ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಒಬಿಸಿ ಮೀಸಲಾತಿ: ಕೈಜಾರಿ ಹೋದೀತು

ಹಿಂದುಳಿದ ವರ್ಗಗಳ ರಾಜಕೀಯ ಮೀಸಲಾತಿಯನ್ನು ರಾಜ್ಯ ಸರ್ಕಾರ ಇದೀಗ ಬಲವಾಗಿ ಸಮರ್ಥಿಸಿಕೊಳ್ಳದೇ ಇದ್ದರೆ ಈ ಸಮುದಾಯಗಳಿಗೆ ದೊಡ್ಡ ನಷ್ಟ ಆಗಲಿದೆ
Last Updated 23 ಫೆಬ್ರುವರಿ 2022, 19:30 IST
ಅಕ್ಷರ ಗಾತ್ರ

ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಹಿಂದುಳಿದ ವರ್ಗಗಳಿಗೆ (ಒಬಿಸಿ) ಶೇಕಡ 27ರಷ್ಟು ಮೀಸಲಾತಿ ಕಲ್ಪಿಸುವ ಮುನ್ನ, ತ್ರಿಸ್ತರದ ಪರಿಶೀಲನೆ ನಡೆಸಿ ನಿರ್ಣಯಕ್ಕೆ ಬರಬೇಕು ಎಂದು ಸುಪ್ರೀಂ ಕೋರ್ಟ್‌ ಇತ್ತೀಚೆಗೆ ಹೇಳಿದೆ. ಮಹಾರಾಷ್ಟ್ರದಲ್ಲಿನ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿದಂತೆ ರಾಹುಲ್‌ ರಮೇಶ್‌ ವಾಘ್‌ ಮತ್ತು ಮಹಾರಾಷ್ಟ್ರ ಸರ್ಕಾರದ ನಡುವಿನ ಪ್ರಕರಣದಲ್ಲಿ ಮಧ್ಯಂತರ ಆದೇಶವೊಂದನ್ನು ನೀಡಿರುವ ಕೋರ್ಟ್‌, ವಿಕಾಸ್‌ ಕೃಷ್ಣ ರಾವ್‌ ಗಾವಳಿ ಮತ್ತು ಮಹಾರಾಷ್ಟ್ರ ಸರ್ಕಾರದ ನಡುವಿನ ಪ್ರಕರಣದಲ್ಲಿ ತಾನು ನೀಡಿರುವ ತೀರ್ಪು ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೂ ಅನ್ವಯವಾಗುತ್ತದೆ ಎಂದು ಹೇಳಿದೆ.

ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಆಡಳಿತ ವ್ಯವಸ್ಥೆಗಳು ಸುಪ್ರೀಂ ಕೋರ್ಟ್‌ ಆದೇಶದಂತೆ ಮೂರು ಹಂತದ ಪರಿಶೀಲನೆ ಪೂರ್ಣಗೊಳಿಸಿ ಹಿಂದುಳಿದ ವರ್ಗಗಳಿಗೆ ರಾಜಕೀಯ ಮೀಸಲಾತಿಯನ್ನು ಖಾತರಿಗೊಳಿಸುವ ಬದ್ಧತೆಯನ್ನು ತೋರದೇ ಇದ್ದರೆ ಹಿನ್ನಡೆ ಆಗುವ ಸಾಧ್ಯತೆ ಇದೆ.

ಸಂವಿಧಾನದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮಾತ್ರ ರಾಜಕೀಯ ಮೀಸಲಾತಿ ಇತ್ತು. ಸಂವಿಧಾನದ 73 ಮತ್ತು 74ನೇ ತಿದ್ದುಪಡಿಯ ಮೂಲಕ ಹಿಂದುಳಿದ ವರ್ಗಗಳಿಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಮೀಸಲಾತಿ ಕಲ್ಪಿಸುವ ಅಂಶವನ್ನು ಅಡಕಗೊಳಿಸಲಾಯಿತು. ಆ ಬಳಿಕ ಹಿಂದುಳಿದ ವರ್ಗಗಳಿಗೆ ಗ್ರಾಮೀಣ ಸ್ಥಳೀಯ ಸಂಸ್ಥೆಗಳಲ್ಲಿ ಶೇ 27ರಷ್ಟು ಸ್ಥಾನಗಳನ್ನು ಮೀಸಲಿಡುವ ವ್ಯವಸ್ಥೆ ಜಾರಿಗೆ ಬಂದಿತು. ಕ್ರಮೇಣ ಈ ವ್ಯವಸ್ಥೆ ನಗರ ಸ್ಥಳೀಯ ಸಂಸ್ಥೆಗಳಲ್ಲೂ ಜಾರಿಗೊಂಡಿತು. ದೇಶದಲ್ಲೇ ಅತ್ಯಂತ ವ್ಯವಸ್ಥಿತವಾಗಿ ಈ ಪ್ರಕ್ರಿಯೆಯನ್ನು ಜಾರಿಗೊಳಿಸಿದ ಕೀರ್ತಿ ರಾಜ್ಯಕ್ಕಿದೆ. ಇದರ ಪರಿಣಾಮವಾಗಿಯೇ ರಾಜ್ಯ ರಾಜಕಾರಣದಲ್ಲಿ ಹಿಂದುಳಿದ ವರ್ಗಗಳು ಪ್ರಬಲ ಶಕ್ತಿಯಾಗಿ ಬೆಳೆಯಲು ಮತ್ತು ಪ್ರಬಲ ನಾಯಕರು ಮುನ್ನೆಲೆಗೆ ಬರಲು ಅವಕಾಶ ದೊರಕಿತು.

ಸದ್ಯ ರಾಜ್ಯದಲ್ಲಿ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗಳು ನಡೆಯಬೇಕಿದೆ. ಈ ಎಲ್ಲ ಸ್ಥಳೀಯ ಸಂಸ್ಥೆಗಳಲ್ಲಿ ಚುನಾಯಿತ ಸದಸ್ಯರ ಅಧಿಕಾರದ ಅವಧಿ ಪೂರ್ಣಗೊಂಡು ವರ್ಷಕ್ಕಿಂತ ಹೆಚ್ಚು ಸಮಯ ಕಳೆದಿದೆ. ಇನ್ನೇನು ಚುನಾವಣೆ ನಡೆಯಬಹುದು ಎಂಬ ಸನ್ನಿವೇಶದಲ್ಲೇ ಹಿಂದುಳಿದ ವರ್ಗಗಳ ಮೀಸಲಾತಿಗೆ ಸಂಬಂಧಿಸಿದ ಕಗ್ಗಂಟು ಸೃಷ್ಟಿಯಾಗಿದೆ. ಅದನ್ನು ಸುಲಭವಾಗಿ ಪರಿಹರಿಸಬಹುದಾದ ಮಾರ್ಗೋಪಾಯಗಳಿದ್ದರೂ ಸರ್ಕಾರ ಆ ಬಗ್ಗೆ ಗಂಭೀರವಾಗಿ ಯೋಚಿಸುತ್ತಿಲ್ಲ. ಸಾರ್ವಜನಿಕ ವಲಯವೂ ಮೌನಕ್ಕೆ ಶರಣಾಗಿರುವುದು ಸೋಜಿಗದ ಸಂಗತಿ. ಈಗ ಹಿಂದುಳಿದ ವರ್ಗಗಳಿಗೆ ನೀಡಿರುವ ಮೀಸಲಾತಿಯನ್ನು ರಾಜ್ಯ ಸರ್ಕಾರವು ಬಲವಾಗಿ ಸಮರ್ಥಿಸಿಕೊಳ್ಳದೇ ಇದ್ದರೆ ಖಂಡಿತವಾಗಿಯೂ ಈ ಸಮುದಾಯಗಳಿಗೆ ದೊಡ್ಡ ನಷ್ಟ ಆಗಲಿದೆ.

ಸುಪ್ರೀಂ ಕೋರ್ಟ್‌ ಮಧ್ಯಂತರ ಆದೇಶ ಮತ್ತು ನಿರ್ದೇಶನಗಳಿಂದ ಹಿಂದುಳಿದ ವರ್ಗಗಳ ಮೀಸಲಾತಿಗೆ ತಾತ್ಕಾಲಿಕ ಅಡೆತಡೆ ಮಾತ್ರ ಎದುರಾಗಿದೆ. ಆದರೆ, ಈ ಆದೇಶವನ್ನು ಸರಿಯಾಗಿ ಪಾಲಿಸುವುದರಿಂದ ಶಾಶ್ವತವಾದ ಪರಿಹಾರ ಒದಗಿಸುವ ಅವಕಾಶವನ್ನೂ ತೆರೆದಿಟ್ಟಿದೆ. ರಾಜ್ಯದಲ್ಲಂತೂ ಇದಕ್ಕಾಗಿ ಹೆಚ್ಚೇನೂ ಶ್ರಮ ವಹಿಸಬೇಕಿಲ್ಲ. ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ನಡೆಸಿರುವ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ (ಜಾತಿ ಗಣತಿ) ವರದಿಯಲ್ಲಿ ರಾಜ್ಯದ ಎಲ್ಲ ಸಮುದಾಯಗಳ ರಾಜಕೀಯ
ಪ್ರಾತಿನಿಧ್ಯಕ್ಕೆ ಸಂಬಂಧಿಸಿದ ನಿಖರ ಮಾಹಿತಿಗಳಿವೆ. ಈ ವರದಿಯನ್ನೇ ಬಳಸಿಕೊಂಡು ತ್ರಿಸ್ತರದ ಪರಿಶೀಲನೆಯನ್ನು ತ್ವರಿತವಾಗಿ ಪೂರ್ಣಗೊಳಿಸುವ ಜಾಣ್ಮೆ ಮತ್ತು ಬದ್ಧತೆಯನ್ನು ಸರ್ಕಾರ ಪ್ರದರ್ಶಿಸಬೇಕಿದೆ.

ಚುನಾವಣೆ ವಿಳಂಬ ಮಾಡದಂತೆ ಕಟ್ಟಪ್ಪಣೆ ಮಾಡಿರುವ ಸುಪ್ರೀಂ ಕೋರ್ಟ್‌, ತ್ರಿಸ್ತರದ ಪರಿಶೀಲನೆ ಅಸಾಧ್ಯವಾದಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾದ ಸ್ಥಾನಗಳನ್ನು ಸಾಮಾನ್ಯ ಎಂಬುದಾಗಿ ಘೋಷಿಸುವಂತೆ ನಿರ್ದೇಶಿಸಿದೆ. ಆ ರೀತಿ ಆದಲ್ಲಿ ಅದು ಹಿಂದುಳಿದ ವರ್ಗಗಳ ಜನರ ಪಾಲಿಗೆ ಮರಣಶಾಸನವೇ ಆಗುತ್ತದೆ. ಒಮ್ಮೆ ಮೀಸಲಾತಿ ಕೈತಪ್ಪಿದರೆ ಅದನ್ನು ಮರಳಿ ಪಡೆಯುವುದು ಸುಲಭದ ಕೆಲಸವಲ್ಲ.

ವಿಧಾನಸಭೆ ಚುನಾವಣೆಗೆ ಇನ್ನು ಒಂದು ವರ್ಷವಷ್ಟೇ ಬಾಕಿ ಇದೆ. ಈ ಹಂತದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ನಡೆದು, ಆಡಳಿತ ಪಕ್ಷಕ್ಕೆ ಹಿನ್ನಡೆಯಾದಲ್ಲಿ ಅದು ವಿಧಾನಸಭಾ ಚುನಾವಣೆಯ ಮೇಲೂ ಗಾಢವಾದ ಪರಿಣಾಮ ಬೀರಬಹುದು ಎಂಬ ಆತಂಕ ಬಿಜೆಪಿ ನಾಯಕರನ್ನು ಕಾಡುತ್ತಿರುವಂತೆ ಕಾಣಿಸುತ್ತಿದೆ. ಮುಖ್ಯಮಂತ್ರಿ ಮತ್ತು ಅವರ ಸಂಪುಟದ ಸದಸ್ಯರೂ ಇದೇ ಆತಂಕದಲ್ಲಿ
ಇರುವಂತಿದೆ. ಈ ಇಕ್ಕಟ್ಟಿನಿಂದ ಪಾರಾಗಲು ಹಿಂದುಳಿದ ವರ್ಗಗಳ ರಾಜಕೀಯ ಮೀಸಲಾತಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಮಧ್ಯಂತರ ಆದೇಶ ಮತ್ತು ನಿರ್ದೇಶನಗಳನ್ನು ದುರ್ಬಳಕೆ ಮಾಡಿಕೊಳ್ಳುವ ಅಪಾಯ ಕಾಣಿಸುತ್ತಿದೆ.

ಇದೇ ಕಾರಣವನ್ನು ಮುಂದಿಟ್ಟು ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ವಿಳಂಬ ಮಾಡಿದರೆ ಅದು ಹಿಂದುಳಿದ ವರ್ಗಗಳಿಗೆ ಸರ್ಕಾರ ಮಾಡುವ ಘೋರ ಅನ್ಯಾಯ. ಹಿಂದುಳಿದ ವರ್ಗಗಳ ಪಾಲಿಗೆ ನ್ಯಾಯೋಚಿತವಾಗಿ ದಕ್ಕಿರುವ ರಾಜಕೀಯ ಮೀಸಲಾತಿಯನ್ನು ಜೋಪಾನವಾಗಿ ಪೊರೆದು, ಖಾತರಿಪಡಿಸುವ ಕೆಲಸ ವಿಳಂಬವಿಲ್ಲದೇ ಆಗಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT