ಬುಧವಾರ, ಸೆಪ್ಟೆಂಬರ್ 23, 2020
27 °C

ಈ ವರ್ಷ ಐಪಿಎಲ್‌ನಲ್ಲಿ ವಿವೊ ಪ್ರಾಯೋಜಕತ್ವ ಇಲ್ಲ: ಬಿಸಿಸಿಐ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ–20 ಕ್ರಿಕೆಟ್ ಟೂರ್ನಿಯ 13ನೇ ಆವೃತ್ತಿಗೆ ಚೀನಾ ಮೂಲದ ವಿವೊ ಮೊಬೈಲ್ ಪ್ರಾಯೋಜಕತ್ವ ಇರುವುದಿಲ್ಲವೆಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಖಚಿತಪಡಿಸಿದೆ.

ಭಾರತ ಮತ್ತು ಚೀನಾ ಸೇನೆಗಳ ನಡುವಣ ಈಚೆಗೆ ಗಡಿಯಲ್ಲಿ ಸಂಘರ್ಷ ನಡೆದಿತ್ತು. ಆಗ ಭಾರತದಲ್ಲಿ ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸುವ ಅಭಿಯಾನ ಆರಂಭವಾಗಿತ್ತು. ಅಲ್ಲದೇ ಚೀನಾದ ಆ್ಯಪ್‌ಗಳನ್ನೂ ಕೇಂದ್ರ ಸರ್ಕಾರವು ನಿಷೇಧಿಸಿತ್ತು. ಅದರಿಂದಾಗಿ ಚೀನಾದ ಕಂಪೆನಿಯು ನೀಡಿರುವ ಐಪಿಎಲ್‌ ಪ್ರಶಸ್ತಿಯ ಪ್ರಾಯೋಜಕತ್ವವನ್ನು ಕೈಬಿಡಬೇಕು ಎಂಬ ಆಗ್ರಹವೂ ವ್ಯಕ್ತವಾಗಿತ್ತು.

ಎರಡು ದಿನಗಳ ಹಿಂದಷ್ಟೇ ಪ್ರಾಯೋಜಕತ್ವದಿಂದ ಹಿಂದೆ ಸರಿಯಲು ಚಿಂತನೆ ನಡೆಸಿರುವುದಾಗಿ ವಿವೊ ಹೇಳಿತ್ತು.

’ಈ ಬಾರಿಯ ಐಪಿಎಲ್ ಟೂರ್ನಿಗೆ ಪ್ರಾಯೋಜಕತ್ವವನ್ನು ತಡೆಹಿಡಿಯಲು ಬಿಸಿಸಿಐ ಮತ್ತು ವಿವೊ ಕಂಪೆನಿ ಪರಸ್ಪರ ಒಮ್ಮತಕ್ಕೆ ಬಂದಿವೆ‘ ಎಂದು ಮಂಡಳಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

2018 ರಿಂದ 2022ರವರೆಗೆ ವಿವೊ ಪ್ರಾಯೋಜಕತ್ವ ಒಪ್ಪಂದ ಮಾಡಿಕೊಂಡಿತ್ತು. ಒಟ್ಟು ₹ 2190 ಕೋಟಿಯ ಒಪ್ಪಂದ ಇದಾಗಿದೆ. ಪ್ರತಿವರ್ಷದ ಕಂತಿನಲ್ಲಿ ಕಂಪೆನಿಯು ಐಪಿಎಲ್‌ಗೆ ₹ 440 ಕೋಟಿ ನೀಡುತ್ತದೆ.

ಇದೀಗ ಈ ವರ್ಷದ ಪ್ರಾಯೋಜಕತ್ವಕ್ಕಾಗಿ ಬಿಸಿಸಿಐ ಹೊಸದಾಗಿ ಟೆಂಡರ್‌ ಕರೆಯಬೇಕಿದೆ. ಯುಎಇಯಲ್ಲಿ ಸೆಪ್ಟೆಂಬರ್‌ 19ರಿಂದ ನವೆಂಬರ್ 10ರವರೆಗೆ ಐಪಿಎಲ್ ನಡೆಯಲಿದೆ. ಭಾರತದಲ್ಲಿ ಕೋವಿಡ್ –19 ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಯುಎಇಯಲ್ಲಿ ಟೂರ್ನಿ ನಡೆಸಲು ಬಿಸಿಸಿಐ ಉದ್ದೇಶಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು