ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL-2020 | RR vs SRH: ಸನ್‌ರೈಸರ್ಸ್‌ಗೆ ‘ವಿಜಯ’ದ ಕಾಣಿಕೆ ನೀಡಿದ ಪಾಂಡೆ

Last Updated 22 ಅಕ್ಟೋಬರ್ 2020, 18:13 IST
ಅಕ್ಷರ ಗಾತ್ರ

ದುಬೈ:ಕರ್ನಾಟಕದಮನೀಷ್ ಪಾಂಡೆ–ತಮಿಳುನಾಡಿನ ವಿಜಯ್ ಶಂಕರ್ ಗುರುವಾರ ಹೈದರಾಬಾದ್ ಸನ್‌ರೈಸರ್ಸ್‌ ತಂಡಕ್ಕೆ ಗೆಲುವಿನ ಕಾಣಿಕೆ ನೀಡಿದರು.

ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಸನ್‌ರೈಸರ್ಸ್‌ ನಾಯಕ ಡೇವಿಡ್ ವಾರ್ನರ್ ನಿರ್ಣಯವನ್ನು ವಿಂಡೀಸ್ ವೇಗಿ ಜೇಸನ್ ಹೋಲ್ಡರ್ (33ಕ್ಕೆ3) ಸಮರ್ಥಿಸಿಕೊಂಡರು.ಅದರಿಂದಾಗಿ ರಾಯಲ್ಸ್‌ ತಂಡವು 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 154 ರನ್‌ ಗಳಿಸಿತು. ಈ ಗುರಿಯನ್ನು ಬೆನ್ನಟ್ಟುವ ಹಾದಿಯಲ್ಲಿ ಸನ್‌ರೈಸರ್ಸ್‌ ಆರಂಭದಲ್ಲಿಯೇ ಎಡವಿತ್ತು. ಜೋಫ್ರಾ ಆರ್ಚರ್ ಕೊಟ್ಟ ಪೆಟ್ಟಿಗೆ ಹೈದರಾಬಾದ್ ತಂಡವು 16 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡಿತು. ವಾರ್ನರ್ ಮತ್ತು ಜಾನಿ ಬೆಸ್ಟೊ ಪೆವಿಲಿಯನ್‌ಗೆ ಮರಳಿದ್ದರು.

ಈ ಹಂತದಲ್ಲಿ ಜೊತೆಗೂಡಿದ ಮನೀಷ್ (ಔಟಾಗದೆ 83; 47ಎಸೆತ, 4ಬೌಂಡರಿ, 8ಸಿಕ್ಸರ್) ಮತ್ತು ಶಂಕರ್ (ಔಟಾಗದೆ 52; 51ಎ, 6ಬೌಂ) ಮೂರನೇ ವಿಕೆಟ್‌ ಜೊತೆಯಾಟದಲ್ಲಿ 140 ರನ್‌ ಸೇರಿಸಿ ತಮ್ಮತಂಡಕ್ಕೆ 8 ವಿಕೆಟ್‌ಗಳ ಗೆಲುವಿನ ಕಾಣಿಕೆ ನೀಡಿದರು.ಇನಿಂಗ್ಸ್‌ನಲ್ಲಿ ಇನ್ನೂ 11 ಎಸೆತಗಳು ಬಾಕಿ ಇರುವಾಗಲೇ 2 ವಿಕೆಟ್‌ಗಳಿಗೆ 156 ರನ್‌ಗಳು ದಾಖಲಾದವು.

ಇದರೊಂದಿಗೆ ಸನ್‌ರೈಸರ್ಸ್ ತಂಡವು ಎಂಟು ಪಾಯಿಂಟ್‌ಗಳೊಂದಿಗೆ ಐದನೇ ಸ್ಥಾನಕ್ಕೇರಿತು. ಇನ್ನೂ ನಾಲ್ಕು ಪಂದ್ಯಗಳಲ್ಲಿ ಆಡಲಿರುವ ವಾರ್ನರ್‌ ಬಳಗದ ಪ್ಲೇ ಆಫ್ ಪ್ರವೇಶದ ಆಸೆಗೆ ಮತ್ತಷ್ಟು ಬಲ ಬಂದಿತು.

ಕಳೆದ ಕೆಲವು ಪಂದ್ಯಗಳಲ್ಲಿ ಫಾರ್ಮ್‌ ಕೊರತೆ ಅನುಭವಿಸಿದ್ದ ಪಾಂಡೆ, ಇಲ್ಲಿ ಅಮೋಘವಾದ ಬ್ಯಾಟಿಂಗ್ ಮಾಡಿದರು. ಟೂರ್ನಿಯಲ್ಲಿ ಮೂರನೇ ಅರ್ಧಶತಕ ದಾಖಲಿಸಿದರು.ಎಂಟು ಸಿಕ್ಸರ್‌ಗಳನ್ನು ಹೊಡೆದು ಅಬ್ಬರಿಸಿದರು.

ಹೋಲ್ಡರ್ ದಾಳಿ:ರಾಯಲ್ಸ್‌ ತಂಡಕ್ಕೆ ಹೋಲ್ಡರ್ ನಾಲ್ಕನೇ ಓವರ್‌ನಲ್ಲಿ ಮೊದಲ ಏಟು ಕೊಟ್ಟರು. ರಾಬಿನ್ ಉತ್ತಪ್ಪ ರನೌಟ್ ಆಗಲು ಹೋಲ್ಡರ್ ಕಾರಣರಾದರು.

ಅಲ್ಲಿಂದ ರಾಯಲ್ಸ್‌ನ ಪರದಾಟ ಆರಂಭವಾಯಿತು. ಬೆನ್‌ ಸ್ಟೋಕ್ಸ್‌ ಜೊತೆಗೂಡಿದ ಸಂಜು ಸ್ಯಾಮ್ಸನ್ ಎರಡನೇ ವಿಕೆಟ್‌ಗೆ 56 ರನ್ ಸೇರಿಸುವಲ್ಲಿ ಸಫಲರಾದರು.12ನೇ ಓವರ್‌ನಲ್ಲಿ ಹೋಲ್ಡರ್ ಎಸೆತವನ್ನು ಅಂದಾಜಿಸುವಲ್ಲಿ ಸಂಜು ವಿಫಲರಾದರು. ಚೆಂಡು ಸ್ಟಂಪ್ ಎಗರಿಸಿತು.

ನಂತರದ ಓವರ್‌ನಲ್ಲಿ ಸ್ಪಿನ್ನರ್ ರಶೀದ್ ಎಸೆತದಲ್ಲಿ ಬೆನ್ ಸ್ಟೋಕ್ಸ್‌(30; 32ಎ) ಕ್ಲೀನ್‌ ಬೌಲ್ಡ್ ಆಗಿ ಮರಳಿದರು. ಭರವಸೆಯ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ ಕೇವಲ ಒಂಬತ್ತು ರನ್ ಗಳಿಸಿ ವಿಜಯಶಂಕರಗೆ ವಿಕೆಟ್ ಕೊಟ್ಟರು.

19ನೇ ಓವರ್‌ನಲ್ಲಿ ಹೋಲ್ಡರ್ ಸತತ ಎರಡು ಎಸೆತಗಳಲ್ಲಿ ಸ್ಟೀವನ್ ಸ್ಮಿತ್ (19 ರನ್) ಮತ್ತು ರಿಯಾನ್ ಪರಾಗ್ (20 ರನ್) ವಿಕೆಟ್‌ಗಳನ್ನು ಕಬಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT