ಶನಿವಾರ, ಜೂನ್ 19, 2021
26 °C
ಯುದ್ಧೋನ್ಮಾದದ ಈ ಜಗತ್ತಿನಲ್ಲಿ ಶಾಂತಿಯ ಪಾರಿವಾಳ ಎಲ್ಲಿ?

ಸಂಗತ: ನಾವು ಯುದ್ಧ ಮಾಡಬೇಕಾಗಿದೆ...!

ಸುಚಿತ್ ಕೋಟ್ಯಾನ್ ಕುರ್ಕಾಲು Updated:

ಅಕ್ಷರ ಗಾತ್ರ : | |

Prajavani

ಇಸ್ರೇಲ್‌-ಪ್ಯಾಲೆಸ್ಟೀನ್ ಕದನ ಇತ್ತೀಚೆಗೆ ಮತ್ತೆ ಶುರುವಾಗುತ್ತಿದ್ದಂತೆ, ನಮ್ಮೊಳಗೆಲ್ಲೋ ಹುದುಗಿದ್ದ ಯುದ್ಧೋನ್ಮಾದ ಮತ್ತೆ ಗರಿಗೆದರಿತು. ಇಡೀ ಜಗತ್ತೇ ಕೊರೊನಾ ವಿರುದ್ಧ ಹೋರಾಡುತ್ತಿರುವಾಗ, ನಮ್ಮ ದೇಶ ಬಹುತೇಕ ಈ ಮಹಾಮಾರಿಗೆ ಮಂಡಿಯೂರಿರುವಾಗ, ಈ ಎರಡು ದೇಶಗಳ ಜಗಳ ಮತ್ತೆ ಚರ್ಚೆಗಳಿಗೆ, ವಾದ ವಿವಾದಗಳಿಗೆ ದಾರಿ ಮಾಡಿಕೊಟ್ಟಿತು.

ಭಾರತದ ದೊಡ್ಡ ಸಂಖ್ಯೆಯ ಜನ ‘ಐ ಸ್ಟ್ಯಾಂಡ್ ವಿತ್‌ ಇಸ್ರೇಲ್’ ಎಂದರು. ಸಾಮಾಜಿಕ ಜಾಲತಾಣಗಳ ತುಂಬಾ ನೀಲಿ ಪಟ್ಟಿಯ, ಬಿಳಿ ಬಣ್ಣದ ಇಸ್ರೇಲಿ ಧ್ವಜ ಕಾಣಿಸಿಕೊಂಡಿತು. ಮತ್ತೊಂದೆಡೆ, ನಾವೇನು ಕಮ್ಮಿ ಎಂಬಂತೆ ‘ಪ್ಯಾಲೆಸ್ಟೀನಿಯರ ಜೊತೆ ನಾವು’ ಎಂದವರ ಸಂಖ್ಯೆಯೂ ನಮ್ಮಲ್ಲಿ ಬಹಳಷ್ಟಿದೆ. ಹೇಳಿ ಕೇಳಿ ಇದು ಹ್ಯಾಷ್‌ಟ್ಯಾಗ್ ಹೋರಾಟಗಾರರ ಕಾಲ. ಧಕ್ಕೆ ಬಂದರಿನ ಮೀನುಏಲಮ್ಮಿನಲ್ಲಿ ಅತೀ ಹೆಚ್ಚು ಕೂಗಿದವನಿಗೆ ಮೀನು ಸಿಕ್ಕಂತೆ, ಸಂಜೆ ಯಾವ ಹ್ಯಾಷ್‌ಟ್ಯಾಗಿಗೆ ಎಷ್ಟು ವೋಟಾಯಿತು, ಯಾವುದು ನಂಬರ್ ವನ್ ಟ್ರೆಂಡಿಂಗು ಎನ್ನುವುದರ ಮೇಲೆ ಆಯಾ ಸಿದ್ಧಾಂತಗಳ, ಆಯಾ ವಿಚಾರಗಳ ಕೈ ಮೇಲಾಗುತ್ತದೆ. ಹಿಂದೆ ಬಿದ್ದವರು ನಾಳೆ ಮತ್ತೆ ಎದ್ದು ಬರುತ್ತಾರೆ.

ನಾವೆಲ್ಲಾ ವಿಚಿತ್ರ ಜನ. ‘ಶಾಂತಿಯನ್ನು, ಯುದ್ಧವನ್ನು ಪೂರ್ತಿ ಒಪ್ಪಲಾರದ ಜಗತ್ತು ಇದು’ ಎಂದು ಪಿ.ಲಂಕೇಶ್ ಹೇಳಿದ್ದಾರೆ. ಅಹಿಂಸೆಯನ್ನು ಬೋಧಿಸಿದ ಮಣ್ಣಲ್ಲೇ ಹಿಂಸೆ ವಿಜೃಂಭಿಸುವುದನ್ನು ನಾವು ನೋಡಿದ್ದೇವೆ. ಮಾನವನ ಮೂಲ ವ್ಯಕ್ತಿತ್ವದಲ್ಲೇ ಹಿಂಸೆಯ ಛಾಯೆಯಿದೆ. ಜಗಳವನ್ನು, ಹೊಡೆದಾಟವನ್ನು, ಯುದ್ಧವನ್ನು ಮನುಷ್ಯ ಒಳಗೊಳಗೇ ಆನಂದಿಸುತ್ತಾನೆ. ಎಷ್ಟೋ ಸಲ ಶಾಂತಿಯೆಂಬುದು ಅದರ ಮೇಲೆ ಮುಚ್ಚಿಟ್ಟ ಬೂದಿಯಷ್ಟೇ ಆಗಿರುತ್ತದೆ.

ಇಸ್ರೇಲ್ ಮತ್ತು ಪ್ಯಾಲೆಸ್ಟೀನ್‌ ಕದನಗಳ ಕತೆ ಹೊಸತೇನಲ್ಲ. ಇದೀಗ ಇಸ್ರೇಲ್‌ ಕದನವಿರಾಮ ಘೋಷಿಸಿದ್ದು, ಗಾಜಾ ನಗರದಲ್ಲಿ ಸಾವಿರಾರು ಜನ ವಿಜಯೋತ್ಸವ ಆಚರಿಸಿದ್ದಾರೆ. ಆದರೂ ಭಾರತ-ಪಾಕಿಸ್ತಾನದಂತೆ ಎಂದೂ ಮುಗಿಯದ ಮೆಗಾ ಸೀರಿಯಲ್ ಇದು. ಎರಡೂ ಹಟಮಾರಿ ರಾಷ್ಟ್ರಗಳು. ತಮ್ಮ ದೇಶಾಭಿಮಾನದ ವಿಚಾರದಲ್ಲಿ ರಾಜಿಯಾಗದ ದೇಶಗಳೂ ಹೌದು. ನಾಳೆ ಯುದ್ಧವಾಗಬಹುದು. ಮರುದಿನ ನಾಯಕರೆಲ್ಲಾ ಸೇರಿ ನಿಲ್ಲಿಸಲೂಬಹುದು. ಅದರಂತೆ, ಈ ಎಂದೂ ಮುಗಿಯದ ಕದನದೊಳಗೆ ಗೆಲುವು ಅನ್ನುವುದುಂಟೇ?

ಮತ್ತೆ ಲಂಕೇಶ್ ನೆನಪಾಗುತ್ತಾರೆ. ‘ಇರಾಕ್‌ನಲ್ಲಿ ಯುದ್ಧ ನಡೆಯುವಾಗ, ಇರಾಕ್‌ನ ತಾಯಿಯೊಬ್ಬಳು ಪತ್ರಕರ್ತರಿಗೆ ಹೇಳಿದ್ದು ಮನಕರಗಿಸುತ್ತದೆ; ಬೇಡ... ಯುದ್ಧ ಬೇಡ. ನನ್ನ ಮಗ ಸಾಯುವುದು ಬೇಡ. ಅಮೆರಿಕದ ಮಕ್ಕಳೂ ಸಾಯುವುದು ಬೇಡ... ಯುದ್ಧ ಮಾಡಬೇಡಿ...’ ಈ ತಾಯಿಯ ಒಡಲಿನ ನೋವು ಯಾವನಿಗೆ ಕೇಳಿಸುತ್ತದೆ?’ ಎಂದು ತಮ್ಮ ಒಂದು ಲೇಖನದಲ್ಲಿ ಲಂಕೇಶ್ ಪ್ರಶ್ನಿಸಿದ್ದಾರೆ. ಉತ್ತರಿಸುವುದು ಸುಲಭವಿಲ್ಲ.

ನಾವೆಲ್ಲಾ ಯುದ್ಧವನ್ನು ಆನಂದಿಸುವ ಮನಃಸ್ಥಿತಿಗೆ ಮುಟ್ಟುತ್ತಿದ್ದೇವೆ. ಹರಿವ ನೆತ್ತರು, ನಿಲ್ಲದ ಕಣ್ಣೀರು ಯಾವ ದೇಶದ್ದೇ ಆಗಿರಲಿ, ಯಾವ ಮಣ್ಣಿನದ್ದೇ ಆಗಿರಲಿ; ಅದು ನಮ್ಮ ನಿಮ್ಮಂತೆಯೇ ಹೊತ್ತು ಕೂಳಿಗಾಗಿ ಪರದಾಡುವ ಜನಸಾಮಾನ್ಯನದ್ದೇ ಆಗಿರುತ್ತದೆ ಎನ್ನುವುದನ್ನು ಮರೆಯುತ್ತೇವೆ. ನಮಗೆ ನಮ್ಮ ಸಿದ್ಧಾಂತಗಳೇ ಸಖ್ಯ, ನಮ್ಮ ಧರ್ಮವೇ ಮುಖ್ಯ, ನಾವು ಹೇಳಿದ್ದೇ ಸತ್ಯ.

ಯುದ್ಧವೊಂದು ನಡೆಯುವುದು ಯಾವುದೋ ನಾಯಕರ ಪ್ರತಿಷ್ಠೆಗಾಗಿ, ಯಾವುದೋ ತುಂಡು ನೆಲದ ಹಕ್ಕಿಗಾಗಿ, ಮೂಲಭೂತವಾದಿಗಳ ಹಟಕ್ಕಾಗಿ... ಆದರೆ ಎಷ್ಟೋ ಸಲ ಇದಕ್ಕೆ ಬಲಿಯಾಗುವುದು ಇವೆಲ್ಲದರಿಂದ ಮಾರುದೂರವಿರುವ ಬಡಪಾಯಿಯಷ್ಟೇ.

‘ಸುಡಾನಿ ಫ್ರಮ್ ನೈಜೀರಿಯಾ’ ಎಂಬೊಂದು ಮಲಯಾಳಂ ಸಿನಿಮಾದಲ್ಲಿ ನನ್ನನ್ನು ಬಹುವಾಗಿ ಕಾಡಿದ ದೃಶ್ಯವೊಂದಿದೆ. ನೈಜೀರಿಯಾದ ಹುಡುಗ ಆಟದಲ್ಲಿ ಕಾಲು ಮುರಿದುಕೊಂಡು ಕೇರಳದ ಮುಸ್ಲಿಂ ಗೆಳೆಯನ ಮನೆಯಲ್ಲಿ ವಿಶ್ರಾಂತಿಯಲ್ಲಿರುತ್ತಾನೆ. ಅವನ ಅಜ್ಜಿ ನೈಜೀರಿಯಾದಲ್ಲಿ ತೀರಿಕೊಂಡರೆಂದು ತಿಳಿದು ಹೋಗಲಾರದೆ ಹತಾಶನಾಗುತ್ತಾನೆ. ಆಗ ಕೇರಳದ ಗೆಳೆಯನ ತಾಯಿ, ವ್ಯಕ್ತಿ ಸತ್ತ ಮೂರನೇ ದಿನಕ್ಕೆ ನಡೆಸುವ ಪೂಜೆಯನ್ನು ನೈಜೀರಿಯಾದ ಅಜ್ಜಿಯ ಹೆಸರಲ್ಲಿ ಮಾಡಿಸುತ್ತಾಳೆ. ಎಲ್ಲಿಯ ನೈಜೀರಿಯಾ, ಎಲ್ಲಿಯ ಮಲಪ್ಪುರ? ಕ್ರೈಸ್ತನೊಬ್ಬನ ಅಜ್ಜಿ ತೀರಿಕೊಂಡಾಗ, ಗಡಿ-ಭಾಷೆ-ಧರ್ಮವನ್ನೆಲ್ಲಾ ಮೀರಿ ಮುಸಲ್ಮಾನ ತಾಯಿಯೊಬ್ಬಳು ಮಾಡುವ ಪ್ರಾರ್ಥನೆಯ ಅಂಶವೇ ನಮಗಿಂದು ಬೇಕಿರುವುದು.

ಮಹಾತ್ಮ ಗಾಂಧಿಯೂ ತಮ್ಮ ಆತ್ಮಕಥೆಯಲ್ಲಿ ಅದನ್ನೇ ಹೇಳುತ್ತಾರೆ- ‘ಶತ್ರುಗಳೆನ್ನಿಸಿಕೊಳ್ಳುವವರು ನೀತಿ ನಿಯಮಗಳಿಲ್ಲದವರೆಂದು ಹೇಗೆ ಗೊತ್ತು? ಅವರು ಶತ್ರುಗಳಾದ ಮಾತ್ರಕ್ಕೆ ಅವರು ಮಾಡುತ್ತಿರುವುದು ತಪ್ಪು ಎಂದು ಹೇಳಬಹುದೇ? ದೇವರನ್ನು ಪ್ರಾರ್ಥಿಸುವಾಗ ನಾವು ನ್ಯಾಯವಾದುದನ್ನು ಮಾತ್ರ ಕೇಳಬಹುದು‌’.

ಯುದ್ಧವಿಲ್ಲದ ನಾಡಿನ ಕಲ್ಪನೆ ಯುಟೋಪಿಯನ್ ಥಿಯರಿ (ಆದರ್ಶವಾದ) ಆಗಿರಬಹುದು. ಆದರೆ ಆ ದಿಸೆಯಲ್ಲಿ ಒಂಚೂರಾದರೂ ಪ್ರಯತ್ನಿಸಿ ನೋಡೋಣ.

ಹಾಗೂ ನಾವು ಯುದ್ಧ ಮಾಡೋಣ, ನಮ್ಮನ್ನು ಇಂದಿಗೂ ಜಾತಿ-ಧರ್ಮದ ಹೆಸರಿನಲ್ಲಿ ಆಟವಾಡಿಸುತ್ತಾ ತಮ್ಮ ಸಾಮ್ರಾಜ್ಯ ಕಟ್ಟುತ್ತಿರುವವರವಿರುದ್ಧ. ನಾವು ಯುದ್ಧ ಮಾಡೋಣ, ಮತಾಂಧತೆಯನ್ನು ತುಂಬಿಕೊಂಡು, ಎಂದೋ ಸಿಗುವ ಸ್ವರ್ಗದ ಕಲ್ಪನೆಯಲ್ಲಿ ಭೂಮಿಯನ್ನು ನರಕವಾಗಿಸುವವರ ವಿರುದ್ಧ. ನಾವು ಯುದ್ಧ ಮಾಡೋಣ, ಶಾಂತಿ-ಸಹಬಾಳ್ವೆಯನ್ನು ಕದಡಲೆತ್ನಿಸುವ ಪ್ರತಿಯೊಂದು ವಿಚಾರಧಾರೆಯ ವಿರುದ್ಧ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು