ಮಂಗಳವಾರ, ಆಗಸ್ಟ್ 16, 2022
29 °C

'ವಿಧವಾ ಮರುವಿವಾಹ’ ಯೋಜನೆ: ಕಬಳಿಕೆಗಾಗಿ ನಾಟಕ...

ಬಸವರಾಜ್‌ ಸಂಪಳ್ಳಿ/ಸುಭಾಸ ಎಸ್‌.ಮಂಗಳೂರ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ : ‘ವಿಧವಾ ಮರುವಿವಾಹ’ ಯೋಜನೆಯಡಿ ನೀಡುವ ಪ್ರೋತ್ಸಾಹಧನ ಕಬಳಿಸಲು ‘ಮರುಮದುವೆ’ ನಾಟಕವಾಡಿರುವ ಎರಡು ಪ್ರಕರಣಗಳು ವಿಜಯಪುರ ಜಿಲ್ಲೆಯಲ್ಲಿ ಬಯಲಿಗೆ ಬಂದಿವೆ.

22 ವರ್ಷ ವಯಸ್ಸಿನ ಮಗ ಹಾಗೂ 20 ಮತ್ತು 17 ವರ್ಷ ವಯಸ್ಸಿನ ಇಬ್ಬರು ಹೆಣ್ಣು ಮಕ್ಕಳಿರುವ ದಂಪತಿ ವಿಧವಾ ಮರುವಿವಾಹ ಆಗಿದ್ದೇವೆ ಎಂದು ಸುಳ್ಳು ದಾಖಲೆಗಳನ್ನು ಸೃಷ್ಟಿಸಿರುವುದು ಮಾತ್ರವಲ್ಲ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರ ಸಹಿಯನ್ನೇ ಫೊರ್ಜರಿ ಮಾಡಿ ಆನ್‌ಲೈನ್‌ ಮೂಲಕ ಇಲಾಖೆಯ ಆಯುಕ್ತರಿಗೆ ನೇರವಾಗಿ ಅರ್ಜಿ ಸಲ್ಲಿಸಿ ಸಿಕ್ಕಿಬಿದ್ದಿದ್ದಾರೆ.

ಇದನ್ನೂ ಓದಿ: ಸಮಾಜ ಕಲ್ಯಾಣ ಇಲಾಖೆಯಲ್ಲಿ ಹಗರಣ: ಮೋಸದ ‘ಮರುಮದುವೆ’, ಪ್ರೋತ್ಸಾಹಧನ ಲೂಟಿ

ಹೌದು, ಸಿಂದಗಿ ತಾಲ್ಲೂಕಿನ ಓತಿಹಾಳ ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ಲಗಶಪ್ಪ ಕನ್ನೊಳ್ಳಿ–ನಾಗಮ್ಮ ಕನ್ನೊಳ್ಳಿ ದಂಪತಿ 2017 ಅಕ್ಟೋಬರ್‌ 1ರಂದು ವಿಧವಾ ಮರುವಿವಾಹ ಆಗಿರುವುದಾಗಿ ಪ್ರೋತ್ಸಾಹಧನಕ್ಕೆ ಅರ್ಜಿ ಸಲ್ಲಿಸಿದ್ದರು. ಇಲಾಖೆ ಅಧಿಕಾರಿಗಳಿಗೆ ಅನುಮಾನ ಬಂದು ಪರಿಶೀಲನೆ ನಡೆಸಿದಾಗ ಈ ಮಹಿಳೆ ವಿಧವೆಯಲ್ಲ ಹಾಗೂ ಈ ದಂಪತಿ ಮರು ಮದುವೆ ಆಗಿಲ್ಲ ಎಂಬುದು ದೃಢವಾದ ಹಿನ್ನೆಲೆಯಲ್ಲಿ ಇವರಿಗೆ ಪ್ರೋತ್ಸಾಹ ಧನ ನೀಡದೇ ಅರ್ಜಿಯನ್ನು ತಿರಸ್ಕರಿಸಿದ್ದಾರೆ.

ಅನಾರೋಗ್ಯದಿಂದ ತೀರಿಹೋದ 60 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರನ್ನು ತನ್ನ ಮೊದಲ ಪತಿ ಎಂದು ಹೇಳಿಕೊಂಡು ಹಾಗೂ ಇದೀಗ ಮರು ಮದುವೆಯಾಗಿರುವುದಾಗಿ ಪ್ರೋತ್ಸಾಹಧನಕ್ಕೆ ಅರ್ಜಿ ಸಲ್ಲಿಸಿದ ಮತ್ತೊಂದು ಪ್ರಕರಣ ಸಿಂದಗಿ ತಾಲ್ಲೂಕಿನ ಬಗಲೂರ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ಜೇವರ್ಗಿ ತಾಲ್ಲೂಕಿನ ಕಾಚಾಪೂರ ಗ್ರಾಮದ ವಿಧವೆ ಸುಜಾತ ಕಾಂತಪ್ಪ ಮಾದರ ಅವರನ್ನು 2019 ಜನವರಿ 18ರಂದು ವಿಧವಾ ಮರುವಿವಾಹ ಆಗಿರುವುದಗಿ ಸಿಂದಗಿ ತಾಲ್ಲೂಕಿನ ಬಗಲೂರ ಗ್ರಾಮದ ದೌಲತ ಮಾದರ ಅವರು ಪ್ರೋತ್ಸಾಹಧನಕ್ಕಾಗಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿದ್ದರು. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಅರ್ಜಿಯ ಪರಿಶೀಲನೆ ನಡೆಸಿದಾಗ ಸುಜಾತ ವಿಧವೆಯಲ್ಲ ಮತ್ತು ಮರುಮದುವೆಯಾಗಿಲ್ಲ ಎಂಬುದು ದೃಢಪಟ್ಟಿದೆ.

ಇದನ್ನೂ ಓದಿ: ದಲಿತ ಸಮೂಹಕ್ಕೆ ದಲಿತರಿಂದ ವಂಚನೆ: ಪ್ರೋತ್ಸಾಹಧನಕ್ಕೆ ಅಮಾಯಕರಿಗೆ ‘ವಿಧವೆ’ ಪಟ್ಟ!

ಸುಜಾತ ಅವರು ಅರ್ಜಿಯಲ್ಲಿ ದಾಖಲಿಸಿದಂತೆ ಅವರ ಮೊದಲ ಪತಿಯಾದ ಈರಪ್ಪ ಅಂಕಲಗಿ ಅವರ ಊರಾದ ಜೇವರ್ಗಿ ತಾಲ್ಲೂಕಿನ ಕಾಚಾಪುರಕ್ಕೆ ಭೇಟಿ ನೀಡಿ ಅಧಿಕಾರಿಗಳು ವಿಚಾರಣೆ ನಡೆಸಿದಾಗ, ಈರಪ್ಪ ಅಂಕಲಗಿ ಅನಾರೋಗ್ಯದಿಂದ ತೀರಿಕೊಂಡಿದ್ದಾರೆ. ಅಲ್ಲದೇ, ಅವರಿಗೆ ಸುಮಾರು 40 ವರ್ಷಗಳ ಹಿಂದೆಯೇ ಅಣಜಗಿ ಗ್ರಾಮದ ಸಿದ್ದಮ್ಮ ಎಂಬುವವರ ಜೊತೆ ಮದುವೆಯಾಗಿದ್ದು, ಅವರು ಈಗಲೂ ಜೀವಂತವಾಗಿರುವುದು ಪತ್ತೆಯಾಗಿದೆ. ಸುಜಾತ ನೈಜವಾಗಿ ವಿಧವೆಯಲ್ಲ, ಅಲ್ಲದೇ, ಈರಪ್ಪ ಅಂಕಲಗಿಗೂ ಸುಜಾತಾಗೂ ಯಾವುದೇ ಸಂಬಂಧವಿಲ್ಲ ಎಂಬುದು ಈರಪ್ಪ ಅವರ ತಾಯಿ ಭಾಗಮ್ಮ ಅವರು ಸ್ಪಷ್ಟಪಡಿಸಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ಪ್ರೋತ್ಸಾಹಧನವನ್ನು ಮಂಜೂರು ಮಾಡಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು