‘ಜಗತ್ತಿನಲ್ಲಿ ಕಡ್ಡಿಪೊಟ್ಟಣದಿಂದ ವಿಮಾನದವರೆಗೆ ಎಲ್ಲದಕ್ಕೂ ಇಂತಿಷ್ಟು ದರ ನಿಗದಿಯಾಗಿದೆ. ವಸ್ತುವಿನ ಬೆಲೆ ಯಾಕೆ ಹೆಚ್ಚು ಮತ್ತು ಯಾಕೆ ಕಡಿಮೆ ಎಂಬುದಕ್ಕೆ ಸಮರ್ಥನೆಯೂ ಇದೆ. ಆದರೆ, ಕೃಷಿ ವಿಷಯಕ್ಕೆ ಬಂದರೆ ಎಂಥದ್ದೂ ಇಲ್ಲ. ಬೆಳೆ ಬೆಳೆಯಲು ರೈತರು ಪಟ್ಟ ಪರಿಶ್ರಮಕ್ಕೆ ಬೆಲೆಯಿಲ್ಲ. ಬೆಳೆಯ ಗುಣಮಟ್ಟ ಆಧರಿಸಿ ಸಮರ್ಪಕ ಮೌಲ್ಯವೂ ಇಲ್ಲ. ನಿರ್ದಿಷ್ಟ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಲು ಹಲವು ಬಾರಿ ಮನವಿ ಮಾಡಿದರೂ ಸರ್ಕಾರಗಳಿಂದ ಸ್ಪಂದನ ದೊರೆಯುತ್ತಿಲ್ಲ’.

ಹೀಗೆ ನೋವಿನಿಂದ ಹೇಳಿದವರು ರೈತ ಮುಖಂಡ ಬಡಗಲಪುರ ನಾಗೇಂದ್ರ. ಅವರು ಹೇಳಿದ್ದರಲ್ಲಿ ಅತಿಶಯೋಕ್ತಿ ಇಲ್ಲ. ಯಾಕೆಂದರೆ, ದಶಕಗಳಿಂದಲೂ ‘ಎಲ್ಲಾ ವಸ್ತುಗಳಂತೆಯೇ ನಾವು ಬೆಳೆದ ಬೆಳೆಗಳಿಗೂ ವೈಜ್ಞಾನಿಕ ಬೆಲೆ ನಿಗದಿಪಡಿಸಿ. ನಮ್ಮ ಶ್ರಮ ಗುರುತಿಸಿ. ನಮಗೂ ನೆಮ್ಮದಿಯಿಂದ ಬದುಕಲು ಅವಕಾಶ ನೀಡಿ’ ಎಂಬುದಷ್ಟೇ ರೈತರ ಬೇಡಿಕೆ. ‘ನಮ್ಮೊಂದಿಗೆ ಮಳೆಯಷ್ಟೇ ಅಲ್ಲ, ಸರ್ಕಾರವೂ ಚೆಲ್ಲಾಟ ಆಡುತ್ತದೆ’ ಎಂಬ ನೋವು ಅವರದ್ದು.

ಕಬ್ಬಿಗೆ ಸೂಕ್ತ ದರ ನಿಗದಿಪಡಿಸುವಂತೆ ಕೆಲವು ದಿನಗಳ ಹಿಂದೆ ರಾಜ್ಯದ ವಿವಿಧೆಡೆ ಕಬ್ಬು ಬೆಳೆಗಾರರು ನಡೆಸಿದ ಹೋರಾಟ ಕೊನೆಗಾಣುತ್ತಲೇ, ಮೆಕ್ಕೆಜೋಳ ಬೆಳೆದ ರೈತರು ಅನಿರ್ದಿಷ್ಟಾವಧಿ ಧರಣಿ ಕೈಗೊಂಡರು. ‘ಖರೀದಿ ಕೇಂದ್ರ ತೆರೆಯುವವರೆಗೆ ಕದಲುವುದಿಲ್ಲ’ ಎಂದು ಅಹೋರಾತ್ರಿ ಧರಣಿ ನಡೆಸಿದರು. ನಿರಂತರ ಒತ್ತಡ, ಆಗ್ರಹ, ಪ್ರತಿಭಟನೆ ನಂತರವಷ್ಟೇ ಸರ್ಕಾರವು ರೈತರ ಮೊರೆಗೆ ಕಿವಿಗೊಟ್ಟಿತು. ರೈತರು ಕೇಳಿದ ದರಕ್ಕಿಂತ ಕೊಂಚ ಕಡಿಮೆ ಬೆಲೆಯನ್ನೇ ನಿಗದಿಪಡಿಸಿತು.

ಇದು ಬರೀ ಈ ವರ್ಷದ ಕಥೆಯಲ್ಲ, ಪ್ರತಿ ವರ್ಷದ ವ್ಯಥೆ. ಉತ್ತಮ ಮಳೆ ಅಥವಾ ಒಳ್ಳೆಯ ಆದಾಯದ ನಿರೀಕ್ಷೆಯಲ್ಲಿ ನಿರ್ದಿಷ್ಟವಾದ ಬೆಳೆಯನ್ನು ಹೆಚ್ಚು ಬೆಳೆದಾಗ, ಈ ಸಮಸ್ಯೆ ತಲೆದೋರುತ್ತದೆ. ಬೆಲೆ ಕುಸಿತವಾದಾಗಲಂತೂ ರೈತರ ಪರಿಸ್ಥಿತಿ ಇನ್ನೂ ಶೋಚನೀಯವಾಗುತ್ತದೆ. ಬೆಳೆಯನ್ನು ಅತ್ತ ಮಾರುಕಟ್ಟೆಗೆ ಒಯ್ಯಲು ಆಗದೇ, ಬೆಂಬಲ ಬೆಲೆಗೆ ತಕ್ಕಂತೆ ಮಾರಲೂ ಆಗದೇ, ರೈತರು ಬೆಳೆಯನ್ನು ನೆಲಸಮ ಮಾಡುತ್ತಾರೆ. ಎಲ್ಲವೂ ಮಣ್ಣುಪಾಲು ಆಗಿ, ನಿರಾಸೆಯ ಛಾಯೆ ಆವರಿಸುತ್ತದೆ.

ವರ್ಷಕ್ಕೊಮ್ಮೆ ‘ರೈತರ ದಿನ’ ಆಚರಿಸಲಾಗುತ್ತದೆ. ಬೃಹತ್ ಸಮಾವೇಶಗಳಲ್ಲಿ ಬಹುತೇಕ ಚುನಾಯಿತ ಪ್ರತಿನಿಧಿಗಳು, ‘ಅನ್ನದಾತರಿಗೆ ನನ್ನ ಮೊದಲ ನಮಸ್ಕಾರ’ ಎಂದು ಹೇಳಿಯೇ ಭಾಷಣ ಆರಂಭಿಸುತ್ತಾರೆ. ರಾಜಕೀಯ ಪಕ್ಷಗಳಲ್ಲಿ ರೈತರಿಗೆಂದೇ ಪ್ರತ್ಯೇಕ ಘಟಕಗಳು ಇರುತ್ತವೆ. ‘ಅನ್ನದಾತರು ಇಲ್ಲದೇ ನಾವು ಇಲ್ಲ’ ಎಂಬ ಸಾಲುಗಳನ್ನು ಘೋಷಣೆಗಳ ಮಾದರಿಯಲ್ಲಿ ಪ್ರಚಾರ ಮಾಡಲಾಗು ತ್ತದೆ. ಆದರೆ, ರೈತರ ಬೇಡಿಕೆ ವಿಷಯ ಗಳಿಗೆ ಮಾತ್ರ ಶೂನ್ಯ ಸಂವೇದನೆ.

ರೈತರಲ್ಲಿ ಬಹುತೇಕರು ಮಧ್ಯವಯಸ್ಕರು ಮತ್ತು 60 ವರ್ಷ ವಯಸ್ಸಿನ ಆಸುಪಾಸಿನವರು ಇದ್ದಾರೆ. ಅವರಷ್ಟೇ ಕೃಷಿ ಚಟುವಟಿಕೆಯಲ್ಲಿ ತೊಡಗಿರುವುದು ಕಾಣಸಿಗುತ್ತದೆ. ಗ್ರಾಮಗಳಲ್ಲಿ ಯುವಜನ ಹೆಚ್ಚಾಗಿ ಕಾಣುತ್ತಿಲ್ಲ. ಒಂದು ವೇಳೆ ಅಲ್ಲಲ್ಲಿ ಕಂಡುಬಂದರೂ ಕೃಷಿಯಲ್ಲಿ ಆಸಕ್ತಿ ಇರುವಂತೆ ಕಾಣುವುದಿಲ್ಲ. ‘ಕಷ್ಟಪಟ್ಟು ಬೆಳೆದರೂ ಬೆಳೆಗೆ ಸೂಕ್ತ ಬೆಲೆ ಸಿಗಲ್ಲ. ನೆಮ್ಮದಿಯೂ ಇರಲ್ಲ. ಸಂಕಷ್ಟದಲ್ಲೇ ಇಡೀ ಬದುಕನ್ನು ಸವೆಸುವುದಾದರೆ, ಕೃಷಿಗಿಂತ ನಗರಪ್ರದೇಶದಲ್ಲಿ ಕೆಲಸ ಮಾಡುವುದೇ ಮೇಲು’ ಎಂಬ ಸಿದ್ಧ ಉತ್ತರ ಅವರದು.

ಇತ್ತೀಚಿನ ದಿನಗಳಲ್ಲಿ ಕೃಷಿ ಬದಲು ‘ರಿಯಲ್ ಎಸ್ಟೇಟ್’ ವ್ಯವಹಾರದಲ್ಲಿ ತೊಡಗಲು ಹುರಿದುಂಬಿಸಲಾಗುತ್ತಿದೆ. ವರ್ಷಪೂರ್ತಿ ಗಳಿಸುವುದಕ್ಕಿಂತ ಒಂದೇ ದಿನದಲ್ಲಿ ನಿರೀಕ್ಷೆಗೂ ಮೀರಿ ‘ಹಣ ಗಳಿಸಬಹುದು’ ಎಂದು ರೈತರ ಮನಸ್ಸು ಬದಲಿಸಲಾಗುತ್ತದೆ. ಜಮೀನು ಮಾರಾಟಕ್ಕೆ ವ್ಯವಸ್ಥಿತವಾಗಿ ಒತ್ತಡ ಹೇರಲಾಗುತ್ತದೆ. ಬೆಳೆಗೆ ನಿಶ್ಚಿತ ಬೆಲೆಯೇ ಸಿಗದಿರುವಾಗ, ರೈತರು ಸಹಜವಾಗಿಯೇ ಅಸಹಾಯಕ ಸ್ಥಿತಿಗೆ ತಲಪುತ್ತಾರೆ.

ಈಚೆಗೆ ತೆರೆ ಕಂಡಿರುವ ‘ಜಾಲಿ ಎಲ್ಎಲ್ಬಿ–3’ ಹಿಂದಿ ಚಲನಚಿತ್ರದಲ್ಲಿ ಒಂದು ದೃಶ್ಯವಿದೆ. ಜಮೀನಿಗೆ ಸಂಬಂಧಿಸಿದಂತೆ ಕೋರ್ಟ್ನಲ್ಲಿ ವಾದ ಮಂಡನೆ ವೇಳೆ ನ್ಯಾಯಾಧೀಶರಿಗೆ ವಕೀಲರೊಬ್ಬರು ಮನವಿ ಮಾಡುತ್ತಾರೆ. ‘ಶಾಲಾ–ಕಾಲೇಜಿನ ಪಠ್ಯಪುಸ್ತಕದಲ್ಲಿ ದಯವಿಟ್ಟು ಕೃಷಿ ಕುರಿತು ಪಠ್ಯ ಅಳವಡಿಸಿ. ಇಲ್ಲದಿದ್ದರೆ, ವಿದ್ಯಾರ್ಥಿಗಳಿಗೆ ಆಹಾರ ಹೇಗೆ ಉತ್ಪಾದನೆಯಾಗುತ್ತದೆ ಎಂಬುದು ಗೊತ್ತಾಗುವುದಿಲ್ಲ. ಆನ್ಲೈನ್ನಲ್ಲಿ ಆರ್ಡರ್ ಮಾಡಿದರೆ, ಯಾವ ಆಹಾರ ಬೇಕಾದರೂ ಸಿಗುತ್ತದೆ ಎಂಬ ಭಾವನೆ ಮೂಡುತ್ತದೆ. ದಯವಿಟ್ಟು ಇದರ ಬಗ್ಗೆ ಆಲೋಚಿಸಿ’ ಎಂದು ಕೋರುತ್ತಾರೆ.

ಕೃಷಿ ಕ್ಷೇತ್ರಕ್ಕೆ ನಿರೀಕ್ಷಿತ ಮಾನ್ಯತೆ ಸಿಗದಿದ್ದರೆ, ರೈತರ ಬದುಕು ಹಸನಾಗದಿದ್ದರೆ, ಅಥವಾ ಬೆಳೆಗೆ ಸೂಕ್ತ ವೈಜ್ಞಾನಿಕ ಬೆಲೆ ನಿಗದಿಯಾಗದಿದ್ದರೆ, ಸಿನಿಮಾದ ಸಂಭಾಷಣೆ ಸತ್ಯವಾಗಲೂಬಹುದು. ಇಂದಿನ ಡಿಜಿಟಲ್ ಯುಗದಲ್ಲಿ ಮಣ್ಣಿನ ಮಹತ್ವ ಕಳೆದುಹೋಗಬಹುದು. ಪಿಜ್ಜಾ, ಬರ್ಗರ್, ಸ್ಯಾಂಡ್ವಿಚ್ ಭ್ರಮೆ ವ್ಯಾಪಿಸಿ, ನೈಜ ಮತ್ತು ಬದುಕಿಗೆ ಅಗತ್ಯ ಇರುವ ಆಹಾರದ ಬಗ್ಗೆಯೇ ಗೊಂದಲ ಹೆಚ್ಚಾಗಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.