ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಂಚಿಯಿಂದ ಬಂದ ಮಹಾನಾಯಕ ‘ಎಂ.ಎಸ್. ಧೋನಿ’

ಕೂಲ್‌ಕ್ಯಾಪ್ಟನ್, ಮ್ಯಾಚ್‌ ಫಿನಿಷರ್, ವಿಶ್ವಕಪ್ ವಿಜೇತ ಮಹೇಂದ್ರಸಿಂಗ್ ಧೋನಿ ವಿದಾಯ
Last Updated 15 ಆಗಸ್ಟ್ 2020, 19:41 IST
ಅಕ್ಷರ ಗಾತ್ರ
ADVERTISEMENT
""
""
""

ಬೆಂಗಳೂರು:ಮುಂಬೈನ ಶಾರದಾಶ್ರಮ ಶಾಲೆಯ ಮೈದಾನ, ದೆಹಲಿಯ ಫಿರೋಜ್ ಶಾ ಕೋಟ್ಲಾ, ಕೋಲ್ಕತ್ತದಲ್ಲಿ ಈಡನ್ ಗಾರ್ಡನ್ಸ್‌ ಮತ್ತು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣಗಳು ಹಲವು ವರ್ಷಗಳಿಂದ ಖ್ಯಾತನಾಮ ಕ್ರಿಕೆಟಿಗರನ್ನು ಉತ್ಪಾದಿಸಿ ಕೊಡುವ ಕಾರ್ಖಾನೆಗಳು.

ಆದರೆ ಎರಡು ದಶಕಗಳ ಹಿಂದೆ ಜಾರ್ಖಂಡ್‌ನ ರಾಜಧಾನಿ ರಾಂಚಿಯಲ್ಲಿ ಇಂತಹ ಯಾವುದೇ ಕಾರ್ಖಾನೆ ಇರಲಿಲ್ಲ. ಅಲ್ಲಿದ್ದದ್ದು ಮೆಕಾನ್‌ ಫ್ಯಾಕ್ಟರಿಯ ಮೈದಾನ ಮಾತ್ರ. ಇವತ್ತಿಗೂ ಆ ಮೈದಾನದಲ್ಲಿ ಟರ್ಫ್‌ ವಿಕೆಟ್ ಇಲ್ಲ. ಕಲ್ಲು, ಮಣ್ಣು ಇರುವ ಹೊರಾಂಗಣವಿದೆ. ಅದೇ ಅಂಗಳದಿಂದ ಎದ್ದು ಬಂದ ಮಹೇಂದ್ರಸಿಂಗ್ ಧೋನಿ ಕ್ರಿಕೆಟ್‌ ಜಗತ್ತಿನಲ್ಲಿ ದೂಳೆಬ್ಬಿಸಿದರು. ಅವರ ಜೀವನಗಾಥೆಯು ‘ಎಂ.ಎಸ್. ಧೋನಿ ದ ಅನ್‌ಟೋಲ್ಡ್‌ ಸ್ಟೋರಿ’ ಎಂಬ ಸೂಪರ್ ಹಿಟ್ ಚಲನಚಿತ್ರವೇ ಆಯಿತು. ತಣ್ಣಗೆ ಫುಟ್‌ಬಾಲ್ ಆಡಿಕೊಂಡಿದ್ದ ಗೋಲ್‌ಕೀಪರ್ ಮಹಿಯನ್ನು ಕ್ರಿಕೆಟ್ ಆಡಲು ಕರೆದ ಶಾಲೆಯ ಕೋಚ್ ಕೇಶವ್ ಬ್ಯಾನರ್ಜಿ ವಿಕೆಟ್‌ಕೀಪಿಂಗ್ ಗ್ಲೌಸ್‌ ಕೊಡದೇ ಹೋಗಿದ್ದರೆ ಭಾರತದ ಕ್ರಿಕೆಟ್‌ಗೆ ಬಹಳ ದೊಡ್ಡ ನಷ್ಟವಂತೂ ಆಗುತ್ತಿತ್ತು. ತಂಡದ ಪಾಲಿಗೆ ಅಪ್ರತಿಮ ವಿಕೆಟ್‌ ಕೀಪರ್, ‘ಮ್ಯಾಚ್‌ ಫಿನಿಷರ್’ ಬ್ಯಾಟ್ಸ್‌ಮನ್‌, ಹೆಲಿಕಾಪ್ಟರ್‌ ಶಾಟ್‌ನ ಸರದಾರ, ತಣ್ಣಗೆ ನಸುನಗುತ್ತಲೇ ಎದುರಾಳಿ ತಂಡಗಳಿಗೆ ಸೋಲಿನ ಮರ್ಮಾಘಾತ ನೀಡುವ ಕೂಲ್ ಕ್ಯಾಪ್ಟನ್ ಹೀಗೆ ಹತ್ತಾರು ವರ್ಚಸ್ಸುಗಳ ಆಟಗಾರನೊಬ್ಬ ದಕ್ಕುತ್ತಿರಲಿಲ್ಲ.

ಮಧ್ಯಮವರ್ಗದ ಕುಟುಂಬದ ಸವಾಲುಗಳು, ಆಗಿನ ಬಿಹಾರ ಕ್ರಿಕೆಟ್ ಸಂಸ್ಥೆಯಲ್ಲಿದ್ದ ರಾಜಕೀಯ ದಾವ್‌ ಪೇಚ್‌ಗಳನ್ನು ಎದುರಿಸುತ್ತಲೇ ರಾಷ್ಟ್ರೀಯ ತಂಡದ ಕದ ತಟ್ಟಿದ್ದು ಸಣ್ಣ ಸಾಧನೆಯಾಗಿರಲಿಲ್ಲ.ಅವರು 19 ವರ್ಷದೊಳಗಿನವರ ಟೂರ್ನಿಯಲ್ಲಿ ಮಾಡಿದ್ದ ಸಾಧನೆಯು ಶ್ರೀರಕ್ಷೆಯಾಯಿತು. ಆಗ ಭಾರತ ತಂಡದ ನಾಯಕ ಸೌರವ್‌ ಗಂಗೂಲಿಗೆ ಉದ್ದಕೂದಲಿನ ಧೋನಿಯ ಮೇಲೆ ಅದೆಂತದೋ ವಿಶ್ವಾಸ. ಬಾಂಗ್ಲಾದೇಶ ಎದುರಿನ ಸರಣಿಗೆ ಆಯ್ಕೆ ಮಾಡಿಬಿಟ್ಟರು. ಆ ಸರಣಿಯಲ್ಲಿ ಆಡಿದ ಮೂರು ಪಂದ್ಯಗಳಲ್ಲಿಯೂ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಆದರೂ ಪಾಕಿಸ್ತಾನ ಎದುರಿನ ಸರಣಿಗೆ ಅವಕಾಶ ಸಿಕ್ಕಿತ್ತು. ಅದರಲ್ಲೂ ಮೊದಲ ಅವಕಾಶದಲ್ಲಿ ಒಂದಂಕಿ ಗಳಿಕೆ. ನಂತರದ ಪಂದ್ಯದಲ್ಲಿಯೂ ಅದೇ ಗತಿಯಾಗಿದ್ದರೆ ಮತ್ತೆ ರಾಂಚಿಯತ್ತ ಮುಖಮಾಡಬೇಕಿತ್ತು ಧೋನಿ. ಆದರೆ ಹಾಗಾಗಲಿಲ್ಲ. 2005ರಲ್ಲಿ ವಿಶಾಖಪಟ್ಟಣದಲ್ಲಿ ನಡೆದಿದ್ದ ಪಾಕ್ ಎದುರಿನ ಎರಡನೇ ಪಂದ್ಯದಲ್ಲಿ ಭರ್ಜರಿ ಶತಕ ಬಾರಿಸಿ ಬಿಟ್ಟರು. ಇಡೀ ಕ್ರಿಕೆಟ್ ಜಗತ್ತಿನ ಗಮನವನ್ನು ತಮ್ಮತ್ತ ಸೆಳೆದುಕೊಂಡರು. ನಂತರ ಕ್ರಿಕೆಟ್‌ ಇತಿಹಾಸ ಪುಸ್ತಕದಲ್ಲಿ ಧೋನಿ ಯುಗದ ಆರಂಭವಾಗಿದ್ದು ಸುಳ್ಳಲ್ಲ.

2007ರಲ್ಲಿ ವೆಸ್ಟ್‌ ಇಂಡೀಸ್‌ನಲ್ಲಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವು ಹೀನಾಯ ಸೋಲನುಭವಿಸಿತ್ತು. ರೊಚ್ಚಿಗೆದ್ದಿದ್ದ ಅಭಿಮಾನಿಗಳು ಧೋನಿಯ ಮನೆಯ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಅದೇ ವರ್ಷ ದಕ್ಷಿಣ ಆಫ್ರಿಕಾದಲ್ಲಿ ಟಿ20 ವಿಶ್ವಕಪ್ ನಡೆದಾಗ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಗಂಗೂಲಿ, ಅನಿಲ್ ಕುಂಬ್ಳೆ ಅವರಂತಹ ಅನುಭವಿ ಆಟಗಾರರು ಇರಲಿಲ್ಲ. ರೋಹಿತ್ ಶರ್ಮಾ, ಇರ್ಫಾನ್ ಪಠಾಣ್, ಜೋಗಿಂದರ್ ಸಿಂಗ್, ಶ್ರೀಶಾಂತ್ ಅವರಂತಹ ಯುವ ಆಟಗಾರರ ದಂಡಿನ ನಾಯಕತ್ವ ಪಟ್ಟ ಧೋನಿಗೆ ಕಟ್ಟಲಾಯಿತು. ಆ ಸತ್ವ ಪರೀಕ್ಷೆಯಲ್ಲಿ ಮಹಿ ಗೆದ್ದರು. ಆ ಟೂರ್ನಿಯ ಪಾಕಿಸ್ತಾನ ಎದುರಿನ ಫೈನಲ್‌ನಲ್ಲಿ ನಿರ್ಣಾಯಕ ಓವರ್‌ನಲ್ಲಿ ಅನುಭವವೇ ಇಲ್ಲದ ಮಧ್ಯಮವೇಗಿ ಜೋಗಿಂದರ್ ಶರ್ಮಾ ಕೈಗೆ ಚೆಂಡು ಕೊಟ್ಟ ಧೋನಿಯನ್ನು ಟೀಕಿಸದವರೇ ಇಲ್ಲ. ಆದರೆ ಆ ಓವರ್‌ ಮುಗಿದ ನಂತರ ‘ಕೂಲ್‌ ಕ್ಯಾಪ್ಟನ್‌’ಗೆ ಹರಿದ ಹೊಗಳಿಕೆಯ ಹೊಳೆ ಅಮೋಘವಾದದ್ದು. ಭಾರತ ವಿಶ್ವಕಪ್ ವಿಜಯಿಯಾಗಿತ್ತು.

ಮಹೇಂದ್ರಸಿಂಗ್ ಧೋನಿ 2011ರ ವಿಶ್ವಕಪ್‌ನೊಂದಿಗೆ

‘ಮಹಿ ಯಾವಾಗಲೂ ಹಾಗೆಯೇ. ಅಚ್ಚರಿಯ ನಿರ್ಧಾರಗಳನ್ನು ಪ್ರಕಟಿಸುವುದರಲ್ಲಿ ಸದಾ ಮುಂದು. ನೀವೆ ನೋಡಿ. ಟಿ20 ವಿಶ್ವಕಪ್ ಟೂರ್ನಿಯ ಫೈನಲ್, 2011ರಲ್ಲಿ ಬ್ಯಾಟಿಂಗ್‌ ಕ್ರಮಾಂಕ ಬದಲಿಸಿಕೊಂಡು ಬಂದು ಆಡಿದ್ದು, 2014ರಲ್ಲಿ ದಿಢೀರ್ ಟೆಸ್ಟ್‌ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದು ಒಂದೇ ಎರಡೇ. ಟೀಕೆಗಳಿಗೆ ಕುಗ್ಗದ, ಹೊಗಳಿಕೆಗಳಿಗೆ ಹಿಗ್ಗದ ಸರಳಜೀವಿ ಮಹಿ. ಇಷ್ಟು ದೊಡ್ಡ ಆಟಗಾರನಾದರೂ ಇವತ್ತಿಗೂ ರಾಂಚಿಗೆ ಬಂದರೆ ನಮ್ಮೊಂದಿಗೆ ಮೊದಲಿನ ಹಾಗೆಯೇ ಒಡನಾಡುತ್ತಾರೆ’ ಎಂದು ಬಾಲ್ಯದ ಕೋಚ್ ಕೇಶವ್ ಬ್ಯಾನರ್ಜಿ ‘ಪ್ರಜಾವಾಣಿ’ಗೆ ಹೇಳಿದರು.

2017ರಲ್ಲಿ ನಡೆಯುತ್ತಿದ್ದ ಏಕದಿನ ಸರಣಿಯ ನಡುವೆಯೇ ಏಕದಿನ ಮತ್ತು ಟಿ20 ಕ್ರಿಕೆಟ್ ತಂಡದ ನಾಯಕತ್ವವನ್ನು ವಿರಾಟ್ ಕೊಹ್ಲಿಗೆ ಹಸ್ತಾಂತರಿಸಿದ್ದರು. ಆದರೆ ಆಟಗಾರನಾಗಿ ಮತ್ತು ತಂಡದ ಆಟಗಾರರಿಗೆ ಮಾರ್ಗದರ್ಶಕರಾಗಿ ಆಡಿದ್ದರು. ಹೋದ ವರ್ಷ ಇಂಗ್ಲೆಂಡ್‌ನಲ್ಲಿ ನಡೆದಿದ್ದ ಸೆಮಿಫೈನಲ್‌ನಲ್ಲಿ ಅವರು ರನ್‌ಔಟ್ ಆದಾಗ ಭಾರತಕ್ಕೆ ಫೈನಲ್‌ಗೆ ಸಾಗುವ ಅವಕಾಶ ಕೈತಪ್ಪಿತ್ತು.ಈಗ ರಾಂಚಿಯಲ್ಲಿ ವಿಶ್ವದರ್ಜೆಯ ಕ್ರೀಡಾಂಗಣ ನಿರ್ಮಾಣವಾಗಿದೆ. ಧೋನಿಯ ವರ್ಚಸ್ಸಿನ ಫಲಶ್ರುತಿ ಅದು. ಅವರ ಕ್ರಿಕೆಟ್‌ ದಾಖಲೆಗಳನ್ನು ಮುರಿಯುವ ಆಟಗಾರರು ಬರಬಹುದೇನೋ. ಆದರೆ, ಅವರ ವ್ಯಕ್ತಿತ್ವವನ್ನು ಸರಿಗಟ್ಟುವವರು ಯಾರಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಸಿಗುವುದು ಕಷ್ಟ..

ಎಂ.ಎಸ್.ಧೋನಿ ಹಾಗೂ ಅವರ ಕುಟುಂಬ

ಧೋನಿ ಮತ್ತು ದೇಶಭಕ್ತಿ
ಬೆಂಗಳೂರು:
ಧೋನಿ ಮತ್ತು ದೇಶಭಕ್ತಿಯ ಹಲವು ಕಥೆಗಳನ್ನು ನಾವು ಕ್ರಿಕೆಟ್ ಅಂಗಳದಲ್ಲಿ ಹಾಗೂ ಹೊರಗೆ ನೋಡಿದ್ದೇವೆ. ಅವರು ತಮ್ಮ ಅಂತರರಾಷ್ಟ್ರೀಯ ಕ್ರಿಕೆಟ್‌ ಜೀವನಕ್ಕೆ ವಿದಾಯ ಹೇಳಿದ್ದು ಸ್ವಾತಂತ್ರ್ಯೋತ್ಸವ ದಿನದಂದು. ಇದು ಕಾಕತಾಳೀಯವಲ್ಲ ಎಂದು ಅವರ ಆಪ್ತಮಿತ್ರರು ಹೇಳುತ್ತಾರೆ.

ಹೊದ ವರ್ಷ ಜುಲೈನಲ್ಲಿ ಇಂಗ್ಲೆಂಡ್‌ನಿಂದ ಮರಳಿದ ನಂತರ ಅವರು ವಿದಾಯ ಹೇಳುತ್ತಾರೆಂದು ನಿರೀಕ್ಷಿಸಲಾಗಿತ್ತು. ಆದರೆ ಅವರು ಕಾಶ್ಮೀರ ಕಣಿವೆಗೆ ತೆರಳಿದರು. ಭಾರತೀಯ ಸೇನೆಯ ಗೌರವ ಲೆಫ್ಟಿನೆಂಟ್ ಕರ್ನಲ್ ಆಗಿರುವ ಧೋನಿ, ಜುಲೈ 31ರಿಂದ ಆಗಸ್ಟ್‌ 15ರವರೆಗೆ ಕಾರ್ಯನಿರ್ವಹಿಸಿದ್ದರು. ’ಅವರು ಬಾಲ್ಯದಿಂದಲೂ ಸೇನೆಯ ಕಾರ್ಯಚಟುವಟಿಕೆಗಳನ್ನು ಟಿವಿಯಲ್ಲಿ ಆಸಕ್ತಿಯಿಂದ ಗಮನಿಸುತ್ತಿದ್ದರು. ಭಾರತ ತಂಡಕ್ಕೆ ಆಡುವ ಅವಕಾಶ ಸಿಕ್ಕಾಗಲೂ ತಿರಂಗಾದ ಗೌರವ ಹೆಚ್ಚಿಸುವ ಅವಕಾಶ ಸಿಕ್ಕಿದೆ ಎನ್ನುತ್ತಿದ್ದರು. ಅವಕಾಶ ಸಿಕ್ಕಾಗಲೆಲ್ಲ ತಮ್ಮ ದೇಶಭಕ್ತಿಯನ್ನು ತೋರಿಸುತ್ತಿದ್ದರು‘ ಎಂದು ಅವರ ಬಾಲ್ಯದ ಗೆಳೆಯ ಚೋಟು ಹೇಳುತ್ತಾರೆ.

ಹೋದ ವರ್ಷ ಮಾರ್ಚ್‌ನಲ್ಲಿ ರಾಂಚಿಯಲ್ಲಿ ನಡೆದಿದ್ದ ಪಂದ್ಯದಲ್ಲಿ ಭಾರತ ತಂಡದ ಆಟಗಾರರು ಸೇನೆಯ ಕ್ಯಾಪ್ ಧರಿಸಿ ಆಡಲು ಧೋನಿ ಕಾರಣರಾಗಿದ್ದರು. ಆ ಮೂಲಕ ಪುಲ್ವಾಮಾ ಹುತಾತ್ಮಸೈನಿಕರಿಗೆ ಗೌರವ ಸಲ್ಲಿಸಿದ್ದರು. ವಿಶ್ವಕಪ್ ಟೂರ್ನಿಯ ಲೀಗ್‌ ಪಂದ್ಯದಲ್ಲಿ ಸೇನೆಯ ಲಾಂಛನವಿರುವ ಕೈಗವಸು ಧರಿಸಿ ವಿವಾದಕ್ಕೆ ಗುರಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT