ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs ENG: ಒಂದೇ ಓವರ್‌ನಲ್ಲಿ 35 ರನ್; ಯುವಿ ನೆನಪಿಸಿದ ಬೂಮ್ರಾ: ಸಚಿನ್ ಗುಣಗಾನ

ಅಕ್ಷರ ಗಾತ್ರ

ಎಜ್‌ಬಾಸ್ಟನ್: ಇಂಗ್ಲೆಂಡ್ ವೇಗದ ಬೌಲರ್ ಸ್ಟುವರ್ಟ್ ಬ್ರಾಡ್ ಎಸೆದ ಓವರ್‌ವೊಂದರಲ್ಲಿ 35 ರನ್ ಸಿಡಿಸುವ (6 ಇತರೆ ರನ್ ಸೇರಿದಂತೆ) ಮೂಲಕ ಟೀಮ್ ಇಂಡಿಯಾ ನಾಯಕ ಜಸ್‌ಪ್ರೀತ್ ಬೂಮ್ರಾ ದಾಖಲೆ ಪುಟ ಸೇರಿದ್ದಾರೆ.

ಆತಿಥೇಯ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಬೂಮ್ರಾ ಅಬ್ಬರಿಸಿದರು.

ಕಪಿಲ್ ದೇವ್ ಬಳಿಕ ಭಾರತ ಟೆಸ್ಟ್ ತಂಡದ ನಾಯಕತ್ವ ವಹಿಸಿದ ಮೊದಲ ವೇಗದ ಬೌಲರ್ ಎನಿಸಿರುವ ಬೂಮ್ರಾ, ಬ್ಯಾಟಿಂಗ್‌ನಲ್ಲೂ ಮೋಡಿ ಮಾಡಿದರು.

ಬ್ರಾಡ್ ಎಸೆದ ಇನ್ನಿಂಗ್ಸ್‌ನ 84ನೇ ಓವರ್‌ನಲ್ಲಿ ಎರಡು ಸಿಕ್ಸರ್, ನಾಲ್ಕು ಬೌಂಡರಿ ಸೇರಿದಂತೆ ಒಟ್ಟು 35 ರನ್ ಚಚ್ಚಿದರು.

ಈ ಮೂಲಕ ಬ್ರಾಡ್, ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಓವರ್‌ವೊಂದರಲ್ಲಿ ಅತಿ ಹೆಚ್ಚು ರನ್ ಬಿಟ್ಟುಕೊಟ್ಟ ಬೌಲರ್ ಎಂಬ ಅಪಖ್ಯಾತಿಗೊಳಗಾದರು.

ಈ ಹಿಂದೆ 2003ರ ಜೋಹಾನ್ಸ್‌ಬರ್ಗ್ ಟೆಸ್ಟ್ ಪಂದ್ಯದಲ್ಲಿ ವೆಸ್ಟ್‌ಇಂಡೀಸ್‌ನ ದಿಗ್ಗಜ ಬ್ರಿಯಾನ್ ಲಾರಾ ಅವರು ಆರ್. ಪೀಟರ್ಸನ್ ಓವರ್‌ನಲ್ಲಿ 28 ರನ್ ಗಳಿಸಿದ್ದು, ಈ ವರೆಗಿನ ದಾಖಲೆಯಾಗಿತ್ತು. ಈ ದಾಖಲೆಯನ್ನೀಗ ಬೂಮ್ರಾ ಮುರಿದಿದ್ದಾರೆ.

ಕಾಕತಾಳೀಯವೆಂಬಂತೆ ಟ್ವೆಂಟಿ-20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಬಿಟ್ಟುಕೊಟ್ಟ ದಾಖಲೆಯನ್ನೂ ಬ್ರಾಡ್ ಹೊಂದಿದ್ದಾರೆ. 2007ರ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಬ್ರಾಡ್ ಎಸೆದ ಓವರ್‌ನ ಎಲ್ಲ ಆರು ಎಸೆತಗಳನ್ನು ಸಿಕ್ಸರ್‌ಗಟ್ಟಿದ ಮಾಜಿ ಬ್ಯಾಟರ್ ಯುವರಾಜ್ ಸಿಂಗ್ ದಾಖಲೆ ಬರೆದಿದ್ದರು.

ಇದನ್ನೇ ಉಲ್ಲೇಖ ಮಾಡಿರುವ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್, 'ಇದು ಯುವಿಯೇ ಅಥವಾ ಬೂಮ್ರಾ ಅವರೇ? 2007ರ ಆಟ ನೆನಪಿಸುವಂತಿತ್ತು' ಎಂದು ಟ್ವೀಟ್ ಮಾಡಿದ್ದಾರೆ.

ಬೂಮ್ರಾ ಅಬ್ಬರ ಹೀಗಿತ್ತು: 4, Wd5,N6,4,4,4,6,1

ಬ್ರಾಡ್ ಅವರ 84ನೇ ಓವರ್‌ನ ಮೊದಲ ಎಸೆತವನ್ನು ಬೂಮ್ರಾ ಬೌಂಡರಿಗಟ್ಟಿದರು. ಎರಡನೇ ಎಸೆತದಲ್ಲಿ ವೈಡ್ ಮೂಲಕ ಐದು ರನ್ ಹರಿದು ಬಂದವು.

ಬಳಿಕದ ಎಸೆತವನ್ನು ಸಿಕ್ಸರ್‌ಗೆ ಅಟ್ಟಿದರು. ಅದು ಕೂಡ ನೋ ಬಾಲ್ ಆಗಿತ್ತು. ಎರಡು, ಮೂರು ಹಾಗೂ ನಾಲ್ಕನೇ ಎಸೆತದಲ್ಲಿ 'ಹ್ಯಾಟ್ರಿಕ್' ಬೌಂಡರಿ ಗಳಿಸಿದರು.

ಐದನೇ ಎಸೆತದಲ್ಲಿಮಗದೊಮ್ಮೆ ಸಿಕ್ಸರ್‌ ಬಾರಿಸಿದರು. ಕೊನೆಯ ಎಸೆತದಲ್ಲಿ ಒಂಟಿ ರನ್ ಗಳಿಸುವ ಮೂಲಕ ಒಟ್ಟು 35 ರನ್ ಸೊರೆಗೈದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT