ಸೋಮವಾರ, ಏಪ್ರಿಲ್ 19, 2021
32 °C

ಐಪಿಎಲ್‌–2020: ಬಿಸಿಸಿಐ ವೈದ್ಯಕೀಯ ತಂಡದ ಸದಸ್ಯನಿಗೆ ಕೋವಿಡ್–19

ಎಎನ್‌ಐ‌ Updated:

ಅಕ್ಷರ ಗಾತ್ರ : | |

ನವದೆಹಲಿ: ಐಪಿಎಲ್–2020 ಸಲುವಾಗಿ ಯುಎಇಗೆ ತೆರಳಿರುವ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ವೈದ್ಯಕೀಯ ತಂಡದ ಸದಸ್ಯರೊಬ್ಬರಿಗೆ ಕೋವಿಡ್‌–19 ದೃಢಪಟ್ಟಿದೆ ಎಂದು ಮಂಡಳಿಯ ಮೂಲಗಳು ಖಚಿತಪಡಿಸಿವೆ.

ಈ ಬಗ್ಗೆ ಮಾತನಾಡಿರುವ ಮಂಡಳಿಯ ಹಿರಿಯ ಸದಸ್ಯರೊಬ್ಬರು, ‘ಇದು ಸತ್ಯ. ಆದರೆ, ಅವರಲ್ಲಿ ಸೋಂಕಿನ ಯಾವುದೇ ಲಕ್ಷಣಗಳು ಕಾಣಿಸಿಕೊಂಡಿಲ್ಲ. ಸದ್ಯ ಅವರು ಯಾರೊಂದಿಗೂ ಸಂಪರ್ಕದಲ್ಲಿಲ್ಲ. ಪ್ರತ್ಯೇಕವಾಸದಲ್ಲಿ ಇರಿಸಲಾಗಿದೆ. ಯುಎಇಗೆ ಪ್ರಯಾಣಿಸುವ ಸಂದರ್ಭದಲ್ಲಿ ಸೋಂಕು ತಗುಲಿರಬಹುದು’ ಎಂದು ತಿಳಿಸಿದ್ದಾರೆ.

ಮುಂದುವರಿದು, ‘ಸೋಂಕಿತರ ಮೇಲೆ ನಿಗಾ ಇರಿಸಲಾಗಿದ್ದು, ಮುಂದಿನ ಸಲ ಮಾದರಿ ಪರೀಕ್ಷೆ ನಡೆಸುವ ವೇಳೆಗೆ ಗುಣಮುಖರಾಗುವ ವಿಶ್ವಾಸವಿದೆ. ಜೊತೆಗೆ ಎನ್‌ಸಿಎಯಲ್ಲಿರುವ ಇಬ್ಬರಿಗೂ ಸೋಂಕು ದೃಢಪಟ್ಟಿದ್ದು, ಅವರನ್ನೂ ಪ್ರತ್ಯೇಕವಾದಲ್ಲಿ ಇರಿಸಲಾಗಿದೆ’ ಎಂದು ತಿಳಿಸಿದ್ದಾರೆ.

ಆದಾಗ್ಯೂ, ಯಾವ ತಂಡದ ಎಷ್ಟು ಮಂದಿಗೆ ಸೋಂಕು ದೃಢಪಟ್ಟಿದೆ ಎಂಬುದು ನಿರ್ದಿಷ್ಟವಾಗಿ ತಿಳಿದುಬಂದಿಲ್ಲ.

ಯುಎಇ ತಲುಪಿದ ಕೆಲವೇ ದಿನಗಳಲ್ಲಿ ಚೆನ್ನೈ ಸೂಪರ್‌ಕಿಂಗ್ಸ್‌ (ಸಿಎಸ್‌ಕೆ) ತಂಡದ ಇಬ್ಬರು ಆಟಗಾರರು ಸೇರಿ ಒಟ್ಟು 13 ಮಂದಿಗೆ ಸೋಂಕು ದೃಢಪಟ್ಟಿದೆ ಎಂದು ಬಿಸಿಸಿಐ ಆಗಸ್ಟ್‌ 29ರಂದು ಖಚಿತಪಡಿಸಿತ್ತು. ಇದರ ಬೆನ್ನಲ್ಲೇ ವೈದ್ಯಕೀಯ ಸಿಬ್ಬಂದಿ ಹಾಗೂ ಎನ್‌ಸಿಎ ಸಿಬ್ಬಂದಿಗೆ ಸೋಂಕು ಕಾಣಿಸಿಕೊಂಡಿರುವುದು ಆತಂಕ ಹೆಚ್ಚಿಸಿದೆ.

ಸಿಎಸ್‌ಕೆ ಸಿಇಒ ಕೆ. ವಿಶ್ವನಾಥನ್‌ ಅವರು, ಯಾವುದೇ ಹೊಸ ಪ್ರಕರಣಗಳು ವರದಿಯಾಗಿಲ್ಲ. ಸದ್ಯ ಸೋಂಕು ಕಾಣಿಸಿಕೊಂಡಿರುವವರನ್ನು 14 ದಿನಗಳ ಪ್ರತ್ಯೇಕವಾಸದ ಬಳಿಕ ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಸೆಪ್ಟೆಂಬರ್‌ 1ರಂದು ಹೇಳಿದ್ದರು.

ಐಪಿಎಲ್‌ 13ನೇ ಆವೃತ್ತಿಯ ಪಂದ್ಯಗಳು ಇದೇ ತಿಂಗಳ 19ರಿಂದ ನವೆಂಬರ್‌ 10ರ ವರೆಗೆ ದುಬೈ, ಅಬು ಧಾಬಿ, ಶಾರ್ಜಾ ಕ್ರೀಡಾಂಗಣಗಳಲ್ಲಿ ನಡೆಯಲಿವೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು