ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಪಿಎಲ್ 2021 ಯುಎಇಗೆ ಸ್ಥಳಾಂತರ; ಟಿ20 ವಿಶ್ವಕಪ್ ಆತಿಥ್ಯ ನಿರ್ಧಾರಕ್ಕೆ ಕಾಲಾವಕಾಶ

Last Updated 29 ಮೇ 2021, 16:52 IST
ಅಕ್ಷರ ಗಾತ್ರ

ಮುಂಬೈ: ಇದೀಗ ಎಲ್ಲವೂ ಅಧಿಕೃತಗೊಂಡಿದ್ದು, ಕೋವಿಡ್‌ನಿಂದಾಗಿ ಅರ್ಧದಲ್ಲೇ ಮೊಟಕುಗೊಂಡಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಉಳಿದಿರುವ ಪಂದ್ಯಗಳು ಯುಎಇನಲ್ಲಿ ಆಯೋಜನೆಯಾಗಲಿವೆ.

ಸೌರವ್ ಗಂಗೂಲಿ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ವಿಶೇಷ ಸಾಮಾನ್ಯ ಸಭೆಯಲ್ಲಿ ಈ ಕುರಿತು ನಿರ್ಧರಿಸಲಾಗಿದೆ.

ಕೊರೊನಾವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಮುಂದೂಡಿರುವ ಐಪಿಎಲ್ ಟೂರ್ನಿಯ ಉಳಿದಿರುವ ಪಂದ್ಯಗಳನ್ನು ಯುಎಇನಲ್ಲಿ ಆಯೋಜಿಸಲಾಗುವುದು ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಹೇಳಿಕೆಯನ್ನು ಎಎನ್‌ಐ ಟ್ವೀಟ್ ಮಾಡಿದೆ.

ಐಪಿಎಲ್‌ನಲ್ಲಿ ಬಾಕಿ ಉಳಿದಿರುವ 31 ಪಂದ್ಯಗಳನ್ನು ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಲ್ಲಿ ಆಯೋಜಿಸಲು ಯೋಜನೆ ಇರಿಸಿಕೊಳ್ಳಲಾಗಿದೆ.

ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಆಡಲಿರುವುದರಿಂದ ಇಂಗ್ಲೆಂಡ್ ಆಟಗಾರರು ಐಪಿಎಲ್‌ನಲ್ಲಿ ಪಾಲ್ಗೊಳ್ಳುವುದಿಲ್ಲ ಎಂಬುದು ವರದಿಯಾಗಿತ್ತು. ಹಾಗಾಗಿ ವಿದೇಶಿ ಆಟಗಾರರ ನಿರ್ವಹಣೆ ಬಗ್ಗೆಯೂ ಚರ್ಚೆ ನಡೆದಿದೆ ಎನ್ನಲಾಗಿದೆ.

ಐಪಿಎಲ್‌ನಲ್ಲಿ ಕಟ್ಟುನಿಟ್ಟಿನ ಬಯೋಬಯಲ್ ವ್ಯವಸ್ಥೆಯನ್ನು ರೂಪಿಸಿದ್ದರೂ ಅನೇಕ ಆಟಗಾರರಲ್ಲಿ ಕೋವಿಡ್ ಸೋಂಕು ತಗುಲಿದ ಪರಿಣಾಮ ಟೂರ್ನಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿತ್ತು. ದೇಶದಲ್ಲಿ ಕೋವಿಡ್ ಪ್ರಕರಣ ಹೆಚ್ಚಾಗಿರುವುದರಿಂದ ಈಗಿನ ಪರಿಸ್ಥಿತಿಯಲ್ಲಿ ಭಾರತದಲ್ಲಿ ಟೂರ್ನಿ ಆಯೋಜನೆ ಸಾಧ್ಯವಿಲ್ಲ. ಹಾಗಾಗಿ ಯುಎಇಗೆ ವರ್ಗಾಯಿಸಲು ನಿರ್ಧರಿಸಲಾಗಿದೆ.

ಕಳೆದ ವರ್ಷವೂ ಯುಎಇನಲ್ಲಿ ಐಪಿಎಲ್ ಟೂರ್ನಿಯನ್ನು ಬಿಸಿಸಿಐ ಯಶಸ್ವಿಯಾಗಿ ಆಯೋಜಿಸಿತ್ತು.

ಟಿ20 ವಿಶ್ವಕಪ್: ನಿರ್ಧಾರಕ್ಕೆ ಕಾಲಾವಕಾಶ
ಭಾರತದಲ್ಲಿ ನಡೆಸಲು ಉದ್ದೇಶಿಸಿರುವ ಟಿ20 ವಿಶ್ವಕಪ್ ಟೂರ್ನಿ ಅಕ್ಟೋಬರ್ ಕೊನೆಯವಾರದಲ್ಲಿ ಆರಂಭಗೊಳ್ಳಬೇಕಾಗಿದೆ. ಆದರೆ ಟೂರ್ನಿಗೆ ಆತಿಥ್ಯ ವಹಿಸುವ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲು ಐಸಿಸಿ ಬಳಿ ಒಂದು ತಿಂಗಳ ಕಾಲಾವಕಾಶ ಕೋರಲು ತೀರ್ಮಾನಿಸಲಾಗಿದೆ.

‘ಸದ್ಯ ಭಾರತದಲ್ಲಿ ಆರೋಗ್ಯ ವಿಷಮ ಸ್ಥಿತಿ ಇದೆ. ಆದ್ದರಿಂದ ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ಜುಲೈ ಒಂದರಂದು ಮತ್ತೊಂದು ವಿಶೇಷ ಸಭೆ ನಡೆಯಲಿದ್ದು ವಿಶ್ವಕಪ್ ಆಯೋಜಿಸುವ ಬಗ್ಗೆ ಅಂದು ತೀರ್ಮಾನಿಸಲಾಗುವುದು’ ಎಂದು ಬಿಸಿಸಿಐ ತಿಳಿಸಿದೆ.

ಜೂನ್ ಒಂದರಂದು ದುಬೈಯಲ್ಲಿ ನಡೆಯಲಿರುವ ಐಸಿಸಿಯ ಮಂಡಳಿ ಸಭೆಯಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ. ಕಾರ್ಯದರ್ಶಿ ಜಯ್ ಶಾ ಮತ್ತು ಉಪಾಧ್ಯಕ್ಷ ರಾಜೀವ್ ಶುಕ್ಲಾ ಪಾಲ್ಗೊಳ್ಳಲಿದ್ದು ವಿಶ್ವಕಪ್‌ ಬಗ್ಗೆ ಅಲ್ಲಿಯೂ ಚರ್ಚೆ ನಡೆಯಲಿದೆ.

ಕಳೆದ ಬಾರಿ ರದ್ದಾದ ರಣಜಿ ಟೂರ್ನಿಗೆ ಸಂಬಂಧಿಸಿ ಆಟಗಾರರಿಗೆ ನೀಡಬೇಕಾದ ಪರಿಹಾರಧನದ ವಿಷಯ ಸಭೆಯಲ್ಲಿ ಚರ್ಚೆಯಾಗಲಿಲ್ಲ. ರಾಜ್ಯವೊಂದರ ಪ್ರತಿನಿಧಿ ಈ ಕುರಿತು ಪ್ರಶ್ನಿಸಿದ್ದರು. ಆದರೆ ಜನವರಿಯಲ್ಲಿ ನಡೆದ ಸಭೆಯಲ್ಲೇ ಈ ಕುರಿತು ನಿರ್ಧಾರ ಪ್ರಕಟಿಸಿದ್ದರಿಂದ ಮತ್ತೊಮ್ಮೆ ಚರ್ಚೆ ನಡೆಸುವ ಅಗತ್ಯವಿಲ್ಲ ಎಂಬ ಅಭಿಪ್ರಾಯ ಮೂಡಿಬಂತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT