ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವದೀಪ್ ಸೈನಿ ಬೌಲಿಂಗ್‌ಗೆ ಕೊಹ್ಲಿ ಶ್ಲಾಘನೆ

Last Updated 29 ಸೆಪ್ಟೆಂಬರ್ 2020, 14:35 IST
ಅಕ್ಷರ ಗಾತ್ರ

ದುಬೈ : ಮುಂಬೈ ಇಂಡಿಯನ್ಸ್‌ನ ಸ್ಪೋಟಕ ಬ್ಯಾಟ್ಸ್‌ಮನ್‌ಗಳಾದ ಕೀರನ್ ಪೊಲಾರ್ಡ್ ಮತ್ತು ಹಾರ್ದಿಕ್ ಪಾಂಡ್ಯ ಅವರ ಮುಂದೆ ಸೂಪರ್ ಓವರ್‌ನಲ್ಲಿ ನವದೀಪ್ ಸೈನಿ ಅಮೋಘವಾಗಿ ಬೌಲಿಂಗ್ ಮಾಡಿದರು ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಶ್ಲಾಘಿಸಿದ್ದಾರೆ.

ಸೋಮವಾರ ನಡೆದ ಪಂದ್ಯದಲ್ಲಿ ಬೆಂಗಳೂರು ತಂಡವು 201 ರನ್‌ ಗಳಿಸಿತ್ತು. ಗೆಲುವಿನ ಗುರಿ ಬೆನ್ನತ್ತಿದ್ದ ಮುಂಬೈ ತಂಡವು ಟೈ ಮಾಡಿಕೊಂಡಿತು. ಸೂಪರ್ ಓವರ್‌ನಲ್ಲಿ ಮುಂಬೈ ತಂಡವನ್ನು 7 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಸೈನಿ ಯಶಸ್ವಿಯಾಗಿದ್ದರು. ನಂತರ ಆರ್‌ಸಿಬಿ ಜಯಿಸಿತ್ತು.

‘ಬೌಂಡರಿಲೈನ್‌ಗಳ ಅಂತರ ಇಲ್ಲಿ ತುಸು ದೂರ ಇದ್ದ ಕಾರಣ ಸೈನಿಗೆ ಆತ್ಮವಿಶ್ವಾಸ ಹೆಚ್ಚಲು ಕಾರಣವಾಗಿತ್ತು. ಆದ್ದರಿಂದ ಯಾರ್ಕರ್‌ ಪ್ರಯೋಗವನ್ನೂ ಮಾಡಿದರು. ಅವರು ಯಶಸ್ವಿಯಾದರು’ ಎಂದು ಪಂದ್ಯದ ನಂತರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹೇಳಿದರು.

‘ಈ ಪಂದ್ಯದಲ್ಲಿ ತಂಡದ ಎಲ್ಲ ಆಟಗಾರರೂ ಅಮೋಘವಾಗಿ ಆಡಿದರು. ಈ ಎರಡು ಪಾಯಿಂಟ್‌ಗಳು ತುಂಬಾ ಮಹತ್ವದ್ದು. ಆರಂಭಿಕ ಹಂತದಲ್ಲಿ ಜಯ ಗಳಿಸಿದರೆ ಮುಂದಿನ ಹಾದಿಗೆ ಉತ್ತಮ’ ಎಂದರು.

‘ಮೊದಲ ಇನಿಂಗ್ಸ್‌ನಲ್ಲಿ ನಮ್ಮ ತಂಡವು ಉತ್ತಮವಾಗಿ ಆಡಿತು. 200 ರನ್‌ ಗಡಿ ದಾಟಿದ್ದು ಒಳ್ಳೆಯ ಸಾಧನೆ. ಮುಂಬೈ ತಂಡವು ಚೆನ್ನಾಗಿ ಆಡಿತು. ಅದರಲ್ಲೂ ಇಶಾನ್ ಕಿಶನ್ ಮತ್ತು ಪೊಲಾರ್ಡ್ ಅವರ ಬ್ಯಾಟಿಂಗ್ ತುಂಬಾ ಚೆನ್ನಾಗಿತ್ತು. ಪಂದ್ಯವು ಟೈ ಆಗಲು ಕಾರಣವಾಯಿತು’ ಎಂದು ಅಭಿಪ್ರಾಯಪಟ್ಟರು.

ಕಿಶನ್ ಬಳಲಿದ್ದರು: ಸೂಪರ್ ಓವರ್‌ನಲ್ಲಿ ಇಶಾನ್ ಕಿಶನ್ ಅವರನ್ನು ಬ್ಯಾಟಿಂಗ್‌ಗೆ ಕಳಿಸುವ ಯೋಚನೆ ಇತ್ತು. ಆದರೆ, ಅವರು ಬಹಳಷ್ಟು ಬಳಲಿದ್ದರು. ಆದ್ದರಿಂದ ಹಾರ್ದಿಕ್ ಅವರನ್ನು ಕಳಿಸಲಾಯಿತು ಎಂದು ಮುಂಬೈ ಇಂಡಿಯನ್ಸ್‌ ತಂಡದ ಮುಖ್ಯ ಕೋಚ್ ಮಹೇಲಾ ಜಯವರ್ಧನೆ ಹೇಳಿದರು.

ಪಂದ್ಯದಲ್ಲಿ ಇಶಾನ್ ಕಿಶನ್ 99 ರನ್‌ ಗಳಿಸಿ ಔಟಾಗಿದ್ದರು. ಕೀರನ್ ಪೊಲಾರ್ಡ್ ಕೂಡ ಅರ್ಧಶತಕ ಗಳಿಸಿದ್ದರು.

‘ಕಿಶನ್ ಒಂದು ರನ್‌ನಿಂದ ಶತಕ ತಪ್ಪಿಸಿಕೊಂಡರು. ಅವರ ಬ್ಯಾಟಿಂಗ್ ತುಂಬಾ ಸೊಗಸಾಗಿತ್ತು. ಆದರೆ ಅವರು ಸಂಪೂರ್ಣ ಬಳಲಿದ್ದರಿಂದ ಮತ್ತೆ ಅವರನ್ನು ಕಣಕ್ಕಿಳಿಸುವುದು ಸಮಂಜಸವಾಗಿರಲಿಲ್ಲ. ಹಾರ್ದಿಕ್ ಮತ್ತು ಪೊಲಾರ್ಡ್‌ ಅನುಭವಿಗಳು. ಈ ತರಹದ ಪರಿಸ್ಥಿತಿಯನ್ನೂ ಈ ಹಿಂದೆಯೂ ನಿಭಾಯಿಸಿದ್ದರು. ಆದ್ದರಿಂದ ಅವರನ್ನೇ ಕಣಕ್ಕಿಳಿಸಲು ನಿರ್ಧರಿಸಲಾಯಿತು’ ಎಂದು ಸಮರ್ಥಿಸಿಕೊಂಡರು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT