ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಕ್ರಿಕೆಟ್: ಭಾರತಕ್ಕೆ ಹ್ಯಾಟ್ರಿಕ್‌ ಸೋಲು, ಕ್ಲೀನ್ ಸ್ವೀಪ್ ಸಾಧಿಸಿದ ಆಸಿಸ್

Published 2 ಜನವರಿ 2024, 14:54 IST
Last Updated 2 ಜನವರಿ 2024, 14:54 IST
ಅಕ್ಷರ ಗಾತ್ರ

ಮುಂಬೈ: ಆತಿಥೇಯ ಭಾರತ ಮಹಿಳಾ ಕ್ರಿಕೆಟ್‌ ತಂಡದ ವಿರುದ್ಧ ಇಂದು ನಡೆದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲೂ ಆಸ್ಟ್ರೇಲಿಯಾ ಗೆಲುವು ದಾಖಲಿಸಿದೆ. ಈ ಜಯದೊಂದಿಗೆ ಪ್ರವಾಸಿ ಪಡೆ ಕ್ಲೀನ್‌ ಸ್ವೀಪ್‌ ಸಾಧನೆ ಮಾಡಿದೆ.

ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪ್ರವಾಸಿ ಪಡೆ, ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 338 ರನ್‌ ಕಲೆಹಾಕಿತ್ತು. ಈ ಗುರಿ ಎದುರು ದಿಟ್ಟ ಆಟವಾಡಲು ವಿಫಲವಾದ ಭಾರತ, 140 ರನ್‌ ಗಳಿಸುವಷ್ಟರಲ್ಲೇ ಆಲೌಟ್‌ ಆಗಿ, 190 ರನ್‌ ಅಂತರದ ಹೀನಾಯ ಸೋಲು ಅನುಭವಿಸಿತು.

ಸ್ಮೃತಿ ಮಂದಾನ (29), ಜೆಮಿಮಾ ರಾಡ್ರಿಗಸ್‌ (25), ದೀಪ್ತಿ ಶರ್ಮಾ (25) ಮತ್ತು ಪೂಜಾ ವಸ್ತ್ರಾಕರ್‌ (14) ಹೊರತು ಪಡಿಸಿ ಉಳಿದ ಯಾವೊಬ್ಬ ಬ್ಯಾಟರ್‌ ಎರಡಂಕಿ ಮೊತ್ತ ಗಳಿಸಲಿಲ್ಲ. ಆಸಿಸ್‌ ಪರ ಜಾರ್ಜಿಯಾ ವೆರ್ಹಾಮ್ ಮೂರು ವಿಕೆಟ್‌ ಪಡೆದರೆ, ಮೆಗನ್‌ ಸ್ಕಟ್‌, ಅನ್ನಾಬೆಲ್‌ ಸುಥರ್‌ಲ್ಯಾಂಡ್ ಮತ್ತು ಅಲನಾ ಕಿಂಗ್‌ ತಲಾ ಎರಡು ವಿಕೆಟ್ ಕಿತ್ತರು. ಇನ್ನೊಂದು ವಿಕೆಟ್‌ ಆ್ಯಶ್ಲೇ ಗಾರ್ಡನರ್‌ ಅವರ ಪಾಲಾಯಿತು.

ಮಿಂಚಿದ ಲಿಚ್‌ಫೀಲ್ಡ್‌
ಟಾಸ್‌ ಗೆದ್ದು ಬ್ಯಾಟಿಂಗ್ ಆರಂಭಿಸಿದ ಆಸಿಸ್‌ಗೆ ಫೊಯೆಬೆ ಲಿಚ್‌ಫೀಲ್ಡ್‌ ಹಾಗೂ ನಾಯಕಿ ಅಲಿಸ್ಸಾ ಹೀಲಿ ಅಮೋಘ ಆರಂಭ ನೀಡಿದರು. ಈ ಜೋಡಿ ಮೊದಲ ವಿಕೆಟ್‌ಗೆ 189 ರನ್‌ಗಳ ಕಲೆಹಾಕಿತು.

ಮೊದಲೆರಡು ಪಂದ್ಯಗಳಲ್ಲಿ ಅರ್ಧಶತಕ ಬಾರಿಸಿದ್ದ ಫೊಯೆಬೆ ಈ ಬಾರಿ ಮೂರಂಕಿ ಮುಟ್ಟಿದರು. 125 ಎಸೆತಗಳನ್ನು ಎದುರಿಸಿದ ಅವರು 16 ಬೌಂಡರಿ ಮತ್ತು 1 ಸಿಕ್ಸರ್‌ ಒಳಗೊಂಡ 119 ರನ್‌ ಚಚ್ಚಿದರು. ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಇದು ಅವರಿಗೆ ಎರಡನೇ ಶತಕ.

ಫೊಯೆಬೆಗೆ ಉತ್ತಮ ಸಹಕಾರ ನೀಡಿದ ಹೀಲಿ 82 ರನ್‌ ಗಳಿಸಿ ಔಟಾಗಿ, ಸ್ವಲ್ಪದರಲ್ಲೇ ಶತಕ ತಪ್ಪಿಸಿಕೊಂಡರು.

ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳಾದ ಎಲಿಸ್‌ ಪೆರ್ರಿ (16), ಬೆತ್‌ ಮೂನಿ (3) ಮತ್ತು ತಹ್ಲಿಯಾ ಮೆಕ್‌ಗ್ರಾತ್‌  (0) ವೈಫಲ್ಯ ಅನುಭವಿಸಿದರು. ಆದರೆ, ಕೊನೆಯಲ್ಲಿ ಉಪಯುಕ್ತ ಆಟವಾಡಿದ ಆ್ಯಶ್ಲೇ ಗಾರ್ಡನರ್‌ (30), ಅನ್ನಾಬೆಲ್‌ ಸುಥರ್‌ಲ್ಯಾಂಡ್ (23) ಮತ್ತು ಅಲನಾ ಕಿಂಗ್‌ (ಅಜೇಯ 26) ತಂಡದ ಮೊತ್ತವನ್ನು 340ರ ಸನಿಹಕ್ಕೆ ಕೊಂಡೊಯ್ದರು.

ಟೂರ್ನಿಯ ಮೂರೂ ಪಂದ್ಯಗಳಲ್ಲಿ ಮಿಂಚಿ 260 ರನ್‌ ಗಳಿಸಿದ ಫೊಯೆಬೆ 'ಪಂದ್ಯ ಶ್ರೇಷ್ಠ' ಪ್ರಶಸ್ತಿ ಜೊತೆಗೆ 'ಸರಣಿ ಶ್ರೇಷ್ಠ' ಆಟಗಾರ್ತಿ ಪ್ರಶಸ್ತಿಗೂ ಭಾಜನರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT