ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2022 SRH vs CSK: ಗಾಯಕವಾಡ್, ಕಾನ್ವೆ ಅಬ್ಬರ; ಧೋನಿಯ ಚೆನ್ನೈಗೆ ಗೆಲುವು

ಅಕ್ಷರ ಗಾತ್ರ

ಪುಣೆ: ಋತುರಾಜ್ ಗಾಯಕವಾಡ್ (99) ಹಾಗೂ ಡೆವೊನ್ ಕಾನ್ವೆ ಬಿರುಸಿನ ಅರ್ಧಶತಕಗಳ (85*) ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಭಾನುವಾರ ನಡೆದ ಐಪಿಎಲ್ ಪಂದ್ಯದಲ್ಲಿ 13 ರನ್ ಅಂತರದ ಗೆಲುವು ದಾಖಲಿಸಿದೆ.

ಈ ಮೂಲಕ ಮತ್ತೆ ನಾಯಕ ಪಟ್ಟಕ್ಕೇರಿರುವ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ತಂಡವು ಗೆಲುವಿನ ಹಾದಿಗೆ ಮರಳಿದೆ.

ಅಲ್ಲದೆ ಆಡಿರುವ ಒಂಬತ್ತು ಪಂದ್ಯಗಳಲ್ಲಿ ಮೂರನೇ ಗೆಲುವು ದಾಖಲಿಸಿದೆ. ಅತ್ತ ಹೈದರಾಬಾದ್ 9 ಪಂದ್ಯಗಳಲ್ಲಿ ನಾಲ್ಕನೇ ಸೋಲಿಗೆ ಶರಣಾಗಿದೆ.

ಮೊದಲ ವಿಕೆಟ್‌ಗೆ ಗಾಯಕವಾಡ್ ಹಾಗೂ ಡೆವೊನ್ ಕಾನ್ವೆ ಶತಕದ (182) ಜೊತೆಯಾಟದ ನೆರವಿನಿಂದ ಚೆನ್ನೈ ಎರಡು ವಿಕೆಟ್ ನಷ್ಟಕ್ಕೆ 202 ರನ್ ಪೇರಿಸಿತ್ತು.

ಬಳಿಕ ಗುರಿ ಬೆನ್ನಟ್ಟಿದ ಸನ್‌ರೈಸರ್ಸ್ ಆರು ವಿಕೆಟ್ ನಷ್ಟಕ್ಕೆ 189 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಸಿಎಸ್‌ಕೆ ಪರ ನಾಲ್ಕು ವಿಕೆಟ್ ಕಬಳಿಸಿದ ಮುಕೇಶ್ ಚೌಧರಿ, ಎಸ್‌ಆರ್‌ಎಚ್ ಓಟಕ್ಕೆ ಕಡಿವಾಣ ಹಾಕಿದರು. ಅತ್ತ ನಿಕೋಲಸ್ ಪೂರನ್ (64*) ಹೋರಾಟ ವ್ಯರ್ಥವೆನಿಸಿತು.

ಹೈದರಾಬಾದ್ ತಂಡಕ್ಕೆ ನಾಯಕ ಕೇನ್ ವಿಲಿಯಮ್ಸನ್ ಹಾಗೂ ಅಭಿಷೇಕ್ ಶರ್ಮಾ ಬಿರುಸಿನ ಆರಂಭವೊದಗಿಸಿದರು. ಇವರಿಬ್ಬರು ಮೊದಲ ವಿಕೆಟ್‌ಗೆ 35 ಎಸೆತಗಳಲ್ಲಿ 58 ರನ್ ಪೇರಿಸಿದರು.

6ನೇ ಓವರ್‌ನಲ್ಲಿ ಚೆನ್ನೈ ವೇಗಿ ಮುಕೇಶ್ ಚೌಧರಿ ಡಬಲ್ ಆಘಾತ ನೀಡಿದರು. ಅಭಿಷೇಕ್ (39 ರನ್, 24 ಎಸೆತ) ಜೊತೆಗೆ ರಾಹುಲ್ ತ್ರಿಪಾಠಿ ಅವರನ್ನು ಶೂನ್ಯಕ್ಕೆ ಔಟ್ ಮಾಡಿದರು.

ಏಡನ್ ಮಾರ್ಕರಮ್ (17) ಎರಡು ಸಿಕ್ಸರ್ ಸಿಡಿಸಿದರೂ ಹೆಚ್ಚು ಹೊತ್ತು ನಿಲ್ಲಲಾಗಲಿಲ್ಲ.

ಇನ್ನೊಂದೆಡೆ ನಾಯಕನ ಆಟವಾಡಿದ ವಿಲಿಯಮ್ಸನ್ ತಂಡವನ್ನು ಮುನ್ನಡೆಸಿದರು. ಅವರಿಗೆ ನಿಕೋಲಸ್ ಪೂರನ್ ಅವರಿಂದ ಉತ್ತಮ ಬೆಂಬಲ ದೊರಕಿತು.

ಆದರೆ ಅರ್ಧಶತಕದ ಅಂಚಿನಲ್ಲಿ ವಿಲಿಯಮ್ಸನ್ ಎಡವಿದರು. 37 ಎಸೆತಗಳಲ್ಲಿ 47 ರನ್ (2 ಬೌಂಡರಿ, 2 ಸಿಕ್ಸರ್) ಗಳಿಸಿ ಔಟಾದರು.

ಅಂತಿಮ 30 ಎಸೆತಗಳಲ್ಲಿ ಹೈದರಾಬಾದ್ ಗೆಲುವಿಗೆ 72 ರನ್ ಬೇಕಾಗಿತ್ತು. ಆದರೆ 29 ಎಸೆತಗಳಲ್ಲಿ ಅರ್ಧಶತಕ ಗಳಿಸಿದ ಪೂರನ್ ದಿಟ್ಟ ಹೋರಾಟ ನೀಡಿದರೂ ಗೆಲುವು ದಾಖಲಿಸಲು ಸಾಧ್ಯವಾಗಲಿಲ್ಲ.

ಅಲ್ಲದೆ ಆರು ವಿಕೆಟ್ ನಷ್ಟಕ್ಕೆ 189 ರನ್ ಗಳಿಸಲಷ್ಟೇ ಶಕ್ತವಾಗಿತ್ತು. 33 ಎಸೆತ ಎದುರಿಸಿದ ಪೂರನ್ ಮೂರು ಬೌಂಡರಿ ಹಾಗೂ ಆರು ಸಿಕ್ಸರ್ ನೆರವಿನಿಂದ 64 ರನ್ ಗಳಿಸಿ ಔಟಾಗದೆ ಉಳಿದರು.

ಗಾಯಕವಾಡ್ 99, ಕಾನ್ವೆ 85*

ಈ ಮೊದಲುಋತುರಾಜ್ ಗಾಯಕವಾಡ್ಹಾಗೂ ಡೆವೊನ್ ಕಾನ್ವೆ ಬಿರುಸಿನ ಅರ್ಧಶತಕಗಳ ನೆರವಿನಿಂದ ಚೆನ್ನೈ ತಂಡವು ಎರಡುವಿಕೆಟ್ ನಷ್ಟಕ್ಕೆ 202 ರನ್‌ಗಳ ಬೃಹತ್ ಮೊತ್ತ ಪೇರಿಸಿತು.

ಮಹೇಂದ್ರ ಸಿಂಗ್ ಧೋನಿ ಮತ್ತೆ ಚೆನ್ನೈ ತಂಡದ ನಾಯಕತ್ವ ವಹಿಸಿರುವುದು ತಂಡದ ನಿರ್ವಹಣೆ ಮೇಲೂ ಧನಾತ್ಮಕ ಪರಿಣಾಮ ಬೀರಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಚೆನ್ನೈಗೆ ಋತುರಾಜ್ ಹಾಗೂ ಕಾನ್ವೆ ಬಿರುಸಿನ ಆರಂಭವೊದಗಿಸಿದರು.

ಆಕರ್ಷಕ ಬ್ಯಾಟಿಂಗ್ ಪ್ರದರ್ಶಿಸಿದ ಈ ಜೋಡಿ, ಹೈದರಾಬಾದ್ ಬೌಲರ್‌ಗಳನ್ನು ನಿರಂತಕವಾಗಿ ದಂಡಿಸಿದರು. ಋತುರಾಜ್ 33 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು.

11 ಓವರ್‌ಗಳಲ್ಲಿ ತಂಡದ ಮೊತ್ತ 100ರ ಗಡಿ ದಾಟಿತು. ಅತ್ತ ಕಾನ್ವೆ 39 ಎಸೆತಗಳಲ್ಲಿ ಚೊಚ್ಚಲ ಅರ್ಧಶತಕ ಸಾಧನೆ ಮಾಡಿದರು. 15ನೇ ಓವರ್‌ನಲ್ಲಿ ತಂಡದ ಮೊತ್ತ 150 ರನ್‌ಗಳ ಗಡಿ ದಾಟಿತು.

ಈ ನಡುವೆ ಶತಕದ ಅಂಚಿನಲ್ಲಿ ಗಾಯಕವಾಡ್ ಎಡವಿದರು. ಅಲ್ಲದೆ ಕೇವಲ ಒಂದು ರನ್ ಅಂತರದಲ್ಲಿ ಐಪಿಎಲ್‌ನಲ್ಲಿ ಎರಡನೇ ಶತಕ ಗಳಿಸುವ ಅವಕಾಶದಿಂದ ವಂಚಿತರಾದರು. 57 ಎಸೆತಗಳನ್ನು ಎದುರಿಸಿದ ಗಾಯಕವಾಡ್ ತಲಾ ಆರು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 99 ರನ್ ಗಳಿಸಿದರು.

ಅಲ್ಲದೆ ಕಾನ್ವೆ ಜೊತೆಗೆ ಮೊದಲ ವಿಕೆಟ್‌ಗೆ 17.5 ಓವರ್‌ಗಳಲ್ಲಿ 182 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು.

ಅಂತಿಮವಾಗಿ ಚೆನ್ನೈ ಎರಡು ವಿಕೆಟ್ ನಷ್ಟಕ್ಕೆ 202 ರನ್ ಗಳಿಸಿತು. 55 ಎಸೆತಗಳನ್ನು ಎದುರಿಸಿದ ಕಾನ್ವೆ 85 ರನ್ (8 ಬೌಂಡರಿ, 4 ಸಿಕ್ಸರ್) ಗಳಿಸಿ ಔಟಾಗದೆ ಉಳಿದರು. ನಾಯಕ ಧೋನಿ 8 ರನ್ ಗಳಿಸಿ ಔಟ್ ಆದರು. ಹೈದರಾಬಾದ್ ಪರ ಟಿ. ನಟರಾಜನ್ ಎರಡು ವಿಕೆಟ್ ಪಡೆದರು.


ಹೈದರಾಬಾದ್ ಫೀಲ್ಡಿಂಗ್ ಆಯ್ಕೆ...

ಈ ಮೊದಲುಟಾಸ್ ಗೆದ್ದ ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಮೊದಲು ಫೀಲ್ಡಿಂಗ್ ಆಯ್ದುಕೊಂಡರು.

ಮಹೇಂದ್ರ ಸಿಂಗ್ ಧೋನಿ ಮಗದೊಮ್ಮೆ ನಾಯಕತ್ವ ವಹಿಸಿರುವುದು ಚೆನ್ನೈ ತಂಡದಲ್ಲಿ ಹೊಸ ಹುರುಪು ತುಂಬಿದೆ.

ನಾಟಕೀಯ ಬೆಳವಣಿಗೆಯಲ್ಲಿ ಶನಿವಾರದಂದು (ಏ.30) ಚೆನ್ನೈ ತಂಡದ ನಾಯಕತ್ವವನ್ನು ಮತ್ತೆ ಧೋನಿಗೆ ರವೀಂದ್ರ ಜಡೇಜ ಹಸ್ತಾಂತರಿಸಿದ್ದರು.

ಎಂಟು ಪಂದ್ಯಗಳಲ್ಲಿ ಕೇವಲ ಎರಡು ಜಯ ಗಳಿಸಿರುವ ಚೆನ್ನೈ ಈಗ ಧೋನಿ ಮುಂದಾಳತ್ವದಲ್ಲಿ ಮತ್ತೆ ಪುಟಿದೇಳುವ ನಿರೀಕ್ಷೆಯಲ್ಲಿದೆ.

ಅತ್ತ ಹೈದರಾಬಾದ್, ಸತತ ಎರಡು ಸೋಲಿನ ಬಳಿಕ ಅಮೋಘ ನಿರ್ವಹಣೆ ನೀಡಿದ್ದು, ಎಂಟು ಪಂದ್ಯಗಳಲ್ಲಿ ಐದು ಗೆಲುವಿನೊಂದಿಗೆ ಒಟ್ಟು 10 ಅಂಕ ಸಂಪಾದಿಸಿ, ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

ಹನ್ನೊಂದರ ಬಳಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT