ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs AUS: ಅಶ್ವಿನ್‌ ಸ್ಪಿನ್‌ಗೆ ಆಸ್ಟ್ರೇಲಿಯಾ ತತ್ತರ; ಭಾರತಕ್ಕೆ ಇನಿಂಗ್ಸ್ ಜಯ

Last Updated 12 ಫೆಬ್ರುವರಿ 2023, 2:11 IST
ಅಕ್ಷರ ಗಾತ್ರ

ನಾಗಪುರ: ಆಸ್ಟ್ರೇಲಿಯಾ ತಂಡವನ್ನು ಕೇವಲ 32.3 ಓವರ್‌ಗಳಲ್ಲಿ 91 ರನ್‌ಗಳಿಗೆ ಕಟ್ಟಿಹಾಕಿದ ರೋಹಿತ್‌ ಶರ್ಮಾ ಬಳಗ, ಬಾರ್ಡರ್‌–ಗಾವಸ್ಕರ್‌ ಟ್ರೋಫಿ ಟೆಸ್ಟ್‌ ಕ್ರಿಕೆಟ್‌ ಸರಣಿಯ ಮೊದಲ ಪಂದ್ಯವನ್ನು ಇನಿಂಗ್ಸ್ ಹಾಗೂ 132 ರನ್‌ಗಳಿಂದ ಗೆದ್ದು ಬೀಗಿತು.

ಆರ್.ಅಶ್ವಿನ್‌ (37ಕ್ಕೆ 5) ಕೈಚಳಕದ ಮುಂದೆ ಪ್ರವಾಸಿ ತಂಡದ ಬ್ಯಾಟರ್‌ಗಳು ತಬ್ಬಿಬ್ಬಾದರು. ವಿಸಿಎ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಎದುರಾಳಿಗಳಿಗೆ ಅಲ್ಪ ಹೋರಾಡಲೂ ಭಾರತದ ಬೌಲರ್‌ಗಳು ಅವಕಾಶ ನೀಡಲಿಲ್ಲ. ಪಂದ್ಯವನ್ನು ಮೂರೇ ದಿನಗಳಲ್ಲಿ ಜಯಿಸಿ, ಸರಣಿಯಲ್ಲಿ 1–0 ಮುನ್ನಡೆ ಪಡೆಯಿತು.

ಮೂರನೇ ದಿನವಾದ ಶನಿವಾರ ಬೆಳಗ್ಗಿನ ಅವಧಿಯಲ್ಲಿ ಅಕ್ಷರ್‌ ಪಟೇಲ್‌ (84) ಮತ್ತು ಮೊಹಮ್ಮದ್‌ ಶಮಿ (37) ಅವರ ಉತ್ತಮ ಆಟದಿಂದ ಭಾರತದ ಮೊದಲ ಇನಿಂಗ್ಸ್‌ ಮೊತ್ತ 400 ರನ್‌ಗಳವರೆಗೆ ಹಿಗ್ಗಿತು.

223 ರನ್‌ಗಳ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್‌ ಆರಂಭಿಸಿದ ಪ್ರವಾಸಿ ತಂಡದ ಬ್ಯಾಟರ್‌ಗಳು ಮತ್ತೆ ಎಡವಿದರು. ಮೊದಲ ಇನಿಂಗ್ಸ್‌ನಲ್ಲಿ ಐದು ವಿಕೆಟ್‌ ಪಡೆದಿದ್ದ ಜಡೇಜ, ಎರ ಡನೇ ಇನಿಂಗ್ಸ್‌ನಲ್ಲಿ (34ಕ್ಕೆ 2) ಅಶ್ವಿನ್‌ಗೆ ಸಾಥ್‌ ನೀಡುವ ಕೆಲಸ ಮಾಡಿದರು.

ಪ್ಯಾಟ್‌ ಕಮಿನ್ಸ್‌ ಬಳಗ ಒಂದೇ ಅವಧಿಯ ಆಟದಲ್ಲಿ ಎಲ್ಲ ವಿಕೆಟ್‌ಗಳನ್ನು ಕಳೆದುಕೊಂಡದ್ದು ಅಚ್ಚರಿ ಮೂಡಿಸಿತು. ‘ಆಸ್ಟ್ರೇಲಿಯಾ ಒಂದೇ ಅವಧಿಯೊಳಗೆ ಆಲೌಟ್‌ ಆಗಬಹುದೆಂದು ನಿರೀಕ್ಷಿಸಿರಲಿಲ್ಲ’ ಎಂದು ಪಂದ್ಯದ ಬಳಿಕ ರೋಹಿತ್‌ ಪ್ರತಿಕ್ರಿಯಿಸಿದ್ದಾರೆ.

ಅಶ್ವಿನ್‌ ಅವರ ಲೈನ್‌ ಮತ್ತು ಲೆಂಗ್ತ್‌ಅನ್ನು ಅಂದಾಜಿಸುವಲ್ಲಿ ಆಸ್ಟ್ರೇಲಿಯಾ ಬ್ಯಾಟರ್‌ಗಳು ಪೂರ್ಣವಾಗಿ ವಿಫಲರಾದರು. ಅನುಭವಿ ಡೇವಿಡ್‌ ವಾರ್ನರ್‌ ಒಳಗೊಂಡಂತೆ ನಾಲ್ವರು ಎಲ್‌ಬಿಡಬ್ಲ್ಯು ಬಲೆಗೆ ಬಿದ್ದದ್ದು ಅದಕ್ಕೆ ನಿದರ್ಶನ. ಯಾವ ಎಸೆತ ತಿರುವು ಪಡೆಯುತ್ತದೆ, ಯಾವುದು ನೇರವಾಗಿ ನುಗ್ಗುತ್ತದೆ ಎಂಬುದನ್ನು ಊಹಿಸಲೂ ಆಗದೆ ಚಡಪಡಿಸಿದರು. ರಕ್ಷಣಾತ್ಮಕವಾಗಿ ಆಡಬೇಕೇ, ಮುನ್ನುಗ್ಗಿ ಹೊಡೆಯಬೇಕೇ ಎಂಬ ಗೊಂದಲದಲ್ಲಿ ಬಿದ್ದು ವಿಕೆಟ್‌ ಕಳೆದುಕೊಂಡರು.

ಉಸ್ಮಾನ್ ಖ್ವಾಜಾ ಅವರನ್ನು ಔಟ್‌ ಮಾಡಿದ ಅಶ್ವಿನ್‌ ವಿಕೆಟ್‌ ಬೇಟೆ ಶುರು ಮಾಡಿದರು. ಸ್ಲಿಪ್‌ನಲ್ಲಿ ವಿರಾಟ್‌ ಕೊಹ್ಲಿಗೆ ಕ್ಯಾಚಿತ್ತು ಅವರು ಔಟಾದರು. ಒಂದಷ್ಟು ಬೌಂಡರಿ ಹೊಡೆದು ಆಕ್ರಮಣಕಾರಿ ಆಟವಾಡಲು ಮುಂದಾದ ಮಾರ್ನಸ್‌ ಲಾಬುಷೇನ್‌ ಅವರನ್ನು ಜಡೇಜ ಪೆವಿಲಿಯನ್‌ಗಟ್ಟಿದರು.

ಆ ಬಳಿಕ ಅಶ್ವಿನ್‌ ಮೋಡಿಗೆ ವಿಸಿಎ ಕ್ರೀಡಾಂಗಣ ಸಾಕ್ಷಿಯಾಯಿತು. ಒಬ್ಬರ ಮೇಲೊಬ್ಬರಂತೆ ನಾಲ್ವರನ್ನು ಎಲ್‌ಬಿ ಬಲೆಗೆ ಬೀಳಿಸಿದರು. ಬ್ಯಾಟಿಂಗ್‌ನಲ್ಲಿ ಮಿಂಚಿದ್ದ ಶಮಿ (13ಕ್ಕೆ 2) ಅವರು ಕೊನೆಯ ಎರಡು ವಿಕೆಟ್‌ಗಳನ್ನು ಪಡೆದು ಆಸ್ಟ್ರೇಲಿಯಾದ ಇನಿಂಗ್ಸ್‌ಗೆ ಬೇಗನೇ ಅಂತ್ಯಹಾಡಿದರು.

ಇದಕ್ಕೂ ಮುನ್ನ 7 ವಿಕೆಟ್‌ಗಳಿಗೆ 321 ರನ್‌ಗಳಿಂದ ಆಟ ಮುಂದುವರಿಸಿದ್ದ ಭಾರತ, ಮತ್ತೆ 79 ರನ್‌ಗಳನ್ನು ಸೇರಿಸಿತು. ಜಡೇಜ 70 ರನ್‌ಗಳಿಗೆ ಔಟಾದರೆ, ಅಕ್ಷರ್‌ ಪಟೇಲ್‌ ಟೆಸ್ಟ್‌ನಲ್ಲಿ ವೈಯಕ್ತಿಕ ಶ್ರೇಷ್ಠ ಮೊತ್ತ ಕಲೆಹಾಕಿದರು. ಶಮಿ ಅವರು ಮೂರು ಸಿಕ್ಸರ್‌ ಮತ್ತು ಎರಡು ಬೌಂಡರಿ ಹೊಡೆದು ಮನರಂಜನೆ ಒದಗಿಸಿದರು. ಅಕ್ಷರ್‌ ಮತ್ತು ಶಮಿ 9ನೇ ವಿಕೆಟ್‌ಗೆ 52 ರನ್‌ ಸೇರಿಸಿದರು.

ಟಾಡ್‌ ಮರ್ಫಿ ಚೊಚ್ಚಲ ಪಂದ್ಯದಲ್ಲಿ ಏಳು ವಿಕೆಟ್‌ ಪಡೆದು ಮಿಂಚಿದರಾದರೂ, ತಂಡಕ್ಕೆ ಎದುರಾದ ಹೀನಾಯ ಸೋಲಿನ ಮುಂದೆ ಅವರ ಸಾಧನೆಗೆ ಬೆಲೆಯಿಲ್ಲದಾಯಿತು.

ಸರಣಿಯ ಎರಡನೇ ಪಂದ್ಯ ನವದೆಹಲಿಯಲ್ಲಿ ಫೆ.17ರಿಂದ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT