ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷಪಾತದ ಆಧಾರದಲ್ಲಿ ರಾಹುಲ್‌ಗೆ ಟೆಸ್ಟ್ ತಂಡದಲ್ಲಿ ಸ್ಥಾನ: ವೆಂಕಟೇಶ್ ಪ್ರಸಾದ್

Last Updated 11 ಫೆಬ್ರುವರಿ 2023, 14:20 IST
ಅಕ್ಷರ ಗಾತ್ರ

ಮುಂಬೈ: ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್‌–ಗಾವಸ್ಕರ್ ಟೆಸ್ಟ್‌ ಸರಣಿಯ ಮೊದಲ ಪಂದ್ಯವನ್ನು ಇನಿಂಗ್ಸ್‌ ಹಾಗೂ 132 ರನ್ ಅಂತರದಿಂದ ಜಯಿಸಿರುವುದರ ಹೊರತಾಗಿಯೂ, ತಂಡದ ಆಯ್ಕೆ ಕುರಿತು ಮಾಜಿ ಕ್ರಿಕೆಟಿಗ ವೆಂಕಟೇಶ್‌ ಪ್ರಸಾದ್‌ ಅವರು ಶನಿವಾರ ಕಿಡಿಕಾರಿದ್ದಾರೆ. 'ಪಕ್ಷಪಾತ' ಧೋರಣೆಯಿಂದಾಗಿ ಕೆ.ಎಲ್‌.ರಾಹುಲ್‌ ಅವರಿಗೆ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಲಭಿಸಿದೆ ಎಂದು ಟೀಕಿಸಿದ್ದಾರೆ.

ಈಚೆಗೆ ಮುಕ್ತಾಯವಾದ ಟೆ20 ಹಾಗೂ ಏಕದಿನ ಕ್ರಿಕೆಟ್‌ ಸರಣಿಗಳಲ್ಲಿ ಅಮೋಘ ಪ್ರದರ್ಶನ ತೋರಿದ್ದ ಯುವ ಬ್ಯಾಟರ್‌ ಶುಭಮನ್‌ ಗಿಲ್‌ ಅವರ ಬದಲು 30 ವರ್ಷದ ರಾಹುಲ್‌ಗೆ ಆರಂಭಿಕ ಬ್ಯಾಟರ್‌ ಆಗಿ ಅವಕಾಶ ನೀಡಲಾಗಿತ್ತು. ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವಲ್ಲಿ ವಿಫಲರಾದ ಅವರು, ಕೇವಲ 20 ರನ್‌ ಗಳಿಸಿ ಔಟಾಗಿದ್ದರು.

ರಾಹುಲ್‌ ಆಯ್ಕೆ ಬಗ್ಗೆ ಟ್ವಿಟರ್‌ನಲ್ಲಿ ಟೀಕೆ ಮಾಡಿರುವ ಪ್ರಸಾದ್‌, 'ರಾಹುಲ್‌ ಅವರ ಪ್ರತಿಭೆ ಮತ್ತು ಸಾಮರ್ಥ್ಯದ ಬಗ್ಗೆ ಗೌರವವಿದೆ. ಆದರೆ, ಅವರ ಪ್ರದರ್ಶನವು ತೀರ ಕೆಳಮಟ್ಟದಲ್ಲಿದೆ. 46 ಪಂದ್ಯಗಳ ನಂತರವೂ ಅವರ ಟೆಸ್ಟ್ ಸರಾಸರಿ 34.07 ಆಗಿದೆ. 8 ವರ್ಷಕ್ಕಿಂತ ಹೆಚ್ಚು ಸಮಯ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಾಧಾರಣ ಆಟವಾಡಿದ್ದಾರೆ. ಇಷ್ಟು ಅವಕಾಶಗಳನ್ನು ಬೇರೆ ಯಾರಿಗಾದರೂ ನೀಡಲಾಗಿದೆಯೇ ಎಂಬ ಆಲೋಚನೆಯನ್ನೂ ಮಾಡಲಾರೆ. ಮುಖ್ಯವಾಗಿ ರಾಹುಲ್‌ ಆಯ್ಕೆಯು ಪ್ರದರ್ಶನದ ಆಧಾರದ ಮೇಲಿರದೆ, ಪಕ್ಷಪಾದಿಂದ ಕೂಡಿದೆ. ಆತ (ರಾಹುಲ್‌) ರನ್‌ ಗಳಿಸಲು ನಿರಂತರವಾಗಿ ವಿಫಲರಾಗುತ್ತಿದ್ದಾರೆ. ಎಂಟು ವರ್ಷಗಳಿಂದ ಆಡುತ್ತಿರುವ ಅವರು ತಮ್ಮ ಸಾಮರ್ಥ್ಯವನ್ನು ಪ್ರದರ್ಶನವನ್ನಾಗಿ ಬದಲಿಸಲು ಎಡವಿದ್ದಾರೆ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಮುಂದುವರಿದು, 'ಸಾಕಷ್ಟು ಮಂದಿ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಶುಭಮನ್‌ ಗಿಲ್‌ ಅಮೋಘ ಲಯದಲ್ಲಿದ್ದಾರೆ. ಸರ್ಫರಾಜ್ ಖಾನ್‌ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಶತಕಗಳನ್ನು ಸಿಡಿಸಿದ್ದಾರೆ. ರಾಹುಲ್‌ ಬದಲು ಅವಕಾಶ ಗಿಟ್ಟಿಸುವ ಸಾಮರ್ಥ್ಯವಿರುವ ಇನ್ನಷ್ಟು ಅರ್ಹರು ಇದ್ದಾರೆ. ಕೆಲವರು ಯಶಸ್ಸು ಸಾಧಿಸುವವರೆಗೂ ಕೊನೆಯೇ ಇಲ್ಲದಂತೆ ಅವಕಾಶಗಳನ್ನು ಗಿಟ್ಟಿಸಿಕೊಳ್ಳುವ ಅದೃಷ್ಟ ಹೊಂದಿರುತ್ತಾರೆ. ಅದೇವೇಳೆ ಅಂತಹ ಅವಕಾಶವೇ ಇಲ್ಲದವರೂ ಇದ್ದಾರೆ' ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಹುಲ್‌, ಐಪಿಎಲ್‌ನಲ್ಲಿ ಆಡುವ ಲಖನೌ ಸೂಪರ್‌ ಜೈಂಟ್ಸ್‌ ತಂಡದ ನಾಯಕರೂ ಹೌದು. ಹೀಗಾಗಿ ಐಪಿಎಲ್‌ನಿಂದ ಲಭಿಸುವ ಲಾಭಗಳನ್ನು ಗಮನದಲ್ಲಿರಿಸಿ ಕೆಲವು ಮಾಜಿ ಕ್ರಿಕೆಟಿಗರು ರಾಹುಲ್‌ ಪ್ರದರ್ಶನದ ಬಗ್ಗೆ ಮಾತನಾಡುತ್ತಿಲ್ಲ ಎಂದೂ ಹೇಳಿದ್ದಾರೆ.

ಸದ್ಯ ಭಾರತ ಕ್ರಿಕೆಟ್‌ ತಂಡದ ಉಪನಾಯಕರಾಗಿರುವ ರಾಹುಲ್‌ ಬದಲು, ಆ ಸ್ಥಾನ ತುಂಬುವ ಸಾಮರ್ಥ್ಯ ಹೊಂದಿರುವ ಐವರು ಆಟಗಾರರ ಹೆಸರುಗಳನ್ನು ಪ್ರಸಾದ್‌ ಸೂಚಿಸಿದ್ದಾರೆ.

'ಅಶ್ವಿನ್‌ಗೆ ಕ್ರಿಕೆಟ್‌ ಬಗ್ಗೆ ಅಪಾರ ಪ್ರಜ್ಞೆ ಇದೆ. ಅವರನ್ನು ಟೆಸ್ಟ್ ಮಾದರಿಗೆ ಉಪನಾಯಕರನ್ನಾಗಿ ನೇಮಿಸಬಹುದು. ಅವರಲ್ಲದಿದ್ದರೆ, ಚೇತೇಶ್ವರ ಪೂಜಾರ ಅಥವಾ ರವೀಂದ್ರ ಜಡೇಜ ಅವರನ್ನು ಆಯ್ಕೆ ಮಾಡಬಹುದು. ಟೆಸ್ಟ್‌ ಕ್ರಿಕೆಟ್‌ನಲ್ಲಿ ಮಯಂಕ್‌ ಅಗರವಾಲ್ ಹಾಗೂ ಹನುಮ ವಿಹಾರಿ ಅವರು ರಾಹುಲ್‌ಗಿಂತಲೂ ಹೆಚ್ಚಿನ ಪ್ರಭಾವ ಬೀರಿದ್ದಾರೆ' ಎಂದು ಅಭಿಪ್ರಾಯಪಟ್ಟಿದ್ದಾರೆ.

ಭಾರತಕ್ಕೆ ಜಯ
ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಬಾರ್ಡರ್‌–ಗಾವಸ್ಕರ್ ಟೆಸ್ಟ್ ಕ್ರಿಕೆಟ್‌ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಇನಿಂಗ್ಸ್‌ ಹಾಗೂ 132 ರನ್ ಅಂತರದ ಜಯ ಸಾಧಿಸಿದೆ.

ಗುರುವಾರ ಆರಂಭವಾದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ, ಮೊದಲ ಇನಿಂಗ್ಸ್‌ನಲ್ಲಿ 177 ರನ್‌ ಗಳಿಸಿ ಆಲೌಟ್‌ ಆಗಿತ್ತು. ಇದಕ್ಕುತ್ತರವಾಗಿ ಭಾರತ ತಂಡ 400 ರನ್‌ ಕಲೆಹಾಕಿತ್ತು. 228 ರನ್‌ಗಳ ಹಿನ್ನಡೆಯೊಂದಿಗೆ ಮೂರನೇ ದಿನ ಎರಡನೇ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ 91 ರನ್‌ ಗಳಿಸಿ ಆಲೌಟ್‌ ಆಗುವುದರೊಂದಿಗೆ ಇನಿಂಗ್ಸ್‌ ಹಾಗೂ 132 ರನ್‌ ಅಂತರದ ಸೋಲೊಪ್ಪಿಕೊಂಡಿದೆ.

ಈ ಜಯದೊಂದಿಗೆ ಭಾರತ ತಂಡ ನಾಲ್ಕು ಪಂದ್ಯಗಳ ಸರಣಿಯಲ್ಲಿ 1–0 ಅಂತರದ ಮುನ್ನಡೆ ಸಾಧಿಸಿದೆ. ಮುಂದಿನ ಪಂದ್ಯವು ದೆಹಲಿಯ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ಫೆಬ್ರುವರಿ 17ರಿಂದ 21ರ ವರೆಗೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT