ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ | ರಿಯಲ್‌ ಎಸ್ಟೇಟ್‌ ಕುತಂತ್ರ ನಿವೇಶನದಾರರು ಅತಂತ್ರ

Last Updated 4 ಡಿಸೆಂಬರ್ 2021, 19:31 IST
ಅಕ್ಷರ ಗಾತ್ರ

ಬೆಂಗಳೂರು: ‘ನಗರಾಭಿವೃದ್ಧಿ ಪ್ರಾಧಿಕಾರಗಳು ಅಭಿವೃದ್ಧಿಪಡಿಸುವ ಬಡಾವಣೆಗಳಲ್ಲಿ ನಿವೇಶನ ಖರೀದಿಸಿದರೆ ತೊಡಕುಗಳು ಕಡಿಮೆ’ ಎಂಬುದು ಜನರ ನಂಬಿಕೆ. ಆದರೆ, ವಾಸ್ತವ ಬೇರೆಯೇ ಇದೆ. ಜನಸ್ನೇಹಿ ಆಗಬೇಕಿದ್ದ ನಗರಾಭಿವೃದ್ಧಿ ಪ್ರಾಧಿಕಾರಗಳು ರಿಯಲ್‌ ಎಸ್ಟೇಟ್‌ ಮಾಫಿಯಾ ಮತ್ತು ರಾಜಕಾರಣಿಗಳ ಜೊತೆ ಸೇರಿ ನಡೆಸುತ್ತಿರುವ ಅಕ್ರಮದ ಕೂಪಗಳಾಗಿವೆ. ಇಂತಹ ಬಡಾವಣೆಗಳಲ್ಲಿ ನಿವೇಶನ ಖರೀದಿಗೆ ಮುನ್ನ ಹತ್ತು ಬಾರಿ ಯೋಚಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಬಡಾವಣೆ ನಿರ್ಮಾಣವಾದಾಗ ಆ ಪ್ರದೇಶದ ಜಮೀನಿನ ಬೆಲೆ ಗಗನಕ್ಕೇರುತ್ತದೆ. ಹಾಗಾಗಿ ಬಡಾವಣೆಗೆ ಭೂಸ್ವಾಧೀನ ನಡೆಸಲು ಜಾಗ ಗೊತ್ತುಪಡಿಸುತ್ತಿದ್ದಂತೆಯೇ ರಿಯಲ್‌ ಎಸ್ಟೇಟ್‌ ಮಾಫಿಯಾಗಳು ಅದರ ವಾಸನೆ ಹಿಡಿಯುತ್ತವೆ. ಬಡಾವಣೆಯ ಭೂಸ್ವಾಧೀನಕ್ಕೆ ಪ್ರಾಥಮಿಕ ಅಧಿಸೂಚನೆ ಪ್ರಕಟವಾಗುತ್ತಿದ್ದಂತೆಯೇ ಕಾಣದ ಕೈಗಳ ಆಟ ಶುರುವಾಗುತ್ತದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಬಡಾವಣೆಗಳಲ್ಲಿ ನಡೆದಿರುವ ಅವಾಂತರಗಳತ್ತ ದೃಷ್ಟಿ ಹಾಯಿಸಿದರೂ ಸಾಕು, ಅಧಿಕಾರಿಗಳು ಹಾಗೂ ರಾಜಕಾರಣಿಗಳ ಜೊತೆ ಸೇರಿ ರಿಯಲ್‌ ಎಸ್ಟೇಟ್‌ ಮಾಫಿಯಾಗಳು ನಡೆಸುವ ಕರಾಮತ್ತುಗಳ ವಿಶ್ವರೂಪ ದರ್ಶನವಾಗುತ್ತದೆ. ಡಿನೋಟಿಫಿಕೇಷನ್‌ಗಳು, ರೀಡು ಪ್ರಕ್ರಿಯೆಗಳು, ಧುತ್ತೆಂದು ಸೃಷ್ಟಿಯಾಗುವ ಜಿಪಿಎಗಳೇ ಇಲ್ಲಿ ಅವ್ಯವಹಾರದ ಅಸ್ತ್ರಗಳು.

ಬಿಡಿಎ ‘15 ವರ್ಷಗಳಿಂದ’ ಅಭಿವೃದ್ಧಿಪಡಿಸುತ್ತಿರುವ ಅರ್ಕಾವತಿ ಬಡಾವಣೆಯಂತೂ ಇಂತಹ ಅಕ್ರಮಗಳ ಅಡ್ಡೆ. ಇಲ್ಲಿ ನಿವೇಶನವನ್ನು ಖರೀದಿಸಿವರ ಗಮನಕ್ಕೆ ತರದೇ ಬೇರೊಬ್ಬರ ಹೆಸರಿಗೆ ವರ್ಗಾಯಿಸಿದ ಸಾವಿರಾರು ಪ್ರಕರಣಗಳಿವೆ. ನಿವೇಶನದಾರರಿಂದ 10 ವರ್ಷಗಳಿಗೂ ಅಧಿಕ ಕಾಲ ನಿರ್ವಹಣಾ ಶುಲ್ಕ ಮತ್ತು ಆಸ್ತಿ ತೆರಿಗೆ ಕಟ್ಟಿಸಿಕೊಂಡು ಬಳಿಕ ಮಂಜೂರಾತಿಯನ್ನೇ ರದ್ದುಪಡಿಸಿದ ನಿದರ್ಶನಗಳು ಇಲ್ಲಿವೆ. ನಿವೇಶನದ ಸಂಖ್ಯೆಯನ್ನು ಸದ್ದಿಲ್ಲದೇ ಬದಲಾಯಿಸಿ ಬೇರೊಬ್ಬರಿಗೆ ಹಂಚಿಕೆ ಮಾಡುವಂತಹ ಚಮತ್ಕಾರಗಳನ್ನೂ ಇಲ್ಲಿ ಕಾಣಬಹುದು. ಲಕ್ಷಾಂತರ ರೂಪಾಯಿ ಶುಲ್ಕ ತೆತ್ತ ಸಾವಿರಾರು ನಿವೇಶನದಾರರು ಹತ್ತಾರು ವರ್ಷಗಳ ಬಳಿಕವೂ ನಿವೇಶನವನ್ನೂ ಹೊಂದಲಾಗದೆ, ಮನೆಯನ್ನೂ ಕಟ್ಟಲಾಗದೇ ಹಿಡಿಶಾಪ ಹಾಕುತ್ತಿದ್ದಾರೆ.

‘ಪ್ರಾಥಮಿಕ ಅಧಿಸೂಚನೆಯಲ್ಲಿ ಗುರುತಿಸಲಾದ ಕೆಲವು ಜಮೀನುಗಳನ್ನು ಸಕಾರಣವಿದ್ದರೆ, ಅಂತಿಮ ಅಧಿಸೂಚನೆಯಲ್ಲಿ ಕೈಬಿಡಲು ಅವಕಾಶಗಳಿರುತ್ತದೆ. ರಿಯಲ್‌ ಎಸ್ಟೇಟ್‌ ಮಾಫಿಯಾ, ರಾಜಕಾರಣಿಗಳು ಹಾಗೂ ಅಧಿಕಾರಿಗಳ ಆಟ ಆರಂಭವಾಗುವುದೇ ಈ ಹಂತದಲ್ಲಿ. ಪ್ರಭಾವಿಗಳಿಗೆ ಬೇಕಾದ ಮೌಲ್ಯಯುತ ಜಮೀನು ಬಡಾವಣೆಯ ವ್ಯಾಪ್ತಿಯಿಂದ ಹೊರಗುಳಿಯುವ ಪವಾಡಗಳು ನಡೆಯುತ್ತವೆ. ನಕಲಿ ದಾಖಲೆಗಳನ್ನು ಸೃಷ್ಟಿಸಿ, ರಾತ್ರೋ ರಾತ್ರಿ ನರ್ಸರಿ ನಿರ್ಮಿಸಿ, ತೋಟ ಇದೆ ಎಂದು ತೋರಿಸಿ ಅಂತಿಮ ಅಧಿಸೂಚನೆಯಿಂದ ಜಮೀನು ಕೈಬಿಟ್ಟ ನೂರಾರು ಉದಾಹರಣೆಗಳಿವೆ’ ಎಂದು ಭ್ರಷ್ಟಾಚಾರವನ್ನು ಬಿಚ್ಚಿಡುತ್ತಾರೆ ಅರ್ಕಾವತಿ ಬಡಾವಣೆಯ ನಿವೇಶನದಾರ ಶಿವಪ್ರಕಾಶ್‌.

ಅಂತಿಮ ಅಧಿಸೂಚನೆ ಪ್ರಕಟವಾದ ಬಳಿಕವೂ, ಸರ್ಕಾರದ ಮೇಲೆ ಒತ್ತಡ ತಂದು ನಿರ್ದಿಷ್ಟ ಸರ್ವೆ ನಂಬರ್‌ಗಳನ್ನು ಡಿನೋಟಿಫೈ ಮಾಡಿಸಿ ಜಮೀನು ಕಬಳಿಸುವ ಪ್ರಭಾವಿಗಳ ದೊಡ್ಡ ವರ್ಗವೇ ಇದೆ. ರಿಯಲ್‌ ಎಸ್ಟೇಟ್‌ ಕುಳಗಳು ರೈತರಿಂದ ಅಧಿಕಾರ ಪತ್ರ ಪಡೆದಂತೆ ದಾಖಲೆ ಸೃಷ್ಟಿಸಿ, ಅದನ್ನೇ ಆಧಾರವಾಗಿಟ್ಟು ಜಮೀನನ್ನು ಡಿನೋಟಿಫೈ, ರೀಡು ಮಾಡಿಸಿಕೊಂಡಿದ್ದಾರೆ.

‘ಜೀವಮಾನದ ಗಳಿಕೆಯನ್ನೆಲ್ಲ ಹೂಡಿ ನಿವೇಶನ ಖರೀದಿಸಿದವರು ಬಳಿಕ ಜೀವಿತಾವಧಿಯುದ್ದಕ್ಕೂ ನಿವೇಶನದ ಕಡತಗಳ ಹಿಂದೆ ಅಲೆದಾಡಬೇಕು. ಇಲ್ಲಿ ನಿವೇಶನ ಖರೀದಿಸಿದವರಿಗಾಗಲೀ, ಜಾಗ ಬಿಟ್ಟುಕೊಟ್ಟವರಿಗಾಗಲೀ ನೆಮ್ಮದಿ ಎಂಬುದಿಲ್ಲ. ಉದ್ಧಾರ ಆಗುವುದು ರಾಜಕಾರಣಿಗಳು ಮತ್ತು ಅಧಿಕಾರಿಗಳು ಮಾತ್ರ. ಎಸಿಬಿ ದಾಳಿ ವೇಳೆ ಬಿಡಿಎ ಅಧಿಕಾರಿಗಳ ಮನೆಯಲ್ಲಿ ಸಿಕ್ಕಿರುವ ಕೋಟಿಗಟ್ಟಲೆ ರೂಪಾಯಿಗಳೇ ಇಲ್ಲಿನ ಭ್ರಷ್ಟಾಚಾರದ ಅಗಾಧತೆಗೆ ಕನ್ನಡಿ’ ಎನ್ನುತ್ತಾರೆ ಶಿವಪ್ರಕಾಶ್.

‘ನನಗೆ 2006ರಲ್ಲಿ ಮಂಜೂರಾದ ನಿವೇಶನಕ್ಕೆ ಬಿಡಿಎ 2017ರಲ್ಲಿ ಶುದ್ಧ ಕ್ರಯಪತ್ರವನ್ನೂ ನೀಡಿದೆ. ಆದರೆ, 2020ರಲ್ಲಿ ನನ್ನ ಗಮನಕ್ಕೆ ತಾರದೆಯೇ ನಿವೇಶನದ ಸಂಖ್ಯೆಯನ್ನೇ ಬದಲಿಸಿ ಅದನ್ನು ಬೇರೊಬ್ಬರಿಗೆ ನೋಂದಣಿ ಮಾಡಲಾಗಿದೆ’ ಎಂದು ಗೋವಿಂದ ರೆಡ್ಡಿ ಅಳಲು ತೋಡಿಕೊಂಡರು.

ಎಲ್ಲ ಸವಾಲುಗಳನ್ನು ಮೆಟ್ಟಿ ನಿವೇಶನದಲ್ಲಿ ಮನೆಯನ್ನು ಕಟ್ಟಿದರೂ ಸಮಸ್ಯೆ ತಪ್ಪಿದ್ದಲ್ಲ. ‘ಕಿರುಕುಳಗಳೆಲ್ಲವನ್ನೂ ಸಹಿಸಿ ಮನೆ ಕಟ್ಟಿದ್ದೇನೆ. ನಿವೇಶನಕ್ಕೆ ಕಚ್ಚಾರಸ್ತೆ ಮಾತ್ರ ಇದೆ. ಶಾಶ್ವತ ನೀರಿನ ಸಂಪರ್ಕ ಕಲ್ಪಿಸದ ಕಾರಣ ಟ್ರ್ಯಾಕ್ಟರ್‌ನಲ್ಲಿ ಮನೆಗೆ ನೀರು ತರಿಸಿಕೊಳ್ಳಬೇಕಿದೆ. ತಾತ್ಕಾಲಿಕ ವಿದ್ಯುತ್‌ ಸಂಪರ್ಕ ಪಡೆದಿದ್ದರಿಂದ ತಿಂಗಳಿಗೆ ₹ 3 ಸಾವಿರದಷ್ಟು ದುಬಾರಿ ಬಿಲ್‌ ಪಾವತಿಸುತ್ತಿದ್ದೇನೆ’ ಎಂದು ಸುಬ್ರಹ್ಮಣ್ಯ ರೆಡ್ಡಿ ವ್ಯಾಕುಲರಾದರು.

‘ಬಡಾವಣೆ: ಸಮಸ್ಯೆ ನೀಗಿಸಲು ಕ್ರಮ’

ಬಿಡಿಎ ಬಡಾವಣೆಗಳಲ್ಲಿನ ಸಮಸ್ಯೆ ನೀಗಿಸಲು ಕ್ರಮಕೈಗೊಂಡಿದ್ದೇವೆ. ಬನಶಂಕರಿ 6ನೇ ಹಂತ ಹಾಗೂ ವಿಶ್ವೇಶ್ವರಯ್ಯ ಬಡಾವಣೆಗಳಿಗೆ ಮೂಲ ಸೌಕರ್ಯ ಕಲ್ಪಿಸಲು ಪ್ರಸ್ತಾವ ಸಿದ್ಧವಾಗಿದೆ. ಅರ್ಕಾವತಿ ಬಡಾವಣೆಯಲ್ಲಿ ನಿರಂತರ ಜಾಗ ಲಭ್ಯವಿಲ್ಲದ ಕಾರಣ ಮೂಲಸೌಕರ್ಯ ಕಲ್ಪಿಸುವುದು ನಮಗೂ ಸವಾಲಾಗಿದೆ. ಆದರೂ ಸಂಪನ್ಮೂಲ ಹೊಂದಿಸಿಹಂತ ಹಂತವಾಗಿ ಸೌಕರ್ಯ ಕಲ್ಪಿಸಿ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ತಿಸುತ್ತಿದ್ದೇವೆ.

–ಎಂ.ಬಿ.ರಾಜೇಶ್‌ ಗೌಡ,ಬಿಡಿಎ ಆಯುಕ್ತ

‘ಐಎಎಸ್‌ ಅಧಿಕಾರಿಗಳಿಗೆ ತ್ವರಿತ ಹಂಚಿಕೆ’

ಗೃಹ ನಿರ್ಮಾಣ ಸೊಸೈಟಿಗಳಿಗೆ ಸಗಟು ನಿವೇಶನ ಹಂಚಿಕೆ ಮಾಡುವುದಕ್ಕೆ ಬಿಡಿಎ ಕಾಯ್ದೆಯಲ್ಲಿ ಅವಕಾಶ ಇದೆ. ಇದನ್ನೇ ಬಳಸಿಕೊಂಡು ಐಎಎಸ್‌, ಐ‍ಪಿಎಸ್‌ ಅಧಿಕಾರಿಗಳು ಸದಸ್ಯರಾಗಿರುವ ಸೊಸೈಟಿ ಕೆಲವು ಬಡಾವಣೆಗಳಲ್ಲಿ ನಿವೇಶನ ಪಡೆದಿದೆ. ಸಾಮಾನ್ಯ ನಾಗರಿಕರಿಗೆ ನೀಡುವ ದರಕ್ಕಿಂತ ರಿಯಾಯಿತಿ ದರದಲ್ಲಿ ಈ ಸೊಸೈಟಿ ಸಗಟು ನಿವೇಶನ ಹಂಚಿಕೆಯನ್ನು ಪಡೆಯುತ್ತಲೇ ಬಂದಿದೆ.

‘ಐಎಎಸ್‌ ಅಧಿಕಾರಿಗಳು ಸದಸ್ಯರಾಗಿರುವ ಮೆಟ್ರೊಪಾಲಿಟನ್‌ ಕೋ ಆಪರೇಟಿವ್‌ ಹೌಸಿಂಗ್‌ ಸೊಸೈಟಿಗೆ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ 21 ಎಕರೆ 25 ಗುಂಟೆ ಮಂಜೂರು ಮಾಡಲಾಗಿದೆ. ಕೆಂಪೇಗೌಡ ಬಡಾವಣೆಯಲ್ಲಿ ಮತ್ತೆ 25 ಎಕರೆ ನೀಡುವಂತೆ ಸೊಸೈಟಿಯು ಬೇಡಿಕೆ ಸಲ್ಲಿಸಿದೆ. ಆದರೆ, ಕೆಎಎಸ್‌ ಅಧಿಕಾರಿಗಳಿಗೆ ಈ ಸೌಲಭ್ಯವಿಲ್ಲ’ ಎಂದು ಬಿಡಿಎ ಅಧಿಕಾರಿಯೊಬ್ಬರು ತಿಳಿಸಿದರು.

‘ಗೃಹನಿರ್ಮಾಣ ಸಂಘಗಳಿಗೆ ಸಗಟು ನಿವೇಶನಗಳನ್ನು ಹಂಚಿಕೆ ಮಾಡಬೇಕಾದರೆ, ಈ ಬಗ್ಗೆ ಬಿಡಿಎ ಆಡಳಿತ ಮಂಡಳಿಯಲ್ಲಿ ನಿರ್ಣಯ ಕೈಗೊಂಡು ಸರ್ಕಾರದ ಅನುಮೋದನೆ ಪಡೆಯಬೇಕು. ಆಯಕಟ್ಟಿನ ಜಾಗದಲ್ಲಿ ಐಎಎಸ್‌ ಅಧಿಕಾರಿಗಳೇ ಇರುವುದರಿಂದ ಇಂತಹ ಪ್ರಸ್ತಾವಗಳಿಗೆ ತ್ವರಿತವಾಗಿ ಅನುಮೋದನೆ ಸಿಗುತ್ತದೆ’ ಎಂದರು.

‘ಗೃಹ ನಿರ್ಮಾಣ ಸೊಸೈಟಿಯು ನಿವೇಶನ ಹಂಚಿಕೆ ಮಾಡುವಾಗ ಬಡವರ್ಗದವರಿಗೆ ಶೇ 10ರಷ್ಟು ನಿವೇಶನ ಕಾಯ್ದಿರಿಸಬೇಕೆಂಬ ಷರತ್ತ್ತಇದೆ. ಆದರೆ, ಐಎಎಸ್‌ ಅಧಿಕಾರಿಗಳ ಸೊಸೈಟಿಗೆ ಈ ಷರತ್ತೂ ಸಡಿಸಲಾಗಿದೆ. ಅವರ ಸೊಸೈಟಿಗೆ ಹೆಚ್ಚು ಅನುಕೂಲಕರ ಪ್ರದೇಶಗಳಲ್ಲೇ ಜಾಗ ನೀಡಲಾಗುತ್ತದೆ. ಈ ಹಿಂದೆ ಅರ್ಕಾವತಿ ಬಡಾವಣೆಯಲ್ಲೂ ಜಕ್ಕೂರಿನಂತಹ ಹೆಚ್ಚು ಬೇಡಿಕೆಕೆಯ ಪ್ರದೇಶದಲ್ಲಿ ಐಎಎಸ್‌ ಅಧಿಕಾರಿಗಳ ಸೊಸೈಟಿಗೆ ಸಗಟು ನಿವೇಶನ ನೀಡಲಾಗಿತ್ತು. ಅಲ್ಲಿ ಬೃಹತ್‌ ಬಂಗಲೆಗಳೇ ತಲೆ ಎತ್ತಿ ನಿಂತಿವೆ. ಕೆಂಪೇಗೌಡ ಬಡಾವಣೆಯಲ್ಲೂ 100 ಮೀ ಅಗಲದ ಮುಖ್ಯ ರಸ್ತೆ ಪಕ್ಕದಲ್ಲೇ ಸೊಸೈಟಿಗೆ ಜಾಗ ನೀಡಲಾಗಿದೆ’ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT