ಬುಧವಾರ, ಜನವರಿ 29, 2020
29 °C

ಮಾನಸಿಕ ಒತ್ತಡ ನಿವಾರಣೆಗೆ ವಿಶ್ರಾಂತಿಗೆ ತೆರಳಿದ ಬಿರ್ಲಾ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕ್ರಿಕೆಟ್‌ನಲ್ಲಿ ಅನುಭವಿಸುತ್ತಿರುವ ತೀವ್ರ ಮಾನಸಿಕ ವ್ಯಾಕುಲತೆಯಿಂದ ನಿರಾಳವಾಗುವ ಸಲುವಾಗಿ ಅನಿರ್ದಿಷ್ಠ ಕಾಲದವರೆಗೆ ವಿಶ್ರಾಂತಿ ಪಡೆಯುವುದಾಗಿ ಮಧ್ಯಪ್ರದೇಶ ಕ್ರಿಕೆಟ್ ತಂಡದ ಆರ್ಯಮನ್ ಬಿರ್ಲಾ ಹೇಳಿದ್ದಾರೆ.

ದೇಶದ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾದ ಕುಮಾರ ಮಂಗಳಂ ಬಿರ್ಲಾ ಅವರ ಮಗ ಆರ್ಯಮನ್ ಶುಕ್ರವಾರ ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದಾರೆ.

‘ಕ್ರಿಕೆಟ್‌ನಲ್ಲಿ ಈ ಮಟ್ಟಕ್ಕೆ ಬೆಳೆಯಲು ಅಗಾಧ ಪರಿಶ್ರಮ ಬೇಕು. ಆಟದಲ್ಲಿರುವ ಪೈಪೋಟಿಯಲ್ಲಿ ನಮ್ಮ ಛಾಪು ಮೂಡಿಸಲು ಸತತ ಅಭ್ಯಾಸ, ಪರಿಶ್ರಮ, ಶ್ರದ್ಧೆ, ಸಮರ್ಪಣೆ ಭಾವದ ಅಗತ್ಯವಿದೆ. ಕ್ರಿಕೆಟ್‌ನಲ್ಲಿರುವ ಸವಾಲುಗಳನ್ನು ಎದುರಿಸುವ ಹಾದಿಯಲ್ಲಿ ತೀವ್ರ ವ್ಯಾಕುಲತೆಯನ್ನು ಅನುಭವಿಸುತ್ತಿದ್ದೇನೆ. ಆದ್ದರಿಮದ ಸ್ವಲ್ಪ ಕಾಲ ಆಟದಿಂದ ದೂರವಿದ್ದರೆ ಸರಿಯಾಗಬಹುದು’ ಎಂದು ಉಲ್ಲೇಖಿಸಿದ್ದಾರೆ.

‘ನಾನು ಈ ಆಟವನ್ನು ಅಪಾರವಾಗಿ ಪ್ರೀತಿಸುತ್ತೇನೆ. ಇದರಲ್ಲಿ ಬೆಳೆಯಲು ಎಲ್ಲ ಕಷ್ಟಗಳನ್ನೂ ಅನುಭವಿಸಲು ಸಿದ್ಧವಾಗಿದ್ದೇನೆ. ಇದೊಂದು ಸುಂದರವಾದ ಕ್ರೀಡೆ. ಇದರ ಅಂಗವಗಿ ಇರುವುದು ದೊಡ್ಡ ಸೌಭಾಗ್ಯವೇ ಸರಿ. ಆದರೆ, ಮನೋದೈಹಿಕವಾದ ಆರೋಗ್ಯಕ್ಕೆ ಮೊದಲ ಆದ್ಯತೆ ಕೊಡುತ್ತಿದ್ದೇನೆ. ಉಲ್ಲಾಸಪೂರ್ಣ ಜೀವನವೇ ಮುಖ್ಯ. ಅದಕ್ಕಾಗಿ ಅನಿರ್ದಿಷ್ಟ ಸಮಯದವರೆಗೆ ಕ್ರಿಕೆಟ್‌ನಿಂದ ವಿಶ್ರಾಂತಿ ತೆಗೆದುಕೊಳ್ಳುತ್ತಿರುವೆ. ಮತ್ತೆ ಅಂಗಳಕ್ಕೆ ಮರಳುತ್ತೇನೆ’ ಎಂದು ಹೇಳಿದ್ದಾರೆ.

ಆರ್ಯಮನ್ ಅವರು ಮಧ್ಯಪ್ರದೇಶ ರಾಜ್ಯದ ವಯೋಮಿತಿ ತಂಡಗಳಲ್ಲಿ ಆಡಿದ್ದಾರೆ. 2017ರಲ್ಲಿ ಅವರು ರಣಜಿ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಒಂಬತ್ತು ಪ್ರಥಮದರ್ಜೆ, ನಾಲ್ಕು ಲಿಸ್ಟ್ ‘ಎ’ ಪಂದ್ಯಗಳನ್ನು ಆಡಿದ್ದಾರೆ. ಹೋದ ವರ್ಷ ನಡೆದಿದ್ದ ಸಿ.ಕೆ. ನಾಯ್ಡು (23 ವರ್ಷದೊಳಗಿನವರು) ಟ್ರೋಫಿ ಟೂರ್ನಿಯಲ್ಲಿ ಅವರು 602 ರನ್‌ಗಳನ್ನು ಗಳಿಸಿದ್ದರು. 75.25ರ ಸರಾಸರಿಯಲ್ಲಿ ಈ ರನ್‌ಗಳನ್ನು ಪೇರಿಸಿದ್ದರು. ಅದರಲ್ಲಿ ಒಟ್ಟು ಮೂರು ಶತಕಗಳೂ ಅದರಲ್ಲಿ ಸೇರಿವೆ.

2018ರ ಆವೃತ್ತಿಯಿಂದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಲ್ಲಿ ಆರ್ಯಮನ್ ಅವರು ರಾಜಸ್ಥಾನ್ ರಾಯಲ್ಸ್‌ ತಂಡದಲ್ಲಿದ್ಧಾರೆ. ಹೋದ ಎರಡೂ ಟೂರ್ನಿಗಳಲ್ಲಿ ಅವರು ಒಂದೂ ಪಂದ್ಯದಲ್ಲಿ ಕಣಕ್ಕಿಳಿದಿರಲಿಲ್ಲ.

ಈಚೆಗಷ್ಟೇ ಆಸ್ಟ್ರೇಲಿಯಾದ ಆಲ್‌ರೌಂಡರ್  ಗ್ಲೆನ್ ಮ್ಯಾಕ್ಸ್‌ವೆಲ್ ಅವರೂ ಇಂತಹದೇ ಕಾರಣಕ್ಕೆ ಕ್ರಿಕಟ್‌ನಿಂದ ವಿಶ್ರಾಂತಿ ಪಡೆದಿದ್ದರು. ಇದೇ ದೇಶದ ಕ್ರಿಕೆಟಿಗರಾದ ನಿಕ್ ಮ್ಯಾಡಿನ್ಸನ್ ಮತ್ತು ವಿಲ್ ಪುಕೋವಸ್ಕಿ ಅವರು ಕೂಡ ಒತ್ತಡ ನಿವಾರಣೆಗಾಗಿ ವಿಶ್ರಾಂತಿ ತೆಗೆದುಕೊಂಡಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು