ಶುಕ್ರವಾರ, ಮೇ 29, 2020
27 °C

ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಭಾರತ: ‘ಮೊದಲ’ ಪಂದ್ಯದ ಏಳು–ಬೀಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕ್ರಿಕೆಟ್‌ ಜಗತ್ತು ಇದುವರೆಗೆ ಒಟ್ಟು 11 ವಿಶ್ವಕಪ್‌ ಟೂರ್ನಿಗಳನ್ನು ಕಂಡಿದೆ. ಆಸ್ಟ್ರೇಲಿಯಾ 5 ಬಾರಿ ಕಪ್ ಎತ್ತಿ ಹಿಡಿದಿದ್ದರೆ, ವೆಸ್ಟ್‌ ಇಂಡೀಸ್‌ ಮತ್ತು ಭಾರತ ತಲಾ ಎರಡು ಬಾರಿ ಕಿರೀಟಕ್ಕೆ ಮುತ್ತಿಕ್ಕಿವೆ. ಪಾಕಿಸ್ತಾನ, ಶ್ರೀಲಂಕಾ ತಂಡಗಳೂ ಒಮ್ಮೊಮ್ಮೆ ಚಾಂಪಿಯನ್‌ ಆಗಿವೆ.

ಹಿಂದಿನ ಎಲ್ಲ ವಿಶ್ವಕಪ್‌ನಲ್ಲಿಯೂ ಭಾಗವಹಿಸಿರುವ ಭಾರತ ಮೊದಲ ಪಂದ್ಯದ ಅಂಕಿ–ಅಂಶಗಳನ್ನು ಗಮಿಸಿದರೆ ಗೆಲುವಿಗಿಂತ ಸೋಲಿನ ಪ್ರಮಾಣ ಹೆಚ್ಚಾಗಿದೆ. ಒಟ್ಟು ಹನ್ನೊಂದು ಪಂದ್ಯಗಳಲ್ಲಿ ವಿವಿಧ ತಂಡಗಳನ್ನು ಎದುರಿಸಿರುವ ಭಾರತ 6ರಲ್ಲಿ ಸೋಲು ಕಂಡು 5ರಲ್ಲಿ ಜಯದ ನಗೆ ಬೀರಿದೆ. ಈ ಬಾರಿ ದಕ್ಷಿಣ ಆಫ್ರಿಕಾ ಎದುರು ಸೆಣಸುತ್ತಿರುವ ಭಾರತ ಪಂದ್ಯ ಗೆದ್ದರೆ ಗೆಲುವು ಸೋಲಿನ ಪ್ರಮಾಣವನ್ನು ತಲಾ ಆರಕ್ಕೆ ಸರಿದೂಗಿಸಿಕೊಳ್ಳುವ ಅವಕಾಶವಿದೆ.

1975: ಇಂಗ್ಲೆಂಡ್‌ ಎದುರು ಸೋಲು
ಮೊದಲು ಬ್ಯಾಟಿಂಗ್‌ ಮಾಡಿದ್ದ ಇಂಗ್ಲೆಂಡ್‌ ನಿಗದಿತ 60 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 334 ರನ್‌ ಕಲೆ ಹಾಕಿತ್ತು. ಈ ಮೊತ್ತವನ್ನು ಬೆನ್ನಟ್ಟಿದ್ದ ಭಾರತ ನಿಗದಿತ 60 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು 132 ರನ್‌ ಗಳಿಸಲಷ್ಟೇ ಶಕ್ತವಾಗಿ 202 ರನ್‌ ಅಂತರದಿಂದ ಶರಣಾಗಿತ್ತು. ಭಾರತದ ಆರಂಭಿಕ ದಾಂಡಿಗ ಸುನೀಲ್‌ ಗವಾಸ್ಕರ್‌ ಅವರು ಬರೋಬ್ಬರಿ 174 ಎಸೆತಗಳನ್ನು ಎದುರಿಸಿ ಕೇವಲ 36 ರನ್‌ ಕಳಿಸಿದ್ದರು. ಈ ಕಾರಣಕ್ಕಾಗಿ ವ್ಯಾಪಕ ಟೀಕೆ ಎದುರಿಸಿದ್ದರು.

1979: ವಿಂಡೀಸ್‌ ವಿರುದ್ಧ ಧೂಳಿಪಟ
‘ಬಿ’ ಗುಂಪಿನಲ್ಲಿ ಸ್ಥಾನ ಪಡೆದುಕೊಂಡಿದ್ದ ಭಾರತ ಟಾಸ್‌ ಸೋತರೂ ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದುಕೊಂಡಿತ್ತು. ವಿಂಡೀಸ್‌ ವೇಗದ ದಾಳಿ ಎದುರು ವೈಫಲ್ಯ ಅನುಭವಿಸಿದ್ದ ಭಾರತ ಕೇವಲ 190ರನ್‌ ಗಳಿಸುವಷ್ಟರಲ್ಲಿ ಆಲೌಟ್‌ ಆಗಿತ್ತು. ಈ ಗುರಿಯನ್ನು ವಿಂಡೀಸ್‌ ಪಡೆ ಕೇವಲ1 ವಿಕೆಟ್‌ ಕಳೆದುಕೊಂಡು ತಲುಪಿತ್ತು.

1983: ಚಾಂಪಿಯನ್ನರೆದುರು ಗೆಲುವು
1975 ಹಾಗೂ 1979ರ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಚಾಂಪಿಯನ್‌ ಆಗಿದ್ದ ಕ್ರಿಕೆಟ್‌ ಧೈತ್ಯ ವೆಸ್ಟ್‌ಇಂಡೀಸ್‌ ತಂಡವನ್ನು 1983ರ ವಿಶ್ವಕಪ್‌ನಲ್ಲಿ ತನ್ನ ಮೊದಲ ಪಂದ್ಯದಲ್ಲಿ ಎದುರಿಸಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ನಿಗದಿತ 60 ಓವರ್‌ಗಳಲ್ಲಿ 8ವಿಕೆಟ್‌ ಕಳೆದುಕೊಂಡು 262 ರನ್‌ ಕಲೆ ಹಾಕಿತ್ತು. ಈ ಮೊತ್ತ ಬೆನ್ನುಹತ್ತಿದ್ದ ವಿಂಡೀಸ್‌ ಕೇವಲ 228ರನ್‌ಗಳಿಗೆ ಮುಗ್ಗರಿಸಿತ್ತು. ಬಲಿಷ್ಠ ತಂಡಕ್ಕೆ ಸೋಲುಣಿಸಿದ ಭಾರತ ಕ್ರಿಕೆಟ್‌ ಲೋಕವೇ ನಿಬ್ಬರೆಗಾಗುವಂತೆ ಮಾಡಿತ್ತು. ಮಾತ್ರವಲ್ಲದೆ ಫೈನಲ್‌ನಲ್ಲಿ ಮತ್ತೊಮ್ಮೆ ವಿಂಡಿಸ್‌ ತಂಡವನ್ನು ಬಗ್ಗುಬಡಿದ ಭಾರತ, ಲೀಗ್‌ ಹಂತದಲ್ಲಿ ತಾನು ಗೆದ್ದದ್ದು ಅದೃಷ್ಠದಿಂದಲ್ಲ ಎಂಬುದನ್ನು ಸಾರಿತ್ತು.

1987: ಭಾರತಕ್ಕೆ ಒಂದು ರನ್‌ ಸೋಲು
1987 ವಿಶ್ವಕಪ್‌ನಲ್ಲಿ ಭಾರತದ ಮೊದಲ ಎದುರಾಳಿ ಆಸ್ಟ್ರೇಲಿಯಾ. ಮೊದಲು ಬ್ಯಾಟಿಂಗ್‌ ಮಾಡಿದ್ದ ಆಸಿಸ್‌ ನಿಗದಿತ ಓವರ್‌ಗಳಲ್ಲಿ 6 ವಿಕೆಟ್‌ಗೆ 270 ರನ್‌ ಕಲೆ ಹಾಕಿತ್ತು. ಗುರಿ ಬೆನ್ನತ್ತಿದ್ದ ಭಾರತ 49.5 ಓವರ್‌ಗಳಲ್ಲಿ 269 ರನ್‌ಗಳಿಸಿ ಆಲೌಟ್‌ ಆಗಿತ್ತು. ಇದರೊಂದಿಗೆ ಕೇವಲ ಒಂದು ರನ್‌ನಿಂದ ಸೋಲು ಅನುಭವಿಸಿತ್ತು.

1992: ಇಂಗ್ಲೆಂಡ್‌ ಎದುರು 9 ರನ್‌ ಸೋಲು
1987ರ ವಿಶ್ವಕಪ್‌ನಲ್ಲಿ ರನ್ನರ್ಸ್‌ ಅಪ್‌ ಆಗಿದ್ದ ಇಂಗ್ಲೆಂಡ್‌ ತಂಡದೆದರು ಭಾರತ 9ರನ್‌ ಅಂತರದ ಸೋಲು ಅನುಭವಿಸಿತ್ತು. ಮೊದಲು ಬ್ಯಾಟಿಂಗ್‌ ಮಾಡಿದ್ದ ಆಂಗ್ಲರು 237ರನ್‌ಗಳ ಸಾಧಾರಣ ಗುರಿ ನೀಡಿದ್ದರು. ಇದನ್ನು ತಲುಪಲು ವಿಫವಾದ ಭಾರತ ಕೇವಲ 227ಗೆ ಎಲ್ಲ ವಿಕೆಟ್‌ ಕಳೆದುಕೊಂಡು ಸೋಲೊಪ್ಪಿಕೊಂಡಿತು.

1996: ಕೀನ್ಯಾ ಎದುರು 7 ವಿಕೆಟ್‌ ಜಯ
ಮೊದಲು ಬ್ಯಾಟಿಂಗ್‌ ಮಾಡಿದ್ದ ಕೀನ್ಯಾ ತಂಡ 199 ರನ್‌ ಗಳಿಸಿತ್ತು. ಸಾಧಾರಣ ಗುರಿಯನ್ನು ಅನಾಯಾಸವಾಗಿ ತಲುಪಿದ ಭಾರತ ಇನ್ನೂ 49 ಎಸೆತಗಳು ಬಾಕಿ ಇರುವಂತೆಯೇ ಗೆದ್ದು ಬೀಗಿತ್ತು. ಈ ಪಂದ್ಯದಲ್ಲಿ ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡೂಲ್ಕರ್‌(127) ಶತಕ ಬಾರಿಸಿ ಅಬ್ಬರಿಸಿದ್ದರು.

1999: ದಕ್ಷಿಣ ಆಫ್ರಿಕಾ ಎದುರು ಪರಾಭವ
ಸೌರವ್‌ ಗಂಗೂಲಿ ಬಾರಿಸಿದ 97ರನ್‌ಗಳ ನೆರವಿನಿಂದ ಭಾರತ ತಂಡ 253ರನ್‌ಗಳ ಸವಾಲಿನ ಮೊತ್ತ ಪೇರಿಸಿತ್ತು. ಈ ಮೊತ್ತವನ್ನು ಆಫ್ರಿಕನ್ನರು 6 ವಿಕೆಟ್‌ ಕಳೆದುಕೊಂಡು ತಲುಪಿದ್ದರು. ಆಫ್ರಿಕಾ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದ ಜಾಕ್‌ ಕಾಲಿಸ್‌(96) ಕೂಡ ನಾಲ್ಕು ರನ್‌ಗಳಿಂದ ಶತಕ ವಂಚಿತರಾಗಿದ್ದರು.

2003: ನೆದರ್‌ಲ್ಯಾಂಡ್‌ ಎದುರು 68ರನ್‌ ಗೆಲುವು
ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ್ದ ಭಾರತ 204 ರನ್‌ಗಳಿಗೆ ಆಲೌಟ್‌ ಆಗಿತ್ತು. ಸಚಿನ್‌ 52, ಯುವರಾಜ್‌ ಸಿಂಗ್‌ 37 ಹಾಗೂ ದಿನೇಶ್‌ ಮೋಂಗಿಯಾ 42 ರನ್‌ ಗಳಿಸಿದ್ದರು. ಉಳಿದ ಆಟಗಾರರಿಂದ ಸಾಮರ್ಥ್ಯಕ್ಕೆ ತಕ್ಕ ಆಟ ಮೂಡಿಬಂದಿರಲಿಲ್ಲ. ಆದರೆ ಈ ಅಲ್ಪ ಗುರಿ ಎದುರು ನೆದರ್‌ಲ್ಯಾಂಡ್‌ ತಂಡ ಕೇವಲ 136 ರನ್‌ಗಳಿಸಿ ಆಲೌಟ್‌ ಆಯಿತು.

2007: ಭಾರತಕ್ಕೆ ಬರೆ ಹಾಕಿದ ಬಾಂಗ್ಲಾ
ಸುಲಭ ಜಯದ ಲೆಕ್ಕಾಚಾರದಲ್ಲಿದ್ದ ಭಾರತಕ್ಕೆ ಬಾಂಗ್ಲಾದೇಶ ಆಘಾತ ನೀಡಿತ್ತು. ಟೀಂ ಇಂಡಿಯಾ ಬ್ಯಾಟ್ಸ್‌ಮನ್‌ಗಳನ್ನು ಕೇವಲ 191ರನ್‌ಗಳಿಗೆ ಕಟ್ಟಿ ಹಾಕಿದ ಬಾಂಗ್ಲಾ ಬೌಲರ್‌ಗಳು ಪಂದ್ಯದ ದಿಕ್ಕು ಬದಲಿಸಿದ್ದರು. ಈ ಗುರಿ ತಲುಪಲು ಪ್ರಯಾಸ ಪಟ್ಟ ಬಾಂಗ್ಲಾ 48.3ನೇ ಓವರ್‌ನಲ್ಲಿ ಜಯದ ನಗೆ ಬೀರಿತು. ಈ ಸೋಲು ಭಾರತಕ್ಕೆ ಭಾರಿ ಮುಖಭಂಗ ಉಂಟು ಮಾಡಿತ್ತು. ಮಾತ್ರವಲ್ಲದೆ, ‘ಬಿ’ ಗುಂಪಿನಲ್ಲಿ ಮೂರನೇ ಸ್ಥಾನ ಪಡೆದು ಟೂರ್ನಿಯಿಂದ ಹೊರ ಬೀಳಬೇಕಾಯಿತು.

2011: ಬಾಂಗ್ಲಾ ಎದುರು ಮುಯ್ಯಿ ತೀರಿಸಿದ ಧೋನಿ ಬಳಗ
2007ರ ಪಂದ್ಯಾವಳಿಯಲ್ಲಿ ಸೋಲುಣಿಸಿ ಬೀಗಿದ್ದ ಬಾಂಗ್ಲಾದೇಶ ಈ ಬಾರಿ ನಿರಾಸೆ ಅನುಭವಿಸಿತು. ಟಾಸ್‌ ಸೋತರೂ ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ಭಾರತ ವಿರೇಂದ್ರ ಸೆಹ್ವಾಗ್‌(175) ಹಾಗೂ ವಿರಾಟ್‌ ಕೊಹ್ಲಿ(100) ಅವರ ಅಬ್ಬರದ ಬ್ಯಾಟಿಂಗ್‌ ನೆರವಿನಿಂದ 370ರನ್‌ ಕಲೆ ಹಾಕಿತ್ತು. ಈ ಗುರಿ ಬೆನ್ನಟ್ಟಿದ್ದ ಬಾಂಗ್ಲಾ ಪಡೆ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್‌ ಕಳೆದುಕೊಂಡು 283ರನ್‌ ಗಳಿಸಲಷ್ಟೇ ಶಕ್ತವಾಯಿತು.

2015: ಪಾಕ್‌ ಎದುರು ಜಯದ ದಾಖಲೆ ಮುಂದುವರಿಸಿದ ಭಾರತ
2015ರ ವಿಶ್ವಕಪ್‌ನಲ್ಲಿ ಭಾರತಕ್ಕೆ ಮೊದಲ ಎದುರಾಳಿಯಾಗಿದ್ದು ನೆರೆಯ ಪಾಕಿಸ್ತಾನ. ಟಾಸ್‌ ಗೆದ್ದ ಭಾರತ ಮೊದಲು ಬ್ಯಾಟಿಂಗ್‌ ಮಾಡಿತ್ತು. ವಿರಾಟ್‌ ಕೊಹ್ಲಿ ಶತಕದ ಬಲದಿಂದ ತಂಡದ ಮೊತ್ತ 300ಕ್ಕೇರಿತ್ತು. ಈ ಗುರಿ ಎದುರು ತಿಣುಕಾಡಿದ ಪಾಕ್‌ ಬ್ಯಾಟ್ಸ್‌ಮನ್‌ಗಳು ಕೇವಲ 227ರನ್‌ಗಳಿಗೆ ಕ್ರೀಸ್‌ ಖಾಲಿ ಮಾಡಿದ್ದರು. ವೇಗಿ ಮೊಹಮ್ಮದ್‌ ಶಮಿ ನಾಲ್ಕು ವಿಕೆಟ್‌ ಉರುಳಿಸಿ ಮಿಂಚಿದ್ದರು. ಹೀಗಾಗಿ ಐಸಿಸಿ ಪಂದ್ಯಾವಳಿಗಳಲ್ಲಿ ಪಾಕ್ ಎದುರು ಅಜೇಯ ದಾಖಲೆ ಹೊಂದಿದ್ದ ಭಾರತ ಈ ಬಾರಿಯೂ ಅದನ್ನು ಮುಂದುವರಿಸಿದಂತಾಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು