ದುಬೈ: ಗಂಟೆಗೆ 150 ಕಿ.ಮೀ.ಗೂ ಹೆಚ್ಚು ವೇಗದಲ್ಲಿ ಬೌಲಿಂಗ್ ಮಾಡುವ ಮೂಲಕ ಗಮನ ಸೆಳೆದಿರುವ ಯುವ ವೇಗಿ ಉಮ್ರಾನ್ ಮಲಿಕ್ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲೇ (ಯುಎಇ) ಭಾರತ ತಂಡದ ಜೊತೆಗೆ ಉಳಿದುಕೊಳ್ಳಲಿದ್ದಾರೆ.
ಹೌದು, ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರ ಪ್ರಭಾವಿ ಎನಿಸಿಕೊಂಡಿರುವ ಉಮ್ರಾನ್ ಮಲಿಕ್, ಮುಂಬರುವ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಪಾಳಯದಲ್ಲಿ 'ನೆಟ್ ಬೌಲರ್' ಆಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಮೂಲಕ ಭಾರತ ತಂಡದಆಟಗಾರರಿಗೆ ನೆರವಾಗಲಿದ್ದಾರೆ.
ಜಮ್ಮ ಮತ್ತು ಕಾಶ್ಮೀರದ 21 ವರ್ಷದ ಉಮ್ರಾನ್ ಮಲಿಕ್, ಸನ್‌ರೈಸರ್ಸ್ ತಂಡದ ನೆಟ್ ಬೌಲರ್ ಆಗಿ ಯುಎಇಗೆ ಪಯಣ ಬೆಳೆಸಿದ್ದರು. ಬಳಿಕ ತಂಗರಸು ನಟರಾಜನ್ ಅವರಿಗೆ ಕೋವಿಡ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬದಲಿ ಆಟಗಾರನಾಗಿ ಹೈದರಾಬಾದ್ ತಂಡಕ್ಕೆಸೇರ್ಪಡೆಗೊಂಡಿದ್ದರು.
ಪ್ಲೇ-ಆಫ್ ಪ್ರವೇಶಿಸುವ ಕನಸು ಭಗ್ನಗೊಂಡ ಬೆನ್ನಲ್ಲೇ ಯುವ ಆಟಗಾರರಿಗೆ ಹೈದರಾಬಾದ್ ತಂಡವು ಅವಕಾಶ ಕಲ್ಪಿಸಿತ್ತು. ಈ ಪೈಕಿ ಗಂಟೆಗೆ 153 ಕಿ.ಮೀ. ವೇಗದಲ್ಲಿ ಚೆಂಡು ಎಸೆದಿರುವ ಉಮ್ರಾನ್, ಪ್ರಸಕ್ತ ಸಾಲಿನ ಐಪಿಎಲ್‌ನ ಅತಿ ವೇಗದ ಬೌಲರ್ ಎನಿಸಿದ್ದಾರೆ. ಅಲ್ಲದೆ ಗಂಟೆಗೆ ಸರಾಸರಿ 150 ಕಿ.ಮೀ. ವೇಗವನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಐಪಿಎಲ್‌ನಲ್ಲಿ ಇದೇ ಮೊದಲ ಬಾರಿಗೆ ಆಡಿರುವ ಉಮ್ರಾನ್, ಮೂರು ಪಂದ್ಯಗಳಲ್ಲಿ ಎರಡು ವಿಕೆಟ್‌ಗಳನ್ನು ಕಬಳಿಸಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಸಹ ಯುವ ವೇಗದ ಬೌಲರ್ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಅಲ್ಲದೆ ಉಮ್ರಾನ್ ಜೆರ್ಸಿಗೆ ಸಹಿ ಮಾಡಿ ಸಮಾಲೋಚನೆ ನಡೆಸಿದ್ದಾರೆ.
'ಐಪಿಎಲ್ ಟೂರ್ನಿಯಲ್ಲಿ ಪ್ರತಿ ವರ್ಷವೂ ಹೊಸ ಪ್ರತಿಭೆಯ ಅನಾವರಣವಾಗುತ್ತದೆ. ಯುವ ವೇಗಿ ಗಂಟೆಗೆ 150 ಕಿ.ಮೀ. ವೇಗದಲ್ಲಿ ಬೌಲಿಂಗ್ ಮಾಡಿರುವುದು ನಿಜಕ್ಕೂ ಒಳ್ಳೆಯ ವಿಚಾರವಾಗಿದೆ. ಇಲ್ಲಿಂದ ಪ್ರಗತಿಯನ್ನು ಅರ್ಥಮಾಡಿಕೊಳ್ಳುವುದು ಮುಖ್ಯವೆನಿಸುತ್ತದೆ. ವೇಗದ ಬೌಲರ್‌ಗಳ ಪಡೆಯು ಭಾರತೀಯ ಕ್ರಿಕೆಟ್‌ಗೆ ಉತ್ತಮ ಸಂಕೇತವಾಗಿದ್ದು, ಇಂತಹ ಪ್ರತಿಭೆಗಳ ಮೇಲೆ ಕಣ್ಣಾಯಿಸಬೇಕಿದೆ. ಐಪಿಎಲ್ ಮಟ್ಟದ ಸಾಮರ್ಥ್ಯವನ್ನು ಉನ್ನತ ಮಟ್ಟಕ್ಕೇರಿಸುವುದಾಗಿ ಖಾತ್ರಿಪಡಿಸಬೇಕಿದೆ' ಎಂದು ಕೊಹ್ಲಿ ತಿಳಿಸಿದ್ದಾರೆ.
ಟ್ವೆಂಟಿ-20 ವಿಶ್ವಕಪ್‌ನಲ್ಲಿ ಭಾರತ ತನ್ನ ಮೊದಲ ಪಂದ್ಯದಲ್ಲಿ ಅಕ್ಟೋಬರ್ 24ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಕಣಕ್ಕಿಳಿಯಲಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.