ಸೋಮವಾರ, ಮಾರ್ಚ್ 1, 2021
29 °C

PV Web Exclusive: ಪಂತ್‌ ‍ಪಟ್ಟ ಕಷ್ಟಗಳು ಅಷ್ಟಿಷ್ಟಲ್ಲ...

ಜಿ.ಶಿವಕುಮಾರ Updated:

ಅಕ್ಷರ ಗಾತ್ರ : | |

Prajavani

ರಿಷಭ್‌ ಪಂತ್‌ ಈಗ ಎಲ್ಲರ ಕಣ್ಮಣಿಯಾಗಿದ್ದಾರೆ. ಇಡಿ ಜಗತ್ತೇ ಅವರ ಆಟವನ್ನು ಕೊಂಡಾಡುತ್ತಿದೆ. ಆ್ಯಡಂ ಗಿಲ್‌ಕ್ರಿಸ್ಟ್‌, ರಿಕಿ ಪಾಂಟಿಂಗ್‌, ವಿವಿಎಸ್‌ ಲಕ್ಷ್ಮಣ್‌, ಗೌತಮ್‌ ಗಂಭೀರ್‌ ಹೀಗೆ ಕ್ರಿಕೆಟ್‌ ಲೋಕದ ಅತಿರಥ ಮಹಾರಥರೆಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಪಂತ್ ಪರಾಕ್ರಮವನ್ನು ಪ್ರಶಂಸಿಸಿದ್ದಾರೆ.

ಬ್ರಿಸ್ಬೇನ್‌ನ ಗಾಬಾ ಅಂಗಳದ ಆ ಇನಿಂಗ್ಸ್‌ ಅವರ ಕ್ರಿಕೆಟ್‌ ಬದುಕಿಗೆ ಪುನರ್‌ಜನ್ಮ ನೀಡಿದೆ. ರಿಷಭ್‌, ಮಹೇಂದ್ರ ಸಿಂಗ್‌ ಧೋನಿ ಅವರ ವಾರಸುದಾರನಾಗಬಲ್ಲರು ಎಂಬ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಗಾಯದ ಸಮಸ್ಯೆ ಹಾಗೂ ಸತತ ವೈಫಲ್ಯದಿಂದಾಗಿ ಕುಗ್ಗಿ ಹೋಗಿದ್ದ ಪಂತ್‌ ಮೊಗದಲ್ಲಿ ಮಂದಹಾಸ ಅರಳಿದೆ. ಈ ಹಿಂದೆ ತನ್ನನ್ನು ಟೀಕಿಸಿದ್ದವರಿಂದಲೇ ಶಹಬ್ಬಾಸ್‌ ಎನಿಸಿಕೊಂಡಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಆ ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ಬ್ಯಾಟಿಂಗ್‌ ಮತ್ತು ವಿಕೆಟ್‌ ಕೀಪಿಂಗ್‌ನಲ್ಲಿ ಕರಾಮತ್ತು ಮಾಡಿದ್ದ ಪಂತ್‌, ಭಾರತ ತಂಡಕ್ಕೆ ಚಾರಿತ್ರಿಕ ಗೆಲುವು ತಂದುಕೊಟ್ಟಿದ್ದರು. ಹೀಗಾಗಿಯೇ ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಅವರನ್ನು ‘ಸ್ಪೈಡರ್‌ ಪಂತ್’ ಎಂದು ಶ್ಲಾಘಿಸಿತ್ತು. ಸ್ಪೈಡರ್‌ಮ್ಯಾನ್‌ ಹೋಲುವ ಪಂತ್ ಅವರ ಚಿತ್ರವನ್ನು ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಐಸಿಸಿ ಪೋಸ್ಟ್ ಮಾಡಿತ್ತು.

ಏಳು ಬೀಳಿನ ಹಾದಿ...
ಒಂದು ವರ್ಷದ ಹಿಂದಿನ ಮಾತು. ಕೊರೊನಾ ವೈರಾಣು ಜಗದಗಲಕ್ಕೂ ಪಸರಿಸುವ ಮುನ್ನ ಭಾರತ ತಂಡವು 5 ಪಂದ್ಯಗಳ ಟ್ವೆಂಟಿ–20, 3 ಪಂದ್ಯಗಳ ಏಕದಿನ ಹಾಗೂ 2 ಪಂದ್ಯಗಳ ಟೆಸ್ಟ್‌ ಸರಣಿಗಳನ್ನು ಆಡಲು ನ್ಯೂಜಿಲೆಂಡ್‌ ಪ್ರವಾಸ (2020ರ ಜನವರಿ 24– ಮಾರ್ಚ್‌ 4) ಕೈಗೊಂಡಿತ್ತು. ಮೂರು ಮಾದರಿಗಳ ಸರಣಿಗೆ ಪ‍್ರಕಟಿಸಲಾಗಿದ್ದ ತಂಡದಲ್ಲಿ ರಿಷಭ್‌ ಪಂತ್‌ ಹೆಸರೂ ಇತ್ತು. ಹೀಗಾಗಿ ದೆಹಲಿಯ ಬ್ಯಾಟ್ಸ್‌ಮನ್‌ ಖುಷಿಯಿಂದಲೇ ಕಿವೀಸ್‌ ನಾಡಿನ ವಿಮಾನ ಏರಿದ್ದರು. ಆದರೆ ಅಲ್ಲಿ ಅವರಿಗೆ ನಿರಾಸೆ ಕಾಡಿತ್ತು. ತಂಡದ ಆಡಳಿತ ಮಂಡಳಿಯು ಏಕದಿನ ಮತ್ತು ಟ್ವೆಂಟಿ–20 ಸರಣಿಗಳಲ್ಲಿ ಕೆ.ಎಲ್‌.ರಾಹುಲ್‌ಗೆ ವಿಕೆಟ್‌ ಕೀಪಿಂಗ್‌ ಹೊಣೆ ವಹಿಸಿತ್ತು. ಹೀಗಾಗಿ ಪಂತ್‌ ‘ಬೆಂಚ್‌’ ಕಾಯಬೇಕಾಯಿತು.

ಅನುಭವಿ ವಿಕೆಟ್‌ ಕೀಪರ್‌ ವೃದ್ಧಿಮಾನ್‌ ಸಹಾ ಇದ್ದಿದ್ದರಿಂದ ಟೆಸ್ಟ್‌ ಸರಣಿಯಲ್ಲೂ ಪಂತ್‌ಗೆ ಅವಕಾಶ ಸಿಗುವುದು ಅನುಮಾನ ಎಂದೇ ಹೇಳಲಾಗಿತ್ತು. ಆದರೆ ತಂಡದ ಆಡಳಿತ ಅಚ್ಚರಿಯ ನಿರ್ಧಾರ ಕೈಗೊಂಡಿತ್ತು. ಸಹಾ ಅವರನ್ನು ಹೊರಗಿಟ್ಟು ಪಂತ್‌ಗೆ ಅಂತಿಮ ಹನ್ನೊಂದರ ಬಳಗದಲ್ಲಿ ಆಡಲು ಅನುವು ಮಾಡಿಕೊಟ್ಟಿತ್ತು. ಆ ಅವಕಾಶವನ್ನು ಪಂತ್‌ ಕೈಚೆಲ್ಲಿದ್ದರು. ನಾಲ್ಕು ಇನಿಂಗ್ಸ್‌ಗಳಿಂದ 60 ರನ್‌ಗಳನ್ನಷ್ಟೇ ಕಲೆಹಾಕಿದ್ದರು.

ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನಲ್ಲಿ (ಯುಎಇ) ಆಯೋಜನೆಯಾಗಿದ್ದ ಐಪಿಎಲ್‌ ಟೂರ್ನಿಯಲ್ಲಿ ಲಯಕ್ಕೆ ಮರಳಿದಂತೆ ಕಂಡ ಪಂತ್‌, 14 ಪಂದ್ಯಗಳಿಂದ 343ರನ್‌ ಬಾರಿಸಿದ್ದರು. ಹೀಗಿದ್ದರೂ ಆಸ್ಟ್ರೇಲಿಯಾ ವಿರುದ್ಧದ ಟ್ವೆಂಟಿ–20 ಹಾಗೂ ಏಕದಿನ ಕ್ರಿಕೆಟ್‌ ಸರಣಿಗಳಿಗೆ ಪ್ರಕಟಿಸಲಾಗಿದ್ದ ತಂಡದಲ್ಲಿ ಅವರಿಗೆ ಸ್ಥಾನ ಸಿಗಲಿಲ್ಲ. ಟಿಮ್‌ ಪೇನ್‌ ಪಡೆಯ ವಿರುದ್ಧದ ಮೊದಲ ಟೆಸ್ಟ್‌ ವೇಳೆಯೂ ಅವರು ‘ಬೆಂಚ್‌’ ಕಾದರು. ಆ ಪಂದ್ಯದಲ್ಲಿ ವೃದ್ಧಿಮಾನ್‌ ಸಹಾ ರನ್‌ ಗಳಿಸಲು ಪರದಾಡಿದ್ದರಿಂದ ತಂಡದ ಆಡಳಿತ ಮಂಡಳಿ ಕಣ್ಣು ಪಂತ್‌ ಮೇಲೆ ಬಿತ್ತು. ಎರಡನೇ ಟೆಸ್ಟ್‌ನಲ್ಲಿ ಆರನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ಅವರು 40 ಎಸೆತಗಳಲ್ಲಿ 29ರನ್‌ ಬಾರಿಸಿದ್ದರು. ಆಗ ಮತ್ತೆ ಟೀಕೆಗಳ ಮಳೆ ಸುರಿದಿತ್ತು. ಅದರಿಂದ ವಿಚಲಿತರಾಗದೆ, ನಂತರದ ಎರಡು ಪಂದ್ಯಗಳಲ್ಲಿ ಕರಾಮತ್ತು ತೋರಿದರು.

ಗಾಬಾದಲ್ಲಿ ಪಂತ್‌ ಗಳಿಸಿದ ಅಜೇಯ 89 ರನ್‌, ದ್ವಿಶತಕಕ್ಕೆ ಸಮ ಎಂದು ಹಲವರು ವ್ಯಾಖ್ಯಾನಿಸಿದ್ದರು. ಅವರ ಕವರ್‌ ಡ್ರೈವ್‌, ಪುಲ್‌, ಸ್ವೀಪ್‌ ಹಾಗೂ ಸ್ಕೂಪ್‌ ಹೊಡೆತಗಳು ಚೇತೋಹಾರಿಯಾಗಿದ್ದವು. ಅವರು ಚೆಂಡನ್ನು ಕಟ್‌ ಮಾಡುತ್ತಿದ್ದ ರೀತಿ ಪಾಕಿಸ್ತಾನದ ಸಯೀದ್‌ ಅನ್ವರ್‌ ಅವರ ಬ್ಯಾಟಿಂಗ್‌ ನೆನಪಿಸುವಂತಿತ್ತು.

ಸರಣಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಭಾರತದ ಆಟಗಾರ (274) ಎಂಬ ಹಿರಿಮೆಗೆ ಪಾತ್ರರಾದ ಪಂತ್‌, ವಿಕೆಟ್‌ ಹಿಂದೆಯೂ ಚಮತ್ಕಾರ ತೋರಿದ್ದರು. ಎಂಟು ಕ್ಯಾಚ್‌ಗಳನ್ನು ಹಿಡಿದಿದ್ದ ಅವರು ಬ್ರಿಸ್ಬೇನ್‌ನಲ್ಲಿ (ನಾಲ್ಕನೇ ಟೆಸ್ಟ್‌) ‘ಪಂದ್ಯಶ್ರೇಷ್ಠ’ ಗೌರವ ಗಳಿಸುವ ಮೂಲಕ ಕಾಂಗರೂ ನಾಡಿನ ಪ್ರವಾಸವನ್ನು ಸ್ಮರಣೀಯವಾಗಿಸಿಕೊಂಡರು.

ಅಪ್ಪನ ಆಸೆ–ತಾಯಿಯ ತ್ಯಾಗ...
ರಿಷಭ್‌ ಜನಿಸಿದ್ದು ಉತ್ತರಾಖಂಡದ ರೂರ್ಕಿಯಲ್ಲಿ. ಮಗ ಮುಂದೆ ದೊಡ್ಡ ಕ್ರಿಕೆಟಿಗನಾಗಬೇಕು ಎಂಬುದು ಅಪ್ಪನ ಕನಸಾಗಿತ್ತು. ಆದರೆ ರೂರ್ಕಿಯಲ್ಲಿ ಕ್ರಿಕೆಟ್‌ ಕಲಿಯಲು ಅಗತ್ಯ ಸೌಕರ್ಯಗಳಿರಲಿಲ್ಲ. ಹೀಗಾಗಿ ಪಂತ್‌ ವಾರಾಂತ್ಯದಲ್ಲಿ ದೆಹಲಿ ಬಸ್‌ ಹತ್ತುತ್ತಿದ್ದರು. ಮಧ್ಯರಾತ್ರಿ 2 ಗಂಟೆಗೆ ಬಸ್‌ ಏರಿ ಕುಳಿತರೆ ಬೆಳಿಗ್ಗೆ 8 ಗಂಟೆ ವೇಳೆಗೆ ರಾಜಧಾನಿ ತಲುಪುತ್ತಿದ್ದರು. 12 ವರ್ಷ ವಯಸ್ಸಿನ ಆ ಹುಡುಗನ ಪಕ್ಕದ ಸೀಟಿನಲ್ಲಿ ಚಹಾ ತುಂಬಿದ್ದ ಪ್ಲಾಸ್ಕ್‌ ಹಾಗೂ ಪನ್ನೀರ್‌ ಪರೋಟಗಳಿರುವ ಬ್ಯಾಗ್‌ ಹಿಡಿದು ಕುಳಿತಿರುತ್ತಿದ್ದವರು ಪಂತ್‌ ತಾಯಿ ಸರೋಜ್‌.

ದೆಹಲಿಯಂತಹ ದೊಡ್ಡ ನಗರದಲ್ಲಿ ಹೋಟೆಲ್‌ನಲ್ಲಿ ತಂಗುವಷ್ಟು ಸ್ಥಿತಿವಂತ ಕುಟುಂಬ ಅವರದ್ದಾಗಿರಲಿಲ್ಲ. ಹೀಗಾಗಿ ತಾಯಿ ಮತ್ತು ಮಗ ದೆಹಲಿಗೆ ಹೋದಾಗಲೆಲ್ಲಾ ಮೋತಿಬಾಗ್‌ನಲ್ಲಿರುವ ಗುರುದ್ವಾರದಲ್ಲಿ ಆಶ್ರಯ ಪಡೆಯುತ್ತಿದ್ದರು.

‘ಆ ಕಾಲದಲ್ಲಿ ಹೆಣ್ಣು ಮಗಳೊಬ್ಬಳು ಮಧ್ಯರಾತ್ರಿ ಬಸ್‌ನಲ್ಲಿ ಪ್ರಯಾಣಿಸುವುದು ಅಷ್ಟು ಸುರಕ್ಷಿತವಾಗಿರಲಿಲ್ಲ. ಆದರೆ ನನ್ನವ್ವ ಗಟ್ಟಿಗಿತ್ತಿ. ನಾನು ಅಭ್ಯಾಸಕ್ಕಾಗಿ ದೆಹಲಿಗೆ ಹೋದಾಗಲೆಲ್ಲಾ ಆಕೆ ಜೊತೆಗಿರುತ್ತಿದ್ದಳು. ನಾನು ನಿದ್ರೆಗೆ ಜಾರಿದಾಗ ಆಕೆ ಮೈಯೆಲ್ಲಾ ಕಣ್ಣಾಗಿಸಿಕೊಂಡು ಕಾಯುತ್ತಿದ್ದಳು. ದೆಹಲಿ ತಲುಪಿದ ಕೂಡಲೇ ನನ್ನನ್ನು ತಾರಕ್‌ ಸಿನ್ಹಾ ಅವರ ಸೊನ್ನೆತ್‌ ಅಕಾಡೆಮಿಗೆ ಬಿಟ್ಟು ಗುರುದ್ವಾರದಲ್ಲಿ ಭಕ್ತರಿಗೆ ಊಟ ಬಡಿಸುವ ಹಾಗೂ ಇನ್ನಿತರ ಸೇವಾ ಕಾರ್ಯಗಳಲ್ಲಿ ತೊಡಗಿಕೊಳ್ಳುತ್ತಿದ್ದಳು’ ಎಂದು ಪಂತ್‌ ಹಿಂದೊಮ್ಮೆ ಸ್ಮರಿಸಿದ್ದರು.

ರಿಷಭ್‌ ಅವರ ತಂದೆ ರಾಜೇಂದ್ರ ಪಂತ್‌, ವಿಶ್ವವಿದ್ಯಾಲಯ ಹಂತದವರೆಗೂ ಕ್ರಿಕೆಟ್‌ ಆಡಿದ್ದವರು. ಕೌಟುಂಬಿಕ ಕಾರಣಗಳಿಂದಾಗಿ ಅವರಿಗೆ ಈ ಕ್ರೀಡೆಯಲ್ಲಿ ಮುಂದುವರಿಯಲು ಆಗಲಿಲ್ಲ. ಹಾಗಂತ ಕೈಕಟ್ಟಿ ಕೂರಲಿಲ್ಲ. ಮಗನನ್ನು ಕ್ರಿಕೆಟಿಗನನ್ನಾಗಿ ರೂಪಿಸುವ ಪಣ ತೊಟ್ಟರು. ಎಂಟರ ಹರೆಯದ ಮಗನಿಗೆ ₹14 ಸಾವಿರ ಬೆಲೆಯ ‘ಎಸ್‌ಜಿ’ ಬ್ಯಾಟ್‌ ಕೊಡಿಸಿ ಆತನಲ್ಲಿ ಕ್ರಿಕೆಟ್‌ ಕನಸು ಬಿತ್ತಿದರು. ಅಪ್ಪನ ಶ್ರಮ ವ್ಯರ್ಥವಾಗಲು ರಿಷಭ್‌ ಅವಕಾಶ ನೀಡಲಿಲ್ಲ. 19 ವರ್ಷದೊಳಗಿನವರ ವಿಶ್ವಕಪ್‌, ಭಾರತ ‘ಎ’, ಐಪಿಎಲ್‌ ಹೀಗೆ ಸಿಕ್ಕ ಅವಕಾಶಗಳಲ್ಲೆಲ್ಲಾ ಮಿಂಚಿ ತನ್ನ ತಂದೆ ಗರ್ವದಿಂದ ಬೀಗುವಂತೆ ಮಾಡಿದರು. ಆಸ್ಟ್ರೇಲಿಯಾದಲ್ಲಿ ಮಗನಿಂದ ಮೂಡಿಬಂದ ಸಾಧನೆ ಕಣ್ತುಂಬಿಕೊಳ್ಳಲು ರಾಜೇಂದ್ರ ಪಂತ್‌ ಬದುಕಿಲ್ಲ. ಆದರೆ ಅವರು ಕೊಟ್ಟ ಬ್ಯಾಟ್‌ ಅನ್ನು ರಿಷಭ್‌ ಇನ್ನೂ ಜತನವಾಗಿಟ್ಟುಕೊಂಡಿದ್ದಾರೆ.

ವರ್ಷಗಳು ಉರುಳುತ್ತಾ ಹೋದಂತೆ ರಿಷಭ್‌, ತಮ್ಮ ಆಟದಲ್ಲಿ ಪಕ್ವತೆ ಸಾಧಿಸುತ್ತಾ ಸಾಗುತ್ತಿದ್ದಾರೆ. ಧೋನಿ ನಿವೃತ್ತಿಯಿಂದ ತೆರವಾಗಿರುವ ‘ಬೆಸ್ಟ್‌ ಫಿನಿಷರ್‌’ ಸ್ಥಾನವನ್ನು ತುಂಬಬಲ್ಲ ತಾಕತ್ತು ತನಗಿದೆ ಎಂಬುದನ್ನೂ ಅವರೀಗ ಜಾಹೀರುಗೊಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು