ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಲ್ಡೀವ್ಸ್ ಪ್ರವಾಸದಿಂದ ಹಿಂದಿರುಗಿದ ಕೊಹ್ಲಿಗೆ ಕೋವಿಡ್ ದೃಢ: ಬಿಸಿಸಿಐ ಎಚ್ಚರಿಕೆ

ಅಕ್ಷರ ಗಾತ್ರ

ನವದೆಹಲಿ: ಮಾಲ್ಡೀವ್ಸ್‌ ಪ್ರವಾಸದಿಂದ ಹಿಂದಿರುಗಿದ ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ.

ಇತ್ತೀಚಿಗಷ್ಟೇ ಮುಕ್ತಾಯಗೊಂಡ ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಟಿ–20 ಸರಣಿಯಿಂದ ವಿಶ್ರಾಂತಿ ಪಡೆದಿದ್ದ ವಿರಾಟ್‌ ಕೊಹ್ಲಿ, ಪತ್ನಿ ಅನುಷ್ಕಾ ಶರ್ಮಾ ಮತ್ತು ಮಗಳು ವಾಮಿಕಾ ಅವರೊಂದಿಗೆ ಮಾಲ್ಡೀವ್ಸ್‌ಗೆ ಪ್ರವಾಸಕ್ಕೆ ತೆರಳಿದ್ದರು.

ಪ್ರವಾಸ ಮುಗಿಸಿ ಭಾರತಕ್ಕೆ ಹಿಂತಿರುಗಿದ ಬೆನ್ನಲ್ಲೇ ಕೊಹ್ಲಿ ಅವರು ಕೊರೊನಾ ವೈರಸ್‌ ಸೋಂಕಿಗೆ ತುತ್ತಾಗಿದ್ದರು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಇಂಗ್ಲೆಂಡ್‌ ವಿರುದ್ಧದ ಐದನೇ ಹಾಗೂ ಕೊನೆಯ ಕ್ರಿಕೆಟ್‌ ಟೆಸ್ಟ್‌ ಪಂದ್ಯಕ್ಕೆ ಸಜ್ಜಾಗುತ್ತಿರುವ ಭಾರತ ತಂಡದಲ್ಲಿ ವಿರಾಟ್‌ ಕೊಹ್ಲಿ ಸ್ಥಾನ ಪಡೆದಿದ್ದು, ಸದ್ಯ ಇಂಗ್ಲೆಂಡ್‌ನಲ್ಲಿ ಬೀಡು ಬಿಟ್ಟಿದ್ದಾರೆ.

ಲೆಸ್ಟರ್‌ಷೈರ್‌ ಕೌಂಟಿ ಮೈದಾನದಲ್ಲಿ ಸೋಮವಾರ ವಿರಾಟ್‌ ಕೊಹ್ಲಿ ಅಭ್ಯಾಸ ನಡೆಸಿದ್ದರು.

ಇಂಗ್ಲೆಂಡ್‌ ಎದುರಿನ ಐದು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಭಾರತ 2–1 ರಲ್ಲಿ ಮುನ್ನಡೆಯಲ್ಲಿದೆ. ಈ ಸರಣಿಯ ನಾಲ್ಕು ಪಂದ್ಯಗಳು ಕಳೆದ ವರ್ಷ ನಡೆದಿತ್ತು. ಕೋವಿಡ್‌ ಕಾರಣ ಮುಂದೂಡಲಾಗಿದ್ದ ಕೊನೆಯ ಟೆಸ್ಟ್‌ ಜುಲೈ 1 ರಂದು ಬರ್ಮಿಂಗ್‌ಹ್ಯಾಂನಲ್ಲಿ ಆರಂಭವಾಗಲಿದೆ. ಆರಂಭಿಕ ಬ್ಯಾಟರ್‌ಗಳಾದ ರೋಹಿತ್‌ ಶರ್ಮ ಮತ್ತು ಶುಭಮನ್‌ ಗಿಲ್‌ ಅವರು ತುಂಬಾ ಹೊತ್ತು ನೆಟ್ಸ್‌ನಲ್ಲಿ ಅಭ್ಯಾಸ ನಡೆಸಿದರು. ಕೆ.ಎಲ್‌.ರಾಹುಲ್‌ ಅನುಪಸ್ಥಿತಿಯಲ್ಲಿ ಗಿಲ್‌ ಅವರು ರೋಹಿತ್‌ ಜತೆ ಭಾರತದ ಇನಿಂಗ್ಸ್‌ ಆರಂಭಿಸುವ ಸಾಧ್ಯತೆಯಿದೆ.

ತಂಡದ ಇತರ ಸದಸ್ಯರಾದ ವಿರಾಟ್‌ ಕೊಹ್ಲಿ, ಚೇತೇಶ್ವರ ಪೂಜಾರ, ರವೀಂದ್ರ ಜಡೇಜ, ಜಸ್‌ಪ್ರೀತ್‌ ಬೂಮ್ರಾ ಅವರೂ ದೈಹಿಕ ಕಸರತ್ತು ನಡೆಸಿದರು.

ಭಾರತ ತಂಡ ಜೂನ್‌ 24ರಿಂದ ನಾಲ್ಕು ದಿನಗಳ ಅಭ್ಯಾಸ ಪಂದ್ಯವನ್ನಾಡಲಿದೆ. ಟೆಸ್ಟ್‌ ಪಂದ್ಯದ ಬಳಿಕ ತಲಾ ಮೂರು ಏಕದಿನ ಮತ್ತು ಟಿ20 ಪಂದ್ಯಗಳನ್ನೂ ಆಡಲಿದೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಖಜಾಂಚಿ ಅರುಣ್ ಧುಮಾಲ್ ಅವರು ಆಟಗಾರರಿಗೆ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಸಲಹೆ ನೀಡಿದ್ದಾರೆ.

ಅಶ್ವಿನ್‌ಗೆ ಕೋವಿಡ್‌: ಅನುಭವಿ ಸ್ಪಿನ್ನರ್ ಆರ್‌. ಅಶ್ವಿನ್ ಅವರಿಗೆ ಕೋವಿಡ್‌ ಖಚಿತಪಟ್ಟಿದ್ದು ಅವರು ತಂಡದೊಂದಿಗೆ ಇಂಗ್ಲೆಂಡ್‌ಗೆ ತೆರಳಿಲ್ಲ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಅಶ್ವಿನ್ ಅವರು ಸದ್ಯಕ್ಕೆ ಕ್ವಾರಂಟೈನ್‌ನಲ್ಲಿದ್ದಾರೆ. ಎಲ್ಲ ನಿಯಮಗಳನ್ನು ಪೂರ್ಣಗೊಳಿಸಿದ ಬಳಿಕ ತಂಡವನ್ನು ಸೇರಿಕೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT