ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ‘ಭಾರ’ವಾದ ಸೊಪ್ಪು, ತರಕಾರಿ!

Published 10 ನವೆಂಬರ್ 2023, 23:30 IST
Last Updated 10 ನವೆಂಬರ್ 2023, 23:30 IST
ಅಕ್ಷರ ಗಾತ್ರ

‘ನಾವು ದಿನಾ ಕುಡೀತಾ ಇರೋ ನೀರು, ಉಸಿರಾಡ್ತಿರೋ ಗಾಳಿ, ನಡೀತಾ ಇರೋ ನೆಲ ಎಲ್ಲ ವಿಷವೇ! ಮಾರೋ ತರಕಾರಿ, ಸೊಪ್ಪು ಮಾತ್ರ ಸರಿಯಾಗಿರಬೇಕು ಅಂದ್ರೆ ಹೆಂಗೆ? ಕುಡಿಯೋಕೇ ನೀರಿಲ್ಲ, ಅಂಥದ್ರಲ್ಲಿ ತರಕಾರಿ, ಸೊಪ್ಪು ಬೆಳಿಬೇಕಾದ್ರೆ ಒಳ್ಳೆ ನೀರನ್ನ ಹಾಕಿ ಅಂದ್ರೆ ಎಲ್ಲಿಂದ ತರೋದು?’– ಮೊನ್ನೆ ಗಾಡಿಯಲ್ಲಿ ಸೊಪ್ಪು, ತರಕಾರಿ ಮಾರುತ್ತಿದ್ದವರು ಬೇಸರದಿಂದ ಹೇಳಿದ ಮಾತಿದು.

ಆರೋಗ್ಯದ ಕುರಿತು ಜನರಲ್ಲಿ ಬಹಳಷ್ಟು ಜಾಗೃತಿ ಮೂಡಿ, ವಿಟಮಿನ್, ಮಿನರಲ್ ಹೆಚ್ಚಿರುವ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ತರಕಾರಿ, ಸೊಪ್ಪುಗಳ ಬಳಕೆ ಹೆಚ್ಚಾಗಿದೆ. ಆದರೆ ಅರಣ್ಯ ಇಲಾಖೆಯ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆಯ ಇತ್ತೀಚಿನ ವರದಿಯ ಪ್ರಕಾರ, ಬೆಂಗಳೂರಿನಲ್ಲಿ ಸಿಗುವ ಬಹುತೇಕ ಸೊಪ್ಪು, ತರಕಾರಿಗಳಲ್ಲಿ ಮಿತಿಮೀರಿದ ಪ್ರಮಾಣದಲ್ಲಿ ಭಾರಲೋಹಗಳಿದ್ದು, ಇವು ಆರೋಗ್ಯಕ್ಕೆ ಹಾನಿಕಾರಕ.

ಹತ್ತು ಬಗೆಯ ತರಕಾರಿ ಹಾಗೂ ಪಾಲಕ್, ಕೊತ್ತಂಬರಿ ಸೊಪ್ಪಿನ ನಾಲ್ಕುನೂರು ಮಾದರಿಗಳನ್ನು ನಗರದ ವಿವಿಧ ಭಾಗಗಳಲ್ಲಿರುವ ಮಾರುಕಟ್ಟೆ, ಬೀದಿ ಗಾಡಿ, ಸೂಪರ್ ಮಾರುಕಟ್ಟೆ, ಹಾಪ್‍ಕಾಮ್ಸ್‌ ಮತ್ತು ಸಾವಯವ ಮಳಿಗೆಗಳಿಂದ ಸಂಗ್ರಹಿಸಿ ಅಧ್ಯಯನ ನಡೆಸಲಾಗಿದೆ. ಆತಂಕದ ವಿಷಯವೆಂದರೆ, ಆಹಾರ ಮತ್ತು ಕೃಷಿ ಸಂಸ್ಥೆ ನಿಗದಿಗೊಳಿಸಿದ ಮಿತಿಗಿಂತ ಅಧಿಕ ಕ್ಯಾಡ್ಮಿಯಂ, ಸೀಸ, ನಿಕ್ಕಲ್ ಭಾರಲೋಹಗಳು ಇವುಗಳಲ್ಲಿ ಕಂಡುಬಂದಿವೆ. ಈ ಕುರಿತು, ಕೊಳಚೆ ನೀರಿನಲ್ಲಿ ತರಕಾರಿ ಬೆಳೆಯುವುದನ್ನು ತಡೆಯಬೇಕು, ಒಳಚರಂಡಿ ನೀರು ಮತ್ತು ಕೈಗಾರಿಕಾ ತ್ಯಾಜ್ಯ ನೀರು ಬಳಸಬಾರದು ಹಾಗೂ ನಗರದ ಹೊರವಲಯ
ದಲ್ಲಿ ತರಕಾರಿ ಬೆಳೆಯುವುದನ್ನು ನಿರ್ಬಂಧಿಸಬೇಕು ಎಂಬ ಸಲಹೆಯನ್ನು ವರದಿ ನೀಡಿದೆ. ಆದರೆ ಇವು ಪ್ರಾಯೋಗಿಕವೇ ಎಂಬುದರ ಬಗ್ಗೆಯೂ ಯೋಚಿಸಬೇಕು.

ಬೆಂಗಳೂರಿಗೆ ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಕೋಲಾರ ಮತ್ತು ರಾಮನಗರ ಜಿಲ್ಲೆಗಳಿಂದ ತರಕಾರಿಯ ಪೂರೈಕೆಯಾಗುತ್ತದೆ. ಈ ಪ್ರದೇಶಗಳಲ್ಲಿ ನೀರಾವರಿ ಸೌಲಭ್ಯ ಕಡಿಮೆ. ಕೃಷಿಗಾಗಿ ಹೆಚ್ಚಿನವರು ಮಳೆಯನ್ನೇ ಆಧರಿಸಿದ್ದಾರೆ. ಮಳೆ ಬರದೆ ನೀರಿಗೆ ಕೊರತೆಯಾಗಿದೆ. ಹಿಂದಿದ್ದ ನೀರಿನ ಮೂಲಗಳಾದ ಕೆರೆ, ಹಳ್ಳಗಳು ಬತ್ತಿ, ಸಂಸ್ಕರಿಸಿದ ಕೊಳಚೆ ನೀರನ್ನು ಕೆರೆಗಳಲ್ಲಿ ತುಂಬಿಸಲಾಗಿದೆ. ಆದರೆ ಮಹಾನಗರಿ ಬೆಂಗಳೂರಿನಲ್ಲಿ ತರಕಾರಿ, ಸೊಪ್ಪಿಗೆ ಒಳ್ಳೆಯ ಬೇಡಿಕೆಯಿದ್ದು, ಬದುಕು ಸಾಗಿಸಲು ಕೊಳಚೆ ನೀರನ್ನೇ ಬಳಸಿ ತರಕಾರಿಗಳನ್ನು ಬೆಳೆಯುವುದು ರೈತರಿಗೆ ಅನಿವಾರ್ಯವಾಗಿದೆ.

ನೀರಷ್ಟೇ ಅಲ್ಲ, ಗಿಡಗಳಿಗೆ ಬಳಸುವ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳಿಂದಲೂ ಈ ಭಾರಲೋಹಗಳು ಬೆಳೆಯಲ್ಲಿ ಸೇರುತ್ತಿವೆ. ನಮ್ಮ ದಿನನಿತ್ಯದ ಚಟುವಟಿಕೆಗಳು ಮತ್ತು ದಿನಬಳಕೆಯ ವಸ್ತುಗಳಿಂದಲೂ ನಮಗರಿವಿಲ್ಲದೆ ಈ ಭಾರಲೋಹಗಳು ಪರಿಸರದಲ್ಲಿ ಸೇರ್ಪಡೆಯಾಗುತ್ತಿವೆ.
ಎಲೆಕ್ಟ್ರಾನಿಕ್ ವಸ್ತುಗಳು, ಬ್ಯಾಟರಿ, ಚರಂಡಿಗಳ ಕೊಳಚೆ ನೀರು ಎಲ್ಲವೂ ಭಾರಲೋಹಗಳನ್ನು ಹೊಂದಿರುತ್ತವೆ. ಬೃಹದಾಕಾರವಾಗಿ ಬೆಳೆಯುತ್ತಿರುವ ಬೆಂಗಳೂರಿನಲ್ಲಿ ಕಾರ್ಖಾನೆಗಳಿಂದ ಉತ್ಪತ್ತಿಯಾಗುವ ಅಪಾರ ತ್ಯಾಜ್ಯವು ಭಾರಲೋಹದ ಮೂಲ. ಇವುಗಳಿಂದ ಮಣ್ಣಿನಲ್ಲಿ ಸಹಜವಾಗಿ ಇರುವ ಸೂಕ್ಷ್ಮಜೀವಿಗಳ ಸಂಖ್ಯೆ ಕಡಿಮೆಯಾಗುತ್ತದೆ. ಹೀಗಾಗಿ, ಮಣ್ಣಿನ ಫಲವತ್ತತೆ ಹಾಗೂ ತರಕಾರಿಗಳ ಪೌಷ್ಟಿಕಾಂಶ ಎರಡೂ ಕಡಿಮೆಯಾಗುತ್ತವೆ.

ಇದಲ್ಲದೆ, ಈ ತರಕಾರಿ ಹಾಗೂ ಹುಲ್ಲನ್ನು ಸೇವನೆ ಮಾಡುವ ಎಮ್ಮೆ, ಹಸುವಿನ ಹಾಲಿನಲ್ಲಿ ಕೂಡ ಭಾರಲೋಹದ ಅಂಶ ಹೆಚ್ಚಿರಬಹುದು. ಹೀಗಾಗಿ, ಶಕ್ತಿ, ಪುಷ್ಟಿ ನೀಡುವ ಹಾಲು ಕೂಡ ಹಾಲಾಹಲ ಆಗಬಹುದು! ಮಣ್ಣಿನಲ್ಲಿ ಇರುವ ಭಾರಲೋಹಗಳ ಸಾಂದ್ರತೆಯನ್ನು ತಗ್ಗಿಸಲು ಕೃಷಿ ವಿಜ್ಞಾನಿಗಳು ಅನೇಕ ವಿಧಾನಗಳನ್ನು ಸೂಚಿಸಿದ್ದಾರೆ. ನೆಲದಲ್ಲಿ ಆಳವಾಗಿ ಉಳುಮೆ, ಮಣ್ಣಿನ ರಸಸಾರವನ್ನು ಹೆಚ್ಚಿಸುವುದು, ಭೂಮಿಯಲ್ಲಿರುವ ಕಲ್ಮಶಗಳನ್ನು ಹೀರಿಕೊಳ್ಳುವ ಗಿಡಗಳನ್ನು ಬೆಳೆಸುವುದು ಮತ್ತು ಜಮೀನಿನಲ್ಲಿ ಮಣ್ಣು, ನೀರನ್ನು ಆಗಾಗ ಪರೀಕ್ಷೆ ಮಾಡಿಸುವುದು... ಕೃಷಿ ವಿಜ್ಞಾನಿಗಳು ನೀಡಿರುವ ಸಲಹೆಗಳು.

ಇವುಗಳನ್ನು ರೈತರು ಪ್ರಾಯೋಗಿಕವಾಗಿ ಅಳವಡಿಸಲು ಕೃಷಿ ಇಲಾಖೆ ನೆರವು ನೀಡುವುದು ಅಗತ್ಯ. ಭಾರಲೋಹ ಹೊಂದಿರುವ ತರಕಾರಿಗಳನ್ನು ಗುರುತಿಸುವ ಬಗ್ಗೆ ಆಹಾರ ತಜ್ಞರ ಅಭಿಪ್ರಾಯ ಹೀಗಿದೆ: ಭಾರಲೋಹದ ಅಂಶ ಹೆಚ್ಚಿದ್ದಲ್ಲಿ ತರಕಾರಿಗಳ ಮೇಲೆ ಗಾಢ ಬಣ್ಣದ ಚುಕ್ಕಿಗಳು ಅಥವಾ ಅಸಹಜ ಬಣ್ಣಗಳು, ವಿಚಿತ್ರವಾದ ಕೆಟ್ಟ ವಾಸನೆ ಕಂಡುಬರುವ ಸಾಧ್ಯತೆ ಇದೆ. ಅವುಗಳನ್ನು ಉಪಯೋಗಿಸಬಾರದು.
ತರಕಾರಿಗಳನ್ನು ಸಿಪ್ಪೆ ತೆಗೆದು ಉಪಯೋಗಿಸುವುದರಿಂದ ಹೊರಪದರದ ರಾಸಾಯನಿಕಗಳನ್ನು ತೆಗೆಯಲು ಸಾಧ್ಯವಿದೆ. ಸೊಪ್ಪು, ತರಕಾರಿಗಳನ್ನು ಶುದ್ಧ ನೀರಿನಿಂದ ಎರಡು– ಮೂರು ಬಾರಿ ಚೆನ್ನಾಗಿ ತೊಳೆದು, ನಂತರ ಉಪ್ಪು ಸೇರಿಸಿದ ನೀರಿನಲ್ಲಿ ಮುಳುಗಿಸಿ ಮತ್ತೆ ತೊಳೆಯಬೇಕು. ಹಾಗೆಯೇ ವಿಟಮಿನ್ ‘ಸಿ’ ಹೆಚ್ಚಿರುವ ನೆಲ್ಲಿಕಾಯಿ, ನಿಂಬೆಹಣ್ಣು, ಕಿತ್ತಳೆಹಣ್ಣನ್ನು ಬಳಸುವುದರಿಂದ ಈ ಭಾರಲೋಹದ
ಅಡ್ಡಪರಿಣಾಮಗಳನ್ನು ಕಡಿಮೆ ಮಾಡಬಹುದು.

ಹಾಗೆ ನೋಡಿದರೆ, ತರಕಾರಿ, ಸೊಪ್ಪು ಮಾತ್ರವಲ್ಲ, ವಿಷಮಯವಾಗುತ್ತಿರುವ ಇಡೀ ಪರಿಸರವನ್ನು
ಸ್ವಚ್ಛಗೊಳಿಸುವ ನಿರ್ಧಾರ ನಮ್ಮದಾಗದಿದ್ದಲ್ಲಿ ಬದುಕೇ ಭಾರವಾಗಲಿದೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT