ಮಂಗಳವಾರ, ಜನವರಿ 18, 2022
23 °C

IND vs NZ 2nd Test: ಮಯಂಕ್ ಅಮೋಘ ಶತಕ; ಮೊದಲ ದಿನದಂತ್ಯಕ್ಕೆ ಭಾರತ 221/4

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಯಂಕ್ ಅಗರವಾಲ್

ಮುಂಬೈ: ಬೆಂಗಳೂರು ಹುಡುಗ ಮಯಂಕ್ ಅಗರವಾಲ್ ಶುಕ್ರವಾರ ಗಳಿಸಿದ ಸುಂದರ ಶತಕದಿಂದಾಗಿ ಭಾರತ ತಂಡದ ಆತಂಕ ದೂರವಾಯಿತು.

 

ವಾಂಖೆಡೆ ಕ್ರೀಡಾಂಗಣದಲ್ಲಿ ಆರಂಭವಾದ ಎರಡನೇ ಟೆಸ್ಟ್‌ನಲ್ಲಿ ನ್ಯೂಜಿಲೆಂಡ್ ತಂಡದ ಎಡಗೈ ಸ್ಪಿನ್ನರ್ ಎಜಾಜ್ ಪಟೇಲ್ (73ಕ್ಕೆ4) ಕೊಟ್ಟ ಪೆಟ್ಟಿಗೆ ನಲುಗಿತ್ತು. ಆದರೆ ಆರಂಭಿಕ ಬ್ಯಾಟರ್ ಮಯಂಕ್ (ಔಟಾಗದೆ 120; 246ಎಸೆತ, 4X14, 6X4) ಸರಿಯಾದ ಸಮಯದಲ್ಲಿ ಲಯಕ್ಕೆ ಮರಳಿದರು. ಇದರೊಂದಿಗೆ ಮೊದಲ ದಿನದಾಟದಲ್ಲಿ ಭಾರತ ತಂಡವು 70 ಓವರ್‌ಗಳಲ್ಲಿ 4ಕ್ಕೆ 221 ರನ್ ಗಳಿಸಿತು. ಮಯಂಕ್ ಮತ್ತು ವೃದ್ಧಿಮಾನ್ ಸಹಾ (ಔಟಾಗದೆ 25) ಕ್ರೀಸ್‌ನಲ್ಲಿದ್ದಾರೆ.

 

2019ರ ನವೆಂಬರ್‌ನಲ್ಲಿ ದ್ವಿಶತಕ ಬಾರಿಸಿದ ನಂತರ ಬ್ಯಾಟಿಂಗ್‌ನಲ್ಲಿ ಸತತ ವೈಫಲ್ಯ ಅನುಭವಿಸಿದ್ದ ಮಯಂಕ್ ವಾಂಖೆಡೆಯಲ್ಲಿ ಅಮೋಘ ಆಟವಾಡಿದರು. ಈ ಸರಣಿಯ ಮೊದಲ ಪಂದ್ಯದಲ್ಲಿಯೂ ಅವರು ಹೆಚ್ಚು ರನ್ ಗಳಿಸಿರಲಿಲ್ಲ. ಅನುಭವಿ ಆಟಗಾರರಾದ ರೋಹಿತ್ ಶರ್ಮಾ ಮತ್ತು ಗಾಯಗೊಂಡಿರುವ ಕೆ.ಎಲ್. ರಾಹುಲ್ ತಂಡದಲ್ಲಿ ಇಲ್ಲದ ಕಾರಣಕ್ಕೆ ಸ್ಥಾನ ಪಡೆದಿದ್ದ ಮಯಂಕ್ ತಮ್ಮ ಸಾಮರ್ಥ್ಯ ಸಾಬೀತು ಮಾಡಿದರು. ಆದರೆ, ನಿರಾಶೆ, ವೈಫಲ್ಯಗಳನ್ನು ಗಂಟುಮೂಟೆ ಕಟ್ಟಿ ಮುಂಬೈನ ಸಮುದ್ರಕ್ಕೆ ಎಸೆದುಬಿಟ್ಟರು!

ಗುರುವಾರ ರಾತ್ರಿ ಸುರಿದ ಮಳೆಯಿಂದಾಗಿ ಹಸಿಯಾಗಿದ್ದ ಕ್ರೀಡಾಂಗಣದಲ್ಲಿ ಊಟದ ವಿರಾಮದ ನಂತರ ಪಂದ್ಯ ಆರಂಭವಾಯಿತು. ಟಾಸ್ ಗೆದ್ದ ಆತಿಥೇಯ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಮಯಂಕ್ ಮತ್ತು ಶುಭಮನ್ ಗಿಲ್ (44; 71ಎಸೆತ) ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್ ಜೊತೆಯಾಟದಲ್ಲಿ 80 ರನ್ ಸೇರಿಸಿದರು. ಈ ಹಂತದಲ್ಲಿ ಭಾರತ ತಂಡದ ಇನಿಂಗ್ಸ್‌ಗೆ ಎಜಾಜ್ ಪಟೇಲ್ ಬಲವಾದ ಪೆಟ್ಟುಕೊಟ್ಟರು.

28ನೇ ಓವರ್‌ನಲ್ಲಿ ಗಿಲ್ ವಿಕೆಟ್ ಪಡೆದ ಪಟೇಲ್,  ತಮ್ಮ ಇನ್ನೊಂದು ಓವರ್‌ನಲ್ಲಿ ಚೇತೇಶ್ವರ್ ಪೂಜಾರ ಮತ್ತು ವಿರಾಟ್ ಕೊಹ್ಲಿ ಅವರಿಗೆ ಖಾತೆ ತೆರೆಯಲೂ ಬಿಡದೇ ಪೆವಿಲಿಯನ್‌ಗೆ ಮರಳಿ ಕಳಿಸಿದರು. ವಿರಾಟ್‌ ಯುಡಿಆರ್‌ಎಸ್‌ನಲ್ಲಿಯೂ ತಮ್ಮ ವಿರುದ್ಧ ಬಂದ ಎಲ್‌ಬಿಡಬ್ಲ್ಯು ತೀರ್ಪಿಗೆ ಅಸಮಾಧಾನ ವ್ಯಕ್ತಪಡಿಸುತ್ತಲೇ ನಿರ್ಗಮಿಸಿದರು.

ತವರಿನಂಗಳದಲ್ಲಿ ಮೊದಲ ಬಾರಿಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಆಡುತ್ತಿರುವ ಶ್ರೇಯಸ್ ಅಯ್ಯರ್ (18; 41ಎ, 4X3) ಮಯಂಕ್ ಜೊತೆಗೂಡಿದರು. ಕಾನ್ಪುರ ಟೆಸ್ಟ್‌ನಲ್ಲಿ ಪದಾರ್ಪಣೆ ಮಾಡಿದ್ದ ಶ್ರೇಯಸ್ ಶತಕ ಬಾರಿಸಿದ್ದರು. ಇಲ್ಲಿಯೂ ಅವರು ಉತ್ತಮವಾಗಿ ಬ್ಯಾಟಿಂಗ್ ಮಾಡಿದರು. ಇಬ್ಬರೂ ವಿಕೆಟ್ ಪತನಕ್ಕೆ ತಡೆಯೊಡ್ಡಿದರು. 119 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಮಯಂಕ್ ನಂತರದ ಆಟದಲ್ಲಿ ವೇಗ ಹೆಚ್ಚಿಸಿದರು.

ಅದರಲ್ಲೂ ಯಶಸ್ವಿ ಬೌಲರ್ ಪಟೇಲ್ ಮತ್ತು ಕೈಲ್ ಜೆಮಿಸನ್‌ಗೆ ಪಾಠ ಕಲಿಸಿದರು. ಪ್ಯಾಡಲ್‌ ಸ್ವೀಪ್‌ಗಳ ಮೂಲಕ ತಮ್ಮ ಸುತ್ತಲೂ ನಿಂತ ಫೀಲ್ಡರ್‌ಗಳ ಮಧ್ಯದಿಂದ ಚೆಂಡನ್ನು ಬೌಂಡರಿಗೆ ಕಳಿಸಿದ ಮಯಂಕ್ ಆಟ ಚಿತ್ತಾಪಹಾರಿಯಾಗಿತ್ತು. ಎರಡು ಅಡಿ ಮುಂದಿಟ್ಟು ಸಿಕ್ಸರ್‌ ಕೂಡ ಹೊಡೆದರು. ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಕೂಡ ಮಯಂಕ್ ಆಟಕ್ಕೆ ತಲೆದೂಗಿದರು.

ಇನ್ನೊಂದು ಬದಿಯಲ್ಲಿ ಶ್ರೇಯಸ್ ತಮ್ಮ ಗೆಳೆಯನ ಆಟವನ್ನು ಕಣ್ತುಂಬಿಕೊಂಡರು. ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 80 ರನ್ ಸೇರಿಸಿದರು. ಶ್ರೇಯಸ್ ವಿಕೆಟ್ ಗಳಿಸಿದ ಪಟೇಲ್ ಈ ಜೊತೆಯಾಟವನ್ನೂ ಮುರಿದರು.

ತಾವೆದುರಿಸಿದ 196ನೇ ಎಸೆತದಲ್ಲಿ ಶತಕದ ಗಡಿ ಮುಟ್ಟಿದ ಮಯಂಕ್ ಮೇಲಕ್ಕೆ ಜಿಗಿದು, ಗಾಳಿಯಲ್ಲಿ ಬ್ಯಾಟ್‌ ಬೀಸಿ ಸಂಭ್ರಮಿಸಿದರು. ಆಗಸದತ್ತ ನೋಡಿ ಭಾವುಕರಾದರು. ಮತ್ತೆ ತಮ್ಮ ಅಂದದ ಆಟ ಮುಂದು ವರಿಸಿದರು. ಅವರಿಗೆ ಸಹಾ ಜೊತೆಗೂಡಿದರು.

ಮಯಂಕ್ ಶತಕದ ಅಬ್ಬರ...
ಒಂದೆಡೆ ವಿಕೆಟ್‌ಗಳ ಪತನಗೊಳ್ಳುತ್ತಿದ್ದರೂ ಆಕರ್ಷಕ ಇನ್ನಿಂಗ್ಸ್ ಕಟ್ಟಿದ ಮಯಂಕ್ ಅಗರವಾಲ್ ಶತಕ ಸಾಧನೆ ಮಾಡಿದರು. ಅಲ್ಲದೆ ಭಾರತ ತಂಡವು ಮೇಲುಗೈ ಸಾಧಿಸಲು ನೆರವಾದರು. 

ಈ ನಡುವೆ ಕಳೆದ ಪಂದ್ಯದ ಹೀರೊ ಶ್ರೇಯಸ್ ಅಯ್ಯರ್ (18)  ಅವರನ್ನು ಎಜಾಜ್ ಪಟೇಲ್ ಹೊರದಬ್ಬಿದರು. 

ಆದರೆ ವೃದ್ಧಿಮಾನ್ ಸಹಾ ಅವರೊಂದಿಗೆ ಮುರಿಯದ ಐದನೇ ವಿಕೆಟ್‌ಗೆ 61 ರನ್‌ಗಳ ಜೊತೆಯಾಟ ಕಟ್ಟಿರುವ ಮಯಂಕ್, ತಂಡವು ಉತ್ತಮ ಮೊತ್ತ ಪೇರಿಸಲು ನೆರವಾದರು. 

246 ಎಸೆತಗಳನ್ನು ಎದುರಿಸಿರುವ ಮಯಂಕ್ 14 ಬೌಂಡರಿ ಹಾಗೂ ನಾಲ್ಕು ಸಿಕ್ಸರ್ ನೆರವಿನಿಂದ 120 ರನ್ ಗಳಿಸಿ ಔಟಾಗದೆ ಉಳಿದರು. ಅವರಿಗೆ ತಕ್ಕ ಸಾಥ್ ನೀಡುತ್ತಿರುವ ಸಹಾ 25 ರನ್ ಗಳಿಸಿ ಎರಡನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. 

ಕಿವೀಸ್ ಪರ ಎಜಾಜ್ ಪಟೇಲ್ 73 ರನ್ ತೆತ್ತು ನಾಲ್ಕು ವಿಕೆಟ್ ಕಬಳಿಸಿದರು. 

ದ್ರಾವಿಡ್ ಸಲಹೆ; ಸನ್ನಿ ಶೈಲಿ!

ಮುಂಬೈ (ಪಿಟಿಐ): ಸತತ ವೈಫಲ್ಯ ಅನುಭವಿಸಿದ್ದ ಮಯಂಕ್ ಅಗರವಾಲ್ ಶುಕ್ರವಾರ ವಾಂಖೆಡೆ ಕ್ರೀಡಾಂಗಣದಲ್ಲಿ ಶತಕ ಸಾಧನೆಯ ಹಿಂದಿನ ಗುಟ್ಟು ಬಿಚ್ಚಿಟ್ಟಿದ್ದಾರೆ.

ಅವರ ಈ ಸಾಧನೆಯ ಹಿಂದೆ ಇಬ್ಬರು ದಿಗ್ಗಜ ಬ್ಯಾಟ್ಸ್‌ಮನ್‌ಗಳ ಮಾರ್ಗದರ್ಶನವಿದೆ. ಭಾರತದ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮತ್ತು ಮಾಜಿ ಕ್ರಿಕೆಟಿಗ ಸುನೀಲ್ ಗಾವಸ್ಕರ್ ಅವರ ಸಲಹೆಗಳಿಂದಾಗಿ ಮಯಂಕ್ ಮತ್ತೆ ಲಯಕ್ಕೆ ಮರಳಿದ್ದಾರೆ.

‘ಹನ್ನೊಂದರ ಬಳಗದಲ್ಲಿ ಆಯ್ಕೆಯಾದ ಮೇಲೆ ರಾಹುಲ್ ಭಾಯ್ (ದ್ರಾವಿಡ್) ಸಂಪೂರ್ಣ ಸಾಮರ್ಥ್ಯವನ್ನು ಪಣಕ್ಕೊಡ್ಡಿ ಆಡು. ಶ್ರೇಷ್ಠ ಆಟವಾಡು ಎಂದು ಬೆನ್ನುತಟ್ಟಿದರು. ಯಾವುದು ನಿನ್ನ ನಿಯಂತ್ರಣದಲ್ಲಿದಿಯೊ ಅದರ ಬಗ್ಗೆ ಮಾತ್ರ ಯೋಚಿಸು. ಉಳಿದೆಲ್ಲವನ್ನೂ ಬಿಟ್ಟುಬಿಡು ಎಂದೂ ರಾಹುಲ್ ಹೇಳಿದ್ದರು. ಅವರ ಮಾತುಗಳು ನನ್ನ ಮೇಲೆ ಪ್ರಭಾವ ಬೀರಿದವು’ ಎಂದು ಮಯಂಕ್ ದಿನದಾಟದ ನಂತರ ಹೇಳಿದರು.

‘ಕ್ರೀಸ್‌ನಲ್ಲಿ ಒಂದೊಮ್ಮೆ  ಕಾಲೂರಿದ ನಂತರ ದೊಡ್ಡ ಮೊತ್ತ ಗಳಿಸುವತ್ತ ಚಿತ್ತ ಹರಿಸು. ಏಕಾಗ್ರತೆ ಕಳೆದುಕೊಳ್ಳಬೇಡವೆಂದು ರಾಹುಲ್ ಹೇಳಿದ್ದರು. ಅದರಂತೆ ಆಡಿದೆ’ ಎಂದರು.

‘ನನ್ನ ಬ್ಯಾಟಿಂಗ್‌ ಶೈಲಿಯಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಳ್ಳಲು ಸುನೀಲ್ ಗಾವಸ್ಕರ್ ನೀಡಿದ್ದ ಸಲಹೆ ನೆರವಾಯಿತು. ಬ್ಯಾಕ್‌ ಲಿಫ್ಟ್‌ ನಲ್ಲಿ ಬ್ಯಾಟ್‌ ಎತ್ತರಕ್ಕೆ ಹಿಡಿಯುವ ನನ್ನ ರೂಢಿಯನ್ನು ಬದಲಿಸಿ, ತುಸು ಕೆಳಮಟ್ಟದಲ್ಲಿ ಬ್ಯಾಟ್ ಹಿಡಿಯುವಂತೆ ಹೇಳಿದ್ದರು. ಅವರ ಭುಜದ ಚಲನೆ ಮತ್ತು ಶೈಲಿಯನ್ನು ನಾನು ಅನುಕರಿಸಿದೆ‘ ಎಂದು ಮಯಂಕ್ ಹೇಳಿದರು.

ಹುಟ್ಟಿದೂರಿನಲ್ಲಿ ಮಿಂಚಿದ ಪಟೇಲ್

ನ್ಯೂಜಿಲೆಂಡ್ ತಂಡದ ಎಡಗೈ ಸ್ಪಿನ್ನರ್ ಎಜಾಜ್ ಪಟೇಲ್‌ ಅವರಿಗೆ ಶುಕ್ರವಾರ ಅವಿಸ್ಮರಣೀಯ ದಿನವಾಯಿತು.

ತಾವು ಜನಿಸಿದ ಊರಿನಲ್ಲಿಯೇ ಟೆಸ್ಟ್ ಆಡುವ ಅವಕಾಶ ಪಡೆದ ಅವರು, ಭಾರತದ ಅಗ್ರಕ್ರಮಾಂಕದ ನಾಲ್ಕು ವಿಕೆಟ್‌ಗಳನ್ನು ಬುಟ್ಟಿಗೆ ಹಾಕಿಕೊಂಡ ಸಾಧನೆಯನ್ನೂ ಮಾಡಿದರು.

‘ತವರಿನಂಗಳದಲ್ಲಿ ಆಡುವ ಕನಸಿತ್ತು. ಆದರೆ, ಪಂದ್ಯದ ಮೊದಲ ದಿನವೇ ಇಂತಹದೊಂದು ಸಾಧನೆ ಮಾಡಿದ್ದು ಅಪಾರ ಖುಷಿಯಾಗಿದೆ. ಆದರೆ  ಇನ್ನೂ ಅರ್ಧ ಕೆಲಸ ಬಾಕಿಯಿದೆ. ತಂಡದ ಗೆಲುವಿಗೆ ಮತ್ತಷ್ಟು ಕಾಣಿಕೆ ನೀಡಬೇಕಿದೆ’ ಎಂದು ಪಟೇಲ್ ಹೇಳಿದರು.

ಅವರು ಮೊದಲ ದಿನದಾಟದಲ್ಲಿ ನಾಲ್ಕು ವಿಕೆಟ್‌ಗಳನ್ನು ಗಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು