ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಮುಖ್ಯೋಪಾಧ್ಯಾಯ ಮತ್ತು ವೃತ್ತಿಗೌರವ

ಪ.ರಾಮಕೃಷ್ಣ ಶಾಸ್ತ್ರಿ
Published 8 ನವೆಂಬರ್ 2023, 23:30 IST
Last Updated 8 ನವೆಂಬರ್ 2023, 23:30 IST
ಅಕ್ಷರ ಗಾತ್ರ

ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರು ಎಂದರೆ ಸಾಕು, ಆರಾಮಾಗಿ ಐದಂಕಿಯ ಸಂಬಳ ಪಡೆಯುತ್ತಾರೆ, ಯಾವ ಜವಾಬ್ದಾರಿಯೂ ಇಲ್ಲದೆ ಪಟ್ಟಣಕ್ಕೆ ಸುತ್ತಾಡಿಕೊಂಡು ಇರುತ್ತಾರೆ ಎಂದು ಬಹುತೇಕ ಊರುಗಳ ಜನ ಅವರ ಬಗೆಗೆ ಹಗುರವಾಗಿ ಮಾತನಾಡುತ್ತಾರೆ. ಸೇವಾ ಬಡ್ತಿ ಎನ್ನುವಾಗ, ಯಾವ ಶಿಕ್ಷಕರೂ ಈ ಹುದ್ದೆ ಮತ್ತು ಜವಾಬ್ದಾರಿಯನ್ನು ಬೇಡ ಎಂದು ನಿರಾಕರಿಸುವಂತಿಲ್ಲ. ವೇತನದ ವಿಷಯಕ್ಕೆ ಬಂದರೆ, ಉಳಿದವರಿಗಿಂತ ಸ್ವಲ್ಪ ಹೆಚ್ಚು ಹಣ ಬರುತ್ತದೆ. ಆದರೆ ಹೆಚ್ಚಿನ ಮುಖ್ಯೋಪಾಧ್ಯಾಯರು ತಮಗೆ ಈ ಕೆಲಸದಲ್ಲಿ ಸುಖಕ್ಕಿಂತ ಕಷ್ಟವೇ ಹೆಚ್ಚು ಎನ್ನುತ್ತಾರೆ.

ಶಾಲೆಗಳಲ್ಲಿ ಪೋಷಕರ ಸಭೆ ನಡೆದಾಗಲೆಲ್ಲ ಮುಖ್ಯೋಪಾಧ್ಯಾಯರನ್ನು ಹೆತ್ತವರು ತರಾಟೆಗೆ ತೆಗೆದು
ಕೊಳ್ಳುತ್ತಾರೆ. ಅವರಿಂದ ಯಾವುದೇ ಪ್ರಯೋಜನ ಇಲ್ಲ, ಯಾವಾಗಲೂ ಸುತ್ತಾಡುತ್ತಾ ಇರುತ್ತಾರೆ, ಪಾಠ ಮಾಡುವುದೇ ಇಲ್ಲ ಎಂದೆಲ್ಲ ಹಳಿಯುತ್ತಾರೆ. ಖಾಸಗಿ ಶಾಲೆಯಲ್ಲಾದರೆ ಒಬ್ಬ ಅಟೆಂಡರ್‌ ಇರುತ್ತಾನೆ. ಶಾಲೆಗೆ ಅಗತ್ಯವಿರುವ ಪರಿಕರಗಳನ್ನು ತಂದುಕೊಡುತ್ತಾನೆ. ಸರ್ಕಾರಿ ಶಾಲೆಗಳಲ್ಲಿ ಮುಖ್ಯೋಪಾಧ್ಯಾಯರೇ ಅಟೆಂಡರ್! ಓದುವ ಪುಸ್ತಕಗಳನ್ನು ತರಲು ಶಿಕ್ಷಣಾಧಿಕಾರಿ ಕಚೇರಿಗೆ ಹೋಗಬೇಕಾಗುತ್ತದೆ, ಬಿಸಿಯೂಟದ ತರಕಾರಿ ತರಬೇಕಾಗುತ್ತದೆ, ಕುಸಿಯುವ ಹಂತದಲ್ಲಿರುವ ಶಾಲೆಯ ಕಟ್ಟಡವನ್ನು ದುರಸ್ತಿ ಮಾಡಿಸಿಕೊಡಿ ಎಂದು ಬೇಡಲು ಶಾಸಕರು, ಅಧಿಕಾರಿಗಳ ಬಳಿಗೆ ಕಾಲಿಗೆ ಚಕ್ರ ಕಟ್ಟಿಕೊಂಡು ಅವರು ಸುತ್ತುತ್ತಲೇ ಇರಬೇಕಾಗುತ್ತದೆ.

ಇನ್ನು ಬಿಸಿಯೂಟದ ಆಹಾರ ಪದಾರ್ಥಗಳ ಲೆಕ್ಕಾಚಾರ ಇಡುವುದಂತೂ ಮುಖ್ಯೋಪಾಧ್ಯಾಯರ ಸಹನೆಯ ಶಕ್ತಿಗೆ ಒಂದು ಸವಾಲು. ಅಕ್ಕಿ, ಉಪ್ಪು, ಎಣ್ಣೆ ಎಲ್ಲವೂ ಪ್ರತಿ ವಿದ್ಯಾರ್ಥಿಗೂ ಗ್ರಾಂ ಲೆಕ್ಕದಲ್ಲಿ ಬರುತ್ತದೆ. ಪ್ರತಿದಿನದ ಹಾಜರಾತಿಗೆ ಅನುಗುಣವಾಗಿ ಅದೇ ಲೆಕ್ಕಾಚಾರದಲ್ಲಿ ಎಲ್ಲವನ್ನೂ ಅವರೇ ಅಡುಗೆಯವರಿಗೆ ತೂಕ ಮಾಡಿಕೊಡಬೇಕು. ತಿಂಗಳ ಕೊನೆಗೆ ಖರ್ಚಾಗಿ ಉಳಿದ ಆಹಾರ ಪದಾರ್ಥಗಳು ಬಂದ ದಾಸ್ತಾನಿಗೆ ಹೊಂದಿಕೆಯಾಗಬೇಕು. ತರಕಾರಿ ಖರೀದಿಗೂ ತಲಾವಾರು ಪೈಸೆಗಳ ಲೆಕ್ಕದಲ್ಲಿ ಬರುವ ಹಣ ಕೆಲವೊಮ್ಮೆ ಒಂದು ದಿನದ ತರಕಾರಿ ಖರೀದಿಗೂ ಸಾಲದೇ ಹೋಗುತ್ತದೆ. ಆಗ, ಇದೇ ಮುಖ್ಯೋಪಾಧ್ಯಾಯರು ತಮ್ಮ ಕಿಸೆಯಿಂದ ಭರ್ತಿ ಮಾಡಬೇಕಾದ ಸಂದರ್ಭವೂ ಇರುತ್ತದೆ.

ಬಿಸಿಯೂಟ ಸಿದ್ಧವಾಗುವಾಗ ರುಚಿ ನೋಡಿ ಪರೀಕ್ಷಿಸಲು ಮುಖ್ಯೋಪಾಧ್ಯಾಯರು ತಯಾರಾಗಿ
ಇರಬೇಕು. ಆಹಾರದಲ್ಲಿ ಹಲ್ಲಿ ಬಿದ್ದರೆ, ಪಾತ್ರೆಯ ಕಿಲುಬು ಸೇರಿದರೆ ಅದರ ದುಷ್ಪರಿಣಾಮಗಳನ್ನು
ಅವರೇ ಎದುರಿಸಬೇಕು. ಇನ್ನು, ಮೂವತ್ತು ಮಕ್ಕಳಿಗೆ ಒಬ್ಬರಂತೆ ಶಿಕ್ಷಕರನ್ನು ಸರ್ಕಾರ ನೇಮಿಸುತ್ತದೆ. ಏಳು ತರಗತಿಗಳು ಸೇರಿ ಮೂವತ್ತೇ ಮಕ್ಕಳಿರುವ ಶಾಲೆಗಳೂ ಇವೆ. ಒಂದು ತರಗತಿಗೆ ಒಬ್ಬರಂತೆ ಶಿಕ್ಷಕ
ರಿಲ್ಲದಿದ್ದರೂ ಇರುವ ಶಿಕ್ಷಕರ ಜೊತೆಗೇ ಎಲ್ಲ ಪಾಠಗಳನ್ನೂ ಹಂಚಿಕೊಂಡು ಕಲಿಸಲು ಮುಖ್ಯೋಪಾಧ್ಯಾಯರು ಮುಂದಾಗಬೇಕಾಗುತ್ತದೆ. ಇಂತಹ ಸಮಯದಲ್ಲಿ ಮಕ್ಕಳು ಅನುತ್ತೀರ್ಣರಾದರೆ, ಸರ್ಕಾರಿ ಶಾಲೆಯಲ್ಲಿ ಸರಿಯಾಗಿ ಪಾಠ ಮಾಡುವುದಿಲ್ಲ ಎಂದು ಊರವರು ದೂರುತ್ತಾರೆ.

ಒಂದು ಸರ್ಕಾರಿ ಶಾಲೆಯಲ್ಲಿ ಇತ್ತೀಚಿನ ಮಳೆಗೆ ಶೌಚಾಲಯ ಕುಸಿಯಿತು. ಈ ದುರ್ಘಟನೆ ರಾತ್ರಿ
ಸಂಭವಿಸಿದ ಕಾರಣ ಜೀವಹಾನಿಯಾಗಲಿಲ್ಲ. ಪೋಷಕರು ಮುಖ್ಯೋಪಾಧ್ಯಾಯರ ಮೇಲೆ ಮುಗಿಬಿದ್ದರು. ಹಗಲೇನಾದರೂ ಇದು ನಡೆದಿದ್ದರೆ ಮಕ್ಕಳ ಪ್ರಾಣ ಹೋಗುತ್ತಿತ್ತು, ಇದು ಶಿಕ್ಷಕರ ಬೇಜವಾಬ್ದಾರಿಯಿಂದ ಸಂಭವಿಸಿದೆ ಎಂದು ಆರೋಪಿಸಿದರು. ಆಗ ಮುಖ್ಯೋಪಾಧ್ಯಾಯರು, ಶೌಚಾಲಯ ದುರಸ್ತಿಗೆ ಸಂಬಂಧಿಸಿದಂತೆ ಒಂದು ವರ್ಷದಿಂದಲೂ ಪೋಷಕರ ಸಭೆಯಲ್ಲಿ ಸಲ್ಲಿಸುತ್ತಾ ಬಂದ ಪ್ರಸ್ತಾವದ ನಿರ್ಣಯವನ್ನು ಮುಂದಿಟ್ಟರು. ಶಾಸಕರು ಹಾಗೂ ವಿವಿಧ ಅಧಿಕಾರಿಗಳಿಗೆ ಸಲ್ಲಿಸಿದ ಮನವಿಗಳ ಸ್ವೀಕೃತಿ ಪತ್ರಗಳನ್ನೂ ತೋರಿಸಿದರು. ಅಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿತ್ತು.

ಈಗಲೂ ಅನೇಕ ಸರ್ಕಾರಿ ಶಾಲೆಗಳಲ್ಲಿ ಪೀಠೋಪಕರಣಗಳಿಲ್ಲ, ಆಟದ ಸಾಮಗ್ರಿಗಳಿಲ್ಲ. ಗ್ರಾಮ ಪಂಚಾಯಿತಿ ಸದಸ್ಯರಿಗೂ ಅಧಿಕಾರ ಚಲಾಯಿಸಲು ಇಂತಹ ಶಾಲೆಗಳ ಶಿಕ್ಷಕರೇ ಬಲಿಪಶುಗಳಾಗಿರುತ್ತಾರೆ. ಅವರ ವೃತ್ತಿಯನ್ನು ಗೌರವಿಸದೆ, ಸಾಮಾಜಿಕವಾಗಿ ಗುರು ಎಂಬ ಸ್ಥಾನಕ್ಕೆ ಇರುವ ಮಹತ್ವದ ಅರಿವೂ ಇಲ್ಲದೆ ಜನರ ಮುಂದೆ ಶಿಕ್ಷಕರನ್ನು ಮೂದಲಿಸುವುದು, ಅವಹೇಳನ ಮಾಡುವುದು ಜನಪ್ರತಿನಿಧಿಗಳ ಜಾಯಮಾನವಾಗಿ ಬಿಡುತ್ತಿದೆ.

ಸರ್ಕಾರಿ ಶಾಲೆಯ ಅಧ್ಯಾಪಕನಾಗಿ ಶ್ರಮಿಸುವ ವ್ಯಕ್ತಿಯೊಬ್ಬನ ವೃತ್ತಿಗೌರವದ ರಕ್ಷಣೆಗೆ ಮುಂದಾಗ
ಬೇಕಿರುವುದು ಸರ್ಕಾರದ ಗುರುತರ ಜವಾಬ್ದಾರಿ ತಾನೆ? ಕುಸಿದು ಬೀಳುತ್ತಿರುವ ಶಾಲಾ ಕಟ್ಟಡಗಳ ತುರ್ತು
ದುರಸ್ತಿಗೆ ಸಕಾಲದಲ್ಲಿ ಹಣ ಒದಗಿಸಬೇಕು. ಕೆಲ ಶಾಲೆಗಳಲ್ಲಿ ಬಿಸಿಯೂಟದ ಅಡುಗೆ ಮನೆಯ ಚಾವಣಿ ಮಳೆ ಬಂದರೆ ಸೋರುತ್ತದೆ. ಆ ನೀರನ್ನು ಹಿಡಿದಿಟ್ಟುಕೊಳ್ಳಲು ಸಾಲುಸಾಲಾಗಿ ಬಕೆಟ್‌ಗಳನ್ನು ಇರಿಸಬೇಕಾದ ದುರವಸ್ಥೆ ಅಲ್ಲಿರುತ್ತದೆ. ಇಂತಹ ಸ್ಥಿತಿಯನ್ನು ತಪ್ಪಿಸಬೇಕು.

ಪುಸ್ತಕ, ತರಕಾರಿ ತರುವ ಕೆಲಸಕ್ಕೆ ಸರ್ಕಾರವು ಒಬ್ಬ ಜವಾನನನ್ನು ನೇಮಿಸಿದರೆ, ಶಿಕ್ಷಕರು ಪೇಟೆ ಸುತ್ತುವ ಸಂಕಷ್ಟ ತಪ್ಪುತ್ತದೆ. ಶಿಕ್ಷಣದ ಅಭಿವೃದ್ಧಿಗಾಗಿ ತಾವು ಮಾಡಿದ ಕೆಲಸಗಳನ್ನು ಜಾಹೀರಾತುಗಳಲ್ಲಿ
ಮಾತ್ರ ಹೇಳಿಕೊಳ್ಳುವ ಸರ್ಕಾರಗಳು, ಶಾಲೆಗಳ ಕುಂದು ಕೊರತೆಗಳನ್ನು ಆಮೂಲಾಗ್ರವಾಗಿ ಸರಿಪಡಿಸಲು ಇದುವರೆಗೂ ಶಕ್ತವಾಗಿಲ್ಲ. ವ್ಯವಸ್ಥೆಯ ನಿರ್ಲಕ್ಷ್ಯವು ಮುಖ್ಯೋಪಾಧ್ಯಾಯರ ಬುಡವನ್ನೇ ಅಲುಗಾಡಿಸು
ವುದು ಮಾತ್ರ ವಿಷಾದನೀಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT