ಶುಕ್ರವಾರ, ಮಾರ್ಚ್ 31, 2023
22 °C

IND vs NZ 3rd T20: ನ್ಯೂಜಿಲೆಂಡ್‌ ವಿರುದ್ದ ಭಾರತಕ್ಕೆ ಸರಣಿ ಗೆಲುವಿನ ಗುರಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಅಹಮದಾಬಾದ್‌: ಭಾರತ ಮತ್ತು ನ್ಯೂಜಿಲೆಂಡ್‌ ತಂಡಗಳ ನಡುವಣ ಮೂರನೇ ಹಾಗೂ ಕೊನೆಯ ಟಿ20 ಪಂದ್ಯ ಬುಧವಾರ ನಡೆಯಲಿದ್ದು, ಸರಣಿ ಯಾರ ಕೈವಶವಾಗಲಿದೆ ಎಂಬ ಕುತೂಹಲ ಮೂಡಿದೆ.

ಮೊದಲ ಪಂದ್ಯವನ್ನು ಭಾರತ ಜಯಿಸಿದ್ದರೆ, ಲಖನೌದಲ್ಲಿ ನಡೆದಿದ್ದ ಎರಡನೇ ಪಂದ್ಯವನ್ನು ಗೆದ್ದು ನ್ಯೂಜಿಲೆಂಡ್‌ ಸಮಬಲ ಸಾಧಿಸಿತ್ತು.  ತವರು ನೆಲದಲ್ಲಿ ಮತ್ತೊಂದು ಸರಣಿ ಗೆಲುವಿನ ಸಂಭ್ರಮ ಆಚರಿಸುವ ಸಿದ್ಧತೆಯೊಂದಿಗೆ ಹಾರ್ದಿಕ್‌ ಪಾಂಡ್ಯ ಬಳಗ ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಕಣಕ್ಕಿಳಿಯಲಿದೆ.

ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿರುವ ಭಾರತದ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಒತ್ತಡದಲ್ಲೇ ಈ ಪಂದ್ಯ ಆಡಲಿದ್ದಾರೆ. ಯುವ ಆಟಗಾರರಾದ ಶುಭಮನ್‌ ಗಿಲ್, ಇಶಾನ್‌ ಕಿಶನ್‌ ಮತ್ತು ರಾಹುಲ್‌ ತ್ರಿಪಾಠಿ ಅವರು ಟಿ20 ಕ್ರಿಕೆಟ್‌ನಲ್ಲಿ ತಮಗೆ ದೊರೆತ ಅವಕಾಶಗಳನ್ನು ಸೂಕ್ತವಾಗಿ ಬಳಸಿಕೊಂಡಿಲ್ಲ.

ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ ಮತ್ತು ಕೆ.ಎಲ್.ರಾಹುಲ್ ಅವರ ಬದಲು ಈ ಯುವ ಆಟಗಾರರಿಗೆ ತಂಡದಲ್ಲಿ ಸ್ಥಾನ ಲಭಿಸಿದೆ. ಆದರೆ ಏಕದಿನ ಪಂದ್ಯಗಳಲ್ಲಿ ತೋರಿದ್ದ ಅಬ್ಬರದ ಆಟ ಚುಟುಕು ಕ್ರಿಕೆಟ್‌ನಲ್ಲಿ ಮೂಡಿಬಂದಿಲ್ಲ.

ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ದ್ವಿಶತಕ ಸಾಧನೆ ಬಳಿಕ ಇಶಾನ್‌, ಬ್ಯಾಟಿಂಗ್‌ ಲಯ ಕಳೆದುಕೊಂಡಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ತೋರಿದ್ದ ಪ್ರದರ್ಶನವನ್ನು ಟಿ20 ಯಲ್ಲಿ ಪುನರಾವರ್ತಿಸಲು ಗಿಲ್‌ ಅವರಿಗೆ ಸಾಧ್ಯವಾಗಿಲ್ಲ. ಕೊಹ್ಲಿ ಬದಲು ಮೂರನೇ ಕ್ರಮಾಂಕದಲ್ಲಿ ಆಡುವ ಅವಕಾಶ ಪಡೆದಿರುವ ತ್ರಿಪಾಠಿ ಅವರೂ ಪ್ರಭಾವಿ ಎನಿಸಿಲ್ಲ.

ಈ ಪಂದ್ಯದ ಬಳಿಕ ಭಾರತ ತಂಡ, ಮುಂದಿನ ಕೆಲವು ತಿಂಗಳು ಯಾವುದೇ ಟಿ20 ಪಂದ್ಯ ಆಡುವುದಿಲ್ಲ. ಆದ್ದರಿಂದ ಅಬ್ಬರದ ಆಟವಾಡಿ ತಮ್ಮ ಸಾಮರ್ಥ್ಯ ತೋರಿಸಲು ಯುವ ಆಟಗಾರರಗೆ ಸಿಗುವ ಕೊನೆಯ ಅವಕಾಶ ಇದಾಗಿದೆ.

ಭಾರತವು ಹೆಚ್ಚಿನ ಪ್ರಯೋಗಗಳಿಗೆ ಮುಂದಾಗದೆ, ಎರಡನೇ ಪಂದ್ಯದಲ್ಲಿ ಆಡಿದ ತಂಡವನ್ನೇ ಕಣಕ್ಕಿಳಿಸುವ ಸಾಧ್ಯತೆಯಿದೆ.

ಮತ್ತೊಂದೆಡೆ, ಭಾರತದ ನೆಲದಲ್ಲಿ ಸರಣಿ ಗೆಲುವೆಂಬ ಅಪರೂಪದ ಸಾಧನೆ ಮಾಡುವ ತವಕದೊಂದಿಗೆ ನ್ಯೂಜಿಲೆಂಡ್‌ ಆಟಗಾರರು ಈ ಪಂದ್ಯದಲ್ಲಿ ಆಡಲಿದ್ದಾರೆ. ಪ್ರವಾಸಿ ತಂಡವು ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳಿಂದ ಉತ್ತಮ ಆಟ ನಿರೀಕ್ಷಿಸುತ್ತಿದೆ.

ಗ್ಲೆನ್ ಫಿಲಿಪ್ಸ್‌, ಮೈಕಲ್‌ ಬ್ರೇಸ್‌ವೆಲ್‌ ಮತ್ತು ಮಾರ್ಕ್‌ ಚಾಪ್‌ಮನ್‌ ಅವರು ಅಬ್ಬರದ ಆಟವಾಡಿದರೆ ಆತಿಥೇಯ ಬೌಲರ್‌ಗಳಿಗೆ ಸವಾಲು ಎದುರಾಗುವುದು ಖಚಿತ.

ಪಂದ್ಯ ಆರಂಭ: ಸಂಜೆ 7

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌ ನೆಟ್‌ವರ್ಕ್‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು