ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs ENG | ಇಂಗ್ಲೆಂಡ್ 'ಬಾಝ್‌ಬಾಲ್‌'ಗೆ ಭಾರತ ತಿರುಮಂತ್ರ

Published 5 ಫೆಬ್ರುವರಿ 2024, 9:58 IST
Last Updated 5 ಫೆಬ್ರುವರಿ 2024, 9:58 IST
ಅಕ್ಷರ ಗಾತ್ರ

ವಿಶಾಖಪಟ್ಟಣ: ಇಂಗ್ಲೆಂಡ್‌ ತಂಡದ ‘ಬಾಝ್‌ಬಾಲ್’ ಸವಾಲನ್ನು ಅಡಗಿಸುವಲ್ಲಿ ಯಶಸ್ವಿಯಾದ ಭಾರತದ ಬೌಲರ್‌ಗಳು, ಎರಡನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನವಾದ ಸೋಮವಾರ 106 ರನ್‌ಗಳ ಸುಲಭ ಗೆಲುವು ಸಾಧಿಸಲು ನೆರವಾದರು. ಆ ಮೂಲಕ ಐದು ಪಂದ್ಯಗಳ ಸರಣಿ 1–1 ರಲ್ಲಿ ಸಮನಾಯಿತು.

ಯುವ ಆಟಗಾರ ಯಶಸ್ವಿ ಜೈಸ್ವಾಲ್ ಆಕರ್ಷಕ ದ್ವಿಶತಕ (209) ಹೊಡೆದರೂ, ಮೊದಲ ಇನಿಂಗ್ಸ್‌ನ ಅಮೋಘ ದಾಳಿಯಲ್ಲಿ ಆರು ಮತ್ತು ಎರಡನೇ ಇನಿಂಗ್ಸ್‌ನಲ್ಲಿ ಮೂರು ವಿಕೆಟ್ ಪಡೆಯುವ ಮೂಲಕ (ಒಟ್ಟು 91ಕ್ಕೆ9) ಬ್ಯಾಟಿಂಗ್‌ ಪಿಚ್‌ನಲ್ಲಿ ಮಿಂಚಿದ ಬೂಮ್ರಾ ‘ಪಂದ್ಯದ ಆಟಗಾರ’ ಗೌರವ ಪಡೆದಿದ್ದು ವಿಶೇಷ.

ಭಾರತ ತಂಡ ನೀಡಿದ್ದ 399 ರನ್‌ಗಳ ದಾಖಲೆ ಗುರಿಗೆ ಉತ್ತರವಾಗಿ ಒಂದು ವಿಕೆಟ್‌ಗೆ 67 ರನ್ ಗಳಿಸಿದ್ದ ಇಂಗ್ಲೆಂಡ್‌ ಸೋಮವಾರ ಬೆಳಿಗ್ಗೆ ಬಿರುಸಿನ ಆರಂಭ ಮಾಡಿ ಆತಂಕ ಮೂಡಿಸಿತ್ತು. ಆದರೆ ಮೊದಲ ಒಂದು ಗಂಟೆಯ ನಂತರ ಭಾರತದ ಅನುಭವಿ ಬೌಲರ್‌ಗಳು ನಿಯಮಿತವಾಗಿ ತಿರುಗೇಟು ನೀಡಿದರು. ಚಹ ವಿರಾಮಕ್ಕೆ ಸರಿಯಾಗಿ 292 ರನ್‌ಗಳಿಗೆ ಆಲೌಟ್‌ ಆಯಿತು. ಆಕ್ರಮಣದ ಆಟದಿಂದ ಒತ್ತಡ ಹೇರುವ ಇಂಗ್ಲೆಂಡ್ ತಂಡದ ತಂತ್ರ ಈ ಬಾರಿ ಕೈಗೂಡಲಿಲ್ಲ.

ಆರಂಭ ಆಟಗಾರ ಜ್ಯಾಕ್‌ ಕ್ರಾಲಿ ಎಚ್ಚರಿಕೆ ಮಿಶ್ರಿತ ಆಕ್ರಮಣದ ಆಟದಲ್ಲಿ (72, 132 ಎಸೆತ, 8x4, 6x1) ಅರ್ಧ ಶತಕ ಗಳಿಸಿದ್ದು ಬಿಟ್ಟರೆ ಉಳಿದವರಿಂದ ಅಂಥ ಕೊಡುಗೆ ಬರಲಿಲ್ಲ. ಸಾಂಘಿಕ ಯತ್ನದಲ್ಲಿ ಬೂಮ್ರಾ ಮತ್ತು ಅಶ್ವಿನ್ ತಲಾ ಮೂರು ವಿಕೆಟ್‌ ಪಡೆದರೆ ಅಕ್ಷರ್ ಪಟೇಲ್ ಮತ್ತು ಕುಲದೀಪ್ ಯಾದವ್ ತಲಾ ಒಂದು ವಿಕೆಟ್‌ ಪಡೆದರು.

‘ಇಂಥ ಪರಿಸ್ಥಿತಿಯಲ್ಲಿ ಟೆಸ್ಟ್ ಪಂದ್ಯ ಗೆಲ್ಲುವುದು ಸುಲಭವಾಗಿರಲಿಲ್ಲ. ನಾನು ಬೌಲರ್‌ಗಳಿಂದ ಉತ್ತಮ ಪ್ರದರ್ಶನ ಬಯಸಿದ್ದೆ. ಅದರಲ್ಲಿ ಅವರು ಯಶಸ್ವಿಯಾದರು’ ಎಂದು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಪ್ರತಿಕ್ರಿಯಿಸಿದರು.

ಕ್ರಾಲಿ ಮತ್ತು ನೈಟ್ ವಾಚ್‌ಮ್ಯಾನ್ ರೆಹಾನ್ ಅಹ್ಮದ್ ಅವರು ಬೂಮ್ರಾ ಅವರ ಎಕ್ಸ್‌ಪ್ರೆಸ್‌ ಎಸೆತಗಳನ್ನು ಎಚ್ಚರಿಕೆಯಿಂದ ಆಡಿದರು. ಆದರೆ ಅಕ್ಷರ್ ಪಟೇಲ್ ಬೌಲಿಂಗ್‌ನಲ್ಲಿ ಬೌಂಡರಿಗಳನ್ನು ಬಾರಿಸತೊಡಗಿದರು. ಈ ಹಂತದಲ್ಲಿ ರೋಹಿತ್ ಶರ್ಮಾ ಸ್ವಲ್ಪ ಆತಂಕಿತರಾದಂತೆ ಕಂಡರು. ಆದರೆ ಅಕ್ಷರ್ ಅವರನ್ನೇ ಮುಂದುವರಿಸಿದ್ದು ಫಲ ನೀಡಿತು. ಎಡಗೈ ಸ್ಪಿನ್ನರ್ ಬೌಲಿಂಗ್‌ನಲ್ಲಿ ಸ್ವಲ್ಪ ವೇಗವಾಗಿ ಬಂದ ಚೆಂಡಿಗೆ ರೆಹಾನ್‌ ಲೆಗ್‌ಬಿಫೋರ್ ಆದರು. ಆದರೆ ಇಂಗ್ಲೆಂಡ್‌ ಮಾಮೂಲಿ ಆಟದ ಮೊರೆಹೋಯಿತು. ಅಕ್ಷರ್ ಪಟೇಲ್ ಒಂದೇ ಓವರ್‌ನಲ್ಲಿ ಕ್ರಾಲಿ ಮೂರು ಬೌಂಡರಿಗಳನ್ನು ಬಾರಿಸಿದರು ಇನ್ನೊಂದೆಡೆ, ಹೈದರಾಬಾದ್ ಟೆಸ್ಟ್‌ನಲ್ಲಿ 196 ರನ್ ಹೊಡೆದಿದ್ದ ಓಲಿ ಪೋಪ್ ಇಲ್ಲೂ ಬಿರುಸಿನ ಆಟಕ್ಕಿಳಿದರು. ಈ ಹಂತದಲ್ಲಿ ಅಶ್ವಿನ್ ಎಸೆತವನ್ನು ‘ಕಟ್‌’ ಮಾಡುವ ಯತ್ನದಲ್ಲಿ ಬ್ಯಾಟಿನಂಚಿಗೆ ತಾಗಿದ ಚೆಂಡನ್ನು ಸ್ಲಿಪ್‌ನಲ್ಲಿದ್ದ ರೋಹಿತ್‌ ಅಮೋಘವಾಗಿ ಕ್ಯಾಚ್‌ ಪಡೆದಿದ್ದರಿಂದ ಪೋಪ್ ನಿರ್ಗಮಿಸಿದರು.

ಜೋ ರೂಟ್ ಕೂಡ ‘ಪಿಂಚ್‌ ಹಿಟ್ಟರ್’ ರೀತಿಯಲ್ಲೇ ಬ್ಯಾಟಿಂಗ್ ಆರಂಭಿಸಿದರು. ಅಶ್ವಿನ್ ಅವರನ್ನು ಎರಡು ಸಲ ರಿವರ್ಸ್ ಸ್ವೀಪ್ ಮಾಡಿ ಅವರ ಲಯ ತಪ್ಪಿಸಲು ಮುಂದಾದರು. ಆದರೆ ಈ ‘ಸಮರ’ದಲ್ಲಿ ಅಂತಿಮ ನಗು ಅಶ್ವಿನ್ ಅವರದಾಯಿತು. ಮತ್ತೊಂದು ದೊಡ್ಡ ಹೊಡೆತದ ಯತ್ನದಲ್ಲಿ ಬ್ಯಾಕ್‌ವರ್ಡ್‌ ಪಾಯಿಂಟ್‌ನಲ್ಲಿ ರೂಟ್‌ ಕ್ಯಾಚಿತ್ತರು. ಆಗ ಮೊತ್ತ 154ಕ್ಕೆ4.

ಆದರೂ ‘ಕ್ರಾಲಿ ಮತ್ತು ಜಾನಿ ಬೇಸ್ಟೊ ಆಕ್ರಮಣದ ಆಟವನ್ನು ಮುಂದುವರಿಸಿ ಕೆಲಮಟ್ಟಿಗೆ ಕುಸಿತ ತಡೆಗಟ್ಟಿದರು. ಈ ಹಂತದಲ್ಲಿ, ಲಂಚ್‌ಗೆ ಕೆಲವೇ ನಿಮಿಷಗಳಿರುವಾಗ ಬೂಮ್ರಾ ಮತ್ತೆ ದಾಳಿಗಿಳಿದು ಬೇಸ್ಟೊ (26) ಅವರ ವಿಕೆಟ್‌ ಪಡೆದರು. ಲಂಚ್‌ ನಂತರ ನಾಯಕ ಬೆನ್‌ ಸ್ಟೋಕ್ಸ್‌, ಅವರು ಮಿಡ್‌ವಿಕೆಟ್‌ನಿಂದ ಶ್ರೇಯಸ್‌ ಅಯ್ಯರ್ ಅವರ ಚುರುಕಿನ ಥ್ರೊಗೆ ರನೌಟ್‌ ಆದರು. ಪಂದ್ಯ ಭಾರತದ ಹಿಡಿತಕ್ಕೆ ಬಂದಿತು. ಬೆನ್ ಫೋಕ್ಸ್ (36) ಮತ್ತು ಟಾಮ್‌ ಹಾರ್ಟ್ಲಿ (36) ಎಂಟನೇ ವಿಕೆಟ್‌ಗೆ 55  ರನ್‌ ಸೇರಿಸಿ ಕೆಲಕಾಲ ಪ್ರತಿರೋಧ ತೋರಿದರೂ, ಇವರಿಬ್ಬರ ವಿಕೆಟ್‌ ಸಹ ಬೂಮ್ರಾ ಪಾಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT