ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವ ಜಯಂತಿ | ಮಾತೆಂಬ ಜ್ಯೋತಿರ್ಲಿಂಗ

Published 10 ಮೇ 2024, 0:08 IST
Last Updated 10 ಮೇ 2024, 0:08 IST
ಅಕ್ಷರ ಗಾತ್ರ

‘ನುಡಿದಡೆ ಮುತ್ತಿನ ಹಾರದಂತಿರಬೇಕು...’

ಅಣ್ಣನವರ ಈ ಸುಪ್ರಸಿದ್ಧ ವಚನವನ್ನು ಕೇಳದವರಾರು? ಸಿಕ್ಕಸಿಕ್ಕವರೆಲ್ಲ ಉದ್ಧರಿಸುವ ವಚನಗಳಲ್ಲಿ ಇದೊಂದು. ಆದರೆ ಇದರ ಶಕ್ತಿ ನೋಡಿ - ಬಳಸಿದವರು ಯಾರೇ ಇರಲಿ, ಯಾವ ಗದ್ದಲದೊಡನೆಯೇ ಬಳಸಿರಲಿ, ಆ ಗದ್ದಲವನ್ನೂ ಮೀರಿ ಪ್ರಜ್ಞೆಯನ್ನು ತಟ್ಟುತ್ತದೆ, ಉಜ್ವಲ ಪ್ರಭೆಯಿಂದ ಕಣ್ಸೆಳೆಯುತ್ತದೆ - ‘ಮಾತೆಂಬುದು ಜ್ಯೋತಿರ್ಲಿಂಗ’ ಎಂಬ ಹಿರಿಯರಿವಿನಿಂದ ಬಂದ ಕಾಣ್ಕೆ ಅದು.

ನುಡಿಯೊಂದು ಹೇಗಿರಬೇಕೆಂಬುದಕ್ಕೆ ಹಲವು ಉಪಮೆಗಳು, ಸೋಪಾನಕ್ರಮದಲ್ಲಿ ಒಂದು ಇನ್ನೊಂದಕ್ಕಿಂತ ಉಜ್ವಲಗೊಳ್ಳುತ್ತಾ ಕೊನೆಗೆ ಅತ್ಯುನ್ನತವಾದ ಪರಿಣಾಮದಲ್ಲಿ ವಿಶ್ರಾಂತವಾಗುತ್ತದೆ. ಒಂದು ವಾಕ್ಯ-ಪದ-ಅಕ್ಷರವನ್ನೂ ತೆಗೆದು ಹಾಕುವಂತಿಲ್ಲ - ವಚನಗಳ ಸೊಗಸೇ ಹಾಗೆ. ಅದರಲ್ಲೂ ಈ ವಚನವಂತೂ ಸ್ವೋಪಜ್ಞವಾದುದು, ತನ್ನ ಮಾತಿಗೆ ತಾನೇ ಉದಾಹರಣೆಯಾಗಿ ನಿಲ್ಲುವಂಥದು.

ಮೊದಲನೆಯದಾಗಿ ಮುತ್ತು ಅಪರೂಪದ ವಸ್ತು. ಎಲ್ಲೋ ಲಕ್ಷಾಂತರ ಹನಿಗಳಲ್ಲಿ ಒಂದು ಮುತ್ತಾಗುತ್ತದೆ. ಇಂತಹ ಮುತ್ತುಗಳ ಹಾರವೊಂದನ್ನು ಮಾಡಬೇಕಾದರೆ ಒಂದೊಂದೇ ಮುತ್ತನ್ನು ಹೆಕ್ಕಿ ತರಬೇಕು. ಇನ್ನು ಮುತ್ತಿನ ಹಾರವೆಂದರೆ ಕಣ್ಣಿಗೆ ಬರುವುದು ಶುಭ್ರವಾದ ಬಿಳಿಯ ಮುತ್ತೇ. ಈ ‘ಶುಭ್ರ’ತೆಯೇ ಮಾತಿನ ಮುಖ್ಯಗುಣ. ಅದಕ್ಕೇ ವಾಗ್ದೇವಿಯನ್ನು ‘ಸರ್ವಶುಕ್ಲಾ’ ಎಂದಿದ್ದಾನೆ ಲಾಕ್ಷಣಿಕ ದಂಡಿ; ಮುತ್ತಿನ ಇನ್ನೊಂದು ಲಕ್ಷಣ ದುಂಡು - ದುಂಡೆಂದರೆ ದುಂಡೇ, ಒಂದಿನಿತೂ ಓರೆಕೋರೆಗಳಿಲ್ಲ. ಮಾತು ಹೀಗೆ ಸ್ಫುಟವಾಗಿರಬೇಕೆಂಬುದು ಒಂದು. ಮತ್ತೆ, ಇಲ್ಲಿ ಅಣ್ಣನವರು ಹೇಳುತ್ತಿರುವುದು ಮುತ್ತಿನಂತಹ ಮಾತಿನ ಬಗೆಗಲ್ಲ, ಮುತ್ತಿನ ಹಾರದಂತಹ ಮಾತಿನ ಬಗೆಗೆ. ಮುತ್ತಿನಂತಹ ಮಾತನ್ನು ಸುಸಂಬದ್ಧವಾಗಿ ಕಟ್ಟುವುದು ಕೌಶಲ ಬೇಡುವಂಥದ್ದು.

ಶುಭ್ರತೆ, ಹೊಳಪು, ಸಮಂಜಸತೆ, ಸಂಬದ್ಧತೆ. ಇಷ್ಟಿದ್ದರೆ ಸಾಕೇ? ಅರ್ಥದ ಬೆಳಕಿಲ್ಲದ ಬರೀ ಮಾತು ಎಷ್ಟು ಸುಂದರವಾಗಿದ್ದರೆ ಏನು ಪ್ರಯೋಜನ? ಮಾಣಿಕದ ದೀಪ್ತಿಯಂತೆ ಅರ್ಥವನ್ನು ಬೆಳಗಿ ತೋರಿಸಲಾರದಾದರೆ?

ಮಾತು ಬೆಳಗಿ ಅರ್ಥದ ಬೆಳಕು ಹೊಮ್ಮುವುದೇನೋ ಸರಿಯೇ. ಆ ಬೆಳಕಿನಲ್ಲಿ ಕಣ್ಣಿಗೆ ಕಾಣುವುದು ಕಂಡಿತು. ಕಾಣದ್ದು? ಹೊರಗಿನದನ್ನು ಬೆಳಗುವ ಮಾತಿಗೆ ತನ್ನನ್ನು ತಾನೇ ಬೆಳಗಿಸಿಕೊಳ್ಳುವ, ತನ್ನ ಒಳಗನ್ನು ತೆರೆದು ತೋರುವ ಶಕ್ತಿಯೂ ಇರಬೇಕಲ್ಲವೇ? ಇಲ್ಲಿ ಅಣ್ಣನವರು ಸ್ಫಟಿಕಶಲಾಕೆಯನ್ನು ಹೇಳುತ್ತಾರೆ. ಸ್ಫಟಿಕವು ಶುಭ್ರತೆಯ, ಪಾರದರ್ಶಕತೆಯ ಸಂಕೇತ. ಆಡಿದ ಮಾತು ಸ್ಫಟಿಕದಂತೆ ನಿಚ್ಚಳವಾಗಿ, ಒಳ-ಹೊರ ಅರ್ಥಗಳೆಲ್ಲ ಮನದಟ್ಟಾಗುವಂತಿದ್ದರೆ ಸಾಕೇ? ಅದು ಸ್ಫಟಿಕದ ಶಲಾಕೆಯಾಗಬೇಕು. ಆ ಮೊನೆಯಾದ, ದೃಢವಾದ, ಹಗುರಾದ ಶಲಾಕೆಯನ್ನು ಹಿಡಿದು ತೋರಿದರೆ, ಅದರ ಮೊನೆ ಗಮ್ಯವನ್ನು ಮುಟ್ಟಬೇಕು, ತೋರಿದ ಅರಿವಾಗಬೇಕು, ಆದರೆ ತೋರುವ ಶಲಾಕೆ ಕಾಣಬಾರದು - ಅರ್ಥವುಳಿಯಬೇಕು, ಮಾತು ನಿಲ್ಲಬಾರದು.

ಇವೆಲ್ಲದರ ಅಂತಿಮಗಮ್ಯವಾದರೂ ಏನು? ‘ನುಡಿದರೆ ಲಿಂಗ ಮೆಚ್ಚಿ ಅಹುದಹುದೆನಬೇಕು’. ಲಿಂಗವೆಂದರೆ ಕಲ್ಲುಬಂಡೆಯಲ್ಲ - ನನ್ನದೇ ಒಳಗಿನ ಒಳಗು - ಅದು ಪ್ರಜ್ಞೆಯ, ಅಸ್ತಿತ್ವದ ಒಂದು ಭಾಗವೇ ಆಗಿರದಿದ್ದರೆ ಅದು ಕೇವಲ ಕಲ್ಲು. ಈ ನಿಮ್ಮೊಳಗಿನ ಲಿಂಗ ನಿಮ್ಮ ಮಾತನ್ನು ಮೆಚ್ಚಿ ಅಹುದಹುದೆನಬೇಕು.

ಮಾತೆಂಬುದು ಜ್ಯೋತಿರ್ಲಿಂಗವೆಂಬ ಪ್ರಜ್ಞೆಯಿರುವವನು ಆಡಿ ಅದನ್ನು ಮೈಲಿಗೆ ಮಾಡಲಾರ. ಆಡಲೇಬೇಕೆಂದರೆ, ನುಡಿಯ ಸೂತಕವನ್ನೊಲ್ಲದ ನಿಚ್ಚಟನು ಆ ನುಡಿಗೆ ‘ನಡೆ’ಯ ಮುಡಿ ಹಾಸುತ್ತಾನೆ, ನುಡಿಯೊಳಗಾಗಿ ನಡೆಯದಿದ್ದರೆ ಕೂಡಲಸಂಗಮದೇವನು ಒಲಿಯನೆಂಬ ಪ್ರಜ್ಞೆ ಅವನಿಗಿದ್ದೇಯಿದೆ. ಈ ಪ್ರಜ್ಞೆಯನ್ನು ಜಗತ್ತಿಗೆ ಉಜ್ಜಳಿಸಿ ಕೊಟ್ಟ ಬಸವಣ್ಣನವರ ಜಯಂತಿಯಿಂದು, ಈ ಭುವನದ ಬೆಳಕಿಗೆ ನಮನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT