ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್‌ ಗೇಲ್ ನಿವೃತ್ತಿ ಅರಗಿಸಿಕೊಳ್ಳಲಾಗದು: ಶಾಯ್‌ ಹೋಪ್

Last Updated 6 ಜುಲೈ 2019, 12:32 IST
ಅಕ್ಷರ ಗಾತ್ರ

ಲೀಡ್ಸ್‌:‘ಮುಂದಿನ ತಿಂಗಳು ನಡೆಯುವ ಭಾರತದ ಎದುರಿನ ಸರಣಿಯ ಬಳಿಕ ಕ್ರಿಸ್‌ ಗೇಲ್‌, ಕ್ರಿಕೆಟ್‌ ಬದುಕಿಗೆ ವಿದಾಯ ಹೇಳಲಿದ್ದಾರೆ. ಅವರ ನಿವೃತ್ತಿಯನ್ನು ಅರಗಿಸಿಕೊಳ್ಳಲು ಸಾಧ್ಯವಿಲ್ಲ. ಇನ್ನು ಮುಂದೆ ಅವರ ಸ್ಫೋಟಕ ಆಟ ಕಣ್ತುಂಬಿಕೊಳ್ಳಲು ಆಗುವುದಿಲ್ಲ ಎಂಬುದನ್ನು ಊಹಿಸಿಕೊಂಡರೆ ತುಂಬಾ ಬೇಸರವಾಗುತ್ತದೆ’ ಎಂದು ವೆಸ್ಟ್‌ ಇಂಡೀಸ್‌ ತಂಡದ ಯುವ ಆಟಗಾರ ಶಾಯ್‌ ಹೋಪ್‌ ಹೇಳಿದ್ದಾರೆ.

‘ಗೇಲ್‌ ಜೊತೆ ಡ್ರೆಸಿಂಗ್‌ ಕೊಠಡಿಯಲ್ಲಿ ಕಳೆದ ಕ್ಷಣಗಳು ಅವಿಸ್ಮರಣೀಯ. ಅವರು ‘ಯುನಿವರ್ಸಲ್‌ ಬಾಸ್‌’. ಗೇಲ್‌ಗೆ ದೊಡ್ಡ ಅಭಿಮಾನಿ ಬಳಗವಿದೆ. ವಿಂಡೀಸ್‌ ಕ್ರಿಕೆಟ್‌ಗೆ ಅವರು ನೀಡಿರುವ ಕೊಡುಗೆ ಅಪಾರ’ ಎಂದು ಮತ್ತೊಬ್ಬ ಆಟಗಾರ ಕಾರ್ಲೊಸ್‌ ಬ್ರಾಥ್‌ವೇಟ್‌ ನುಡಿದಿದ್ದಾರೆ.

ಬೇಗ ನಿರ್ಗಮಿಸಿದ್ದಕ್ಕೆ ಬೇಸರ ವ್ಯಕ್ತಪಡಿಸಿದ ಗೇಲ್‌
‘ಈ ಸಲದ ವಿಶ್ವಕಪ್‌ನಲ್ಲಿ ಸೆಮಿಫೈನಲ್‌ ಪ್ರವೇಶಿಸಲು ಆಗಲಿಲ್ಲ. ಹೀಗಾಗಿ ತುಂಬಾ ಬೇಸರವಾಗಿದೆ’ ಎಂದು ಕ್ರಿಸ್‌ ಗೇಲ್‌ ಬೇಸರ ವ್ಯಕ್ತಪಡಿಸಿದ್ದಾರೆ.

39 ವರ್ಷದ ಗೇಲ್ ಪಾಲಿಗೆ ಇದು ಅಂತಿಮ ವಿಶ್ವಕಪ್‌ ಆಗಿತ್ತು. ಅವರು ಐದು ಬಾರಿ ಟೂರ್ನಿಯಲ್ಲಿ ಆಡಿದ ಹಿರಿಮೆ ತಮ್ಮದಾಗಿಸಿಕೊಂಡರು.

‘ಐದು ವಿಶ್ವಕಪ್‌ಗಳಲ್ಲಿ ವಿಂಡೀಸ್‌ ತಂಡವನ್ನು ಪ್ರತಿನಿಧಿಸಿದ್ದು ಹೆಮ್ಮೆಯ ವಿಷಯ. ಟೂರ್ನಿಗೂ ಮುನ್ನ ಹಲವು ಏಳುಬೀಳುಗಳನ್ನು ಕಂಡಿದ್ದೆ. ಅಂತಿಮವಾಗಿ ತಂಡದಲ್ಲಿ ಸ್ಥಾನ ಪಡೆದು ಆಡಿದೆ. ಇದು ಖುಷಿಯ ವಿಷಯ’ ಎಂದಿದ್ದಾರೆ.

‘ಈ ಸಲ ವಿಶ್ವಕಪ್‌ ಟ್ರೋಫಿಗೆ ಮುತ್ತಿಕ್ಕುವುದು ನಮ್ಮ ಕನಸಾಗಿತ್ತು. ಆದರೆ ಅದು ಕೈಗೂಡಲಿಲ್ಲ. ಇಂಗ್ಲೆಂಡ್‌ನಲ್ಲಿದ್ದ ಪ್ರತಿ ಕ್ಷಣವನ್ನು ಖುಷಿಯಿಂದ ಕಳೆದಿದ್ದೇವೆ. ಸುಮಧುರ ನೆನಪುಗಳೊಂದಿಗೆ ತವರಿಗೆ ಹಿಂದಿರುಗುತ್ತೇವೆ’ ಎಂದು ನುಡಿದಿದ್ದಾರೆ.

‘ವಿಂಡೀಸ್‌ ತಂಡ ಪ್ರತಿಭಾನ್ವಿತರ ಕಣಜವಾಗಿದೆ. ಶಾಯ್‌ ಹೋಪ್‌, ನಿಕೋಲಸ್‌ ಪೂರನ್‌, ಶಿಮ್ರಾನ್‌ ಹೆಟ್ಮೆಯರ್‌ ಭರವಸೆ ಮೂಡಿಸುತ್ತಿದ್ದಾರೆ. ಕೆರಿಬಿಯನ್‌ ನಾಡಿನ ಕ್ರಿಕೆಟ್‌ಗೆ ಹೊಸ ಮೆರುಗು ನೀಡುವ ಜವಾಬ್ದಾರಿ ಯುವ ಆಟಗಾರರ ಮೇಲಿದೆ. ಇನ್ನೂ ಕೆಲ ಕಾಲ ಅವರ ಜೊತೆಗಿರುತ್ತೇನೆ. ಅಗತ್ಯ ಮಾರ್ಗದರ್ಶನ ನೀಡುತ್ತೇನೆ’ ಎಂದಿದ್ದಾರೆ.

‘ಭಾರತದ ಎದುರು ತವರಿನಲ್ಲಿ ನಡೆಯುವ ಏಕದಿನ ಮತ್ತು ಟ್ವೆಂಟಿ–20 ಸರಣಿಗಳಲ್ಲಿ ಆಡುತ್ತೇನೆ. ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌ ಮತ್ತು ಕೆನಡಿಯನ್‌ ಟ್ವೆಂಟಿ–20 ಟೂರ್ನಿಗಳಲ್ಲೂ ಕಣಕ್ಕಿಳಿಯುತ್ತೇನೆ. ನಂತರ ಏನಾಗುತ್ತದೆಯೋ ನೋಡೋಣ’ ಎಂದರು.

ಏಕದಿನ ಕ್ರಿಕೆಟ್‌ನಲ್ಲಿ ಗೇಲ್‌ ಸಾಧನೆ
ಪಂದ್ಯ:
297
ಇನಿಂಗ್ಸ್‌:291
ರನ್‌: 10,393
ಗರಿಷ್ಠ:215
ಸರಾಸರಿ: 37.79
ಸ್ಟ್ರೈಕ್‌ರೇಟ್‌: 87.17
ಶತಕ: 25
ದ್ವಿಶತಕ: 01
ಅರ್ಧಶತಕ: 53
ಬೌಂಡರಿ: 1119
ಸಿಕ್ಸರ್ಸ್‌: 326
ವಿಕೆಟ್‌: 167
ಉತ್ತಮ: 46ಕ್ಕೆ5

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT