ಮಂಗಳವಾರ, ಏಪ್ರಿಲ್ 7, 2020
19 °C
ಎಲ್ಲಾ ಕ್ರೀಡಾ ಸಂಸ್ಥೆಗಳಿಗೂ ಕಟ್ಟುನಿಟ್ಟಿನ ಸೂಚನೆ ನೀಡಿದ ಸಚಿವಾಲಯ

ಕೊರೊನಾ ಭೀತಿ: ಖಾಲಿ ಕ್ರೀಡಾಂಗಣದಲ್ಲಿ ನಡೆಯಲಿವೆ ಐಪಿಎಲ್ ಪಂದ್ಯಗಳು!

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ/ಧರ್ಮಶಾಲಾ: ಕೊರೊನಾ ಸೋಂಕು ಹರಡುವ ಆತಂಕದಿಂದಾಗಿ ಈ ಬಾರಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯ ಪಂದ್ಯಗಳ ವೇಳೆ ಪ್ರೇಕ್ಷಕರಿಗೆ ಕ್ರೀಡಾಂಗಣ ಪ್ರವೇಶ ನಿರ್ಬಂಧಿಸುವ ಸಾಧ್ಯತೆ ಇದೆ.

ಶನಿವಾರ ನಡೆಯುವ ಐಪಿಎಲ್‌ ಆಡಳಿತ ಸಮಿತಿ ಸಭೆಯಲ್ಲಿ ಈ ವಿಷಯದ ಕುರಿತು ಗಂಭೀರ ಚರ್ಚೆ ನಡೆಯುವ ನಿರೀಕ್ಷೆ ಇದೆ. 

ಕ್ರೀಡಾಕೂಟಗಳ ವೇಳೆ ಜನಸಮೂಹ ಸೇರುವುದನ್ನು ನಿರ್ಬಂಧಿಸುವಂತೆ ಆರೋಗ್ಯ ಸಚಿವಾಲಯ ಸುತ್ತೋಲೆ ಹೊರಡಿಸಿದೆ. ಈ ಸೂಚನೆಯನ್ನು ಬಿಸಿಸಿಐ ಸೇರಿದಂತೆ ಇತರ ಎಲ್ಲಾ ಕ್ರೀಡಾ ಫೆಡರೇಷನ್‌ಗಳೂ ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಗುರುವಾರ ಕೇಂದ್ರ ಕ್ರೀಡಾ ಸಚಿವಾಲಯವು ಆದೇಶಿಸಿದೆ.

ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಮುಂಬೈನಲ್ಲಿ ನಡೆಯುವ ಐಪಿಎಲ್ ಪಂದ್ಯಗಳ ದಿನಾಂಕಗಳನ್ನು ಮುಂದೂಡಬೇಕು. ಪ್ರೇಕ್ಷಕರು ಕ್ರೀಡಾಂಗಣಕ್ಕೆ ಬರದೆ ಟಿವಿಯಲ್ಲೇ ಪಂದ್ಯಗಳನ್ನು ವೀಕ್ಷಿಸಬೇಕು ಎಂದು ಮಹಾರಾಷ್ಟ್ರದ ಆರೋಗ್ಯ ಸಚಿವ ರಾಜೇಶ್ ಟೋಪೆ ಸಲಹೆ ನೀಡಿದ್ದಾರೆ. ಮುಂಬೈನಲ್ಲಿ ಬುಧವಾರ ಇಬ್ಬರಿಗೆ ಸೋಂಕು ಇರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಅವರು ಈ ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ.

ಕರ್ನಾಟಕದಲ್ಲೂ ಕೆಲವರಲ್ಲಿ ಕೊರೊನಾ ಸೋಂಕು ಪತ್ತೆಯಾಗಿರುವ ಕಾರಣ ಬೆಂಗಳೂರಿನಲ್ಲಿ ಐಪಿಎಲ್‌ ಪಂದ್ಯಗಳನ್ನು ಆಯೋಜಿಸಲು ಅವಕಾಶ ನೀಡಬೇಕೊ ಅಥವಾ ಬೇಡವೊ ಎಂಬುದರ ಬಗ್ಗೆ ಸ್ಪಷ್ಟ ನಿರ್ದೇಶನ ನೀಡುವಂತೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಅವರು ಕೇಂದ್ರ ಸರ್ಕಾರಕ್ಕೆ ಮಂಗಳವಾರ ಪತ್ರ ಬರೆದಿದ್ದಾರೆ.

ಈ ಬಾರಿಯ ಲೀಗ್‌ಗೆ ಇದೇ ತಿಂಗಳ 29ರಂದು ವಾಂಖೆಡೆ ಕ್ರೀಡಾಂಗಣದಲ್ಲಿ ಚಾಲನೆ ಸಿಗಲಿದೆ. 31ರಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಿಗದಿಯಾಗಿರುವ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮತ್ತು ಕೋಲ್ಕತ್ತ ನೈಟ್‌ರೈಡರ್ಸ್‌ ಮುಖಾಮುಖಿಯಾಗಲಿವೆ.

ವಿದೇಶಿ ಆಟಗಾರರು ಅಲಭ್ಯ: ಕೇಂದ್ರ ಸರ್ಕಾರವು ವಿದೇಶಿಯರ ವೀಸಾಗಳನ್ನು ತಾತ್ಕಾಲಿಕವಾಗಿ ರದ್ದು ಮಾಡಿರುವ ಕಾರಣ ಐಪಿಎಲ್‌ನ ಆರಂಭದ ಕೆಲ ಪಂದ್ಯಗಳಿಗೆ ವಿದೇಶಿ ಆಟಗಾರರು ಅಲಭ್ಯರಾಗಲಿದ್ದಾರೆ.

‘ವಿದೇಶಿ ಆಟಗಾರರು ಬ್ಯುಸಿನೆಸ್‌ ವೀಸಾ ಪಡೆದು ಐಪಿಎಲ್‌ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ವೀಸಾ ಹೊಂದಿರುವವರಿಗೆ ಏಪ್ರಿಲ್‌ 15ರವರೆಗೆ ಭಾರತ ಪ್ರವೇಶ ನಿರ್ಬಂಧಿಸಲಾಗಿದೆ. ಹೀಗಾಗಿ ಆರಂಭದ ಕೆಲ ಪಂದ್ಯಗಳಿಗೆ 60 ಆಟಗಾರರು ಅಲಭ್ಯರಾಗಲಿದ್ದಾರೆ’ ಎಂದು ಐಪಿಎಲ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಮೇ ತಿಂಗಳ ನಂತರ ಹಲವು ದ್ವಿಪಕ್ಷೀಯ ಕ್ರಿಕೆಟ್‌ ಸರಣಿಗಳು ನಿಗದಿಯಾಗಿವೆ. ಆಟಗಾರರೆಲ್ಲಾ ರಾಷ್ಟ್ರೀಯ ತಂಡಗಳ ಪರ ಆಡಲು ತಮ್ಮ ದೇಶಗಳಿಗೆ ಹೋಗಬೇಕಾಗುತ್ತದೆ. ಹೀಗಾಗಿ ನಿಗದಿತ ಅವಧಿಯಲ್ಲೇ ಐಪಿಎಲ್‌ ಪಂದ್ಯಗಳನ್ನು ನಡೆಸಬೇಕಾಗುತ್ತದೆ. ಒಂದೊಮ್ಮೆ ಲೀಗ್‌ ಮುಂದೂಡಿದರೆ ಪ್ರಮುಖ ಆಟಗಾರರು ಅಲಭ್ಯರಾಗುತ್ತಾರೆ’ ಎಂದೂ ಅವರು ಹೇಳಿದ್ದಾರೆ.

ತ್ವರಿತ ವಿಚಾರಣೆಗೆ ಸುಪ್ರೀಂ ನಕಾರ
ನವದೆಹಲಿ (ಪಿಟಿಐ):
ಈ ಬಾರಿಯ ಐಪಿಎಲ್‌ ಮುಂದೂಡುವಂತೆ ಕೋರಿ ವಕೀಲ ಮೋಹನ್‌ ಬಾಬು ಅಗರವಾಲ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ತ್ವರಿತಗತಿಯಲ್ಲಿ ನಡೆಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್‌ ಗುರುವಾರ ತಿಳಿಸಿದೆ. ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಇಂತಹ ಪರಿಸ್ಥಿತಿ ಯಲ್ಲಿ ಐಪಿಎಲ್‌ ನಡೆದರೆ ಭಾರತದಲ್ಲಿ ಈ ವೈರಸ್‌ನ ಸೋಂಕು ಮತ್ತಷ್ಟು ಮಂದಿಗೆ ತಗಲುವ ಅಪಾಯವಿದೆ. ಹೀಗಾಗಿ ಲೀಗ್‌, ರದ್ದುಪಡಿಸಬೇಕೆಂದು ಮೋಹನ್‌ ಬಾಬು ಮನವಿ ಮಾಡಿದ್ದರು.

‘ಮಹತ್ವದ ಅರ್ಜಿಗಳನ್ನಷ್ಟೇ ವಿಚಾರಣೆಗೆತ್ತಿಕೊಳ್ಳುತ್ತೇವೆ. ಎಲ್ಲಾ ಐಪಿಎಲ್‌ ಪಂದ್ಯಗಳೂ ಮಾರ್ಚ್‌ 29ಕ್ಕೆ ನಡೆಯುವುದಿಲ್ಲ. ಹೀಗಾಗಿ ನೀವು ಸಲ್ಲಿಸಿರುವ ಅರ್ಜಿ ಅಷ್ಟು ಮಹತ್ವದ್ದಲ್ಲ’ ಎಂದು ನ್ಯಾಯಮೂರ್ತಿಗಳಾದ ಯು.ಯು.ಲಲಿತ್‌ ಮತ್ತು ಅನಿರುದ್ಧ್‌ ಬೋಸ್‌ ಅವರಿದ್ದ ರಜಾ ಕಾಲದ ಪೀಠ ಹೇಳಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು