ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಗತ: ಮಹಿಳಾ ಸಬಲೀಕರಣಕ್ಕಾಗಿ ಯೋಗ!

‘ಸಂತರ ಕಾಯಿಲೆ’ಯಿಂದ ಬಳಲುವವರಿಗೆ ಯೋಗ ಮದ್ದಾಗಬಲ್ಲದು
Published 19 ಜೂನ್ 2024, 23:30 IST
Last Updated 19 ಜೂನ್ 2024, 23:30 IST
ಅಕ್ಷರ ಗಾತ್ರ

ಅಂತರರಾಷ್ಟ್ರೀಯ ಯೋಗ ದಿನಾಚರಣೆಯ (ಜೂನ್‌ 21) ಈ ಬಾರಿಯ ಘೋಷವಾಕ್ಯ ‘ಮಹಿಳಾ ಸಬಲೀಕರಣಕ್ಕಾಗಿ ಯೋಗ’. ಇಲ್ಲಿ ‘ಸಬಲೀಕರಣ’ ಎಂಬ ಪದವು ಲಿಂಗಸಮಾನತೆಯನ್ನು ಸೂಚಿಸಿ, ಮಹಿಳಾ ಹಕ್ಕುಗಳನ್ನು ಬೆಂಬಲಿಸುತ್ತದೆಯಾದರೂ, ಮಹಿಳೆ ತನ್ನ ಸ್ಥಾನಮಾನವನ್ನು ಉತ್ತಮಪಡಿಸಿಕೊಳ್ಳಲು, ತನ್ನ ಮೇಲೆ ಆಗಬಹುದಾದ ಯಾವುದೇ ಬಗೆಯ ದೌರ್ಜನ್ಯಗಳನ್ನು ಮೆಟ್ಟಿ ನಿಲ್ಲಲು, ಬದುಕಿನಲ್ಲಿ ಬರುವ ಸವಾಲುಗಳನ್ನು ಎದುರಿಸಲು ಸಶಕ್ತಳಾಗುವುದು, ಅಂದರೆ ಈ ದಿಸೆಯಲ್ಲಿ ದೈಹಿಕವಾಗಿ, ಮಾನಸಿಕವಾಗಿ ಸಬಲಳಾಗುವುದು ಎಂದು ಅರ್ಥ.

ಆರೋಗ್ಯ ಕ್ಷೇತ್ರದಲ್ಲಿನ ಅತ್ಯುನ್ನತ ವೈಜ್ಞಾನಿಕ ಆವಿಷ್ಕಾರಗಳ ನಡುವೆಯೂ ಉತ್ತಮ ಆರೋಗ್ಯ ಸಾಧನೆ ಇನ್ನೂ ಕಷ್ಟಸಾಧ್ಯವೇ ಎನಿಸಿದೆ. ಹೆಚ್ಚಿನ ಮಹಿಳೆಯರಿಗೆ ಉತ್ತಮ ಆರೋಗ್ಯ ಹೊಂದುವುದಿರಲಿ ತಮ್ಮ ಅನಾರೋಗ್ಯದ ಹಿಂದೆ ಆನುವಂಶೀಯತೆ, ಆಹಾರ ಸೇವನೆಯಲ್ಲಿ ಅಸಮತೋಲನ, ವೈಯಕ್ತಿಕ ಹಾಗೂ ಪರಿಸರ ಸ್ವಚ್ಛತೆಯ ಕೊರತೆ, ರೋಗಾಣುಗಳ ದಾಳಿ, ಒತ್ತಡಮಯ ಜೀವನಶೈಲಿ, ನೆಲ, ಜಲ, ವಾಯುಮಾಲಿನ್ಯದಂತಹ ಕಾರಣಗಳಿವೆ ಎಂಬ ವಿಷಯವೇ ತಿಳಿದಿರುವುದಿಲ್ಲ.

ವೈದ್ಯಕೀಯ ಆವಿಷ್ಕಾರಗಳಿಂದ ಇಂದು ಸಾಂಕ್ರಾಮಿಕ ರೋಗಗಳನ್ನು ಜಯಿಸುತ್ತಿದ್ದೇವೆ ಅಂದುಕೊಂಡಿದ್ದರೂ ಅಸಾಂಕ್ರಾಮಿಕ ಕಾಯಿಲೆಗಳಾದ ಮಧುಮೇಹ, ಹೃದ್ರೋಗ, ಬೊಜ್ಜು, ಏರುರಕ್ತದೊತ್ತಡ, ಕ್ಯಾನ್ಸರ್‌ನಂತಹ ಕಾಯಿಲೆಗಳು ಮಹಿಳೆಯರಲ್ಲೂ ಹೆಚ್ಚುತ್ತಿವೆ. ಎಷ್ಟೋ ಹೆಣ್ಣುಮಕ್ಕಳಿಗೆ ತಮ್ಮ ಹೆಣ್ತನವನ್ನೇ ಕಸಿಯುತ್ತಿರುವ ‘ಪಾಲಿಸಿಸ್ಟಿಕ್ ಓವೇರಿಯನ್ ಡಿಸೀಸ್’ (ಪಿಸಿಓಡಿ) ಇರುವುದರ ಬಗ್ಗೆ ಅರಿವೇ ಇರುವುದಿಲ್ಲ. ಬಹಳಷ್ಟು ಮಹಿಳೆಯರು ಸಾಮಾನ್ಯ ಎನಿಸಿದರೂ ಗುರುತರವಾದ ದುಷ್ಪರಿಣಾಮ ಬೀರುವ ರಕ್ತಹೀನತೆಯಂತಹ ಸಮಸ್ಯೆಯಿಂದ ಬಳಲುತ್ತಿದ್ದಾರೆ.

ಮಹಿಳೆಯರಿಗೆ ಜೈವಿಕ ಜವಾಬ್ದಾರಿಗಳಾದ ಋತುಚಕ್ರ ನಿರ್ವಹಣೆ, ಗರ್ಭಧಾರಣೆ, ಸ್ತನ್ಯಪಾನ, ಮಗುವಿನ ಲಾಲನೆ ಪಾಲನೆ, ಋತುಬಂಧದ ಜೊತೆಗೆ ಕೌಟುಂಬಿಕ, ಸಾಮಾಜಿಕ, ಆರ್ಥಿಕ ಒತ್ತಡದ ನಡುವೆ ಸಮತೋಲನ ಸಾಧಿಸುವುದು ಕಷ್ಟಕರವಾಗಿದೆ. ದಿನೇ ದಿನೇ ಹೆಚ್ಚುವ ಸಂದಿನೋವು, ಕುಂದಿದ ಉತ್ಸಾಹ, ಬೆನ್ನುನೋವು, ಮೂಳೆನೋವು, ನಿಶ್ಶಕ್ತಿ, ಸದಾ ಸುಸ್ತಿನ ಅನುಭವದಂತಹ ಸಮಸ್ಯೆಗಳು ಅವರನ್ನು ಹೈರಾಣಾಗಿಸುತ್ತಿವೆ. ಅಷ್ಟಾದರೂ ತಮ್ಮ ಬಗ್ಗೆ ಹೆಚ್ಚು ಕಾಳಜಿ ವಹಿಸದ ಹೆಚ್ಚಿನ ಮಹಿಳೆಯರು ಸ್ಥೂಲಕಾಯ, ಉಬ್ಬಿದ ಹೊಟ್ಟೆ, ಊದಿದ ಕಾಲು, ಕುಂದುತ್ತಿರುವ ದೃಷ್ಟಿಯ ಬಗ್ಗೆ ಲಕ್ಷಿಸದೆ ಸದಾ ಸಂಸಾರ, ಉದ್ಯೋಗ, ಗಂಡ, ಮಕ್ಕಳ ಆರೈಕೆಗಷ್ಟೇ ಪ್ರಾಮುಖ್ಯ ಕೊಟ್ಟು ತಮ್ಮ ಆರೋಗ್ಯವನ್ನು ಕಡೆಗಣಿಸುತ್ತಿದ್ದಾರೆ. ಕುಟುಂಬದ ಪುರೋಭಿವೃದ್ಧಿಯಷ್ಟೇ ತಮ್ಮ ಧ್ಯೇಯ ಎಂದು ತಿಳಿಯುವ ‘ಸಂತರ ಕಾಯಿಲೆ’ಯಿಂದ (ಸೇಂಟ್‍ ಸಿಂಡ್ರೋಮ್) ಬಳಲುತ್ತಿದ್ದಾರೆ ಎನ್ನುವುದು ಅಧ್ಯಯನಗಳಿಂದ ತಿಳಿದುಬರುತ್ತದೆ. ಖಿನ್ನತೆ, ಆತಂಕದಂತಹ ಒಂದಿಲ್ಲೊಂದು ಮಾನಸಿಕ ಸಮಸ್ಯೆಯಿಂದ ಅವರು ಬಳಲುತ್ತಿರುತ್ತಾರೆ.

ಮನೆಯ ದೈನಂದಿನ ಚಟುವಟಿಕೆಗಳು ಇಂದು ಹೆಚ್ಚಿನ ದೈಹಿಕ ಶ್ರಮ ಬೇಡುವುದಿಲ್ಲ. ತಂತ್ರಜ್ಞಾನ ಬಳಕೆ ನಮ್ಮ ಜೀವನವನ್ನು ಸುಗಮಗೊಳಿಸಿದೆ ಅನಿಸಿದರೂ ಕೆಲವೊಮ್ಮೆ ಬದುಕನ್ನು ದುರ್ಗಮಗೊಳಿಸುತ್ತಿದೆ. ಸಕಲ ಅಂಗಾಂಗಗಳಿಗೂ ಸೂಕ್ತ ದೈಹಿಕಶ್ರಮ ದೊರೆಯದಿರುವುದು, ಜಂಕ್‍ಫುಡ್ ಸೇವನೆ, ಜೈವಿಕ ಗಡಿಯಾರಕ್ಕೆ ಬೆಲೆ ಕೊಡದಿರುವಂತಹ ಕಾರಣಗಳು ಜೀವನಶೈಲಿ ಸಂಬಂಧದ ಕಾಯಿಲೆಗಳನ್ನು ಹೆಚ್ಚಿಸುತ್ತಿವೆ. ಹಾಗಾದರೆ ಪುರಾತನ ಜೀವನಶೈಲಿಗೇ ಮರಳುವುದೆ? ಅದು ಸಾಧ್ಯವಾಗದ ಮಾತು. ನಿರಾಸೆಯ ಕಡಲಲ್ಲೂ ಆಸೆಯ ಮುತ್ತು ಎಂಬಂತೆ, ಉತ್ತಮ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕಾಗಿ, ಆ ಮೂಲಕ ಮಹಿಳಾ ಸಬಲೀಕರಣಕ್ಕಾಗಿ ಯೋಗವೇ ತಕ್ಕ ಉತ್ತರ ಎನಿಸುತ್ತದೆ.

ಹಲವು ಯೋಗಾಸನಗಳನ್ನು ಮಹಿಳೆಯರು ಸಂತಾನೋತ್ಪತ್ತಿ ವಯಸ್ಸಿನಲ್ಲಿ ಹಾಗೂ ನಂತರವೂ ನಿಯಮಿತವಾಗಿ ಮಾಡುವುದು ಬಹಳಷ್ಟು ಉಪಯುಕ್ತಕರ. ಹದಿವಯಸ್ಸಿನಲ್ಲಿ ಹಾರ್ಮೋನಿನ ಅಸಮತೋಲನದಿಂದ ಉಂಟಾಗುವ ಪಿಸಿಓಡಿ ಸಮಸ್ಯೆಯ ನಿಯಂತ್ರಣ, ಸಹಜ ಹೆರಿಗೆ, ಸ್ನಾಯುಗಳ ಬಲವರ್ಧನೆ, ಲೈಂಗಿಕ ಸಾಮರ್ಥ್ಯ ಹೆಚ್ಚಳ, ಬೆನ್ನುನೋವು, ಋತುಬಂಧದಂತಹ ಸಮಸ್ಯೆಗಳನ್ನು ಎದುರಿಸಲು ವಿವಿಧ ಆಸನಗಳು ಸಹಾಯಕ.

ಆದರೆ ಕೆಲವು ಆಸನಗಳನ್ನು ಕಲಿತು ಪ್ರದರ್ಶಿಸುವುದಕ್ಕಷ್ಟೇ ಯೋಗವನ್ನು ಸೀಮಿತಗೊಳಿಸದೆ, ಪತಂಜಲಿ ಮಹರ್ಷಿ ಹೇಳಿದ ಅಷ್ಟಾಂಗ ಯೋಗ ಸೂತ್ರಗಳನ್ನು ಅಳವಡಿಸಿಕೊಳ್ಳುವುದು ಯೋಗ್ಯ. ಬದಲಿಸಲು ಸಾಧ್ಯವಾಗದ ಆನುವಂಶೀಯತೆ ಮತ್ತು ಬದಲಾಯಿಸಬಲ್ಲ ಜೀವನಶೈಲಿ ಎರಡೂ ಇಂದಿನ ಅನಾರೋಗ್ಯ ಸ್ಥಿತಿಗೆ ಪ್ರಮುಖ ಕಾರಣಗಳಾಗಿವೆ. ಜೀವನಶೈಲಿ ಎನ್ನುವುದು ನಮ್ಮ ಆಹಾರಕ್ರಮ, ತೊಡಗಿಕೊಳ್ಳುವ ವ್ಯಾಯಾಮ, ನಮ್ಮ ಕೆಟ್ಟನಡತೆಗಳು, ಭಾವೋದ್ವೇಗ ಎಲ್ಲವನ್ನೂ ಒಳಗೊಂಡಿರುತ್ತದೆ. ನಾವು ನಮ್ಮ ಮನಸ್ಸಿನ ಮೇಲೆ ಪ್ರಭುತ್ವ ಸಾಧಿಸಿ ಒತ್ತಡ, ಭಾವೋದ್ವೇಗವನ್ನು ನಿರ್ವಹಣೆ ಮಾಡುವುದು ಬಹಳ ಮುಖ್ಯ. ಇಲ್ಲದಿದ್ದರೆ ದೀರ್ಘಾವಧಿಯ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ.

ಸಮಸ್ಯೆಯ ಮೂಲ ಅರಿತು ಭಾವೋದ್ವೇಗವನ್ನು ನಿಯಂತ್ರಿಸಲು ಯೋಗಿಕ ಜೀವನಶೈಲಿ ಅನುಸರಿಸುವುದು ಉತ್ತಮ ಪರಿಹಾರ. ಅದಕ್ಕಾಗಿ ನಮ್ಮ ಶರೀರವನ್ನು ಮೊದಲು ಯೋಗಿಕ ರೀತಿಯಲ್ಲಿ ಅರ್ಥೈಸಿಕೊಳ್ಳಬೇಕು. ಅಂದರೆ ನಮ್ಮ ಪಂಚಕೋಶಗಳ ಮೇಲೆ ಪರಿಣಾಮ ಬೀರುವ ವಿಧಿವಿಧಾನಗಳನ್ನು ಅಳವಡಿಸಿಕೊಳ್ಳುವುದರಿಂದ ಅನಾರೋಗ್ಯದಿಂದ ದೂರವಿರಬಹುದು. ಹೀಗಿದ್ದಾಗ ನಮ್ಮ ಪಯಣ ಸದಾ ದೈಹಿಕ ಹಾಗೂ ಮಾನಸಿಕ ಸ್ವಾಸ್ಥ್ಯ ಸಾಧಿಸುವೆಡೆಗೆ ಇರುತ್ತದೆ. ಆ ಮೂಲಕವೇ ಮಹಿಳಾ ಸಬಲೀಕರಣ ಸಾಧ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT