ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

T20 WC | ದಶಕದ ಬಳಿಕ ರೋಹಿತ್, ಸೂರ್ಯ ಭೇಟಿ; 'ತುಂಬಾ ವಿಶೇಷ' ಎಂದ ನೇತ್ರವಾಲ್ಕರ್

Published 13 ಜೂನ್ 2024, 11:30 IST
Last Updated 13 ಜೂನ್ 2024, 11:30 IST
ಅಕ್ಷರ ಗಾತ್ರ

ನ್ಯೂಯಾರ್ಕ್: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಅಮೆರಿಕ ತಂಡದಲ್ಲಿ ಆಡುತ್ತಿರುವ ಭಾರತ ಮೂಲದ ಸೌರಭ್ ನೇತ್ರವಾಲ್ಕರ್, ದಶಕದ ಬಳಿಕ ತಮ್ಮ ಮಾಜಿ ಸಹ ಆಟಗಾರರಾದ ರೋಹಿತ್ ಶರ್ಮಾ ಹಾಗೂ ಸೂರ್ಯಕುಮಾರ್ ಯಾದವ್ ಅವರನ್ನು ಭೇಟಿಯಾದ ಖುಷಿಯನ್ನು ಹಂಚಿಕೊಂಡಿದ್ದಾರೆ.

2010ರ ಅಂಡರ್-19 ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ನೇತ್ರವಾಲ್ಕರ್, ಬಾಲ್ಯದಲ್ಲಿ ಮುಂಬೈ ತಂಡದಲ್ಲಿ ರೋಹಿತ್ ಶರ್ಮಾ ಹಾಗೂ ಸೂರ್ಯಕುಮಾರ್ ಯಾದವ್ ಜೊತೆಗೆ ಆಡಿದ್ದರು.

'10ಕ್ಕೂ ಹೆಚ್ಚು ವರ್ಷಗಳ ಬಳಿಕ ನಾನು ಅವರನ್ನು ಭೇಟಿಯಾಗಿದ್ದೇನೆ. ಈ ಭೇಟಿ ತುಂಬಾ ವಿಶೇಷವಾಗಿತ್ತು. ಅಂಡರ್-15, ಅಂಡರ್-17ರಲ್ಲಿ ಆಡಿದ್ದ ಬಾಲ್ಯಕಾಲದ ನೆನಪುಗಳನ್ನು ಮೆಲುಕು ಹಾಕಿಕೊಂಡೆವು. ಡ್ರೆಸ್ಸಿಂಗ್ ರೂಮ್ ತಮಾಷೆಗಳನ್ನು ಮುಂದುವರಿಸಿದೆವು' ಎಂದು ನೇತ್ರವಾಲ್ಕರ್ ಹೇಳಿದ್ದಾರೆ.

'ನಾನು ರೋಹಿತ್ ಅವರೊಂದಿಗೆ ಮಾತನಾಡಿದ್ದೇನೆ. ಮುಂಬೈ ತಂಡದಲ್ಲಿ ಅವರು ನನ್ನ ಸೀನಿಯರ್ ಆಗಿದ್ದರು. ಅವರ ಜೊತೆಗೆ ಆಡಿದ್ದೇನೆ. ವಿರಾಟ್ ಕೊಹ್ಲಿ ಜೊತೆ ಹೆಚ್ಚು ಆಡಿಲ್ಲ. ಆದರೆ ಪಂದ್ಯದ ಬಳಿಕ ನನ್ನ ಪ್ರದರ್ಶನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅಮೆರಿಕ ತಂಡದ ಸಾಮರ್ಥ್ಯದ ಬಗ್ಗೆ ಮೆಚ್ಚಿದ್ದಾರೆ' ಎಂದು ಹೇಳಿದ್ದಾರೆ.

ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ವಿಕೆಟ್‌ಗಳನ್ನು ನೇತ್ರವಾಲ್ಕರ್ ಗಳಿಸಿದ್ದರು.

'ಕೊನೆಯ ಎರಡು ಪಂದ್ಯಗಳು ನಮ್ಮ ಪಾಲಿಗೆ ಹೈ-ಪ್ರೊಫೈಲ್ ಆಗಿದ್ದವು. ಫಲಿತಾಂಶದ ಬಗ್ಗೆ ಯೋಚಿಸದೇ ನಮ್ಮ ಯೋಜನೆಗಳನ್ನು ಕಾರ್ಯಗತಗೊಳಿಸಲು ಯತ್ನಿಸಿದೆವು. ಪಿಚ್ ಕೂಡ ನಿರ್ಣಾಯಕ ಪಾತ್ರ ವಹಿಸಿತು. ವಿರಾಟ್ ಕೊಹ್ಲಿ ವಿಕೆಟ್ ಗಳಿಸಲು ವಿಶೇಷವಾಗಿ ಏನೂ ಮಾಡಿಲ್ಲ. ಇದೊಂದು ಉತ್ತಮ ಎಸೆತವಾಗಿತ್ತು' ಎಂದು ಹೇಳಿದ್ದಾರೆ.

32 ವರ್ಷದ ಓರಾಕಲ್‌ ಎಂಜಿನಿಯರ್ ನೇತ್ರವಾಲ್ಕರ್, 2015ರಲ್ಲಿ ಅಮೆರಿಕಕ್ಕೆ ತೆರಳಿ ಅಲ್ಲಿಯೇ ಉನ್ನತ ವ್ಯಾಸಂಗ ಮಾಡಿ ಉದ್ಯೋಗ ಪಡೆದಿದ್ದರು.

'ಓರಾಕಲ್‌ ಕಂಪನಿಯಲ್ಲಿ ಕೆಲಸವನ್ನು ಆನಂದಿಸುತ್ತಿದ್ದೇನೆ. ಮೈದಾನಕ್ಕಿಳಿದು ಬೌಲಿಂಗ್ ಮಾಡುವುದನ್ನು ಆನಂದಿಸುತ್ತಿದ್ದೇನೆ. ಕಳೆದ 10 ವರ್ಷಗಳಲ್ಲಿ ಹಲವು ಏರಿಳಿತಗಳನ್ನು ಕಂಡಿದ್ದೇನೆ' ಎಂದು ಹೇಳಿದ್ದಾರೆ.

ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಪಂದ್ಯದಲ್ಲೂ ಅಮೆರಿಕದ 'ಸೂಪರ್ ಓವರ್' ಗೆಲುವಿನಲ್ಲಿ ನೇತ್ರವಾಲ್ಕರ್ ಮಹತ್ವದ ಪಾತ್ರ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT