ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಅಡಕತ್ತರಿಯಲ್ಲಿ ಸಿಲುಕಿದ ಅಡಿಕೆ

Last Updated 11 ನವೆಂಬರ್ 2022, 19:32 IST
ಅಕ್ಷರ ಗಾತ್ರ

ಮಲೆನಾಡಿನ ಜನಜೀವನದಲ್ಲಿ ಹಾಸುಹೊಕ್ಕಾಗಿರುವ ಅಡಿಕೆ ಬೆಳೆಯ ವಿಸ್ತರಣಾ ಪ್ರಮಾಣವನ್ನು ಕಂಡವರಿಗೆಲ್ಲಾ ‘ಜನ ಅನ್ನ ತಿನ್ನೋದಕ್ಕಿಂತ ಅಡಿಕೆ ತಿನ್ನೋದೆ ಹೆಚ್ಚಾ?’ ಎಂಬ ಸಂಶಯ ಮೂಡುವುದು ಸಹಜವೇ. ಆದರೆ ಅಡಿಕೆ ಎಂಬ ದುಡ್ಡಿನ ಬೆಳೆ ಇದೀಗ ಸಂಕಷ್ಟದಲ್ಲಿದೆ.

2012ರಲ್ಲಿ ಅಡಿಕೆ ‘ಹಾನಿಕಾರಕ’ ಎಂಬ ಸರ್ಕಾರದ ವರದಿಯಿಂದ ಶುರುವಾದ ಆತಂಕ ಇತ್ತೀಚೆಗೆ ಜಾರ್ಖಂಡ್ ರಾಜ್ಯದ ಸಂಸದರು ‘ಅಡಿಕೆಯನ್ನು ನಿಷೇಧಿಸಿ’ ಎಂಬ ಬೇಡಿಕೆಯನ್ನು ಮಂಡಿಸುತ್ತಿದ್ದಂತೆ ದ್ವಿಗುಣಗೊಂಡಿತು. ಅದರೊಟ್ಟಿಗೆ ಪ್ರತಿವರ್ಷ ಭೂತಾನ್‍ನಿಂದ 17 ಸಾವಿರ ಟನ್ ಅಡಿಕೆ ಆಮದು ಮಾಡಿಕೊಳ್ಳುವ ಸರ್ಕಾರದ ತೀರ್ಮಾನವು ದೇಶೀಯ ಅಡಿಕೆ ಬೆಳೆಗಾರರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಹಾಗೆಯೇ ಮಲೆನಾಡಿನಲ್ಲಿ ಈಗೆಲ್ಲಾ ಡಿಸೆಂಬರ್‌ವರೆಗೂ ಸುರಿಯುವ ಮಳೆಯ ಕಾರಣಕ್ಕೆ ಅಡಿಕೆ ಬೆಳೆಗಾರರಲ್ಲಿ ಹೊಸ ಬಗೆಯ ಆತಂಕ, ಅಭದ್ರತೆ ಮನೆಮಾಡಿದೆ.

ಮಾಮೂಲಿಯಂತೆ ವರ್ಷವೂ ಕಾಡುವ ಕೊಳೆರೋಗ, ಮೂರು ದಶಕಗಳಿಂದ ಕಾಳ್ಗಿಚ್ಚಿನಂತೆ ವ್ಯಾಪಿಸುತ್ತಿರುವ ಹಳದಿರೋಗ ಮತ್ತು ಹಿಂದಿನ ವರ್ಷದಿಂದೀಚೆಗೆ ತೀವ್ರವಾದ ಎಲೆಗುಕ್ಕೆರೋಗ ಉಲ್ಬಣಿಸಿ, ಅಡಿಕೆ ತೋಟವನ್ನು ಉಳಿಸಿಕೊಳ್ಳುವುದು ರೈತರ ಮುಂದಿರುವ ದೊಡ್ಡ ಸವಾಲಾಗಿದೆ. ಸೂಕ್ತ ಸಂಶೋಧನೆ ಕೈಗೊಂಡು ರೋಗ ನಿಯಂತ್ರಣಕ್ಕೆ ಮುಂದಾಗುವಂತೆ ಸರ್ಕಾರವನ್ನು ಒತ್ತಾಯಿಸಲಾಗುತ್ತಿದೆ.

ಮೂಲತಃ ಮಲೇಷ್ಯಾ ಮೂಲದ ಅಡಿಕೆ, ಭಾರತದ ಪ್ರಮುಖ ವಾಣಿಜ್ಯ ಬೆಳೆಯಾಗಿ ಆರ್ಥಿಕತೆಗೆ ಒದಗಿರುವುದು ಸತ್ಯ. ಕರ್ನಾಟಕವೇ ಮುಂಚೂಣಿ ಬೆಳೆಗಾರ ರಾಜ್ಯವಾಗಿರುವ ಕಾರಣಕ್ಕೆ, ಅಡಿಕೆ ಸೋತರೆ ಮೊದಲು ಸೋಲುವ ರಾಜ್ಯ ನಮ್ಮದೇ. ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಹಾಸನ, ಕೊಡಗು ಮತ್ತು ಕರಾವಳಿಯ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಆರ್ಥಿಕ ವಹಿವಾಟಿನಲ್ಲಿ ಅಡಿಕೆಯದೇ ಪ್ರಮುಖ ಪಾತ್ರ.

ಸದ್ಯ ದೇಶದಲ್ಲಿರುವ 18 ಲಕ್ಷ ಎಕರೆ ಅಡಿಕೆ ತೋಟದಲ್ಲಿ 5.5 ಕೋಟಿ ಮೌಲ್ಯದ 12 ಲಕ್ಷ ಟನ್‍ನಷ್ಟು ಅಡಿಕೆ ಉತ್ಪಾದನೆ ಇದೆ. ಸುಮಾರು 5 ಕೋಟಿ ಜನ ಪ್ರತ್ಯಕ್ಷ- ಪರೋಕ್ಷವಾಗಿ ಅಡಿಕೆ ಬೆಳೆಯನ್ನು ಅವಲಂಬಿಸಿದವರು. ಇನ್ನು ನಾಲ್ಕೈದು ವರ್ಷಗಳಲ್ಲಿ ಉತ್ಪಾದನೆ 18 ಲಕ್ಷ ಟನ್ ತಲುಪುವ ಅಂದಾಜಿದೆ. ಹಾಗಾಗಿ ಅಡಿಕೆ ಬೆಳೆಯ ಪ್ರಾಮುಖ್ಯ ಮತ್ತು ಬೆಲೆಯ ಸ್ಥಿರತೆಗಿರುವ ಬಹುದೊಡ್ಡ ಸವಾಲೇ ಅದರ ವಿಸ್ತರಣೆ!

ಮೂರ್ನಾಲ್ಕು ದಶಕಗಳವರೆಗೂ ಸಾಮಾಜಿಕವಾಗಿ ಇಬ್ಭಾಗವಾಗಿದ್ದ ಮಲೆನಾಡಿನ ಹಳ್ಳಿಗಳಲ್ಲಿ ಇದ್ದುದು ಜಮೀನ್ದಾರ ಹಾಗೂ ಕೂಲಿಕಾರ ವರ್ಗಗಳು ಮಾತ್ರ. ಇಲ್ಲಿಯ ಭೂಮಾಲೀಕರು ಹತ್ತಾರು ಎಕರೆ ಫಲವತ್ತಾದ ತೋಟ, ಗದ್ದೆಗಳನ್ನು ವಿಸ್ತರಿಸಿಕೊಳ್ಳುತ್ತಾ ಗುಡ್ಡಗಳಿಗೇ ಬೇಲಿ ಹಾಕಿ ಜೈಸಿಕೊಂಡವರು. ಆದರೆ ಸಣ್ಣ, ಅತಿಸಣ್ಣ ಹಿಡುವಳಿದಾರರಲ್ಲಿ ವರಾಹಿ- ಚಕ್ರಾ, ಶರಾವತಿ, ತುಂಗಾ ಮತ್ತು ಭದ್ರಾ ನದಿ ಯೋಜನೆಗಳ ನಿರಾಶ್ರಿತರು ಹಾಗೂ ಕೆಳಗಿನಿಂದ ಘಟ್ಟ ಹತ್ತಿಬಂದ ಕೂಲಿಕಾರರೇ ಪ್ರಮುಖರು. ಆರಂಭದಲ್ಲಿ ಘಟ್ಟದ ತಪ್ಪಲಲ್ಲಿ ನೈಜ ಅರಣ್ಯ ರಕ್ಷಕರೆಂದರೆ ಇವರೇ, ಸಣ್ಣರೈತರು ಮತ್ತು ಬುಡಕಟ್ಟು ಜನಾಂಗದವರು. ಪರಿಸರದೊಂದಿಗೆ ಇವರದು ಮುದ್ದಾದ ಸಂಬಂಧ. ಹಾಗಿದ್ದೂ ರೈತಾಪಿ ಬದುಕಿನಲ್ಲಿ ಅವರದು ಮುಗಿಯದ ಗೋಳು, ಥರ ಥರದ ಸವಾಲು.

ಕಾಡುಪ್ರಾಣಿಗಳ ಕಾಟದಿಂದ ಪೈರು- ಫಸಲನ್ನು ಕಾಪಾಡಿಕೊಳ್ಳಲು ಹರಸಾಹಸವನ್ನೇ ಮಾಡಬೇಕು. ಭತ್ತ ಬೆಳೆಯಲು ಅಲ್ಲಿ ಎಕರೆಯೊಂದಕ್ಕೆ ತಗಲುವ ವಾರ್ಷಿಕ ವೆಚ್ಚಕ್ಕಿಂತಲೂ ಆದಾಯ ಕಡಿಮೆ! ಅಂತಹ ಹೊತ್ತಿನಲ್ಲಿ ಸ್ವತಂತ್ರ ಬದುಕಿಗೆ ಹಂಬಲಿಸುತ್ತಿದ್ದ ಬಡ ತಲೆಮಾರುಗಳು ಶಿಕ್ಷಣ ಮತ್ತು ಜಾಗತೀಕರಣದ ಪರಿಣಾಮವಾಗಿ ಹೊರಜಗತ್ತಿಗೆ ಒಡ್ಡಿಕೊಂಡು ಆರ್ಥಿಕ ಸ್ವಾವಲಂಬನೆಯೊಂದಿಗೆ ಸಾಮಾಜಿಕ ಸ್ಥಿತ್ಯಂತರಕ್ಕೆ ಕಾರಣವಾದವು. ಉಳ್ಳವರ ಸ್ವತ್ತಾಗಿದ್ದ ದುಡ್ಡಿನಬೆಳೆ ‘ಅಡಿಕೆ’ಯ ಬೆನ್ನುಬಿದ್ದರು ಅವರು. ಬಡತನ ಮತ್ತು ಸಾಲವನ್ನಷ್ಟೇ ದಯಪಾಲಿಸಿದ್ದ ತುಂಡರಸರಿಗೆ ತಣ್ಣಗೆ ಸಡ್ಡು ಹೊಡೆದರು. ಕೂಲಿಕಾರ್ಮಿಕರ ಹಿಡಿಯಷ್ಟಿದ್ದ ಭತ್ತದ ಗದ್ದೆಗಳು ತೋಟವಾಗಿ ಬದಲಾದವು. ನೋಡನೋಡುತ್ತ ಕಾಡುಗುಡ್ಡಗಳೆಲ್ಲ ಸೊಂಟ ಮುರಿದುಕೊಂಡು ಮಕಾಡೆ ಮಲಗಿದವು.

ಅಂತರಗಂಗೆಯನ್ನು ಮೇಲೆತ್ತಲು ಕಂಡಕಂಡಲ್ಲಿ ಕೊಳವೆಬಾವಿಗೆ ಕಿಂಡಿಕೊರೆದಿದ್ದಾಯ್ತು. ವರ್ಷದು ದ್ದಕ್ಕೂ ಕಾಡಂಚಿನಲ್ಲಿದ್ದ ಒತ್ತುವರಿ ಒಡ್ಡುಗಳು ಒತ್ತಿನಕಾಡನ್ನು ಕಬಳಿಸುತ್ತಲಿದ್ದವು. ಕೂಲಿಕಾರರ ಬದುಕು ಕಡುಕಷ್ಟದಿಂದ ಹೊರಬರುತ್ತಿತ್ತಾದರೂ ಸುತ್ತ ಆವರಿಸಿದ್ದ ಕಾಡಿನ ಕವಚವೆಲ್ಲ ಕಳಚಿ ಬೀಳ ಲಾರಂಭಿಸಿತು. ಅಡಿಕೆಯೊಂದೇ ಮಲೆನಾಡಿನಲ್ಲಿ ಮರ್ಯಾದೆಯ ಬೆಳೆ ಎಂಬುದನ್ನು ಅರಿತುಕೊಂಡವರಿಗೆ ತಮ್ಮ ಬಗರ್‌ಹುಕುಂ ತುಂಡು ಜಮೀನನ್ನು ಅಷ್ಟಿಷ್ಟು ಒತ್ತುವರಿ ಮಾಡಿ ಅಡಿಕೆ ಸಸಿಗಳನ್ನು ಊರಲೇಬೇಕಾದ ಅನಿವಾರ್ಯ ಸೃಷ್ಟಿಯಾಗಿದ್ದುದು ಸುಳ್ಳಲ್ಲ!

‘ಅತಿಯಾದರೆ ಅಮೃತವೂ ವಿಷವಾಗುತ್ತದೆ’ ಎಂಬ ಮಾತನ್ನು ಅಡಿಕೆ ಬೆಳೆಯ ಸದ್ಯದ ಸ್ಥಿತಿ ಸಾರಿ ಹೇಳುತ್ತಿದೆ. ಮುಖ್ಯವಾಗಿ ಮಲೆನಾಡಿಗರು ಪರ್ಯಾಯ ಬೆಳೆ ಮತ್ತು ಮಿಶ್ರಬೆಳೆ ಸಾವಯವ ವಿಧಾನಗಳನ್ನು ಅಳವಡಿಸಿಕೊಂಡ ಸಂಯಮದ ಕೃಷಿಮಾರ್ಗವನ್ನು ಕಂಡುಕೊಳ್ಳಬೇಕಿದೆ.

ರೈತರ ಹಿತ ಕಾಯುವುದರೊಟ್ಟಿಗೆ, ಜನಸಂಖ್ಯೆ ಹೆಚ್ಚಿದಂತೆಲ್ಲಾ ಕುಗ್ಗುತ್ತಲೇ ಹೋಗುತ್ತಿರುವ ಅರಣ್ಯವ್ಯಾಪ್ತಿಯಲ್ಲೀಗ ಪರಿಸರ ರಕ್ಷಣೆಯ ಕೂಗು, ‘ಕಸ್ತೂರಿ ರಂಗನ್ ವರದಿ’ ಜಾರಿಗೊಳ್ಳಬೇಕೆಂಬ ವಾದವೂ ಬಲಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT