ದುಬೈ: ಬಾಂಗ್ಲಾದೇಶದಲ್ಲಿ ನಡೆಯಲಿದ್ದ ಮಹಿಳೆಯರ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯನ್ನು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ಗೆ ಸ್ಥಳಾಂತರಿಸಲಾಗಿದೆ.
ಬಾಂಗ್ಲಾದಲ್ಲಿ ಕಳೆದ ಕೆಲವು ದಿನಗಳಲ್ಲಿ ಗಲಭೆ, ಹಿಂಸಾಚಾರಗಳು ವ್ಯಾಪಕವಾಗಿ ನಡೆದ ಕಾರಣ ಅಂತರರಾಷ್ಟ್ರೀಯ ಕ್ರಿಕೆಟ್ (ಐಸಿಸಿ) ಸಂಸ್ಥೆಯು ಮಂಗಳವಾರ ಈ ನಿರ್ಧಾರ ಕೈಗೊಂಡಿದೆ. ಬಾಂಗ್ಲಾದೇಶವೇ ಆತಿಥ್ಯ ವಹಿಸಲಿದ್ದು, ಟೂರ್ನಿ ಪಂದ್ಯಗಳು ದುಬೈ ಮತ್ತು ಶಾರ್ಜಾದಲ್ಲಿ ನಡೆಯಲಿವೆ.
ಕೆಲವು ದೇಶಗಳ ಕ್ರಿಕೆಟ್ ಸಂಸ್ಥೆಗಳು ಮತ್ತು ಪ್ರಮುಖ ಆಟಗಾರರು ಬಾಂಗ್ಲಾದಲ್ಲಿ ಆಡಲು ತೆರಳುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರಿಂದ ಐಸಿಸಿ ಈ ತೀರ್ಮಾನ ಮಾಡಿದೆ. ಟೂರ್ನಿಯು ಅಕ್ಟೋಬರ್ 3 ರಿಂದ 20ರವರೆಗೆ ಟೂರ್ನಿ ನಡೆಯಲಿದೆ.
‘ಮಹಿಳೆಯರ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯನ್ನು ಬಾಂಗ್ಲಾದೇಶದಲ್ಲಿ ನಡೆಸಲು ಸಾಧ್ಯವಾಗದಿರುವುದು ನಾಚಿಕೆಗೇಡು. ಬಿಸಿಬಿ (ಬಾಂಗ್ಲಾ ಕ್ರಿಕೆಟ್ ಮಂಡಳಿ)ಗೆ ಒಂದು ಅಭೂತಪೂರ್ವವಾದ ಟೂರ್ನಿಯನ್ನು ನಡೆಸುವ ಸಾಮರ್ಥ್ಯ ಇತ್ತು’ ಎಂದು ಐಸಿಸಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಜೆಫ್ ಅಲರ್ಡೈಸ್ ಹೇಳಿದರು.
‘ಬಿಸಿಬಿಯು ಎಲ್ಲ ಆಯಾಮಗಳಿಂದಲೂ ಪರಿಶೀಲಿಸಿದ ನಂತರವೇ ಟೂರ್ನಿಯನ್ನು ಬಾಂಗ್ಲಾದಿಂದ ಸ್ಥಳಾಂತರಿಸಲು ಒಪ್ಪಿದೆ. ಯುಎಇಯಲ್ಲಿ ನಡೆಯುವ ಟೂರ್ನಿಗೆ ಬಾಂಗ್ಲಾದೇಶವೇ ಆತಿಥ್ಯ ವಹಿಸಲಿದೆ. ಅದರಿಂದ ಬರುವ ಆದಾಯವೂ ಬಾಂಗ್ಲಾಕ್ಕೆ ಲಭಿಸಲಿದೆ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.