ಭಾನುವಾರ, ಜೂನ್ 13, 2021
24 °C
ಪಶು-ಪಕ್ಷಿಗಳಿಗೆ ಕೊರೊನಾ ಸೋಂಕು ತಗುಲದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ನೈತಿಕ ಹೊಣೆ

ಸಂಗತ | ದೂರವಿರಿ... ಪ್ರಾಣಿ ಪ್ರಾಣ ಉಳಿಸಿ

ಡಾ. ಮುರಳೀಧರ ಕಿರಣಕೆರೆ Updated:

ಅಕ್ಷರ ಗಾತ್ರ : | |

Prajavani

ಕೋವಿಡ್ ಕುರಿತು ಕಳೆದ ವಾರ ಮಗದೊಂದು ಕಳವಳಕಾರಿ ಸುದ್ದಿ ಹೊರಬಿದ್ದಿದೆ. ಹೈದರಾಬಾದಿನ ನೆಹರೂ ಮೃಗೋದ್ಯಾನದ ಎಂಟು ಏಷ್ಯನ್ ಸಿಂಹಗಳು ಕೋವಿಡ್- 19ರಿಂದ ಬಳಲುತ್ತಿರುವುದು ಸಾಂಕ್ರಾಮಿಕದ ವ್ಯಾಪ್ತಿ ವಿಸ್ತಾರವಾಗುತ್ತಿರುವ ಸುಳಿವು ನೀಡಿದೆ.

ಸುಮಾರು 380 ಎಕರೆ ವಿಸ್ತೀರ್ಣದಲ್ಲಿ ಹರಡಿಕೊಂಡು 1,500ಕ್ಕೂ ಅಧಿಕ ಪ್ರಾಣಿಗಳಿಗೆ ಆಶ್ರಯ ನೀಡಿರುವ ಈ ಜನಾಕರ್ಷಕ ಉದ್ಯಾನದ ಸಿಂಹಗಳಲ್ಲಿ ಕೊರೊನಾ ಸಾಂಕ್ರಾಮಿಕದ ಕೆಲವು ಲಕ್ಷಣಗಳು ಕಾಣಿಸಿಕೊಂಡಿವೆ. ಶೀತ, ಕೆಮ್ಮು, ಮಂದ ಹಸಿವಿನಿಂದ ಬಳಲುತ್ತಿದ್ದ ಈ ಮೃಗಗಳ ಗಂಟಲು, ಮೂಗಿನ ಮಾದರಿಗಳ ಆರ್‌ಟಿ-ಪಿಸಿಆರ್ ಪರೀಕ್ಷೆಯಲ್ಲಿ ನಾಲ್ಕು ಸಿಂಹಗಳ ಜೊತೆಗೆ ನಾಲ್ಕು ಸಿಂಹಿಣಿಯರಿಗೆ ಕೋವಿಡ್ ಪಾಸಿಟಿವ್! ಇದು ನಮ್ಮ ದೇಶದ ಪ್ರಾಣಿಗಳಲ್ಲಿ ಕೋವಿಡ್ ಕಾಣಿಸಿಕೊಂಡ ಮೊದಲ ಅಧಿಕೃತ ಪ್ರಕರಣವಾಗಿ ದಾಖಲಾಗಿ, ವ್ಯಾಧಿಯ ಆಳ, ಅಗಲಗಳನ್ನು ಮತ್ತಷ್ಟು ಅಧ್ಯಯನಕ್ಕೆ ಒಳಪಡಿಸುವ ತುರ್ತನ್ನು ಸಾರಿದೆ.

ಮೃಗಾಲಯದ ಸುಮಾರು 25 ಕೆಲಸಗಾರರು ಸೋಂಕಿತರಾಗಿದ್ದು, ಅವರಿಂದ ಇವುಗಳಿಗೆ ಸೋಂಕು ದಾಟಿರಬಹುದು ಎಂಬ ಶಂಕೆಯ ಜೊತೆಯಲ್ಲೇ ಸೋಂಕಿತ ಪ್ರವಾಸಿಗರಿಂದ ಅಂಟಿರಬಹುದು ಎಂಬ ಅನುಮಾನವೂ ತೇಲಾಡುತ್ತಿದೆ. ಈ ಉದ್ಯಾನ ಇರುವುದು ಜನನಿಬಿಡ ಸ್ಥಳದ ಮಧ್ಯೆ. ಗಾಳಿಯಿಂದಲೂ ವೈರಾಣುಗಳು ಹರಡಿರುವ ಸಾಧ್ಯತೆಯ ಬಗ್ಗೆಯೂ ಗಮನ ಹರಿದಿದೆ. ಮೃಗಾಲಯದ ಬೇರೆ ಪ್ರಾಣಿಗಳಲ್ಲೂ ಸೋಂಕು ಇರಬಹುದೇ ಎಂಬುದು ಸದ್ಯದ ಚರ್ಚೆಯ ವಿಷಯ. ಈ ನಡುವೆ, ಉತ್ತರಪ್ರದೇಶದ ಇಟಾವ ಸಫಾರಿ ಉದ್ಯಾನದ ಸಿಂಹಿಣಿಯೊಂದಕ್ಕೆ ಕೋವಿಡ್ ಪಾಸಿಟಿವ್ ಎಂಬ ಸುದ್ದಿಯು ಆತಂಕವನ್ನು ಇನ್ನಷ್ಟು ಏರಿಸಿದೆ!

ವನ್ಯಜೀವಿಗಳಲ್ಲಿ ವಿಸ್ತೃತ ತಪಾಸಣೆಯೆಂಬುದು ತುಂಬಾ ಕಠಿಣವಷ್ಟೇ ಅಲ್ಲ ಅಪಾಯಕಾರಿ ಕಾರ್ಯ ಕೂಡ. ಅರಿವಳಿಕೆ ನೀಡುವ ಮೂಲಕ ಇಲ್ಲವೇ ಯಾಂತ್ರೀಕೃತ ಪಂಜರವನ್ನು ಪ್ರಾಣಿಯ ಚಲನೆಗೆ ಕಿಂಚಿತ್ತೂ ಅವಕಾಶವಾಗದ ರೀತಿಯಲ್ಲಿ ಕಿರಿದಾಗಿಸಿ ನಿರ್ದಿಷ್ಟ ಮಾದರಿಗಳನ್ನು ಸಂಗ್ರಹಿಸಬೇಕು. ಹಾಗಾಗಿ ವನ್ಯಜೀವಿಗಳ ಮಲದ ಮಾದರಿಗಳನ್ನು ಬಳಸಿಕೊಂಡು ರೋಗಾಣುಗಳನ್ನು ಪತ್ತೆ ಮಾಡುವ ಪ್ರಯತ್ನ ನಡೆಯುತ್ತಿದೆ. ಪಾಸಿಟಿವ್ ಬಂದಿರುವ ಸಿಂಹಗಳ ಆರೋಗ್ಯ ಸುಧಾರಿಸಿದೆ ಎಂಬುದಷ್ಟೇ ಸದ್ಯಕ್ಕೆ ಸಮಾಧಾನ ತರುವ ಸುದ್ದಿ.

ಹೈದರಾಬಾದಿನ ಈ ವಿದ್ಯಮಾನವು ಪ್ರಾಣಿಗಳಲ್ಲಿ ಕೋವಿಡ್ ಕಂಡುಬಂದಿರುವ ಮೊದಲ ಪ್ರಕರಣವೇನಲ್ಲ. ಪ್ರಥಮ ಅಲೆಯಲ್ಲೇ ವಿದೇಶಿ ಪಶುಗಳಲ್ಲಿ ವೈರಾಣುಗಳು ಕಂಡುಬಂದಿದ್ದವು. ಬೆಕ್ಕು, ನಾಯಿ, ಮಿಂಕ್, ಹುಲಿ, ಸಿಂಹ, ಚಿರತೆಗಳಲ್ಲಿ ರೋಗಾಣುಗಳು ಪತ್ತೆಯಾಗಿ ತಲ್ಲಣ ತಂದಿತ್ತು.

ಕೊರೊನಾ ಎಂಬುದು ತುಂಬಾ ಹಿಂದೆಯೇ ಗುರುತಿಸಲಾದ ವೈರಾಣುಗಳ ಒಂದು ದೊಡ್ಡ ಸಮೂಹ. ಇದರಲ್ಲಿ ಆಲ್ಫಾ, ಬೀಟಾ, ಗ್ಯಾಮಾ ಮತ್ತು ಡೆಲ್ಟಾ ಎಂಬ ಉಪ ಪಂಗಡಗಳಿವೆ. ಈಗ ವಿಶ್ವದೆಲ್ಲೆಡೆ ಹಾಹಾಕಾರಕ್ಕೆ ಕಾರಣವಾಗಿರುವ ಕೋವಿಡ್ ಸೇರಿದಂತೆ ಕೆಲ ವರ್ಷಗಳ ಹಿಂದೆ ಜಗತ್ತಿನ ವಿವಿಧೆಡೆ ತೀವ್ರ ಆತಂಕ ತಂದಿತ್ತ ಮೆರ್ಸ್, ಸಾರ್ಸ್ ವೈರಾಣುಗಳು ಬೀಟಾ ಗುಂಪಿನವು. ಸಾಕುಪ್ರಾಣಿಗಳಲ್ಲಿ ಆಲ್ಫಾ ರೋಗಾಣುಗಳ ವಸತಿ ಸಾಮಾನ್ಯವಾಗಿದ್ದು, ಅಪರೂಪಕ್ಕೊಮ್ಮೆ ಸೌಮ್ಯ ಸ್ವರೂಪದ ಕಾಯಿಲೆ ತರುತ್ತವೆ. ಬೀಟಾ ವೈರಾಣುಗಳು ಇವುಗಳಲ್ಲಿ ತೀವ್ರ ಬಾಧೆ ತರುವ ಸಾಧ್ಯತೆಗಳು ತುಂಬಾ ಕಡಿಮೆ. ಆದರೂ ಸೋಂಕಿತ ನರರ ನಿರಂತರ ಸಂಪರ್ಕವಿದ್ದಾಗ ರೋಗಾಣುಗಳು ರೂಪಾಂತರಗೊಂಡು ಪ್ರಾಣಿಗಳಲ್ಲೂ ತೀವ್ರ ಸೋಂಕು ತರುವ ಗುಣಗಳನ್ನು ಮೈಗೂಡಿಸಿಕೊಳ್ಳಬಹುದು ಎಂಬುದು ಸದ್ಯದ ಆತಂಕಕ್ಕೆ ಕಾರಣ.

ಪ್ರಾಣಿಗಳಲ್ಲಿ ಸಾರ್ಸ್ ಕೋವ್-2 ವೈರಾಣುಗಳ ಸೋಂಕಿನ ಕುರಿತು ವ್ಯಾಪಕ ಅಧ್ಯಯನಗಳು ಇನ್ನೂ ಆರಂಭವಾಗಿಲ್ಲ. ಸದ್ಯದ ಚಿಂತೆಯಿರುವುದು ನರಮಾನವರನ್ನು ಕೋವಿಡ್ ಎರಡು, ಮೂರನೇ ಅಲೆಯಿಂದ ರಕ್ಷಿಸುವುದು ಹೇಗೆಂಬುದು. ವಿಜ್ಞಾನಿಗಳು, ಸಂಶೋಧಕರ ಗಮನವೆಲ್ಲಾ ಅತ್ತಲೇ ನೆಟ್ಟಿದೆ. ತುಸು ಮುಂದಿರುವ ರಷ್ಯಾ, ಮುದ್ದುಪ್ರಾಣಿಗಳಿಗೆ ಲಸಿಕೆ ತಯಾರಿಸುವ ಪ್ರಕ್ರಿಯೆ ಪ್ರಾರಂಭಿಸಿದೆ.

ಕಾಡು ಬಾವಲಿಗಳು, ಪ್ಯಾಂಗೋಲಿನ್‌ಗಳಲ್ಲಿ (ಇರುವೆಬಾಕ) ಸಾಮಾನ್ಯ ವಾಸಿಗಳಾದ ಕೊರೊನಾ ಸೂಕ್ಷ್ಮಾಣುಗಳೇ ಮಾನವನಲ್ಲಿ ತೀವ್ರ ಸೋಂಕು ಉಂಟುಮಾಡುವ ಹಂತಕ್ಕೆ ರೂಪಾಂತರಗೊಂಡಿವೆ ಎಂದು ಅಧ್ಯಯನಗಳು ಹೇಳುತ್ತಿವೆ. ಇದೇ ರೀತಿ ಕೋವಿಡ್ ವೈರಾಣುಗಳೂ ನಿರಂತರ ಪರಿವರ್ತನೆ (ಮ್ಯುಟೇಶನ್) ಕಾರಣ, ಸೋಂಕಿತರ ನಿಕಟ ಸಂಪರ್ಕದಲ್ಲಿರುವ ಸಾಕು ಪ್ರಾಣಿಗಳಿಗೂ ಸೋಂಕು ತರುವ ಸಾಧ್ಯತೆಗಳನ್ನು ಸದ್ಯದ ಅನುಭವದ ಮೇಲೆ ಅಲ್ಲಗಳೆಯುವಂತಿಲ್ಲ.

ಕೋವಿಡ್-19 ಅಥವಾ ಇನ್ನಿತರ ಯಾವುದೇ ಕಾಯಿಲೆಯಿಂದ ಬಳಲುತ್ತಿರುವವರು ಪೂರ್ಣವಾಗಿ ಗುಣವಾಗುವವರೆಗೆ ಪ್ರಾಣಿಗಳ ಸಂಪರ್ಕದಿಂದ ದೂರವಿರಬೇಕು. ಹಾಗೆಯೇ ಕೊರೊನಾ ಶಂಕಿತರು, ನಿಗಾದಲ್ಲಿ ಇರುವವರು ಸಾಕುಪ್ರಾಣಿಗಳಿಂದ ಅಂತರ ಕಾಯ್ದುಕೊಳ್ಳುವುದು ಉತ್ತಮ. ತೀರಾ ಅನಿವಾರ್ಯ ಇದ್ದಲ್ಲಿ ಮಾಸ್ಕ್ ಧರಿಸಿ, ಚೆನ್ನಾಗಿ ಕೈತೊಳೆದುಕೊಂಡು ಪ್ರಾಣಿಗಳನ್ನು ಮುಟ್ಟಬೇಕು. ಪಶು-ಪಕ್ಷಿಗಳಿಗೆ ಸೋಂಕು ತಗುಲದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ನೈತಿಕ ಜವಾಬ್ದಾರಿ ಕೂಡ. ಇಲ್ಲದಿದ್ದರೆ ಅಪಾಯಕಾರಿ ವೈರಾಣುಗಳ ಚಕ್ರವ್ಯೂಹದಿಂದ ಹೊರ ಬರುವುದು ಅಸಾಧ್ಯದ ಮಾತೇ ಸರಿ.

ಲೇಖಕ: ಮುಖ್ಯ ಪಶುವೈದ್ಯಾಧಿಕಾರಿ, ಬಾಳೆಬೈಲು, ತೀರ್ಥಹಳ್ಳಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು