌ ವಿತರಿಸುವ ಈ ಲೈಂಗಿಕ ವೃತ್ತಿನಿರತರಿಗೆ ತಮ್ಮ ಈ ಎಲ್ಲ ಕೆಲಸಕ್ಕೆ ಪ್ರತಿಫಲವಾಗಿ ದಕ್ಕಬೇಕಾದ ಮೂರು ವರ್ಷಗಳ (2014ರಿಂದ 2017) ಮಾಸಿಕ ಮೊತ್ತ ಇನ್ನೂ ಸಿಕ್ಕಿಲ್ಲ. ಆ ಮೊತ್ತ ಸುಮಾರು ₹ 10 ಕೋಟಿ ಬಾಕಿ ಇದೆ ಎಂದು ಒಪ್ಪುತ್ತಾರೆ ಕೆಸಾಪ್ಸ್ ಅಧಿಕಾರಿಗಳು. ಇತ್ತ ಸಿಬಿಒಗಳನ್ನು ನಡೆಸುತ್ತಾ ಈ ಕಾಂಡೋಮ್ ನೆಟ್‌ವರ್ಕ್‌ನ ಸುಳಿಗೆ ಸಿಲುಕಿರುವ ಪ್ರತಿ ಜಿಲ್ಲೆಯ ಲೈಂಗಿಕ ವೃತ್ತಿನಿರತರು 3-4 ವರ್ಷಗಳಿಂದ ಲಕ್ಷಾಂತರ ರೂಪಾಯಿ ಸಾಲ ಮಾಡಿ, ಅದರ ಬಡ್ಡಿ ತೀರಿಸಲಾಗದೆ ಆತ್ಮಹತ್ಯೆ ಹಂತಕ್ಕೆ ಬಂದು ನಿಂತಿದ್ದಾರೆ. ಇದೂ ದುರಂತವಲ್ಲವೇ?

ಎಚ್‍ಐವಿ ವರ್ಸಸ್ ಕಾಂಡೋಮ್
ದಕ್ಷಿಣ ಭಾರತದಲ್ಲಿ ಎಚ್‍ಐವಿ ಸೋಂಕು ಹೆಚ್ಚಿರುವ ನಾಲ್ಕು ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಏಡ್ಸ್ ನಿಯಂತ್ರಣ ಕಾರ್ಯಕ್ರಮದ ಭಾಗವಾಗಿ ರಾಜ್ಯದಲ್ಲಿ 1998ರಿಂದಲೂ ಎಚ್‍ಐವಿ ಕಣ್ಗಾವಲು ಸಮೀಕ್ಷೆ ನಡೆಸಲಾಗುತ್ತಿದೆ. ಏಡ್ಸ್ ನಿಯಂತ್ರಣ ಸೊಸೈಟಿ ಪ್ರಕಾರ ಎಚ್‍ಐವಿ ತಡೆ ಹಾಗೂ ಕಾಂಡೋಮ್ ಬಳಕೆಯ ಜಾಗೃತಿ ಕಾರ್ಯಕ್ರಮಗಳಿಂದಾಗಿ 2004ರಲ್ಲಿ ಒಟ್ಟಾರೆ ಜನಸಂಖ್ಯೆಗೆ ಶೇ 1.5ರಷ್ಟಿದ್ದ ಎಚ್‍ಐವಿ ಸೋಂಕು ಹರಡುವಿಕೆ ಪ್ರಮಾಣ 2016ರ ಹೊತ್ತಿಗೆ ಶೇ.0.38ಕ್ಕೆ ಕುಸಿದಿದೆ ಎಂದು ಕೆಸಾಪ್ಸ್ ಹೇಳಿಕೊಳ್ಳುತ್ತದೆ. ಸಮಗ್ರ ಆಪ್ತಸಮಾಲೋಚನೆ ಮತ್ತು ಪರೀಕ್ಷಾ ಕೇಂದ್ರ (ಐಸಿಟಿಸಿ), ಆಂಟಿ ರಿಟ್ರೋ ವೈರಲ್ ಟ್ರೀಟ್‍ಮೆಂಟ್ (ಎಆರ್‌ಟಿ) ಕೇಂದ್ರ, ಕಮ್ಯುನಿಟಿ ಕೇರ್ ಸೆಂಟರ್, ಲೈಂಗಿಕ ಸಂಪರ್ಕದಿಂದ ಬರುವ ಕಾಯಿಲೆಗಳ ಚಿಕಿತ್ಸಾ ಕೇಂದ್ರಗಳು ಕೂಡಾ ಜಾಗೃತಿ ಮೂಡಿಸುತ್ತ ಉಚಿತವಾಗಿ ಕಾಂಡೋಮ್ ವಿತರಿಸುತ್ತಿವೆ.

ಜಾಗೃತಿ ನಡುವೆಯೂ ಸಾವು
ವ್ಯಕ್ತಿಯೊಬ್ಬನ ಜೀವನವನ್ನು ಸದ್ದಿಲ್ಲದೆ ಮುಗಿಸಿಬಿಡುವ ಎಚ್‍ಐವಿ, ಏಡ್ಸ್‌ ನಿಯಂತ್ರಣದಲ್ಲಿ ಕಾಂಡೋಮ್ ವಹಿಸುವ ಪಾತ್ರದ ಕುರಿತ ಜಾಗೃತಿ ನಿರಂತರವಾಗಿದೆ. ಹೆಚ್ಚುತ್ತಿರುವ ಅರಿವು, ಮಾಧ್ಯಮಗಳ ಸಕ್ರಿಯ ಪಾತ್ರ, ಬದಲಾದ ಜೀವನ ಶೈಲಿ, ಎಲ್ಲಕ್ಕಿಂತ ಹೆಚ್ಚಾಗಿ ವೈಯಕ್ತಿಕ ಆರೋಗ್ಯ ಕಾಳಜಿಯಿಂದಾಗಿ ಒಂದು ಕಾಲಕ್ಕೆ ಕಾಂಡೋಮ್ ಹೆಸರು ಹೇಳಲು ಹಿಂಜರಿಯುತ್ತಿದ್ದ ಜನ, ಈಗ ಸಂಕೋಚ ಬಿಟ್ಟು ಅದರ ಬಳಕೆಗೆ ಮುಂದಾಗಿದ್ದಾರೆ. ಹೀಗಾಗಿ, ಕಾಂಡೋಮ್ ಮಾರುಕಟ್ಟೆ ವಿಸ್ತಾರವಾಗುತ್ತಾ ಸಾಗಿದೆ. ಆದರೂ, ಸೋಂಕು ತಗುಲಿಸಿಕೊಂಡವರ ಚಿಕಿತ್ಸೆಗೆ ರಾಜ್ಯದಲ್ಲಿ ಒಟ್ಟು 64 ಐಆರ್‌ಟಿ ಕೇಂದ್ರಗಳು, 314 ಎಆರ್‌ಟಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. 3.41 ಲಕ್ಷ ಎಚ್‍ಐವಿ ಸೋಂಕಿತರನ್ನು ಈ ಕೇಂದ್ರಗಳಲ್ಲಿ ದಾಖಲು ಮಾಡಿ ಈವರೆಗೂ 2.72 ಲಕ್ಷ ಮಂದಿಗೆ ಚಿಕಿತ್ಸೆ ನೀಡಲಾಗಿದೆ. ಸದ್ಯ, 1.69 ಲಕ್ಷ ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆ ಪಡೆಯುತ್ತಿದ್ದವರಲ್ಲಿ 74,331 ಜನರು ಸಾವಿಗೀಡಾಗಿದ್ದಾರೆ ಎಂಬುದೂ ಅಚ್ಚರಿ.

ಪುನರ್ವಸತಿ ಎಂಬ ಗಗನಕನಸು
ರಾಜ್ಯ ಸರ್ಕಾರ ನೇಮಿಸಿದ್ದ ಸಮಿತಿ ಸಲ್ಲಿಸಿರುವ ‘ಲೈಂಗಿಕ ಕಾರ್ಯಕರ್ತೆಯರ ಸ್ಥಿತಿಗತಿ ಅಧ್ಯಯನ ವರದಿ-2017’ ಕತ್ತಲ ಜಗತ್ತಿನ ಕ್ರೌರ್ಯದ ಸಾವಿರಾರು ಮುಖಗಳನ್ನು ಅನಾವರಣಗೊಳಿಸುತ್ತದೆ. ದಂಧೆಯಲ್ಲಿರುವವರಲ್ಲಿ ಶೇ 72ರಷ್ಟು ಮಂದಿ, ಹೊರಬರಲು ಸಿದ್ಧರಿದ್ದು, ಪುನರ್ವಸತಿ ಬಯಸಿದ್ದಾರೆ ಎಂದೂ ವರದಿಯಲ್ಲಿದೆ. ವಾರ್ಷಿಕ ₹ 733 ಕೋಟಿಯನ್ನು ಲೈಂಗಿಕ ಕಾರ್ಯಕರ್ತೆಯರ ಪುನರ್ವಸತ ಮೀಸಲಿಡಬೇಕೆಂದು ವರದಿಯಲ್ಲಿ ಒತ್ತಾಯಿಸಲಾಗಿದೆ. ಆದರೆ, ಮೂರು ಸರ್ಕಾರ ಬದಲಾಗಿ, ಅಷ್ಟೇ ಸಂಖ್ಯೆಯ ಬಜೆಟ್ ಮಂಡನೆಯಾದರೂ ಈ ಸಮುದಾಯದ ಅಭಿವೃದ್ಧಿಗೆ ನಯಾಪೈಸೆ ಪ್ರತ್ಯೇಕವಾಗಿ ತೆಗೆದಿಟ್ಟಿಲ್ಲ.

ಕಾಂಡೋಮ್‌ ಹಂಚಿಕೆ ಜಾಲದ ದುರಂತಗಳು 
* ಹೆಚ್ಚೆಚ್ಚು ಹೆಣ್ಣು ಮಕ್ಕಳನ್ನು ಕರೆತಂದರೆ ಲಾಭವೆಂಬ ದೃಷ್ಟಿಯಿಂದ ಯಾದಗಿರಿ, ರಾಯಚೂರು, ಕೊಪ್ಪಳ ಮುಂತಾದ ಹಿಂದುಳಿದ ಜಿಲ್ಲೆಗಳ ಕೆಲವು ದಲಿತ ಕೇರಿಗಳ ಹೆಣ್ಣುಮಕ್ಕಳನ್ನು ದಂಧೆಗೆ ಕರೆ ತರಲಾಗಿದೆ. ಆ ಕೇರಿಗಳಲ್ಲಿರುವ ಬಹುತೇಕ ಮನೆಗಳಲ್ಲಿ ಎಚ್‍ಐವಿ ಸೋಂಕಿತರಿದ್ದಾರೆಂದು ಅಧ್ಯಯನದ ವೇಳೆ ಅಲ್ಲಿನ ಹೆಣ್ಣುಮಕ್ಕಳು ಹೇಳಿಕೊಂಡಿದ್ದಾರೆ.

* ಹಾಸನದ ಸಿಬಿಒ ಸಂಸ್ಥೆಗೆ ಮೂರು ವರ್ಷಗಳಿಂದ ಕೆಸಾಪ್ಸ್ ನೀಡಬೇಕಿರುವ ಬಾಕಿ ಸುಮಾರು ₹ 8 ಲಕ್ಷದಷ್ಟಿದ್ದು, ಈ ಕುರಿತು ಸ್ವತಃ ಜಿಲ್ಲಾಧಿಕಾರಿಗಳು ಪತ್ರ ಬರೆದು ತಿಂಗಳಾದರೂ, ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರದ ಜಿಲ್ಲಾ ಘಟಕದ ಮಧ್ಯಸ್ಥಿಕೆದಾರರು ವಿಚಾರಿಸಿದರೂ ಕೆಸಾಪ್ಸ್ ಮರು ಉತ್ತರ ನೀಡಿಲ್ಲ.

* ಕಾಂಡೋಮ್ ಹಂಚಿಕೆಯ ಜಾಲದಲ್ಲಿದ್ದು, ಎಚ್‍ಐವಿ ಸೋಂಕಿಗೆ ಸಿಲುಕಿ ನೂರಾರು ಲೈಂಗಿಕ ವೃತ್ತಿನಿರತರು ಸಾವಿಗೀಡಾಗಿದ್ದಾರೆ. ಎಚ್‍ಐವಿ ಸೋಂಕಿತರಾಗಿದ್ದೂ ಸೋಂಕು ಹರಡುವ ಸಾಧ್ಯತೆ ಹೆಚ್ಚಿರುವ ‘ಅಪಾಯದ ಗುಂಪು’ ಎಂದೇ ಗುರುತಿಸಲಾಗಿರುವ ಲೈಂಗಿಕ ವೃತ್ತಿನಿರತರು 8,000 ಮಂದಿ ಇದ್ದಾರೆ. ಅವರನ್ನು ಕೂಡ ಕೆಸಾಪ್ಸ್, ಕಾಂಡೋಮ್ ಹಂಚಿಕೆಯ ಜಾಲದಲ್ಲಿ ಸೇರಿಸಿಕೊಂಡಿದೆ. ಅಂಗವಿಕಲರಾಗಿದ್ದೂ ದಂಧೆ ನಡೆಸಿ ಬದುಕುತ್ತಿರುವ 1,800ಕ್ಕೂ ಹೆಚ್ಚಿನ ಲೈಂಗಿಕ ಜೀತದಲ್ಲಿರುವುದು ದುರದೃಷ್ಟಕರ.

ಸರ್ಕಾರ ಏನು ಮಾಡಬೇಕು? 
* ಕಾಂಡೋಮ್ ಹಂಚಿಕೆ ಜಾಲದಿಂದ ಲೈಂಗಿಕ ವೃತ್ತಿನಿರತರನ್ನು ಬಿಡುಗಡೆಗೊಳಿಸಿ, ಪುನರ್ವಸತಿ ಯೋಜನೆ ರೂಪಿಸಬೇಕು

* ಕಾಂಡೋಮ್‌ ಹಂಚಿಕೆಗೆ ವೈಜ್ಞಾನಿಕ ವಿಧಾನ ಅಳವಡಿಸಿಕೊಳ್ಳಬೇಕು.

* ಲೈಂಗಿಕ ವೃತ್ತಿನಿರತರು, ತೃತೀಯ ಲಿಂಗಿಗಳ ತಾಲ್ಲೂಕುವಾರು ಸಮೀಕ್ಷೆ ನಡೆಸಿ ಅರ್ಹ ಸಂತ್ರಸ್ತರ ಪಟ್ಟಿ ತಯಾರಿಸಿ, ಪುನರ್ವಸತಿ ಯೋಜನೆ ಜಾರಿ ಮಾಡಬೇಕು

* ಏಡ್ಸ್‌ ನಿಯಂತ್ರಣ ಹೆಸರಿನಲ್ಲಿ ಕೆಸಾಪ್ಸ್‌ಗೆ ಬಿಡುಗಡೆಯಾಗುವ ಅನುದಾನ– ವೆಚ್ಚದ ಬಗ್ಗೆ ಸಮಗ್ರ ತನಿಖೆ ನಡೆಯಬೇಕು

* ಕಾಂಡೋಮ್ ಹಂಚಿಕೆ ಜಾಲದಡಿ ವಂಚನೆಗೆ ಒಳಗಾದ ಹೆಣ್ಣುಮಕ್ಕಳಿಗೆ ದೊಡ್ಡ ಮೊತ್ತದ ಪರಿಹಾರ ನೀಡಬೇಕು

* ನಿವೃತ್ತ ನ್ಯಾಯಮೂರ್ತಿ ನೇತೃತ್ವದ ಸಮಿತಿಯಿಂದ ಕೆಸಾಪ್ಸ್ ಸಂಸ್ಥೆಯ ಚಟುವಟಿಕೆ ಹಾಗೂ ಮಾನವ ಉಲ್ಲಂಘನೆ ಆರೋಪಗಳ ತನಿಖೆಯಾಗಬೇಕು. ಅಸಹಾಯಕರಿಗೆ ನ್ಯಾಯ ದೊರಕುವಂತಾಗಬೇಕು

* ಬದಲಾದ ಸನ್ನಿವೇಶದಲ್ಲಿ, ಏಡ್ಸ್ ನಿಯಂತ್ರಣಕ್ಕೆ ಮಾನವ ಹಕ್ಕುಗಳ ಉಲ್ಲಂಘನೆ ಆಗದಂಥ ಸೂಕ್ಷ್ಮ, ಸುಧಾರಿತ ವ್ಯವಸ್ಥೆಯನ್ನು ಕಂಡುಕೊಳ್ಳಬೇಕು

***

ಪುನರ್ವಸತಿ ಕಲ್ಪಿಸಲಿ
ಸರ್ಕಾರ ಮಾನವೀಯ ಅಂತಃಕರಣ ದಿಂದ ಯೋಚಿಸುವುದೇ ಆದರೆ 20 ವರ್ಷಗಳಿಂದ ಈ ಜಾಲದಲ್ಲಿ ಸಿಲುಕಿ, ಹೊರಬರಲಾಗದೆ ನರಳುತ್ತಿರುವ, ನಿರಂತರವಾಗಿ ಹೊಸದಾಗಿ ಜಾಲದಲ್ಲಿ ಬೀಳುತ್ತಿರುವ, ಅಪ್ರಾಪ್ತ ಹೆಣ್ಣುಮಕ್ಕಳನ್ನು ರಕ್ಷಿಸಲು, ಹೆಣ್ಣುಮಕ್ಕಳನ್ನು ಒಳಗೊಂಡು ಕಾಂಡೋಮ್ ಹಂಚುವ ಜಾಲವನ್ನು ಮೊದಲು ನಿಲ್ಲಿಸಬೇಕು. ಅವರೆಲ್ಲರಿಗೂ ಸಮರ್ಪಕ ಮತ್ತು ಸಶಕ್ತ ಪುನರ್ವಸತಿ ಕಲ್ಪಿಸಬೇಕು.
–ರೂಪ ಹಾಸನ, ಸದಸ್ಯೆ, ಲೈಂಗಿಕ ಕಾರ್ಯಕರ್ತೆಯರ ಸ್ಥಿತಿಗತಿ ಅಧ್ಯಯನ ಸಮಿತಿ

**

ಮಾರುಕಟ್ಟೆ ತಂತ್ರ
‘ನಿನ್ನ ದೇಹ ನಿನ್ನ ಹಕ್ಕು’ ಎಂಬ ವೈಚಾರಿಕತೆಯ ಉದಾತ್ತತೆಯು ತಮ್ಮ ಉತ್ಪನ್ನವನ್ನು ಮಾರಾಟ ಮಾಡಲು ಕಾಂಡೋಮ್ ಕಂಪನಿಗಳು ನಿರ್ಮಿಸಿ ಕೊಂಡ ಮಾರುಕಟ್ಟೆ ತಂತ್ರ. ಕೊನೆಗೂ ನಮ್ಮ ಅಸಹಾಯಕ ಮಹಿಳೆಯರಿಗೆ, ಮುಗ್ಧ ಮಕ್ಕಳಿಗೆ ಸಿಗುವುದು ಎಂಜಲುಗಂಜಿಯೇ.
–ಡಾ. ಭಾರತಿ ಬಿಜಾಪೂರ, ವಿಮೋಚನಾ ಸಂಸ್ಥೆ, ಅಥಣಿ

**

ಅವೈಜ್ಞಾನಿಕ ವಿಧಾನ
ಕಾಂಡೋಮ್‌ ಅಗತ್ಯ ಅನ್ನಿಸಿದರೂ ಅದನ್ನು ಹಂಚುವ ವಿಧಾನ ಅವೈಜ್ಞಾನಿಕ. ಕೋಟ್ಯಂತರ ಮೊತ್ತ ವ್ಯಯಿಸಿ ಬಹುರಾಷ್ಟ್ರೀಯ ಕಂಪನಿಗಳಿಂದ ಖರೀದಿಸುವ ಈ ಸಾಧನವನ್ನು ತಳಮಟ್ಟಕ್ಕೆ ತಲುಪಿಸಲು ಅನುಸರಿಸುವ ಮಾರ್ಗ ತಾರ್ಕಿಕವಾಗಿಲ್ಲ. ಅಷ್ಟಕ್ಕೂ ವೇಶ್ಯಾವಾಟಿಕೆ ಜಾಲದಲ್ಲಿ ಸಿಲುಕಿದ ಅಪ್ರಾಪ್ತ ಹೆಣ್ಣು ಮಕ್ಕಳು, ಅತ್ಯಾಚಾರಕ್ಕೆ ಒಳಗಾಗುವುದು ಪೋಕ್ಸೊ ಕಾಯ್ದೆಯ ಸ್ಪಷ್ಟ ಉಲ್ಲಂಘನೆ.
–ಕೆ.ವಿ. ಸ್ಟ್ಯಾನ್ಲಿ, ಒಡನಾಡಿ ಸಂಸ್ಥೆ, ಮೈಸೂರು

**

ಸರ್ಕಾರದ ಕರ್ತವ್ಯ
ಸುರಕ್ಷಿತ ಲೈಂಗಿಕತೆಗೆ ಕಾಂಡೋಮ್‌ ಅತ್ಯುತ್ತಮ ಸಾಧನ.ಇತ್ತೀಚಿನ ದಿನಗಳಲ್ಲಿ ವಿವಿಧ ಕಂಪನಿಗಳ ಉತ್ತಮ ಗುಣಮಟ್ಟದ ಕಾಂಡೋಮ್‌ಗಳು ಮಾರುಕಟ್ಟೆಗೆ ಬಂದಿವೆ. ಅವುಗಳನ್ನು ಸಾರ್ವಜನಿಕವಾಗಿ ಮತ್ತು ಸುಲಭವಾಗಿ ಸಿಗುವಂತೆ ಮಾಡುವುದು ಸರ್ಕಾರದ ಕರ್ತವ್ಯವೂ ಹೌದು.
–ಕೆ.ವಿ.ಆರ್. ಟ್ಯಾಗೋರ್, ನಿವೃತ್ತ ಐಪಿಎಸ್‌ ಅಧಿಕಾರಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು