ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ICC T20 World Cup 2021: ಟಿ20 ವಿಶ್ವಕಪ್‌ ಟೂರ್ನಿಯ ವೇಳಾಪಟ್ಟಿ ಇಲ್ಲಿದೆ

Last Updated 17 ಆಗಸ್ಟ್ 2021, 9:03 IST
ಅಕ್ಷರ ಗಾತ್ರ

ಬೆಂಗಳೂರು: ಐಸಿಸಿ ಮಂಗಳವಾರ ಪುರುಷರ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯ ವೇಳಾಪಟ್ಟಿ ಬಿಡುಗಡೆ ಮಾಡಿದೆ. ಅಕ್ಟೋಬರ್‌ 17ರಿಂದ ಟೂರ್ನಿಯ ಪಂದ್ಯಗಳು ಶುರುವಾಗಲಿದ್ದು, ನವೆಂಬರ್‌ 14ರಂದು ಫೈನಲ್‌ ನಡೆಯಲಿದೆ.

ಅಕ್ಟೋಬರ್‌ 24ರಂದು ಭಾರತ ತಂಡವು ಪಾಕಿಸ್ತಾನದ ಎದುರು ಟೂರ್ನಿಯ ಮೊದಲ ಪಂದ್ಯ ಆಡಲಿದೆ. ದುಬೈನಲ್ಲಿ ಆ ಪಂದ್ಯ ನಿಗದಿಯಾಗಿದೆ. ಸೂಪರ್‌ 12 ಹಂತದ ಗ್ರೂಪ್‌ ಎರಡರಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳಿವೆ. ಪ್ರಸ್ತುತ ತಾಲಿಬಾನಿಗಳು ಅಧಿಕಾರಿ ವಹಿಸಿಕೊಂಡಿರುವ ಅಫ್ಗಾನಿಸ್ತಾನ ಸಹ ಎರಡನೇ ಗುಂಪಿನಲ್ಲಿದ್ದು, ನವೆಂಬರ್‌ 3ರಂದು ಅಬುಧಾಬಿಯಲ್ಲಿ ಭಾರತ–ಅಫ್ಗನ್‌ ಪಂದ್ಯ ನಿಗದಿಯಾಗಿದೆ.

ಮೊದಲ ಸೆಮಿಫೈನಲ್‌ ಅಬುಧಾಬಿಯಲ್ಲಿ ನವೆಂಬರ್‌ 10ರಂದು ಹಾಗೂ ಎರಡನೇ ಸೆಮಿಫೈನಲ್‌ ನವೆಂಬರ್‌ 11ರಂದು ದುಬೈನಲ್ಲಿ ನಡೆಯಲಿದೆ. ವಿಶ್ವಕಪ್‌ ಟೂರ್ನಿಯ ಕೊನೆಯ ಮತ್ತು ಫೈನಲ್‌ ಪಂದ್ಯ ನವೆಂಬರ್‌ 14 (ಭಾನುವಾರ), ದುಬೈನಲ್ಲಿ ಸಂಜೆ 6ಕ್ಕೆ (ಅಲ್ಲಿನ ಸ್ಥಳೀಯ ಕಾಲಮಾನ) ಆರಂಭವಾಗಲಿದೆ.

ಭಾರತದಲ್ಲಿ 2016ರಲ್ಲಿ ನಡೆದಿದ್ದ ಟಿ20 ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ ತಂಡವು ಇಂಗ್ಲೆಂಡ್‌ ತಂಡವನ್ನು ಮಣಿಸಿತ್ತು.

ಅಕ್ಟೋಬರ್‌ 22ರ ವರೆಗೂ ಅರ್ಹತಾ ಸುತ್ತು

ಭಾರತದಲ್ಲಿ ನಡೆಸಲು ಉದ್ದೇಶಿಸಿದ್ದ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯನ್ನು ಕೋವಿಡ್‌–19 ಕಾರಣಗಳಿಂದಾಗಿ ಯುಎಇ ಮತ್ತು ಒಮಾನ್‌ಗೆ ಸ್ಥಳಾಂತರಿಸಲಾಗಿದೆ. ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣ, ಅಬುಧಾಬಿಯ ಶೇಖ್‌ ಝಯೆದ್ ಕ್ರೀಡಾಂಗಣ, ಶಾರ್ಜಾ ಕ್ರೀಡಾಂಗಣ ಹಾಗೂ ಒಮಾನ್‌ ಕ್ರಿಕೆಟ್‌ ಅಕಾಡೆಮಿ ಮೈದಾನದಲ್ಲಿ 2021ರ ಅಕ್ಟೋಬರ್‌ 17ರಿಂದ ನವೆಂಬರ್‌ 14ರ ವರೆಗೂ ಟಿ20 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಗಳು ನಡೆಯಲಿವೆ.

ಅರ್ಹತೆಗಾಗಿ ಎಂಟು ತಂಡಗಳು ಟೂರ್ನಿಯ ಮೊದಲ ಸುತ್ತಿನಲ್ಲಿ ಸೆಣಸಲಿವೆ. ಒಮಾನ್‌ ಮತ್ತು ಯುಎಇ ಎರಡೂ ಕಡೆ ಅಕ್ಟೋಬರ್‌ 22ರ ವರೆಗೂ ಆರಂಭಿಕ ಸುತ್ತಿನ ಪಂದ್ಯಗಳು ನಡೆಯಲಿವೆ. ಎಂಟು ತಂಡಗಳ ಪೈಕಿ ನಾಲ್ಕು ತಂಡಗಳು 'ಸೂಪರ್‌ 12' ಸುತ್ತಿಗೆ ಅರ್ಹತೆ ಪಡೆಯುತ್ತವೆ, ಆ ತಂಡಗಳು ಈಗಾಗಲೇ ಅರ್ಹತೆ ಗಳಿಸಿರುವ 8 ತಂಡಗಳೊಂದಿಗೆ ಸೇರಲಿವೆ.

ಆರಂಭಿಕ ಸುತ್ತಿನ ಪಂದ್ಯಗಳಲ್ಲಿ ಸೆಣಸಲಿರುವ ಎಂಟು ತಂಡಗಳು:

1. ಬಾಂಗ್ಲಾದೇಶ
2. ಶ್ರೀಲಂಕಾ
3. ಐರ್ಲೆಂಡ್‌
4. ನೆದರ್ಲೆಂಡ್‌
5. ಸ್ಕಾಟ್‌ಲೆಂಡ್‌
6. ನಮೀಬಿಯಾ
7. ಒಮಾನ್‌
8. ಪಪುವಾ ನ್ಯೂ ಗ್ಯುನಿಯಾ

ಸೂಪರ್‌ 12: ಗ್ರೂಪ್‌ 2

ಅಕ್ಟೋಬರ್‌ 26ರಂದು ಪಾಕಿಸ್ತಾನ ಮತ್ತು ನ್ಯೂಜಿಲೆಂಡ್‌ ನಡುವೆ ಪಂದ್ಯ ನಡೆಯಲಿದೆ. ಅಕ್ಟೋಬರ್‌ 25ರಂದು ಟೂರ್ನಿಯ ಪ್ರಯಾಣ ಆರಂಭಿಸಲಿರುವ ಅಫ್ಗಾನಿಸ್ತಾನವು, ಮೊದಲ ಸುತ್ತಿನ 'ಗ್ರೂಪ್‌ ಬಿ' ವಿಜೇತ ತಂಡಕ್ಕೆ ಶಾರ್ಜಾದಲ್ಲಿ ಸವಾಲು ಹಾಕಲಿದೆ. ಭಾರತವು ಪಾಕಿಸ್ತಾನದ ನಂತರ ಅಕ್ಟೋಬರ್‌ 31ರಂದು ದುಬೈನಲ್ಲೇ ನ್ಯೂಜಿಲೆಂಡ್‌ ಎದುರು ಹೋರಾಡಲಿದೆ. 'ಗ್ರೂಪ್‌ ಬಿ' ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ತಂಡದೊಂದಿಗೆ ನವೆಂಬರ್‌ 5ರಂದು ಸೆಣಸಲಿದೆ. ನವೆಂಬರ್‌ 8ರಂದು ಭಾರತ ತಂಡವು 'ಎ ಗುಂಪಿನಲ್ಲಿ' ಜಯ ಸಾಧಿಸಿದ ತಂಡದೊಂದಿಗೆ ಕೊನೆಯ ಪಂದ್ಯ ಆಡಲಿದೆ.

ಸೂಪರ್‌ 12: ಗ್ರೂಪ್‌ 1

ಟಿ20 ವಿಶ್ವಕಪ್‌ ಟೂರ್ನಿಯ ಎರಡನೇ ಹಂತವಾದ ಸೂಪರ್‌ 12, ಅಕ್ಟೋಬರ್‌ 23ರಿಂದ ಅಬುಧಾಬಿಯಲ್ಲಿ ಆರಂಭವಾಗಲಿದೆ. ಒಂದನೇ ಗುಂಪಿನಲ್ಲಿ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗಲಿವೆ. ದುಬೈನಲ್ಲಿ ಇಂಗ್ಲೆಂಡ್‌ ಮತ್ತು ವೆಸ್ಟ್‌ ಇಂಡೀಸ್‌ ತಂಡಗಳು ಅದೇ ದಿನ ಸಂಜೆ ಕಣಕ್ಕಿಳಿಯಲಿವೆ.

ಅಕ್ಟೋಬರ್‌ 30ರಂದು ಇಂಗ್ಲೆಂಡ್‌ ಮತ್ತು ಆಸ್ಟ್ರೇಲಿಯಾ ನಡುವೆ ಹೈವೋಲ್ಟೇಜ್‌ ಪಂದ್ಯ ನಡೆಯಲಿದೆ. ನವೆಂಬರ್‌ 6ರಂದು ಮೊದಲ ಗುಂಪಿನ ಸೂಪರ್‌ 12 ಪಂದ್ಯಗಳು ಕೊನೆಯಾಗಲಿವೆ. ಅಂದು, ಅಬುಧಾಬಿಯಲ್ಲಿ ಆಸ್ಟ್ರೇಲಿಯಾ–ವೆಸ್ಟ್‌ ಇಂಡೀಸ್‌ ಹಾಗೂ ಶಾರ್ಜಾದಲ್ಲಿ ಇಂಗ್ಲೆಂಡ್‌–ದಕ್ಷಿಣ ಆಫ್ರಿಕಾ ತಂಡಗಳ ಪಂದ್ಯಗಳು ನಡೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT