ಶುಕ್ರವಾರ, ಏಪ್ರಿಲ್ 3, 2020
19 °C
ಆಸಿಸ್ ವಿರುದ್ಧ ಉದ್ಘಾಟನಾ ಪಂದ್ಯ: ಭಾರತ ಬ್ಯಾಟಿಂಗ್

ಮಿಂಚಬೇಕಿದೆ ಶಫಾಲಿ–ಮಂದಾನ: ಭಾರತ ಮಹಿಳಾ ತಂಡಕ್ಕೆ ಚೊಚ್ಚಲ ವಿಶ್ವಕಪ್ ಕನಸು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಡ್ನಿ: ಮಹಿಳೆಯರ ಟಿ20 ವಿಶ್ವಕಪ್‌ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ಮತ್ತು ಭಾರತ ತಂಡ ಮುಖಾಮುಖಿಯಾಗಿವೆ.

ಇಲ್ಲಿನ ಸಿಡ್ನಿ ಶೋಗ್ರೌಂಡ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್‌ ಗೆದ್ದಿರುವ ಆಸ್ಟ್ರೇಲಿಯಾ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.

ಇದುವರೆಗೆ ನಡೆದಿರುವ ಆರು ವಿಶ್ವಕಪ್‌ ಟೂರ್ನಿಗಳಲ್ಲಿ ಐದು ಸಲ ಫೈನಲ್‌ ತಲುಪಿರುವ ಆಸ್ಟ್ರೇಲಿಯಾ, ನಾಲ್ಕು ಬಾರಿ ಚಾಂಪಿಯನ್‌ ಆಗಿದೆ. ಹೀಗಾಗಿ ಮತ್ತೊಂದು ಕಪ್‌ ಗೆಲ್ಲುವ ವಿಶ್ವಾಸದಲ್ಲಿದೆ. ಆದರೆ, ಚೊಚ್ಚಲ ವಿಶ್ವಕಪ್‌ ಕನಸು ಕಾಣುತ್ತಿರುವ ಹರ್ಮನ್‌ಪ್ರೀತ್‌ ಕೌರ್‌ ಪಡೆ ಆಸಿಸ್‌ಗೆ ಆಘಾತ ನೀಡಲು ಸಜ್ಜಾಗಿದೆ.

ಇದನ್ನೂ ಓದಿ: ಮಹಿಳಾ ಟಿ–20 ವಿಶ್ವಕಪ್‌ ಕ್ರಿಕೆಟ್‌: ಪ್ರಬಲ ಆಸ್ಟ್ರೇಲಿಯಾಕ್ಕೆ ಭಾರತ ಸವಾಲು

ತಂಡಗಳು ಹೀಗಿವೆ
ಆಸ್ಟ್ರೇಲಿಯಾ: 
ಅಲಿಸ್ಸಾ ಹೀಲಿ (ವಿಕೆಟ್‌ ಕೀಪರ್‌), ಬೆತ್‌ ಮೂನಿ, ಮೆಗ್‌ ಲ್ಯಾನಿಂಗ್‌ (ನಾಯಕಿ), ಎಲಿಸ್‌ ಪೆರಿ, ಆ್ಯಶ್ಲೆ ಗಾರ್ಡನರ್‌, ರಚೆಲ್‌ ಹೇಯ್ನ್ಸ್‌ (ಉಪ ನಾಯಕಿ), ಅನ್ನಾಬೆಲ್‌ ಸದರ್‌ಲ್ಯಾಂಡ್‌, ಜೆಸ್‌ ಜೊನಾಸ್ಸೆನ್‌, ಡೆಲಿಸ್ಸಾ ಕಿಮಿನ್ಸ್‌, ಮೋಲಿ ಸ್ಟ್ರಾನೊ, ಮೇಗನ್‌ ಶುಟ್‌

ಭಾರತ: ಸ್ಮೃತಿ ಮಂದಾನಾ, ಶಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್‌, ಹರ್ಮನ್‌ಪ್ರೀತ್‌ ಕೌರ್‌ (ನಾಯಕಿ), ದೀಪ್ತಿ ಶರ್ಮಾ, ವೇದಾ ಕೃಷ್ಣಮೂರ್ತಿ, ಶಿಖಾ ಪಾಂಡೆ, ತಾನಿಯಾ ಭಾಟಿಯಾ (ವಿಕೆಟ್‌ ಕೀಪರ್‌), ಅರುಂಧತಿ ರೆಡ್ಡಿ, ಪೂನಂ ಯಾದವ್‌, ರಾಜೇಶ್ವರಿ ಗಾಯಕವಾಡ್‌

ಮಿಂಚಬೇಕಿದೆ ಶಫಾಲಿ–ಮಂದಾನ
ಇತ್ತೀಚೆಗೆ ಮುಕ್ತಾಯವಾದ ತ್ರಿಕೋನ (ಭಾರತ–ಇಂಗ್ಲೆಂಡ್‌–ಆಸ್ಟ್ರೇಲಿಯಾ) ಟಿ20 ಸರಣಿಯಲ್ಲಿ ಹೆಚ್ಚು ರನ್‌ ಗಳಿಸಿದ ಆಟಗಾರ್ತಿ  ಎನಿಸಿರುವ ಸ್ಮೃತಿ ಮಂದಾನ ಭಾರತದ ಬ್ಯಾಟಿಂಗ್‌ ಭರವಸೆಯಾಗಿದ್ದಾರೆ. ಅವರೊಟ್ಟಿಗೆ ಇನಿಂಗ್ಸ್‌ ಆರಂಭಿಸುವ ಶಫಾಲಿ ವರ್ಮಾ ಉತ್ತಮವಾಗಿ ಬ್ಯಾಟ್‌ ಬೀಸಬೇಕಿದೆ.

ತ್ರಿಕೋನ ಸರಣಿಯ ಐದು ಪಂದ್ಯಗಳಿಂದ ಮಂದಾನ 216 ರನ್‌ ಗಳಿಸಿದ್ದರು. ಇಷ್ಟೇ ಪಂದ್ಯಗಳಲ್ಲಿ ಬ್ಯಾಟ್‌ ಬೀಸಿದ್ದ ಶಫಾಲಿ ಗಳಿಸಿದ್ದು ಕೇವಲ 102 ರನ್‌ ಮಾತ್ರ.

ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತ ಪರ ಅರ್ಧಶತಕ ಗಳಿಸಿದ ಅತಿ ಕಿರಿಯ ಆಟಗಾರ್ತಿ ಎನಿಸಿರುವ ಶಫಾಲಿ ಯಾವುದೇ ಬೌಲರ್‌ ಎದುರು ಸ್ಫೋಟಕ ಬ್ಯಾಟಿಂಗ್‌ ಮಾಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಕಳೆದವರ್ಷ ನವೆಂಬರ್‌ನಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧದ ಪಂದ್ಯದಲ್ಲಿ ಕೇವಲ 49 ಎಸೆತಗಳಲ್ಲಿ 73ರನ್‌ ಗಳಿಸಿದ್ದ ವರ್ಮಾ, ಈ ಸಾಧನೆ ಮಾಡಿದ್ದರು.

ಮೂರು ದಶಕಗಳ ಹಿಂದೆ(1989) ಫೈಸಲಾಬಾದ್‌ನಲ್ಲಿ ಪಾಕಿಸ್ತಾನ ಎದುರಿನ ಪಂದ್ಯದಲ್ಲಿ ಸಚಿನ್‌, 59 ರನ್‌ ಗಳಿಸಿದ್ದರು. ಆಗ ಸಚಿನ್‌ ವಯಸ್ಸು 16 ವರ್ಷ 214 ದಿನಗಳು. ವೆಸ್ಟ್‌ಇಂಡೀಸ್‌ ವಿರುದ್ಧ ಅರ್ಧಶತಕ ಗಳಿಸಿದಾಗ ವರ್ಮಾ ವಯಸ್ಸು 15 ವರ್ಷ 285 ದಿನಗಳು.

ಹೀಗಾಗಿ ವರ್ಮಾ ಕ್ರೀಸ್‌ಗೆ ಅಂಟಿಕೊಂಡು ಆಡಿದರೆ, ಯಾವುದೇ ತಂಡದ ವಿರುದ್ಧ ಭಾರತಕ್ಕೆ ಗೆಲುವು ಸುಲಭವಾಗಲಿದೆ.

ಲಯಕ್ಕೆ ಮರಳಲಿ ನಾಯಕಿ
ಬ್ಯಾಟಿಂಗ್‌ ಹಾಗೂ ಬೌಲಿಂಗ್‌ನಲ್ಲಿ ತಂಡಕ್ಕೆ ನೆರವಾಗಬಲ್ಲ ನಾಯಕಿ ಹರ್ಮನ್‌ ಪ್ರೀತ್‌ ಕೌರ್‌ ಲಯಕ್ಕೆ ಮರಳಬೇಕಿದೆ. ಕೌರ್ ಕಳೆದ ಹತ್ತು ಇನಿಂಗ್ಸ್‌ಗಳಲ್ಲಿ ಗಳಿಸಿರುವುದು 163 ರನ್‌ ಮಾತ್ರ. ಇದೇ ವೇಳೆ ಆರು ಇನಿಂಗ್ಸ್‌ನಲ್ಲಿ ಬೌಲಿಂಗ್ ಮಾಡಿ ಅವರು ಗಳಿಸಿರುವುದು ಕೇವಲ 2 ವಿಕೆಟ್‌ ಮಾತ್ರ.

ಹೀಗಾಗಿ ಅವರು ಮೊದಲ ಪಂದ್ಯದಿಂದಲೇ ಆಟಕ್ಕೆ ಕುದುರಿಕೊಳ್ಳುವ ಅನಿವಾರ್ಯತೆ ಇದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು